ಅಣ್ಣಯ್ಯ ಧಾರಾವಾಹಿ: ಮುತ್ತು ಕೊಡದೆ ಪಾರ್ವತಿಯನ್ನು ಸತಾಯಿಸಿದ ಶಿವು; ರತ್ನ ಮನಸ್ಸು ಗೆಲ್ಲಲ್ಲು ಒಳ್ಳೆಯವನಂತೆ ನಟಿಸಲು ನಿರ್ಧರಿಸಿದ ಪರಶು
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ 172ನೇ ಎಪಿಸೋಡ್‌ನಲ್ಲಿ ಪಾರ್ವತಿಗೆ ಮುತ್ತು ಕೊಡದೆ ಶಿವು ಸತಾಯಿಸುತ್ತಾನೆ. ಮತ್ತೊಂದೆಡೆ ಶಿವು ತಂಗಿ ರತ್ನ ಗಮನವನ್ನು ತನ್ನತ್ತ ಸೆಳೆಯಲು ಪಾರು ಅಣ್ಣ ಪರಶು ಹೊಸ ನಾಟಕ ಶುರು ಮಾಡಿದ್ದಾನೆ. (ಬರಹ: ರಕ್ಷಿತಾ ಸೌಮ್ಯ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 172ನೇ ಎಪಿಸೋಡ್ ಕಥೆ ಹೀಗಿದೆ. ಶಿವು ಹಾಗೂ ಪಾರ್ವತಿ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ಧಾರೆ. ಪೊಲೀಸ್ ಸ್ಟೇಷನ್‌ಗೆ ಹೋಗಿದ್ದು, ಅಲ್ಲಿ ನಡೆದ ವಿಚಾರವನ್ನು ಶಿವು ತನ್ನ ತಂಗಿಯರಿಂದ ಮುಚ್ಚಿಡುತ್ತಾನೆ. ತಲೆಗೆ ಕಟ್ಟಿದ್ದ ಬ್ಯಾಂಡೇಜ್ ನೋಡಿ ರತ್ನ, ರಾಣಿ ಗಾಬರಿಯಾಗುತ್ತಾರೆ. ಅದೊಂದು ಚಿಕ್ಕ ಆಕ್ಸಿಡೆಂಟ್ ಅಷ್ಟೇ ಎಂದು ಶಿವು ತನ್ನ ತಂಗಿಯರನ್ನು ಸಮಾಧಾನ ಮಾಡುತ್ತಾನೆ.
ಮುತ್ತಿಗಾಗಿ ಮಾವನ ಹಿಂದೆ ಬಿದ್ದ ಪಾರ್ವತಿ
ಊಟ ಮುಗಿಸಿ ರೂಮ್‌ನಲ್ಲಿ ಒಬ್ಬನೇ ಕುಳಿತಿದ್ದ ಶಿವು ಬಳಿ ಬರುವ ಪಾರು ಮುತ್ತು ಕೇಳುತ್ತಾಳೆ. ಹೆಂಡತಿ ಹೀಗೆ ಮಾತನಾಡಿದ್ದಕ್ಕೆ ಶಿವು ನಾಚಿಕೊಳ್ಳುತ್ತಾನೆ. ಇದ್ದಕ್ಕಿದ್ದಂತೆ ಹೀಗೆ ಕೇಳಿದರೆ ನನಗೆ ಕಷ್ಟವಾಗುತ್ತದೆ ಎನ್ನುತ್ತಾನೆ, ಮತ್ತೇನು ಮಾವ, ಮೊದಲೇ ನಿನಗೆ ಅಪ್ಲಿಕೇಶನ್ ಹಾಕಬೇಕಿತ್ತಾ ಎಂದು ಕೇಳುತ್ತಾಳೆ. ಹಾಗಲ್ಲ ಮುತ್ತು ಕೊಡಲು ಭಯವಾಗುತ್ತಿದೆ ಎಂದು ಶಿವು ಹೇಳುತ್ತಾನೆ. ಪೊಲೀಸ್ ಸ್ಟೇಷನ್‌ನಲ್ಲಿ ಅವರೆಲ್ಲರನ್ನೂ ಒಬ್ಬನೇ ಹೊಡೆದಾಗ ನಿನಗೆ ಧೈರ್ಯ ಇತ್ತು, ಈಗ ಮುತ್ತು ಕೊಡಲು ಧೈರ್ಯ ಸಾಲುತ್ತಿಲ್ಲವಾ ಎಂದು ಪಾರು ಕೇಳುತ್ತಾಳೆ. ಹೊಡೆದಾಡುವ ವಿಚಾರ ಬೇರೆ, ಮುತ್ತಿನ ವಿಷಯವೇ ಬೇರೆ ಎಂದು ಶಿವು ಮುತ್ತು ಕೊಡದೆ ಪಾರುವನ್ನು ಸತಾಯಿಸುತ್ತಾನೆ.
