ವರ–ವರದನ ಮದುವೆಗೆ ಇಂದ್ರಮ್ಮ ಕೊಟ್ರು ಗ್ರೀನ್ ಸಿಗ್ನಲ್‌; ಸಾಲಿಗ್ರಾಮದ ಬಗ್ಗೆ ಅಪ್ಪನ ಆಸಕ್ತಿ ಕಂಡು ಸುಬ್ಬುಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ-television news zee kannada shravani subramanya kannada serial today episode 119 august 29th shravani in happy mood rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವರ–ವರದನ ಮದುವೆಗೆ ಇಂದ್ರಮ್ಮ ಕೊಟ್ರು ಗ್ರೀನ್ ಸಿಗ್ನಲ್‌; ಸಾಲಿಗ್ರಾಮದ ಬಗ್ಗೆ ಅಪ್ಪನ ಆಸಕ್ತಿ ಕಂಡು ಸುಬ್ಬುಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ

ವರ–ವರದನ ಮದುವೆಗೆ ಇಂದ್ರಮ್ಮ ಕೊಟ್ರು ಗ್ರೀನ್ ಸಿಗ್ನಲ್‌; ಸಾಲಿಗ್ರಾಮದ ಬಗ್ಗೆ ಅಪ್ಪನ ಆಸಕ್ತಿ ಕಂಡು ಸುಬ್ಬುಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ

Shravani Subramanya Kannada Serial Today Episode August 29th: ಕೊನೆಗೂ ಇಂದ್ರಮ್ಮನ ಮನವೊಲಿಸುವಲ್ಲಿ ಸಕ್ಸಸ್ ಆದ ಶ್ರೀವಲ್ಲಿ, ವರ–ವರದನ ಮದುವೆಗೆ ಒಪ್ಪಿದ್ರು ಓನರ್ ಮನೆಯವರು. ಸಾಲಿಗ್ರಾಮಕ್ಕೆ ಪದ್ಮನಾಭ ಕುಟುಂಬವನ್ನೂ ಆಹ್ವಾನಿಸಿದ ವೀರೇಂದ್ರ. ಅನಾರೋಗ್ಯಳಾದ ಹೆಂಡತಿಯನ್ನೂ ಬಿಟ್ಟು ಸಾಲಿಗ್ರಾಮಕ್ಕೆ ಹೊರಟ ಅಪ್ಪನನ್ನು ಕಂಡು ಸುಬ್ಬುಗೆ ಅಚ್ಚರಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 29ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 29ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 29ರ) ಸಂಚಿಕೆಯಲ್ಲಿ ವರದನಿಗೆ ಥ್ಯಾಂಕ್ಸ್ ಹೇಳಲು ಬಂದ ಸುಬ್ಬು–ವರಲಕ್ಷ್ಮೀ ಬಾಗಿಲ ಬಳಿ ನಿಂತಿರುವಾಗ ಶ್ರೀವಲ್ಲಿ ವರ–ವರದನ ಮದುವೆಗೆ ತಾಯಿ ಇಂದ್ರಮ್ಮನನ್ನು ಒಪ್ಪಿಸಲು ಹರಸಾಹಸ ಮಾಡುತ್ತಿರುವುದು ಕಿವಿ ಬೀಳುತ್ತದೆ. ಆರಂಭದಲ್ಲಿ ಏನೇನೋ ಸರ್ಕಸ್‌ ಮಾಡುವ ಶ್ರೀವಲ್ಲಿ ಕೊನೆಗೆ ‘ಅಮ್ಮ ವರಲಕ್ಷ್ಮೀ ಈ ಮನೆಗೆ ಬಂದರೆ ಸೆಕೆಂಡ್ ಇಂದ್ರಮ್ಮ ಆಗ್ತಾಳೆ. ಅವಳು ತುಂಬಾ ಓದಿಕೊಂಡಿದ್ದಾಳೆ, ಬುದ್ಧಿವಂತೆ. ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ. ನಿನ್ನ ನಂತರ ನಿನ್ನ ಮನೆಯ ಜವಾಬ್ದಾರಿ ಅವಳು ತೆಗೆದುಕೊಳ್ಳುತ್ತಾಳೆ, ಯೋಚನೆ ಮಾಡು‘ ಎಂದು ತಾಯಿಯ ಮನಸ್ಸಿಗೆ ನಾಟುವಂತೆ ಹೇಳುತ್ತಾಳೆ. ಇನ್ನೊಂದು ವಿಚಾರ ‘ನೀನು ಅಣ್ಣನಿಗೆ ಬೇರೆ ಕಡೆ ಹೆಣ್ಣು ತಂದರೆ ಅವಳಿಗೆ ನೀವು ಇಷ್ಟ ಆಗದೇ ಅವಳು ನಿಮ್ಮನ್ನು ಬೀದಿಗೆ ತಳ್ಳಿ ಬಿಟ್ಟರೆ ಏನ್ ಮಾಡ್ತೀರಾ‘ ಎಂದು ತಾಯಿಯ ಮನಸ್ಸಿನಲ್ಲಿ ಇಲ್ಲದ ಭಯ ಹುಟ್ಟಿಸಲು ಶುರು ಮಾಡುತ್ತಾಳೆ. ಇದನ್ನು ಕೇಳಿಸಿಕೊಂಡ ಇಂದ್ರಮ್ಮಳ ಗಂಡ ‘ಇಂದ್ರ ಮಕ್ಕಳು ಹೇಳುವುದು ಸರಿಯಾಗಿದೆ. ನಾವು ಎಲ್ಲಿಂದಲೂ ಹೆಣ್ಣು ತಂದು ನಾಳೆ ಸಂಕಷ್ಟ ಎದುರಿಸುವ ಬದಲು ವರಲಕ್ಷ್ಮೀಯನ್ನು ವರದನಿಗೆ ತಂದುಕೊಳ್ಳೋದು ಉತ್ತಮ. ವರಲಕ್ಷ್ಮೀ ಆದರೆ ನಾನು ಚಿಕ್ಕ ವಯಸ್ಸಿನಿಂದ ನೋಡಿದವರು, ಮೃದು ಸ್ವಭಾವದ ಹುಡುಗಿ, ಜೊತೆಗೆ ರ್ಯಾಂಕ್ ಸ್ಟುಡೆಂಟ್ ಬೇರೆ, ನಾಳೆ ಅವಳು ಐಎಎಸ್‌ ಅಂತೆಲ್ಲಾ ಆದ್ರೆ ನಮಗೆ ಹೆಮ್ಮೆ ಅಲ್ವಾ ಅಂತೆಲ್ಲಾ ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ಇಂದ್ರಮ್ಮ ಯೋಚಿಸುತ್ತಾರೆ.

