ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಸುಬ್ಬು ಪ್ರಾಣಕ್ಕೆ ಕಂಟಕ ತರ್ತಾರಾ ಮದನ್-ವಿಜಯಾಂಬಿಕಾ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode August 21st: ವಿಜಯಾಂಬಿಕಾಗೆ ಖಡಕ್ ವಾರ್ನಿಂಗ್ ಕೊಟ್ಟು ಸಾಲಿಗ್ರಾಮಕ್ಕೆ ಹೋಗುವ ಮೊದಲು ಬದಲಾಗುವಂತೆ ಹೇಳುವ ಪದ್ಮನಾಭ. ಶ್ರಾವಣಿಗೆ ಧೈರ್ಯ ಹೇಳುವ ಸುಬ್ಬು ಮನದಲ್ಲಿ ದುಗುಡ. ಮದನ್-ವಿಜಯಾಂಬಿಕಾ ಸೇರಿ ಸುಬ್ಬು ಪ್ರಾಣಕ್ಕೆ ಕಂಟಕ ತರ್ತಾರಾ?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್ 21ರ) ಸಂಚಿಕೆಯಲ್ಲಿ ವಿಜಯಾಂಬಿಕಾ ಕೋಣೆಗೆ ಬರುವ ಪದ್ಮನಾಭ ನಯವಾದ ಮಾತಿನಿಂದಲೇ ಆಕೆಗೆ ಖಡಕ್ ವಾರ್ನಿಂಗ್ ನೀಡುತ್ತಾರೆ. ತಾವು ಬೆಳೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು ಎಂದು ನೆನಪಿಸುವ ಪದ್ಮನಾಭ ನನ್ನ ಮಕ್ಕಳ ತಂಟೆಗೆ ಬಂದರೆ ತಾನೆಂದೂ ಸುಮ್ಮನಿರುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡುತ್ತಾರೆ. ಮಾತ್ರವಲ್ಲ ಸಾಲಿಗ್ರಾಮಕ್ಕೆ ಹೋಗುವ ಮೊದಲು ನೀವು ಬದಲಾಗಬೇಕು, ಇಲ್ಲ ಅಂದ್ರೆ ಸಾಲಿಗ್ರಾಮದಲ್ಲಿ ಎಲ್ಲವೂ ಅಂತ್ಯವಾಗುತ್ತೆ ಎಂದು ಹೇಳಿ ಅಲ್ಲಿಂದ ಹೊರಟು ಬಿಡುತ್ತಾರೆ. ಸಾಲಿಗ್ರಾಮದ ಹೆಸರು ಕೇಳಿದ್ದೆ ತಡ ಬೆಚ್ಚಿ ಬೀಳುತ್ತಾಳೆ ವಿಜಯಾಂಬಿಕಾ. ಅಲ್ಲದೇ ಫಾರ್ಮ್‌ಹೌಸ್‌ನಲ್ಲಿ ಕೂಡಿದ ಹಾಕಿದ್ದ ವ್ಯಕ್ತಿ ಕೂಡ ಸಾಲಿಗ್ರಾಮದ ಬಗ್ಗೆ ಹೇಳಿದ್ದನ್ನು ನೆನಪಿಸಿಕೊಂಡು ಚಿಂತೆಗೆ ಒಳಗಾಗುತ್ತಾಳೆ.
