ಕನ್ನಡ ಸುದ್ದಿ  /  ಮನರಂಜನೆ  /  ಬೈಕ್‌ ಮರಳಿದ ಖುಷಿಯಲ್ಲಿ ಶ್ರಾವಣಿ ಜೊತೆ ಸುಬ್ಬು ಜಾಲಿರೈಡ್‌, ದುಃಖದಲ್ಲಿ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಬೈಕ್‌ ಮರಳಿದ ಖುಷಿಯಲ್ಲಿ ಶ್ರಾವಣಿ ಜೊತೆ ಸುಬ್ಬು ಜಾಲಿರೈಡ್‌, ದುಃಖದಲ್ಲಿ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

Shravani Subramanya Kannada Serial Today Episode June 13th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಸುಂದರನಿಂದ ಕಳೆದು ಹೋದ ಬೈಕ್‌ ಅನ್ನು ಸುಬ್ಬುಗೆ ಮರಳಿಸಿದ ಶ್ರಾವಣಿ, ತಾನು ಬೈಕ್‌ ಕೊಡಿಸುವ ಕನಸು ನನಸಾಗದೇ ಬೇಸರಗೊಳ್ಳುವ ಶ್ರೀವಲ್ಲಿ. ಸುಬ್ಬು ಜೊತೆ ಬೈಕ್‌ ಮೇಲೆ ಜಾಲಿರೈಡ್‌ ಹೋಗುವ ಶ್ರಾವಣಿಗೆ ಸಿಕ್ತು ಪಾನಿಪುರಿ ಪಾರ್ಟಿ.

ಬೈಕ್‌ ಮರಳಿದ ಖುಷಿಯಲ್ಲಿ ಶ್ರಾವಣಿ ಜೊತೆ ಸುಬ್ಬು ಜಾಲಿರೈಡ್‌, ದುಃಖದಲ್ಲಿ ಶ್ರೀವಲ್ಲಿ
ಬೈಕ್‌ ಮರಳಿದ ಖುಷಿಯಲ್ಲಿ ಶ್ರಾವಣಿ ಜೊತೆ ಸುಬ್ಬು ಜಾಲಿರೈಡ್‌, ದುಃಖದಲ್ಲಿ ಶ್ರೀವಲ್ಲಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 13) ಸಂಚಿಕೆಯಲ್ಲಿ ಸುಬ್ಬು ಬೈಕ್‌ ಮರಳಿ ಮನೆಗೆ ಬಂದ ಖುಷಿಯಲ್ಲಿ ಸುಬ್ಬು ಮನೆಯವರು. ವಿಶಾಲಾಕ್ಷಿ (ಸುಬ್ಬು ತಾಯಿ) ಬಳಿ ಬೈಕ್‌ಗೆ ಆರತಿ ಮಾಡುವಂತೆ ಹೇಳುತ್ತಾರೆ ಅನಂತಪದ್ಮನಾಭ (ಸುಬ್ಬು ತಂದೆ). ಮನೆಯವರೆಲ್ಲಾ ಬೈಕ್‌ ಬಂದ ಸಂತಸದಲ್ಲಿದ್ರೆ ಶ್ರೀವಲ್ಲಿ ಸುಬ್ಬು ಬೈಕ್‌ ಕೊಡಿಸಲು ಸಾಧ್ಯವಾಗುತ್ತಿಲ್ಲ, ಹೊಸ ಬೈಕ್‌ನಲ್ಲಿ ಸುಬ್ಬು ಜೊತೆ ಜಾಲಿರೈಡ್‌ ಹೋಗಲು ಸಾಧ್ಯವಾಗುತ್ತಿಲ್ಲ ಅಂದುಕೊಂಡು ಮನದಲ್ಲೇ ಕೊರಗುತ್ತಾಳೆ. ತನ್ನ ಬೈಕ್‌ ಮರಳಿಸಿದ ಶ್ರಾವಣಿ ಮೇಡಂಗೆ ಮನಸಾರೆ ಥ್ಯಾಂಕ್ಸ್‌ ಹೇಳುವ ಸುಬ್ಬು ಖುಷಿಯಲ್ಲಿ ಕುಣಿದಾಡುತ್ತಾನೆ. ʼನನ್ನ ಜೀವನವನ್ನೇ ನಂಗೆ ಮರಳಿಸಿ ಕೊಟ್ರಿ ಮೇಡಂʼ ಎಂದು ಶ್ರಾವಣಿಯನ್ನ ಮನಸಾರೆ ಹೊಗಳುತ್ತಾನೆ ಸುಬ್ಬು.