ಕೊನೆಗೂ ಮದುವೆಗೆ ಒಪ್ಪಿದ ಇಂದ್ರಮ್ಮ

ಗಂಡ, ಮಗಳು, ಮಗ ಎಲ್ಲರೂ ಹೇಳಿದ ಮಾತುಗಳನ್ನು ಯೋಚಿಸುತ್ತಾರೆ ಇಂದ್ರಮ್ಮ. ಒಂದು ವೇಳೆ ಮಗ ಹೇಳಿದಂತೆ ಮದುವೆಯಾಗದೇ ಉಳಿದರೆ ಹೇಗೆ ಎಂಬ ಭಯ ಅವರನ್ನು ಕಾಡಲು ಆರಂಭಿಸುತ್ತೆ. ಕೊನೆಗೆ ಬೇರೆ ದಾರಿ ಕಾಣದೇ ಇಂದ್ರಮ್ಮ ಮಗನಿಗೆ ನೀನೇ ಗೆದ್ದೆ ಬಿಡು ವರದ, ನಿನ್ನ ಹಟದ ಮುಂದೆ ನನ್ನ ಹಟ ಸೋತಿತು‘ ಎಂದು ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. ಇದರಿಂದ ಮನೆಯವರೆಲ್ಲಾ ಖುಷಿಯಲ್ಲಿ ತೇಲಾಡುತ್ತಾರೆ, ಮಾತ್ರವಲ್ಲ ಬಾಗಿಲಲ್ಲಿ ನಿಂತ ವರ– ಸುಬ್ಬು ಸಂಭ್ರಮ ಪಡುತ್ತಾರೆ.ಇನ್ನೇಕೆ ತಡ ಈ ಬಗ್ಗೆ ಸುಬ್ಬ ಮನೆಯವರಿಗೆ ವಿಷಯ ತಿಳಿಸೋಣ ಎಂದು ಹೊರಟಾಗ ಮನೆಯೊಳಗೆ ಬರುತ್ತಾರೆ ಸುಬ್ಬು–ವರ. 

ವರದನಿಗೆ ಥ್ಯಾಂಕ್ ಹೇಳಿ ಕಣ್ಣೀರಾಗುವ ಸುಬ್ಬು

ಶ್ರೀವಲ್ಲಿ ಮನೆಯವರೆಲ್ಲಾ ಸುಬ್ಬು ಮನೆಗೆ ಹೊರಟಿದ್ದರೆ ಸುಬ್ಬು–ವರ ಬಾಗಿಲಿಗೆ ಬರುತ್ತಾರೆ. ಅವರನ್ನು ನೋಡಿ ಇವೆಲ್ಲರ ಶಾಕ್ ಜೊತೆ ಸಂಭ್ರಮವೂ ಪಡುತ್ತಾರೆ. ಆಗ ಇಂದ್ರಮ್ಮ ‘ಏನಪ್ಪಾ ಸುಬ್ಬು, ನಾವೆಲ್ಲಾ ನಿಮ್ಮ ಮನೆಗೆ ಬರಲು ರೆಡಿ ಆಗಿದ್ರೆ ನೀನು ನಮ್ಮ ಮುಂದೆ ಪ್ರತ್ಯಕ್ಷ ಆಗಿದ್ದೀಯಾ‘ ಎಂದು ಕೇಳುತ್ತಾರೆ. ಅದಕ್ಕೆ ಸುಬ್ಬು ಇವತ್ತು ನಮ್ಮ ಮನೆಯ ಮಾನ ಪ್ರಾಣ ಕಾಪಾಡಿದ ವರದನಿಗೆ ಥ್ಯಾಂಕ್ ಹೇಳಿ ಹೋಗುವ ಎಂದು ಬಂದೇ ಇಂದ್ರಮ್ಮನವರೇ ಎಂದು ಹೇಳಿ ವರದನನ್ನು ಮನಸಾರೆ ಹೊಗಳುತ್ತಾಳೆ. ಚಿನ್ನದಂಥ ಮಗನನ್ನು ಹೆತ್ತಿದ್ದೀರಾ ಇಂದ್ರಮ್ಮನವರೆ ಎಂದರೆ ಅಳುವ ಸುಬ್ಬು ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಾನೆ.

