ಅಣ್ಣಯ್ಯ: ಗಂಡನನ್ನು ಕೂಲಿ ಎಂದು ಅವಮಾನ ಮಾಡಿದವನಿಗೆ ಬಾಟಲಿಯಿಂದ ಹೊಡೆದ ಪಾರ್ವತಿ; ಮುದ್ದು ಸೊಸೆ ರಶ್ಮಿಗೆ ಕೈ ತುತ್ತು ತಿನ್ನಿಸಿದ ಮಾದಪ್ಪಣ್ಣ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 206ನೇ ಎಪಿಸೋಡ್‌ನಲ್ಲಿ ಘಟಿಕೋತ್ಸವಕ್ಕೆ ಪಾರು ಜೊತೆ ಬಂದ ಶಿವುಗೆ ಅವಳ ಕ್ಲಾಸ್‌ಮೆಟ್ ಅವಮಾನ ಮಾಡುತ್ತಾನೆ. ಪಾರ್ವತಿ ಆತನಿಗೆ ಬುದ್ಧಿ ಕಲಿಸುತ್ತಾಳೆ. (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 206ನೇ ಎಪಿಸೋಡ್ ಕಥೆ ಹೀಗಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಪರಶು ಸಮಯ ನೋಡಿಕೊಂಡು ರತ್ನಳನ್ನು ನೋಡಲು, ಗೋಡಂಬಿಯನ್ನು ಕೊಲ್ಲಲು ಶಿವು ಮನೆಗೆ ಬರುತ್ತಾನೆ. ಆದರೆ ಈ ಬಾರಿಯೂ ಅವನ ಪ್ರಯತ್ನ ವಿಫಲವಾಗುತ್ತದೆ. ಮತ್ತೊಂದೆಡೆ, ಇಷ್ಟು ದಿನಗಳು ಲೀಲಾ ತನ್ನ ಸೊಸೆ ರಶ್ಮಿಗೆ ನೀಡುತ್ತಿದ್ದ ಹಿಂಸೆ ಮಾದಪ್ಪಣ್ಣನ ಮುಂದೆ ಬಯಲಾಗಿದೆ. ಸಿಟ್ಟಿನಿಂದ ಹೆಂಡತಿಯನ್ನು ಕೊಲ್ಲಲು ಹೊರಟ ಅವನಿಗೆ ಸ್ವಾಮೀಜಿಯೊಬ್ಬರು ತಿಳಿ ಹೇಳುತ್ತಾರೆ. ಪಾರ್ವತಿ ಹಾಗೂ ಶಿವು ಇಬ್ಬರೂ ಘಟಿಕೋತ್ಸವ ಸಮಾರಂಭಕ್ಕೆ ಬರುತ್ತಾರೆ.
ಪಾರ್ವತಿ ಘಟಿಕೋತ್ಸವಕ್ಕೆ ಬರುವ ಮುನ್ನ ಅವಳ ಸಹಪಾಠಿಗಳು ಕಾಲೇಜಿನ ಬಳಿ ಬಂದಿರುತ್ತಾರೆ. ನಾವೆಲ್ಲಾ ಬಂದಿದ್ದೇವೆ, ನಮ್ಮ ಕಾಲೇಜಿನ ಟಾಪರ್ ಇನ್ನೂ ಏಕೆ ಬಂದಿಲ್ಲ ಎಂದು ಒಬ್ಬಾಕೆ ಕೇಳುತ್ತಾಳೆ. ಅವಳು ಓದುವಾಗ ಮಾತ್ರ ಟಾಪರ್, ಈಗ ಮದುವೆ ಆಗಿ ಪಾಪರ್ ಆಗಿದ್ದಾಳೆ ಎಂದು ಮತ್ತೊಬ್ಬಳು ವ್ಯಂಗ್ಯವಾಡುತ್ತಾಳೆ. ಅಷ್ಟರಲ್ಲಿ ಪಾರು ಹಾಗೂ ಶಿವು ಅಲ್ಲಿಗೆ ಬರುತ್ತಾರೆ. ಅಲ್ಲಿ ನೋಡಿ ಯಾವುದೋ ಲಕ್ಸುರಿ ಕಾರಿನಲ್ಲಿ ಬರುತ್ತಾಳೆ ಎಂದುಕೊಂಡಿದ್ದೆ, ಈಗ ನೋಡಿದರೆ ಯಾವುದೋ ಡಕೋಟ ಸ್ಕೂಟರ್‌ನಲ್ಲಿ ಬರುತ್ತಿದ್ದಾಳೆ ಎಂದು ಹೇಳಿಕೊಂಡು ಎಲ್ಲರೂ ನಗುತ್ತಾರೆ. ಪಾರ್ವತಿ, ಸಹಪಾಠಿಗಳ ಬಳಿ ಬಂದು ಅವರನ್ನು ಮಾತನಾಡಿಸುತ್ತಾಳೆ. ಸ್ಕೂಟರನ್ನು ಪಾರ್ಕ್ ಮಾಡಿ ಬರುತ್ತೇನೆ ನೀನು ಒಳಗೆ ಹೋಗು ಎಂದು ಶಿವು ಸ್ಕೂಟರ್ ನಿಲ್ಲಿಸಲು ಬರುತ್ತಾನೆ. ಹುಡುಗರ ಗುಂಪು ಶಿವು ಹಿಂದೆ ಬರುತ್ತದೆ.
