ಶ್ರಾವಣಿಯನ್ನ ಮಗಳೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದ ವೀರು, ಮಾತಲ್ಲೇ ವಿಜಯಾಂಬಿಕಾಗೆ ಭಯ ಹುಟ್ಟಿಸಿದ ಲಲಿತಾದೇವಿ; ಶ್ರಾವಣಿ ಸುಬ್ರಹ್ಮಣ್ಯ
Shravani Subramanya Kannada Serial Today Episode September 11th: ವೀರೇಂದ್ರನ ಬಳಿ ಮಗಳನ್ನು ಚೆನ್ನಾಗಿ ಬೆಳೆಸಿದ್ದೀಯಾ ಎಂದು ಹೊಗಳಿದ ಲಲಿತಾದೇವಿ, ಅಜ್ಜಿ ಬಗ್ಗೆ ಸುಬ್ಬು ಬಳಿ ದೂರು ಹೇಳಿದ ಶ್ರಾವಣಿ, ವಿಜಯಾಂಬಿಕಾಗೆ ಮಾತಲ್ಲೇ ನಡುಕ ಹುಟ್ಟಿಸಿದ್ರು ಲಲಿತಾದೇವಿ, ಶ್ರಾವಣಿಯನ್ನು ಎಂದಿಗೂ ಮಗಳು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂದ್ರು ವೀರೇಂದ್ರ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್ 11ರ) ಸಂಚಿಕೆಯಲ್ಲಿ ತನ್ನೆದರು ಕೈ ಮುಗಿದು ನಿಂತ ವೀರೇಂದ್ರನ ಬಳಿ ವಿಧಿ ಎಲ್ಲವನ್ನೂ ಮಾಡಿಸುತ್ತೆ, ಎಲ್ಲವೂ ಇರುವುದು ಕಾಲನ ಕೈಯಲ್ಲಿ. ಮಗಳು ಹೋದ ಮೇಲೆ ನೀವ್ಯಾರೂ ಈ ಕಡೆ ಬಂದಿಲ್ಲ ಎಂಬ ಕೋಪ ನನಗೆ ಇತ್ತು, ಆದರೆ ಈಗ ಮೊಮ್ಮಗಳನ್ನ ನೋಡಿದ ಮೇಲೆ ಆ ಕೋಪ ಎಲ್ಲಾ ಹಾಗೆ ಕಣ್ಮರೆಯಾಗಿದೆ ಎಂದು ಸಮಾಧಾನ ಮಾತು ಹೇಳುತ್ತಾರೆ. ಕೊನೆಯಲ್ಲಿ ಮಗಳನ್ನ ತುಂಬಾ ಚೆನ್ನಾಗಿ ಬೆಳೆಸಿದ್ದೀಯಾ ವೀರು ಎಂದು ಮನಸಾರೆ ಹೊಗಳುತ್ತಾರೆ. ಅತ್ತೆಯ ಈ ಮಾತು ಕೇಳಿ ವೀರೇಂದ್ರಗೆ ಸಾಕಷ್ಟು ಪಶ್ಚಾತ್ತಾಪ ಮೂಡುತ್ತದೆ.
ಸುಬ್ಬು ಬಳಿ ಅಜ್ಜಿಯ ಬಗ್ಗೆ ದೂರು ಹೇಳಿದ ಶ್ರಾವಣಿ
ಸುಬ್ಬುವನ್ನು ದರದರನೆ ಎಳೆದುಕೊಂಡು ಹೊರ ಬರುವ ಶ್ರಾವಣಿ ‘ಸುಬ್ಬು ನಾವು ನಿಜಕ್ಕೂ ಸಾಲಿಗ್ರಾಮಕ್ಕೆ ಬಂದ್ದಿದೀವಾ, ಅವರು ನಿಜಕ್ಕೂ ನನ್ನ ಅಜ್ಜಿನೇನಾ‘ ಎಂದು ಪ್ರಶ್ನೆ ಮಾಡುತ್ತಾಳೆ. ಅವಳು ಹೇಳಿದ್ದು ಕೇಳಿ ಸುಬ್ಬು ಇದ್ಯಾಕೆ ಮೇಡಂ ಹೀಗೆ ಮಾತಾಡ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಶ್ರಾವಣಿ ‘ಮತ್ತೆ ನಾನು ಅಜ್ಜಿಯನ್ನು ಮೊದಲ ಸಲ ನೋಡ್ತಾ ಇದೀನಿ, ಅವರು ನನ್ನ ಮೊದಲ ಸಲ ನೋಡ್ತಾ ಇದಾರೆ. ಎಲ್ಲಾ ಅಜ್ಜ–ಅಜ್ಜಿಯರಂತೆ ನನ್ನನ್ನು ತುಂಬಾ ಮುದ್ದು ಮಾಡ್ತಾರೆ, ಪ್ರೀತಿಯಿಂದ ಮಾತಾಡ್ತಾರೆ ಅಂದ್ಕೊಂಡ್ರೆ ಈ ಅಜ್ಜಿ ಮಾತ್ರ ನನಗೆ ಅರ್ಥ ಆಗುವ ಹಾಗೂ ಮಾತಾಡಿಲ್ಲ. ಅದೇನೋ ವಿಧಿ, ನಿಯಮ ಅಂತೆಲ್ಲಾ ಮಾತನಾಡಿದ್ರು, ಅವರು ಮಾತನಾಡಿದ್ದು ನಂಗೆ ಒಂದ್ ಚೂರು ಅರ್ಥ ಆಗಿಲ್ಲ. ಮಾತ್ರ ಅಲ್ಲ ಅಜ್ಜಿಯನ್ನು ನೋಡಬೇಕು ಎಂದು ಆಕಾಶದಲ್ಲಿ ಹಾರಾಡುತ್ತಿದ್ದ ನನಗೆ ಒಂದೇ ಸಲ ಭೂಮಿಗೆ ಬಿದ್ದ ಹಾಗೆ ಅಂತ‘ ದೂರು ಹೇಳ್ತಾಳೆ. ಅದಕ್ಕೆ ಅವಳನ್ನು ಸಮಾಧಾನ ಮಾಡುವ ಸುಬ್ಬು ‘ಮೇಡಂ, ಇದೇ ಮೊದಲ ಸಲ ಬರ್ತಾ ಇದ್ದೀರಾ, ಹೊಂದಿಕೊಳ್ಳೋಕೆ ಅವರಿಗೂ ಸಮಯ ಬೇಕು ಅಲ್ವಾ, ಆದರೆ ಅದನ್ನ ಬಿಡಿ, ಇಲ್ಲಿಗೆ ಬಂದ ಮೇಲೆ ಯಜಮಾನ್ರು ನಿಮ್ಮನ್ನು ಪ್ರೀತಿಯಿಂದ ಮಾತಾಡಿಸ್ತಾ ಇದಾರೆ, ಕಂದಾ ಎಂದು ಪ್ರೀತಿಯಿಂದ ಕರೆದಿದ್ದಾರೆ‘ ಎಂದು ಅಪ್ಪನ ಪ್ರೀತಿಯನ್ನು ನೆನಪು ಮಾಡಿ ಸಾಮಾಧಾನ ಮಾಡಿ ‘ಲಲಿತಾದೇವಿ ಅಮ್ಮವ್ರು ಬಂದಿರ್ತಾರೆ ಮೇಡಂ, ಹೋಗೋಣ ಈಗ, ಈ ಬಗ್ಗೆ ಮತ್ತೆ ಮಾತಾಡೋಣ‘ ಎಂದು ಅವಳನ್ನು ಕರೆದುಕೊಂಡು ಒಳ ಬರುತ್ತಾನೆ.
ವಿಜಯಾಂಬಿಕಾಗೆ ನಡುಕ ಹುಟ್ಟಿಸಿದ ಲಲಿತಾದೇವಿ
ಲಲಿತಾದೇವಿಯವರು ಹಾಲ್‌ಗೆ ಒಂದು ಕುರ್ಚಿಯಲ್ಲಿ ಕುಳಿತಿರುತ್ತಾರೆ. ಎಲ್ಲರೂ ಅವರ ಸುತ್ತಲೂ ನಿಂತಿರುತ್ತಾರೆ. ವೀರೇಂದ್ರ ಸುರೇಂದ್ರನ ಕುಟುಂಬವನ್ನು ಲಲಿತಾದೇವಿ ಅವರಿಗೆ ಪರಿಚಯ ಮಾಡಿ ಕೊಡುತ್ತಾನೆ. ಪದ್ಮನಾಭನನ್ನು ನೋಡಿದ ಲಲಿತಾದೇವಿ ‘ಪದ್ದು ನಿನಗೆ ಈಗಲೂ ಈ ಮನೆ ಮೇಲೆ ಅದೇ ಗೌರವ ಇರುವುದು ನೋಡಿ ಖುಷಿಯಾಯ್ತು, ನಿನಗೆ ಈಗಲೂ ನಮ್ಮ ಮನೆ ಮೇಲೆ ಸಾಸಿವೆ ಕಾಳಿನಷ್ಟು ಗೌರವ ಕಡಿಮೆಯಾಗಿಲ್ಲ ಅನ್ನೋದು ಸಂತೋಷದ ಸಂಗತಿ ಎಂದು ಅಭಿಮಾನದಿಂದ ಹೇಳುತ್ತಾರೆ. ಅಷ್ಟೊತ್ತಿಗೆ ಹೊರ ಹೋಗಿದ್ದ ಶ್ರಾವಣಿ–ಸುಬ್ರಹ್ಮಣ್ಯ ಒಳಗೆ ಬರುತ್ತಾರೆ. ಅವರನ್ನ ನೋಡಿ ಎಲ್ಲರ ಮುಖ ಒಂದು ರೀತಿ ಆಗುತ್ತದೆ. ಪದ್ಮನಾಭ ಸುಬ್ಬುಗೆ ಎಲ್ಲಿ ಹೋಗಿದ್ದೆ ಮಗನೆ ಎಂದು ನಿಧಾನಕ್ಕೆ ಗದುರುತ್ತಾರೆ, ಮಾತ್ರವಲ್ಲ ಲಲಿತಾದೇವಿ ಅವರಿಗೆ ಇವನು ನನ್ನ ಮಗ ಸುಬ್ರಹ್ಮಣ್ಯ ಎಂದು ಪರಿಚಯಿಸುತ್ತಾರೆ. ಆಗ ವೀರೇಂದ್ರ ಸುಬ್ಬು ನನ್ನ ಜೊತೆಗೆ ಕೆಲಸ ಮಾಡೋದು, ನಿಯುತ್ತು ಶೃದ್ಧೆಗೆ ಇನ್ನೊಂದು ಹೆಸರು ಅವರು ಎಂದು ಅಭಿಮಾನದಿಂದ ಮಾತನಾಡುತ್ತಾರೆ. ಅದಕ್ಕೆ ಲಲಿತಾದೇವಿ ಕೂಡ ‘ಅವನ ಮುಖ ನೋಡಿದ್ರೆ ಗೊತ್ತಾಗುತ್ತೆ, ಅವನ ಮುಖದಲ್ಲಿ ಏನೋ ಒಂದು ವರ್ಚಸ್ಸಿದೆ‘ ಎಂದು ಆಶೀರ್ವಾದ ಮಾಡುತ್ತಾರೆ. ತನ್ನನ್ನು ಹೊಗಳದಿದ್ದರೂ ಅಜ್ಜಿ ಸುಬ್ಬುವನ್ನು ಹೊಗಳಿದ್ರಲ್ಲಾ ಎಂದು ಶ್ರಾವಣಿ ಸಾಮಾಧಾನ ಮಾಡಿಕೊಳ್ಳುತ್ತಾಳೆ. ಅಷ್ಟೊತ್ತಿಗೆ ವಿಜಯಾಂಬಿಕಾ ಕಡೆ ನೋಡುವ ಲಲಿತಾದೇವಿ ‘ವಿಜಯಾಂಬಿಕಾ ಯಾಕೆ ಮರೆಯಲ್ಲಿ ನಿಂತಿದ್ದೀಯಾ, ಮನುಷ್ಯ ಹಳೆಯದನ್ನ ಮರೆಯೋದಾಗ್ಲಿ, ಮರೆಯಲ್ಲಿ ನಿಲ್ಲೋದಾಗ್ಲಿ ಯಾವತ್ತು ಮಾಡಬಾರದು, ಮುಂದೆ ಬಾ ಎಂದು ಖಡಕ್ ಆಗಿ ಹೇಳುತ್ತಾರೆ. ಅವರ ಮಾತು ನಡುಕ ಹುಟ್ಟಿಸುತ್ತೆ, ಸುಬ್ಬು–ಶ್ರಾವಣಿ ಮುಖ–ಮುಖ ನೋಡಿಕೊಳ್ಳುತ್ತಾರೆ. ಆಗ ವೀರೇಂದ್ರ ಅಕ್ಕನಿಗೆ ಸ್ವಲ್ಪ ಮುಜುಗರದ ಸ್ವಭಾವ ನಿಮಗೆ ಗೊತ್ತಲ್ಲ ಎಂದು ಹೇಳುತ್ತಾರೆ. ಅದಕ್ಕೆ ನನಗೆ ಇವಳ ಬಗ್ಗೆ ಎಲ್ಲಾ ಗೊತ್ತು ಎಂದು ಎನೋ ಗೊತ್ತಿರುವವರಂತೆ ಗಂಭೀರವಾಗಿ ಹೇಳುತ್ತಾರೆ. ವಿಜಯಾಂಬಿಕಾಗೆ ಲಲಿತಾದೇವಿಯವರ ಮಾತು ನಿಜಕ್ಕೂ ಭಯ ಹುಟ್ಟಿಸುತ್ತದೆ.
ಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದ ವೀರು
ಮನೆಯ ಹೊರಗಡೆ ಬೆಳದಿಂಗಳಲ್ಲಿ ನಿಂತಿರುವ ವೀರೇಂದ್ರ ಶ್ರಾವಣಿ ಅಜ್ಜಿಯ ಬಳಿ ಹೇಳಿದ ಮಾತುಗಳನ್ನೇ ನೆನಪು ಮಾಡಿಕೊಳ್ಳುತ್ತಾರೆ. ಶ್ರಾವಣಿಗೆ ತಾನೆಂದು ಪ್ರೀತಿ, ಆದರ ತೋರಿಲ್ಲ ಅಂದ್ರು ಅವಳು ಅಜ್ಜಿನ ಮುಂದೆ ತನ್ನನ್ನು ಬಿಟ್ಟುಕೊಟ್ಟಿಲ್ಲ ಎಂದು ಶ್ರಾವಣಿಯ ಬಗ್ಗೆ ಅಭಿಮಾನ ಮೂಡುತ್ತದೆ. ಶ್ರಾವಣಿಯ ಒಳ್ಳೆಯತನ ಅವರ ಮನಸ್ಸು ಕೆಡಿಸುತ್ತದೆ. ಅಣ್ಣನನ್ನು ಹುಡುಕಿ ಬರುವ ಸುರೇಂದ್ರ ಅಣ್ಣ ಬೇಸರದಲ್ಲಿ ಇರುವುದು ಗಮನಿಸಿ ‘ಅಣ್ಣಾ ಹೀಗ್ಯಾಕೆ ನಿಂತಿದ್ದೀಯಾ, ಯಾಕೆ ಬೇಸರದಲ್ಲಿದ್ದೀಯಾ‘ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ವೀರೇಂದ್ರ ಶ್ರಾವಣಿಯ ಅಜ್ಜಿಯ ಮುಂದೆ ತನ್ನ ಬಗ್ಗೆ ಹೇಳಿದ ಮಾತುಗಳನ್ನು ಸುರೇಂದ್ರನ ಬಳಿ ಹೇಳುತ್ತಾರೆ. ಅದಕ್ಕೆ ಸುರೇಂದ್ರ ‘ಪಾಪ ತುಂಬಾ ಒಳ್ಳೆಯವಳು ಅಣ್ಣಾ ಶ್ರಾವಣಿ, ಅವಳಿಗೆ ನಿನ್ನ ಮೇಲೆ ಬೆಟ್ಟದಷ್ಟೂ ಪ್ರೀತಿ, ಗೌರವ ಇದೆ.ಈಗಲೂ ಕಾಲ ಮಿಂಚಿಲ್ಲ, ನೀನ್ಯಾಕೆ ಅವಳನ್ನು ಮಗಳು ಅಂತ ಒಪ್ಪಿಕೊಳ್ಳಬಾರದು‘ ಎಂದು ಕೇಳುತ್ತಾರೆ. ಅದಕ್ಕೆ ಸಿಟ್ಟಾಗುವ ವೀರೇಂದ್ರ ‘ನನಗೆ ಅವಳ ಮೇಲೆ ಯಾವುದೇ ದ್ವೇಷ ಇಲ್ಲ, ಆದರೆ ನನಗೆ ಯಾವತ್ತೂ ಅವಳನ್ನ ನನ್ನ ಮಗಳು ಎಂದು ಒಪ್ಪಿಕೊಳ್ಳಲು ಸಾಧ್ಯವೇ ಆಗಿಲ್ಲ. ಮುಂದೆ ಕೂಡ ಯಾವತ್ತು ಅವಳನ್ನು ನನ್ನ ಮಗಳು ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ‘ ಗಂಭೀರವಾಗಿ ಹೇಳುತ್ತಾರೆ.
ಲಲಿತಾದೇವಿಗೆ ನಿಜಕ್ಕೂ ವಿಜಯಾಂಬಿಕಾ ಬಗ್ಗೆ ಎಲ್ಲಾ ವಿಚಾರಗಳು ಗೊತ್ತಾ, ಶ್ರಾವಣಿಯನ್ನ ವೀರೇಂದ್ರ ಮಗಳು ಎಂದು ಒಪ್ಪಿಕೊಳ್ಳುವ ದಿನ ಬರೋದೆ ಇಲ್ವಾ, ವಿಜಯಾಂಬಿಕಾ ಮುಖವಾಡ ಕಳಚೋದು ಯಾವಾಗ, ಉತ್ಸವ ಯಾವುದೇ ತೊಂದರೆಯಿಲ್ಲದೇ ನಡಿಯುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.