ರೆಸಾರ್ಟ್‌ನಲ್ಲಿ ಸುಬ್ಬು-ಶ್ರಾವಣಿ; ಮಗಳು ರೂಮಲ್ಲಿ ಇಲ್ಲ ಅನ್ನೋ ಸತ್ಯ ವೀರೇಂದ್ರಗೆ ತಿಳಿಯುತ್ತಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 2nd: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಬ್ಬು-ಶ್ರಾವಣಿಯನ್ನು ಹುಡುಕಿ ರೆಸಾರ್ಟ್‌ಗೆ ಬರುತ್ತಾರೆ ರೌಡಿಗಳು. ವಿಜಯಾಂಬಿಕಾಗೆ ಶುರು ಆಯ್ತು ಟೆನ್‌ಷನ್, ಮಗಳು ರೂಮ್‌ನಲ್ಲಿ ಇಲ್ಲ ಅನ್ನೋ ಸತ್ಯ ವೀರೇಂದ್ರಗೆ ತಿಳಿಯುತ್ತಾ?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 2ರ) ಸಂಚಿಕೆಯಲ್ಲಿ ಫಾರ್ಮ್‌ಹೌಸ್‌ನಿಂದ ಬೆನ್ನಟ್ಟಿ ಬಂದ ರೌಡಿಗಳಿಂದ ತಪ್ಪಿಸಿಕೊಳ್ಳಲು ರೆಸಾರ್ಟ್‌ವೊಂದರೊಳಗೆ ಸೇರಿಕೊಳ್ಳುವ ಸುಬ್ಬು ಶ್ರಾವಣಿ ರೆಸಾರ್ಟ್ ಓನರ್ ಹಾಗೂ ಮ್ಯಾನೇಜರ್ ಬಳಿ ತಾವು ಗಂಡ-ಹೆಂಡತಿ ಎಂದು ಸುಳ್ಳು ಹೇಳುತ್ತಿರುತ್ತಾರೆ. ಅವರನ್ನು ಹೇಗೋ ನಂಬಿಸಿ ರೆಸಾರ್ಟ್ ಒಳ ಸೇರುವ ಅವರಿಗೆ ಓನರ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾರೆ. ಅಷ್ಟೊತ್ತಿಗೆ ರೆಸಾರ್ಟ್ ಒಳಗೆ ರೌಡಿಗಳು ಬಂದಿರುತ್ತಾರೆ.
ಶ್ರಾವಣಿ ಮನೆಯಲ್ಲಿ ಇಲ್ಲ ಎನ್ನುವ ಸತ್ಯ ಹೇಳುವ ಮದನ್
ಇತ್ತ ತಾನು ಫಾರ್ಮ್‌ಹೌಸ್‌ನಲ್ಲಿ ಇದ್ದಾಗ ಒಳ ಬಂದಿದ್ದ ಜೋಡಿ ಯಾರು ಎಂದು ತಿಳಿಯದೇ, ಅತ್ತ ತಾನು ಕಳುಹಿಸಿದ ರೌಡಿಗಳು ಫೋನಿಗೆ ಸಿಗದೇ ತಲೆ ಕಡೆಸಿಕೊಂಡು ರೂಮ್‌ನಲ್ಲಿ ಶತಪಥ ಹಾಕುತ್ತಿರುತ್ತಾಳೆ ಶ್ರಾವಣಿ. ಅಷ್ಟೊತ್ತಿಗೆ ಅಲ್ಲಿಗೆ ಬರುವ ಮದನ್ ಶ್ರಾವಣಿ ಬೆಳಿಗ್ಗೆ ಮನೆಯಲ್ಲಿ ಕಾಣುತ್ತಿಲ್ಲ. ರೂಮ್‌ನಲ್ಲಿ ಇಲ್ಲ, ಆದರೂ ರೂಮ್‌ನಲ್ಲೇ ಇರುವಂತೆ ನಾಟಕ ಮಾಡುತ್ತಿದ್ದಾಳೆ ಎಂದು ಹೇಳುತ್ತಾನೆ. ಮೊದಲೇ ಟೆನ್‌ಷನ್‌ನಲ್ಲಿ ಸಾಯುತ್ತಿದ್ದ ವಿಜಯಾಂಬಿಕಾ ಮಗನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ಅವನು ಕುಡಿದಿರುವುದು ಅವಳಿಗೆ ಗೊತ್ತಾಗುತ್ತದೆ, ಇವನು ಕುಡಿದು ಏನೋ ಮಾತನಾಡುತ್ತಿರಬಹುದು ಎಂದುಕೊಂಡು ಅವನಿಗೆ ಬೈದು ಹೊರ ಕಳುಹಿಸುತ್ತಾಳೆ.