ಇಲ್ಲ ನನಗೆ ಮುತ್ತು ಬೇಕೇ ಬೇಕು, ನೀನು ಕೊಡದಿದ್ದರೆ ನಾನು ಎಲ್ಲರನ್ನು ಕರೆಯುತ್ತೇನೆ ಎಂದು ಪಾರು ಬ್ಲ್ಯಾಕ್‌ಮೇಲ್ ಮಾಡುತ್ತಾಳೆ. ಬೇಡ ಬೇಡ ಕೊಡುತ್ತೇನೆ ನೀನು ಕಣ್ಣು ಮುಚ್ಚಿಕೋ , ನಾನೂ ಕಣ್ಣು ಮುಚ್ಚಿಕೊಳ್ಳುತ್ತೇನೆ ಎಂದು ಶಿವು ಹೇಳುತ್ತಾನೆ, ಶಿವು ಕಣ್ಣು ಮುಚ್ಚುತ್ತಾನೆ, ಆದರೆ ಪಾರ್ವತಿಗೆ ಪೊಲೀಸ್ ಸ್ಟೇಷನ್‌ನಲ್ಲಿ ನಡೆದ ಘಟನೆ ನೆನಪಾಗುತ್ತದೆ. ಇದೆಲ್ಲಾ ಯಾರೋ ಬೇಕಂತಲೇ ಮಾಡುತ್ತಿರುವ ನಾಟಕ, ಇದರ ಹಿಂದೆ ಯಾರಿರಬಹುದು ಎಂದು ಯೋಚಿಸುತ್ತಾಳೆ. ಮತ್ತೆ ಮರುದಿನ ಮಾವನ ಬಳಿ ಬಂದು ನೀನು ಕೊಟ್ಟ ಮಾತು ತಪ್ಪಿದ್ದು ಏಕೆ, ಈಗ ನನಗೆ ಮುತ್ತು ಕೊಡದಿದ್ದರೆ ನಾನೇ ಕೊಡುತ್ತೇನೆ ಎಂದು ಶಿವು ಬಳಿ ಬರುತ್ತಾಳೆ. ಆಗ ಶಿವು ನಾಚಿಕೆಯಿಂದ ನಾನು ಇಲ್ಲಿ ಇರುವುದಿಲ್ಲ ಎಂದು ಹೊರಗೆ ಓಡುತ್ತಾನೆ. ಪಾರ್ವತಿ ಕೂಡಾ ಅವನ ಹಿಂದೆ ಓಡುತ್ತಾಳೆ. ಶಿವು ತಂಗಿಯರು ಇವರಿಬ್ಬರಿಗೂ ಏನಾಗಿದೆ ಎಂದು ಪ್ರಶ್ನಾರ್ಥಕವಾಗಿ ಇಬ್ಬರ ಕಡೆ ನೋಡುತ್ತಾರೆ.
ಶಿವು ತಂಗಿಯನ್ನು ಪಡೆಯಲು ಹೊಸ ನಾಟಕ ಶುರು ಮಾಡಿದ ಪರಶು
ಮತ್ತೊಂದೆಡೆ ಪರಶು ಹಾಗೂ ಛತ್ರಿ ಇಬ್ಬರೂ ಶಿವು ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಆ ಶಿವುವನ್ನು ಸಾಯಿಸಲು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗುತ್ತಿದೆ. ಅವನನ್ನು ಹೇಗಾದರೂ ಮಾಡಿ ಮುಗಿಸಿ, ನನ್ನ ತಂಗಿ ಪಾರ್ವತಿಯನ್ನು ಸೋಮೇಗೌಡನಿಗೆ ಕೊಡಬೇಕು, ಆ ದಿನ ಯಾವಾಗ ಬರುವುದೋ ಎಂದು ಪರಶು ಹೇಳುತ್ತಾನೆ. ಅವನ ವಿಚಾರವನ್ನು ನೀವು ಮರೆತುಬಿಡಿ ಎಂದು ಛತ್ರಿ ಹೇಳುತ್ತಾನೆ. ಅದಕ್ಕೆ ಪರಶು ಕೋಪಗೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ನಾನು ಆ ಶಿವು ವಿಚಾರವನ್ನು ಮರೆಯುವುದಿಲ್ಲ. ಅವನ ಕಥೆ ಮುಗಿಸೋದಂತೂ ಗ್ಯಾರಂಟಿ ಎನ್ನುತ್ತಾನೆ.