ಸಾಲಿಗ್ರಾಮಕ್ಕೆ ಹೊರಡಲು ಹೇಳುವ ವೀರೇಂದ್ರ

ಸುಬ್ಬು ಇಂದ್ರಮ್ಮನ ಮನೆಗೆ ಹೋದಾಗ ಅವನಿಗೊಂದು ಕಾಲ್ ಬರುತ್ತದೆ. ಪದ್ಮನಾಭ ಹೋಗಿ ನೋಡಿದಾಗ ಅದು ಯಜಮಾನ್ರು ಅಂದ್ರೆ ವೀರೇಂದ್ರ ಅವರ ಕಾಲ್ ಆಗಿರುತ್ತೆ. ನಿಧಾನಕ್ಕೆ ಕಾಲ್ ಎತ್ತುವ ಪದ್ಮನಾಭ ಯಜಮಾನ್ರೆ ಸುಬ್ಬು ಆಚೆ ಎಲ್ಲೋ ಹೋಗಿದಾನೆ, ಅರ್ಜೆಂಟ್ ಇದ್ರೆ ಈಗಲೇ ಹೋಗಿ ಫೋನ್ ಕೊಡ್ತೀನಿ ಅಂತಾನೆ. ಆದರೆ ಅದಕ್ಕೆ ವೀರೇಂದ್ರ ‘ಅಯ್ಯೋ ಬೇಡ, ಒಂದು ಲೆಕ್ಕದಲ್ಲಿ ನನಗೆ ನಿಮ್ಮ ಬಳಿಯೇ ಮಾತನಾಡಬೇಕಿತ್ತು. ನಾವು ನಾಳೆಯೇ ಸಾಲಿಗ್ರಾಮಕ್ಕೆ ಹೊರಡಬೇಕು ಎಂದು ಅಲ್ಲಿ ಆಗಿದ್ದು, ನರಸಯ್ಯನವರು ಕಾಲ್ ಮಾಡಿದ್ದು ಎಲ್ಲಾ ವಿಚಾರವನ್ನು ಹೇಳುತ್ತಾರೆ. ಅಲ್ಲದೇ ಬೆಳಿಗ್ಗೆ ರೆಡಿ ಇರಿ ಕಾರ್ ಕಳುಹಿಸುತ್ತೇವೆ. ಸುಬ್ಬು ಬಂದ ಮೇಲೆ ನನಗೆ ಕಾಲ್ ಮಾಡೋಕೆ ಹೇಳಿ ಎಂದು ಕಟ್ ಮಾಡುತ್ತಾರೆ. ಇತ್ತ ಇಂದ್ರಮ್ಮ ಸುಬ್ಬ ಬಳಿ ವರದ–ವರಲಕ್ಷ್ಮೀ ಮದುವೆಗೆ ತಾವೆಲ್ಲರೂ ಒಪ್ಪಿದ್ದನ್ನು ಹೇಳುತ್ತಿದ್ದರೆ ಅತ್ತ ಪದ್ಮನಾಭ ಫೋನ್ ಹಿಡಿದು ಇಂದ್ರಮ್ಮ ಮನೆಗೆ ಬರುತ್ತಾರೆ, ಅಲ್ಲಿ ಅವರಿಗೂ ವರ–ವರಲಕ್ಷ್ಮೀ ಮದುವೆಗೆ ವರದ ಮನೆಯವರೆಲ್ಲ ಒಪ್ಪಿದ ವಿಚಾರ ತಿಳಿಯುತ್ತದೆ. ಅವರು ಕೂಡ ಮಕ್ಕಳ ಪ್ರೀತಿ ಹಸಿರಾಗಿದ್ದು ಕಂಡು ಖುಷಿಪಡುತ್ತಾರೆ.