ಸುಂದರನಿಗೆ ಶ್ರಾವಣಿ ವಾರ್ನಿಂಗ್‌

ಮನೆಯವರೆಲ್ಲಾ ಸುಬ್ಬು ಬೈಕ್‌ ನೋಡುವ ಖುಷಿಯಲ್ಲಿ ಇದ್ರೆ ಶ್ರಾವಣಿ ಮಾತ್ರ ಸುಂದರ(ಸುಬ್ಬು ಭಾವ) ನನ್ನು ಮಾತನಾಡಲು ಇದೆ ಎಂದು ಹೇಳಿ ದೂರಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಬೈಕ್‌ ಕಳೆದಿದ್ದು ಸುಂದರನಿಂದಲೇ ಎಂಬುದು ತನಗೆ ಗೊತ್ತು ಎನ್ನುವ ಶ್ರಾವಣಿ ಇನ್ನು ಮುಂದೆ ಸುಬ್ಬುಗಾಗಲಿ, ಮನೆಯವರಿಗಾಗಲಿ ಸುಂದರನಿಂದ ಯಾವುದೇ ತೊಂದರೆ ಆಗುವಂತಿಲ್ಲ, ಈ ಕೂಡಲೇ ಬೇರೆ ಮನೆ ಮಾಡಿ ಹೆಂಡ್ತಿ, ತಾಯಿಯನ್ನು ಕರೆದುಕೊಂಡು ಹೋಗಬೇಕು, ಅವರ ಜವಾಬ್ದಾರಿ ಹೊರಬೇಕು ಎಂದು ವಾರ್ನಿಂಗ್‌ ಮಾಡುತ್ತಾಳೆ. ಅಲ್ಲದೇ ಸುಬ್ಬು ಬೈಕ್‌ ಕಳೆದಿದ್ದಕ್ಕೆ ಕೆನ್ನೆ ಮೇಲೆ ಪಟಾರ್‌ ಎಂದು ಬಾರಿಸುತ್ತಾಳೆ. ಮೊದಲೇ ಶ್ರಾವಣಿ ಅಂದ್ರೆ ಗಡಗಡ ನಡಗುವ ಸುಂದರ ಶ್ರಾವಣಿ ಕೊಟ್ಟ ಏಟಿಗೆ ಇನ್ನಷ್ಟು ನಡುಗುತ್ತಾನೆ. ಅಲ್ಲದೇ ಹೆಂಡತಿ-ಮಗಳು, ತಾಯಿಯಾಗಿ ಬೇರೆ ಮನೆ ಮಾಡಲು ತನಗೆ ಒಂದಿಷ್ಟು ಕಾಲಾವಕಾಶ ಬೇಕು ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪುವ ಶ್ರಾವಣಿ ʼನಿನ್ನ ಬಳಿ ಜಾಸ್ತಿ ಟೈಮ್‌ ಇಲ್ಲ. ಆದಷ್ಟು ಬೇಗ ಅವರನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕುʼ ಎಂದು ಖಡಕ್ ವಾರ್ನಿಂಗ್‌ ನೀಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಪ್ರೆಸ್‌ ಕಾನ್ಫರೆನ್ಸ್‌ಗೆ ವೀರೇಂದ್ರ ಸಿದ್ಧತೆ