ಶಿವು ತಂಗಿ ರತ್ನಳನ್ನು ಪರಶು ನೆನಪಿಸಿಕೊಳ್ಳುತ್ತಾನೆ, ನನ್ನ ಹಿಂದೆ ಎಷ್ಟೋ ಹುಡುಗಿಯರು ಬಂದ್ರು, ಆದರೆ ನನಗೆ ಹುಚ್ಚು ಹಿಡಿಸಿದ್ದು ಮಾತ್ರ ಆ ರತ್ನ, ಅವಳನ್ನು ನಾನು ಹೇಗಾದರೂ ಪಡೆಯಲೇಬೇಕು ಎನ್ನುತ್ತಾನೆ. ನಿಮ್ಮ ಬಗ್ಗೆ ಅವಳಿಗೆ ಗೊತ್ತು ಅದಕ್ಕೆ ಆ ಟೀಚರಮ್ಮ ನಿಮ್ಮ ಕಡೆ ಗಮನ ಕೊಡುವುದಿಲ್ಲ ಎಂದು ಛತ್ರಿ ಹೇಳುತ್ತಾನೆ. ಹೌದು, ನಾನು ಕೆಟ್ಟವನೆಂದು ಆ ರತ್ನ ನನ್ನ ಕಡೆ ತಿರುಗಿ ನೋಡುವುದಿಲ್ಲ, ಅದಕ್ಕೆ ನಾನು ಇನ್ಮುಂದೆ ಒಳ್ಳೆಯವನಂತೆ ನಟಿಸುತ್ತೇನೆ. ನನ್ನನ್ನು ಮದುವೆ ಆಗು ಎಂದು ಆ ರತ್ನ ನನ್ನ ಬಳಿ ಬೇಡಿಕೊಳ್ಳುವಂತೆ ಮಾಡುತ್ತೇನೆ, ಅವಳನ್ನು ಪಡೆದೇ ತೀರುತ್ತೇನೆ ಎಂದು ಹೇಳುತ್ತಾನೆ.
ಪರಶು, ಹೇಳಿದಂತೆ ರತ್ನಳನ್ನು ಒಲಿಸಿಕೊಳ್ಳುತ್ತಾನಾ? ತಂಗಿ ಪಾರು ಜೀವನವನ್ನೇ ಹಾಳು ಮಾಡುತ್ತಾನಾ? ಪೊಲೀಸ್ ಸ್ಟೇಷನ್‌ನಲ್ಲಿ ನಡೆದ ಘಟನೆ ಹಿಂದೆ ಯಾರಿದ್ದಾರೆ ಎಂಬ ಸತ್ಯ ಪಾರ್ವತಿಗೆ ತಿಳಿಯುತ್ತಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 7.30ಕ್ಕೆ ಅಣ್ಯಯ್ಯ ಧಾರಾವಾಹಿ ಪ್ರಸಾರವಾಗುತ್ತಿದೆ. ಅಣ್ಣ ತಂಗಿಯರ ಬಾಂಧವ್ಯದ ಕಥೆ ಇರುವ ಧಾರಾವಾಹಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟ ಮಾರಿಗುಡಿ ಶಿವು, ತಾನು ಇಷ್ಟ ಪಟ್ಟ ಪಾರುವನ್ನು ಮದುವೆಯಾಗಿದ್ಧಾನೆ, ಪಾರು ಕೂಡಾ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಆದರೆ ಅವರಿಬ್ಬರನ್ನೂ ದೂರ ಮಾಡಲು ಪಾರು ತಂದೆ ವೀರಭದ್ರ ಕಾಯುತ್ತಿದ್ದಾನೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