ಸಾಲಿಗ್ರಾಮದ ಬಗ್ಗೆ ಅಪ್ಪನ ಆಸಕ್ತಿ ಕಂಡು ಸುಬ್ಬುಗೆ ಅಚ್ಚರಿ

ಯಜಮಾನರಿಗೆ ಕಾಲ್ ಮಾಡಿ ಬರುವ ಸುಬ್ಬು ‘ಅಪ್ಪ ನೀವು ಅಮ್ಮನನ್ನು ನೋಡಿಕೊಂಡು ಇಲ್ಲೇ ಇರಿ, ನಾನು ಸಾಲಿಗ್ರಾಮಕ್ಕೆ ಹೋಗಿ ಬರ್ತೀನಿ‘ ಎಂದಾಗ ‘ಅಯ್ಯೋ ಎಲ್ಲಾದ್ರೂ ಉಂಟೆ, ಸಾಲಿಗ್ರಾಮ ಎಂದರೆ ನಾನು ಏನೇ ಕೆಲಸ ಇದ್ರೂ ಹೋಗಲೇಬೇಕು, ನನ್ನ ಉಸಿರು ಕೂಡ ಸಾಲಿಗ್ರಾಮಕ್ಕಾಗಿಯೇ ಇದೆ‘ ಎನ್ನುವ ಅರ್ಥದಲ್ಲಿ ಮಾತನಾಡುತ್ತಾರೆ. ಇದನ್ನು ಕೇಳಿಸಿಕೊಂಡ ಸುಬ್ಬುಗೆ ಅಚ್ಚರಿಯಾಗುತ್ತದೆ ಮಾತ್ರವಲ್ಲ, ಅಪ್ಪ ಯಾಕೆ ಸಾಲಿಗ್ರಾಮದ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಸುತ್ತಾರೆ, ಸಾಲಿಗ್ರಾಮದಲ್ಲಿ ಅಂಥದ್ದೇನಿದೆ ಎಂದು ಸುಬ್ಬು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾನೆ.

ಶ್ರಾವಣಿಗೆ ಸುಬ್ಬು ಮೇಲಿರುವ ಭಾವನೆ ಬಗ್ಗೆ ಗಂಡನ ಬಳಿ ಹೇಳುವ ವಂದನಾ

ಸಾಲಿಗ್ರಾಮಕ್ಕೆ ಹೋಗಲು ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡುತ್ತಿರುವ ರೂಮ್‌ಗೆ ಬರುವ ಸುರೇಂದ್ರ ವಂದನಾ ಬಳಿ ಬೆಳಿಗ್ಗೆ ಏನೋ ಹೇಳ್ತಾ ಇದ್ದೆ ಅಲ್ವಾ ಏನದು ಎಂದು ಕೇಳುತ್ತಾರೆ. ಆಗ ನಿಧಾನಕ್ಕೆ ವಂದನಾ ಸುಬ್ಬು–ಶ್ರಾವಣಿ ಬಗ್ಗೆ ಮಾತನಾಡುತ್ತಾರೆ. ಆರಂಭದಲ್ಲಿ ಈ ವಿಚಾರದ ಯೋಚನೆ ಬಿಡು ಎನ್ನುವ ಸುರೇಂದ್ರ ನಂತರ ಹೆಂಡತಿ ಹೇಳಿರುವುದೆಲ್ಲಾ ಕೇಳಿಸಿಕೊಂಡು ಶಾಕ್‌ಗೆ ಒಳಗಾಗುತ್ತಾರೆ. ಸುಬ್ಬು ಮೇಲೆ ಶ್ರಾವಣಿಗೆ ಇರುವ ಭಾವನೆಗಳ ಬಗ್ಗೆ ಕೇಳಿ ಸುರೇಂದ್ರ ಅವರಿಗೂ ಅಚ್ಚರಿ ಆಗುತ್ತೆ.

ಇಂದ್ರಮ್ಮ ನಿಜಕ್ಕೂ ವರ–ವರದನ ಮನೆಗೆ ಖುಷಿಯಿಂದಲೇ ಒಪ್ಪಿಗೆ ನೀಡಿದ್ರಾ, ಶ್ರಾವಣಿ ಮನಸ್ಸಿನಲ್ಲಿರೋದು ಪ್ರೀತಿನಾ, ಸಾಲಿಗ್ರಾಮದ ಬಗ್ಗೆ ಪದ್ಮನಾಭರ ಆಸಕ್ತಿ ಬಗ್ಗೆ ಸುಬ್ಬುಗೆ ಉತ್ತರ ಸಿಗುತ್ತಾ, ಸಾಲಿಗ್ರಾಮದಲ್ಲಿ ಏನೆಲ್ಲಾ ಆಗಬಹುದು ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ. ‌