ರೌಡಿಗಳ ವಿಚಾರದಲ್ಲಿ ಶ್ರಾವಣಿಗೆ ಧೈರ್ಯ ತುಂಬುವ ಸುಬ್ಬು
ಅಪ್ಪ ತಮ್ಮಿಬ್ಬರ ಸಂಬಂಧ ಸರಿ ಹೋಗುವುದಿಲ್ಲ, ಮುಂದು ಕೂಡ ಹೀಗೆ ಇರಬೇಕು ಎಂದು ಹೇಳಿದನ್ನು ನೆನಪಿಸಿಕೊಂಡು ಅಳುತ್ತಿರುವ ಶ್ರಾವಣಿಯನ್ನು ಹುಡುಕಿ ಬರುತ್ತಾನೆ ಸುಬ್ಬು. ಅವಳು ಅಳುವುದನ್ನು ನೋಡಿ ಬೇಸರ ಮಾಡಿಕೊಳ್ಳುವ ಅವನು ಕಾರಣ ಕೇಳುತ್ತಾನೆ. ಆಗ ಶ್ರಾವಣಿ ಅಪ್ಪ ಹೇಳಿದ ಮಾತನ್ನು ಹೇಳಿ, ಅಪ್ಪ ನನಗೆ ಇನ್ನೆಂದೂ ಹತ್ತಿರ ಆಗೊಲ್ಲ ಅನ್ನಿಸ್ತಾ ಇದೆ ಸುಬ್ಬು, ಸಾಲಿಗ್ರಾಮದ ಕಾರಣಕ್ಕೆ ಅಲ್ಲಿಗೆ ಮಾತ್ರ ಈ ಆತ್ಮೀಯತೆ ಎಂದು ಹೇಳುತ್ತಾಳೆ. ಆದರೆ ಸುಬ್ಬು ಮಾತ್ರ ತನ್ನದೇ ರೀತಿಯಲ್ಲಿ ಮಾತನಾಡಿ, ಯಜಮಾನರು ನಿಮಗೆ ಹತ್ತಿರ ಆಗ್ತಾ ಇದಾರೆ ಅದಕ್ಕಾಗಿ ಹಾಗೆಲ್ಲಾ ಹೇಳಿದ್ದು ಎಂದು ಹೇಳಿ ಸಮಾಧಾನ ಮಾಡುತ್ತಾನೆ. ಈ ನಡುವೆ ಸುಬ್ಬು ಕಾಣೆಯಾಗಿದ್ದು ಯಾಕೆ ಅಂತ ಶ್ರಾವಣಿಗೆ ಹೇಳುತ್ತಾನೆ.
ರೌಡಿಗಳು ತನ್ನನ್ನು ನೋಡಿದ ವಿಚಾರ ಹೇಳುವ ಸುಬ್ಬು
ತನ್ನನ್ನು ಸಮಾಧಾನ ಮಾಡಿದ ಸುಬ್ಬು ಬಳಿ ನಿನ್ನೆ ಎಲ್ಲಿ ಹೋಗಿದ್ದೆ ಯಾಕೆ ನಂಬರ್ ಸ್ವಿಚ್ ಆಫ್ ಇತ್ತು ಎಂದೆಲ್ಲಾ ಕೇಳುತ್ತಾಳೆ ಶ್ರಾವಣಿ. ಆಗ ಸುಬ್ಬು ಟೋಲ್ ಗೇಟ್ ಬಳಿ ಬೈಕ್ ಹಾಳಾಗಿದ್ದು, ರೌಡಿಗಳು ನನ್ನನ್ನು ನೋಡಿ ಅಟ್ಟಿಸಿಕೊಂಡು ಬಂದಿದ್ದು ಎಲ್ಲವನ್ನೂ ಹೇಳುತ್ತಾನೆ. ಅಲ್ಲದೇ ನಾವಿನ್ನು ಹುಷಾರಾಗಿ ಇರಬೇಕು ಎಂದು ಸತ್ಯವನ್ನೂ ಶ್ರಾವಣಿಗೆ ಹೇಳುತ್ತಾನೆ. ಸುಬ್ಬು ಮಾತಿನಿಂದ ಗಾಬರಿಗೊಳ್ಳುವ ಶ್ರಾವಣಿ ನೀನು ಇನ್ನು ಮುಂದೆ ಎಲ್ಲಿಗೂ ಹೋಗಬೇಡ. ಮೊಬೈಲ್ ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಬೇಡ, ಒಬ್ಬನೇ ಎಲ್ಲೂ ತಿರುಗಾಡಬೇಡ ಅಂತೆಲ್ಲಾ ಗಾಬರಿಯಲ್ಲಿ ಹೇಳುತ್ತಾಳೆ. ಆದರೆ ಸುಬ್ಬು ಅವಳಿಗೆ ಸಮಾಧಾನ ಮಾಡಿ ನಾವು ನೀರಿಗೆ ಇಳಿದಾಗಿದೆ, ಇನ್ನೇನಿದ್ರು ಈಜಬೇಕು. ನಾವೀಗ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು. ಸಾಲಿಗ್ರಾಮ ರಹಸ್ಯ ಕಂಡುಹಿಡಿಯಬೇಕು, ಫಾರ್ಮ್‌ಹೌಸ್ ರಹಸ್ಯ ಭೇದಿಸಬೇಕು ಎಂದೆಲ್ಲಾ ಧೈರ್ಯ ತುಂಬುತ್ತಾನೆ. ಆದರೆ ಒಳಗೊಳಗೆ ಸುಬ್ಬು ಮನದಲ್ಲಿ ಭಯ ತುಂಬಿರುತ್ತದೆ.