ರೆಸಾರ್ಟ್ ಒಳಗೆ ಬಂದ್ರು ರೌಡಿಗಳು
ಹೇಗೋ ರೌಡಿಗಳ ಕೈಯಿಂದ ತಪ್ಪಿಸಿಕೊಂಡೆವು ಎಂದುಕೊಂಡು ಸುಬ್ಬು-ಶ್ರಾವಣಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಹೊರಗಡೆಯಿಂದ ರೌಡಿಗಳ ಸದ್ದು ಕೇಳುತ್ತದೆ. ಇದರಿಂದ ಶ್ರಾವಣಿ-ಸುಬ್ಬು ಗಾಬರಿಯಾಗುತ್ತಾರೆ. ಆದರೆ ರೌಡಿಗಳನ್ನು ಬಾಗಿಲಲ್ಲೇ ತಡೆಯುವ ಮ್ಯಾನೇಜರ್ ಒಳಗೆ ಬಾರದಂತೆ ನೋಡಿಕೊಳ್ಳುತ್ತಾರೆ. ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಅವರಿಗೆ ತಲೆ ಕೆಡುವಂತೆ ಮಾಡಿ ಅಲ್ಲಿಂದ ಕಳುಹಿಸುತ್ತಾನೆ. ಆದರೆ ಅಲ್ಲಿಗೆ ಬಂದ ರೌಡಿಗಳಲ್ಲಿ ಒಬ್ಬ ಮಾತ್ರ ಅಲ್ಲಿ ಕಾಣಿಸುವುದಿಲ್ಲ. ಅವನು ಎಲ್ಲಿ ಹೋದ ಎಂದು ಉಳಿದವರು ತಲೆ ಕೆಡಿಸಿಕೊಳ್ಳುತ್ತಾರೆ. ಇತ್ತ ಶ್ರಾವಣಿ ಹಾಗೂ ಸುಬ್ರಹ್ಮಣ್ಯಗೆ ಓನರ್ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ.
ವರದನ್ನು ಬಿಟ್ಟು ಯಾರನ್ನೂ ಮದುವೆ ಆಗೊಲ್ಲ ಎಂದ ವರ
ಇತ್ತ ಐಶು ವಾಚ್‌ಗಾಗಿ ಹಠ ಮಾಡಿದಾಗ ತನ್ನ ಬಳಿ ಇರುವ ವರದನ ವಾಚ್ ಅನ್ನು ಮನೆಯವರ ಮುಂದೆ ತರುತ್ತಾಳೆ ವರಲಕ್ಷ್ಮೀ. ಆಗ ಪದ್ಮನಾಭ ಇದು ಗಂಡಸರ ವಾಚ್ ಅಲ್ವಾ ಎನ್ನುತ್ತಾರೆ, ಅದಕ್ಕೆ ವರಲಕ್ಷ್ಮೀ ಬೇರೆ ದಾರಿ ಕಾಣದೇ ವರದ ವಾಚ್ ಎಂಬುದನ್ನು ಮನೆಯವರ ಬಳಿ ಒಪ್ಪಿಕೊಳ್ಳುತ್ತಾಳೆ. ಆಗ ಸಿಡಿಯುವ ವಿಶಾಲಾಕ್ಷಿ ಅವಳಿಗೆ ಹೊಡೆದು ಬಡಿದು ಮಾಡುತ್ತಾಳೆ. ಆದರೆ ವರಲಕ್ಷ್ಮೀ ಮಾತ್ರ ನಾನು ಮದುವೆ ಅಂತ ಆದ್ರೆ ಅದು ವರದನನ್ನು ಮಾತ್ರ, ಇಲ್ಲಾಂದ್ರೆ ಮದುವೇನೇ ಆಗೊಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಾಳೆ. ಅವಳಿಗೆ ಅಕ್ಕನ ಮಾತು ಕಿವಿಯಲ್ಲಿ ಧ್ವನಿಸುತ್ತಿರುತ್ತದೆ. ಅಕ್ಕನಂತೆ ತನ್ನ ಬಾಳು ಆಗೋದು ಬೇಡ ಅಂತ ವರಲಕ್ಷ್ಮೀ ಫಿಕ್ಸ್ ಆಗಿರುತ್ತಾಳೆ.