ತನ್ನನ್ನು ಹಂಗಿಸಿದವನಿಗೆ ತಾಳ್ಮೆಯಿಂದಲೇ ಬುದ್ಧಿಮಾತು ಹೇಳಿದ ಶಿವು
ಆ ಗುಂಪಿನಲ್ಲಿ ಒಬ್ಬಾತ ಶಿವುಗೆ ಕೂಲಿ ಎಂದು ಕರೆಯುತ್ತಾನೆ. ಹೌದು ಎಲ್ಲರೂ ಒಂದಲ್ಲಾ ಒಂದು ರೀತಿ ಕೂಲಿಯೇ ಎಂದು ಶಿವು ಹೇಳುತ್ತಾನೆ. ಊಟಕ್ಕೆ ಗತಿ ಇಲ್ಲ ಎಂದರೂ ಶೋಕಿಗೆ ಮಾತ್ರ ಕಡಿಮೆ ಇಲ್ಲ. ಪಾರ್ವತಿ ಹಾಗೂ ಸಿದ್ದಾರ್ಥ್ ಇಬ್ಬರನ್ನೂ ಒಂದು ಮಾಡುತ್ತೇನೆ ಎಂದು ನಾಟಕ ಮಾಡಿಕೊಂಡು ಕೊನೆಗೆ ಪಾರ್ವತಿಯನ್ನೇ ಪಟಾಯಿಸಿದೆ ಎಂದು ಹೇಳುತ್ತಾನೆ. ಆತನ ಮಾತಿಗೆ ಶಿವು ಸಿಟ್ಟಾಗುತ್ತಾನೆ. ಇದು ಓದುವ ಸ್ಥಳ, ಇಲ್ಲೆಲ್ಲಾ ಇವನ ಮೇಲೆ ಕೈ ಮಾಡಿದರೆ ತಪ್ಪಾಗುತ್ತದೆ ಎಂದು ಶಿವು ಸುಮ್ಮನಾಗುತ್ತಾನೆ. ಸರ್ ನಂಗೆ ಸ್ವಲ್ಪ ಕೋಪ ಕಡಿಮೆಯೇ. ಆದರೆ ಇಷ್ಟು ಹೊತ್ತು ನೀನು ಹೇಳಿದ್ದನ್ನು ಪಾರ್ವತಿ ಕೇಳಿಸಿಕೊಂಡರೆ ನಿಮ್ಮನ್ನು ಎರಡು ಭಾಗ ಮಾಡಿಬಿಡುತ್ತಾಳೆ. ಈ ವಿಚಾರ ಪಾರುಗೆ ಗೊತ್ತಾಗದಿರಲಿ ಎಂದು ನೀವು ನಂಬಿದ ದೇವರನ್ನು ಪ್ರಾರ್ಥಿಸಿಕೊಳ್ಳಿ ಎಂದು ಶಿವು ಹೇಳಿ ಆತನನ್ನು ಪಕ್ಕಕ್ಕೆ ಸರಿಸುತ್ತಾನೆ. ಆದರೆ ಅಲ್ಲಿ ಪಾರು ನಿಂತಿರುತ್ತಾಳೆ.