ಸುಬ್ಬು ಪ್ರಾಣಕ್ಕೆ ಕಂಟಕವಾಗ್ತಾರಾ ಮದನ್-ವಿಜಯಾಂಬಿಕಾ
ಬೇಸರದಲ್ಲಿ ಮನೆಬಿಟ್ಟು ಹೋಗಿದ್ದ ಮದನ್ ಮನೆಗೆ ಮರಳಿದಾಗ ಕೋಪದಿಂದ ಮಾತನಾಡುವ ವಿಜಯಾಂಬಿಕಾ ಈ ಮನೆಯಲ್ಲಿ ತನಗೆ ಗೌರವ ಸಿಗುತ್ತಿಲ್ಲ ಎಂದು ಅತ್ತಾಗ ಕುಗ್ಗಿ ಹೋಗುತ್ತಾಳೆ, ನಾನು ಇಷ್ಟೆಲ್ಲಾ ಮಾಡುತ್ತಿರುವುದೇ ನಿನಗಾಗಿ ಮ್ಯಾಡಿ. ಈಗ ನೀನು ಈ ಬಗ್ಗೆ ಯೋಚಿಸದೇ ನಿನ್ನದೇ ನಿರ್ಧಾರಗಳನ್ನು ತೆಗೆದುಕೊಂಡರೆ, ಹೀಗೆಲ್ಲಾ ಅತ್ತರೆ ನಾನು ಏನು ಮಾಡಲು ಸಾಧ್ಯವಾಗುತ್ತದೆ. ಇಷ್ಟಕ್ಕೆಲ್ಲಾ ಕಾರಣ ಆ ಸುಬ್ಬು ಎಂದು ಕೋಪದಿಂದ ಹಲ್ಲು ಕಚ್ಚುತ್ತಾಳೆ. ಆಗ ಮದನ್ ಆ ಸುಬ್ಬು ಹಾಗೂ ಸಾಲಿಗ್ರಾಮ ಎರಡೂ ನಮಗೆ ಮುಳ್ಳಾಗಿದೆ ಎಂದು ಕೋಪದಲ್ಲಿ ಹೇಳುತ್ತಾನೆ. ಮದನ್ ಮಾತು ಕೇಳಿಸಿಕೊಂಡ ವಿಜಯಾಂಬಿಕಾಗೆ ತಮ್ಮ ದಾರಿಗೆ ಅಡ್ಡವಾಗಿರುವುದೇ ಸುಬ್ಬು, ಸುಬ್ಬುಗೆ ಏನಾದ್ರೂ ಮಾಡಿದ್ರೆ ಸಾಲಿಗ್ರಾಮಕ್ಕೆ ಹೋಗೋದು ತಪ್ಪುತ್ತೆ, ನಮ್ಮ ಪಾಲಿಗೆ ಅಡ್ಡವಾಗಿರುವ ದಾರಿಯೂ ಸುಗಮವಾಗುತ್ತದೆ ಎಂಬ ಯೋಚನೆ ಬರುತ್ತದೆ. ಅದಕ್ಕಾಗಿ ತಾಯಿ-ಮಗ ಇಬ್ಬರೂ ಸೇರಿ ಸುಬ್ಬು ಪ್ರಾಣಕ್ಕೆ ಕಂಟಕ ತರುವ ಪ್ಲಾನ್ ಮಾಡುತ್ತಾರೆ.
ಪದ್ಮನಾಭ ವಿಜಯಾಂಬಿಕಾಗೆ ವಾರ್ನಿಂಗ್ ಕೊಡಲು ಕಾರಣವೇನು, ಸುಬ್ಬು ಹೇಳಿದಂತೆ ಫಾರ್ಮ್‌ಹೌಸ್ ರಹಸ್ಯ ಸುಬ್ಬು-ಶ್ರಾವಣಿಯಿಂದ ಭೇದಿಸಲು ಸಾಧ್ಯವಾಗುತ್ತಾ, ಮದನ್-ವಿಜಯಾಂಬಿಕಾ ಸೇರಿ ಸುಬ್ಬು ಪ್ರಾಣಕ್ಕೆ ಕುತ್ತು ತರ್ತಾರಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.