ಮಗಳನ್ನು ಹುಡುಕುತ್ತಾ ರೂಮ್‌ಗೆ ಹೊರಟ ವೀರೇಂದ್ರ
ಬೆಳಿಗ್ಗೆಯಿಂದ ಸುಬ್ಬು ಕಾಣದೇ ಇರುವುದು, ಫೋನ್‌ಗೂ ಸಿಗದೇ ಇರುವುದು ನೋಡಿ ಗಾಬರಿಯಾಗುತ್ತಾರೆ ವೀರೇಂದ್ರ. ಯಾರಿಗೋ ಕಾಲ್ ಮಾಡಿ ಸುಬ್ಬು ಕಾಣುತ್ತಿಲ್ಲ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುವ ವಿಜಯಾಂಬಿಕಾ ಶಾಕ್ ಆಗುತ್ತಾಳೆ, ಮಾತ್ರವಲ್ಲ ಶ್ರಾವಣಿ ಮನೆಯಲ್ಲಿ ಇಲ್ಲ ಎಂದು ಮದನ್ ಹೇಳಿದ್ದು ಅವಳಿಗೆ ತಲೆಗೆ ಬರುತ್ತದೆ. ಅಲ್ಲದೇ ಫಾರ್ಮ್‌ಹೌಸ್‌ಗೆ ಬಂದಿದ್ದು ಇಬ್ಬರು ಹುಡುಗ-ಹುಡುಗಿ ಎಂಬುದು ನೆನಪಾಗಿ ಅದು ಸುಬ್ಬು-ಶ್ರಾವಣಿ ಇರಬಹುದು ಎಂಬ ಅನುಮಾನ ಕಾಡಲು ಆರಂಭವಾಗುತ್ತದೆ. ಏನಾದರಾಗಲಿ ನೋಡಿಕೊಂಡು ಬರುತ್ತೇನೆ ಎಂದು ಶ್ರಾವಣಿ ಕೋಣೆ ಕಡೆ ಹೋಗುತ್ತಾಳೆ. ಅವಳು ಗಡಿಬಿಡಿಯಲ್ಲಿ ಹೋಗುವುದನ್ನು ನೋಡಿದ ವೀರೇಂದ್ರ ಅವಳನ್ನು ತಡೆದು ನಿಲ್ಲಿಸುತ್ತಾರೆ. ಅಲ್ಲದೇ ಶ್ರಾವಣಿ ನಾನು ಹೇಳಿದ ಮಾತು ಮೀರಲು ಸಾಧ್ಯವಿಲ್ಲ, ನಾನು ಅವಳನ್ನು ಇಷ್ಟ ಪಟ್ಟಿಲ್ಲ ಅಂದ್ರು ಅವಳಿಗೆ ನನ್ನ ಮೇಲೆ ತುಂಬಾ ಪ್ರೀತಿ, ಗೌರವ ಇದೆ. ಅವಳ ಮೇಲೆ ಅನುಮಾನ ಬೇಡ. ಒಂದು ವೇಳೆ ಅವಳು ನನ್ನ ಮಾತನ್ನ ಮೀರಿ ಹೊರ ಹೋಗಿದ್ದರೆ ನಾನು ಅವಳನ್ನು ಎಂದಿಗೂ ಕ್ಷಮಿಸುವುದಿಲ್ಲ. ನೀನು ಇಷ್ಟೆಲ್ಲಾ ಹೇಳ್ತೀಯಾ ಅಂದ ಮೇಲೆ ನಾನೇ ಹೋಗಿ ನೋಡಿ ಬರ್ತೀನಿ ಎಂದು ರೂಮ್ ಕಡೆ ಹೋಗುತ್ತಾರೆ ವೀರೇಂದ್ರ.
ವೀರೇಂದ್ರಗೆ ಶ್ರಾವಣಿ ರೂಮ್‌ನಲ್ಲಿ ಇಲ್ಲ ಅನ್ನೋ ಸತ್ಯ ಗೊತ್ತಾಗುತ್ತಾ, ರೌಡಿಗಳಿಂದ ಸುಬ್ಬು-ಶ್ರಾವಣಿ ಬಚಾವ್ ಆಗ್ತಾರಾ, ಫಾರ್ಮ್‌ಹೌಸ್ ರಹಸ್ಯ ಮನೆಯವರಿಗೂ ತಿಳಿಯುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.