ಪಾರುವನ್ನು ಶಿವು ಸಮಾಧಾನ ಮಾಡಲು ಯತ್ನಿಸುತ್ತಾನೆ. ಆದರೆ ಅವಳ ಕ್ಲಾಸ್‌ಮೆಟ್ ಮತ್ತೆ ಅವರಿಬ್ಬರನ್ನು ಕೆಣಕುತ್ತಾನೆ. ನನ್ನ ಮುಂದೆ ಶೋ ಆಫ್ ಮಾಡಬೇಡ ಎನ್ನುತ್ತಾನೆ, ಅಲ್ಲದೆ ಮತ್ತೆ ಶಿವುಗೆ ಕೂಲಿ ಎಂದು ಕರೆಯುತ್ತಾನೆ. ಪಾರು ಸಿಟ್ಟಿನಿಂದ ಜ್ಯೂಸ್ ಬಾಟಲಿಯನ್ನು ಆತನ ತಲೆಗೆ ಹೊಡೆಯುತ್ತಾಳೆ. ಹೊಡೆದ ರಭಸಕ್ಕೆ ಆತನ ತಲೆಯಿಂದ ರಕ್ತ ಬರುತ್ತದೆ. ಯಾರನ್ನು ಕೂಲಿ ಎನ್ನುತ್ತಿದ್ದೀಯ? ನಿನ್ನನ್ನು ಬೆಳೆದಿದ್ದಾರಲ್ಲ ನಿನ್ನ ಅಮ್ಮ ಅವರನ್ನೂ ಕೂಲಿ ಎನ್ನುತ್ತೀಯ? ನಿಮ್ಮ ಮನೆಗೆ ತಂದುಹಾಕುತ್ತಾರಲ್ಲ ನಿನ್ನ ಅಪ್ಪ ಅವರನ್ನು ಕೂಲಿ ಎನ್ನುತ್ತೀಯ? ನೀನು ಎಷ್ಟು ಜನರನ್ನು ಓದಿಸಿದ್ದೀಯ, ಎಷ್ಟು ಜನರನ್ನು ಮದುವೆ ಮಾಡಿಸಿದ್ದೀಯ? ನನ್ನ ಗಂಡ ನಾಲ್ವರು ತಂಗಿಯರನ್ನು ಸಾಕಿ ಒಬ್ಬಳನ್ನು ಮದುವೆ ಮಾಡಿದ್ದಾನೆ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ್ದಾನೆ, ಅಂತವರನ್ನು ಕೂಲಿ ಎಂದು ಅವಮಾನ ಮಾಡುತ್ತೀಯ ಎಂದು ಚಳಿ ಬಿಡಿಸುತ್ತಾಳೆ. ಪಾರ್ವತಿಗೆ ಹೆದರಿ ಆತ ಶಿವು ಬಳಿ ಕ್ಷಮೆ ಕೇಳುತ್ತಾನೆ.
ಸೊಸೆಗಾಗಿ ತಾನೇ ಅಡುಗೆ ಮಾಡಲು ನಿಂತ ಮಾದಪ್ಪಣ್ಣ
ಇತ್ತ ಮಾವ ಮನೆಗೆ ಬಂದಿದ್ದನ್ನು ನೋಡಿ ರಶ್ಮಿ ಖುಷಿಯಾಗುತ್ತಾಳೆ. ಊಟ ಮಾಡೋಣ ಬಾ ಎಂದು ಸೊಸೆಯನ್ನು ಕರೆಯುತ್ತಾನೆ. ಅಷ್ಟರಲ್ಲಿ ಲೀಲಾ, ಅವಳು ಪ್ರತಿದಿನ ಅಡುಗೆ ಆದ ಕೂಡಲೇ ಊಟ ಮಾಡಿದ್ದಾಳೆ, ಯಾರಿಗೂ ಕಾಯುವುದಿಲ್ಲ ಎನ್ನುತ್ತಾಳೆ. ಹೆಂಡತಿಯ ಅಸಲಿ ಮುಖ ಗೊತ್ತಿರುವ ಮಾದಪ್ಪಣ್ಣ ಕೋಪ ತೋರಿಸದೆ ತಾಳ್ಮೆಯಿಂದ ಇರುತ್ತಾನೆ. ನನಗೆ ಊಟ ಬಡಿಸು ಬಾ ಎಂದು ಲೀಲಾಗೆ ಹೇಳುತ್ತಾನೆ. ಜೊತೆಗೆ ರಶ್ಮಿ ಹಾಗೂ ಮಗಳು ಭಾನುವನ್ನು ಕರೆಯುತ್ತಾನೆ. ಇವತ್ತು ನನ್ನ ಮಕ್ಕಳಿಗೆ ಕೈ ತುತ್ತು ಕೊಡುತ್ತೇನೆ ಎನ್ನುತ್ತಾನೆ. ಅಷ್ಟರಲ್ಲಿ ಸೀನ ಅಲ್ಲಿಗೆ ಬರುತ್ತಾನೆ. ಅವನಿಗೂ ಕೂರಲು ಹೇಳುತ್ತಾನೆ. ರಶ್ಮಿ ಅತ್ತೆಯತ್ತ ನೋಡುತ್ತಲೇ ಮುಜುಗರದಿಂದ ಊಟಕ್ಕೆ ಕೂರುತ್ತಾಳೆ. ಮಾದಪ್ಪಣ್ಣ ಎಲ್ಲರಿಗೂ ಕೈ ತುತ್ತು ಕೊಡುತ್ತಾನೆ. ಹಸಿವು ನೀಗಿಸಿದ್ದಕ್ಕೆ ರಶ್ಮಿ ಮಾಕಾಳವ್ವನನ್ನು ನೆನೆಯುತ್ತಾಳೆ. ಇವಳನ್ನು ಮದುವೆ ಆದಾಗಿನಿಂದ ನನ್ನ ಬದುಕು ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದೆ ಎಂದು ಸೀನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ.
ಮರುದಿನ ಲೀಲಾಳನ್ನು ಅಡುಗೆ ಮನೆಯಿಂದ ಹೊರ ಕಳಿಸುವ ಮಾದಪ್ಪಣ್ಣ ತಾನೇ ಅಡುಗೆ ಮಾಡಲು ಶುರು ಮಾಡುತ್ತಾನೆ. ಏನು ಮಾವ ಇಷ್ಟು ದಿನ ಇಲ್ಲದವರು ಈಗ ಅಡುಗೆಮನೆ ಕಡೆ ಬಂದಿದ್ದೀರಲ್ಲ ಎಂದು ಕೇಳುತ್ತಾಳೆ. ಮೊದಲೆಲ್ಲಾ ನಾನು ಅಡುಗೆ ಮಾಡುತ್ತಿದ್ದೆ, ಈಗ ಕಡಿಮೆ ಮಾಡಿದ್ದೇನೆ. ನಿನಗೆ ಏನು ಇಷ್ಟ ಹೇಳು ನಾನು ಮಾಡಿಕೊಡುತ್ತೇನೆ ಎನ್ನುತ್ತಾನೆ. ನನಗೆ ಟೊಮೆಟೊ ಪಲಾವ್ , ಶ್ಯಾವಿಗೆ ಖೀರು ತುಂಬಾ ಇಷ್ಟ ಎಂದು ರಶ್ಮಿ ಹೇಳುತ್ತಾಳೆ. ಸರಿ ನಿನಗೆ ಅದನ್ನೇ ಮಾಡಿಕೊಡುತ್ತೇನೆ ಎಂದು ಹೇಳುತ್ತಾನೆ. ಆ ಮಾತು ಕೇಳಿ ರಶ್ಮಿ ಖುಷಿಯಾಗುತ್ತಾಳೆ. ಮಾದಪ್ಪಣ್ಣ ಸೊಸೆಗೆ ದ್ರಾಕ್ಷಿ, ಗೋಡಂಬಿಯನ್ನು ತಿನ್ನಲು ಕೊಡುತ್ತಾನೆ. ಹೊರಗೆ ಕೂತಿದ್ದ ಲೀಲಾ ಗಂಡ ಹಾಗೂ ಸೊಸೆ ಬಗ್ಗೆ ಸಿಟ್ಟಾಗುತ್ತಾಳೆ.
ಘಟಿಕೋತ್ಸವದಲ್ಲಿ ಪಾರ್ವತಿ ತನ್ನ ಮೆಡಿಕಲ್ ಲೈಸನ್ಸ್ ಬಗ್ಗೆ ಪ್ರಸ್ತಾಪಿಸುತ್ತಾಳಾ? ಸೊಸೆಗೆ ಅಡುಗೆ ಮಾಡುತ್ತಿರುವ ಗಂಡನನ್ನು ಲೀಲಾ ತಡೆಯುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