ದೊಡ್ಡಮಟ್ಟದ ಪ್ರೆಸ್‌ ಕಾನ್ಫರೆನ್ಸ್‌ಗಾಗಿ ವಿರೇಂದ್ರ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿರುತ್ತಾರೆ. ಅಧಿಕಾರಿಗಳಿಂದ ಮಾಹಿತಿಯನ್ನೆಲ್ಲಾ ಕಲೆಕ್ಟ್‌ ಮಾಡಿ ಎಲ್ಲವನ್ನು ಕೂಲಂಷಕವಾಗಿ ಪರಿಶೀಲನೆ ಮಾಡುತ್ತಾರೆ. ತಮ್ಮ ಸುರೇಂದ್ರ ಅಣ್ಣನಿಗೆ ಸಹಾಯ ಮಾಡುತ್ತಾರೆ. ಆದರೂ ವಿರೇಂದ್ರ ಅವರಿಗೆ ಏನೋ ಭಯ, ತಳಮಳ ಇರುತ್ತದೆ. ಕೊನೆಗೆ ಅವರಿಗೆ ಸುಬ್ಬು ಇಲ್ಲದೇ ಇರುವುದರಿಂದ ತನಗೆ ಹೀಗಾಗುತ್ತಿದೆ ಅನ್ನಿಸುತ್ತದೆ. ಆಗ ತಮ್ಮ ಸುರೇಂದ್ರನ ಬಳಿ ಹೇಳಿ ʼಸುಬ್ಬುವನ್ನು ನಾಳೆ ಬೇಗ ಬರಲು ಹೇಳು, ಪ್ರೆಸ್‌ ಕಾನ್ಫರೆನ್ಸ್‌ ನಡೆಯುವ ಜಾಗದಲ್ಲಿ ಎಲ್ಲಾ ವ್ಯವಸ್ಥೆ ನೋಡಿಕೊಳ್ಳುವಂತೆ ಹೇಳು, ಅವನು ಪಕ್ಕದಲ್ಲಿ ಇದ್ರೆ ಏನೋ ಸಮಾಧಾನ. ಅವನು ವಯಸ್ಸಿನಲ್ಲಿ ಚಿಕ್ಕವನಾದ್ರೂ ತುಂಬಾ ತಿಳಿದುಕೊಂಡಿದ್ದಾನೆʼ ಎಂದು ಹೊಗಳುತ್ತಾರೆ. ಇದನ್ನು ಕೇಳಿಸಿಕೊಂಡು ವಿಜಯಾಂಬಿಕ ಹಾಗೂ ಮದನ್‌ ಇನ್ನಷ್ಟು ಉರಿದು ಹೋಗುತ್ತಾರೆ.

ಶ್ರಾವಣಿ ಸುಬ್ಬು ಜಾಲಿರೈಡ್‌-ಪಾನಿಪುರಿ ಪಾರ್ಟಿ

ಬೈಕ್‌ ಬಂದ ಖುಷಿಯಲ್ಲಿ ಮೈ ಮರೆಯುವ ಮನೆಯವರಿಗೆ ಸಮಯ ಆಗಿರುವುದರ ಬಗ್ಗೆ ಎಚ್ಚರಿಸುತ್ತಾರೆ ವಿಶಾಲಾಕ್ಷಿ. ಸುಬ್ಬು ಬಳಿ ʼಶ್ರಾವಣಿಯಮ್ಮ ಅವರನ್ನು ಮನೆಗೆ ಬಿಟ್ಟು ಬಾʼ ಎಂದು ಹೇಳುತ್ತಾರೆ. ಸುಬ್ಬು ಬೈಕ್‌ನಲ್ಲಿ ಶ್ರಾವಣಿ ಅವರನ್ನು ಡ್ರಾಪ್‌ ಮಾಡಲು ಹೊರಟಾಗ ಶ್ರೀವಲ್ಲಿ ʼಅಯ್ಯೋ ಸುಬ್ಬು, ಈ ಹಳೆ ಬೈಕ್‌ನಲ್ಲಿ ಅವರನ್ನು ಯಾಕೆ ಕರೆದುಕೊಂಡು ಹೋಗ್ತಿಯಾ, ಕ್ಯಾಬ್‌ ಮಾಡಿ ಕಳಸಿದ್ರೆ ಅವರು ಸುರಕ್ಷಿತವಾಗಿ ಹೋಗ್ತಾರೆ ಅಲ್ವಾ ಅಂತ ಹೊಟ್ಟೆಕಿಚ್ಚಿನಿಂದಲೇ ಹೇಳುತ್ತಾರೆ. ಶ್ರೀವಲ್ಲಿ ಮನದ ಮಾತು ಅರಿಯದ ಕಾಂತಮ್ಮ (ಸುಂದರನ ಅಮ್ಮ) ಕೂಡ ಅದನ್ನೇ ಹೇಳುತ್ತಾರೆ. ಆದರೆ ಸುಬ್ಬು ಬೈಕ್‌ ಕುರಿತ ತನ್ನ ಅಭಿಮಾನದ ಮಾತುಗಳನ್ನು ಹೇಳಿದಾಗ ಶ್ರಾವಣಿಗೂ ಬೈಕ್‌ ಮೇಲೆ ಅಭಿಮಾನ ಮೂಡುತ್ತದೆ. ʼಇನ್‌ ಮೇಲೆ ಇದು ಸುಬ್ಬು ಫೇವರಿಟ್‌ ಬೈಕ್‌ ಮಾತ್ರವಲ್ಲ, ನನಗೂ ಫೆವರಿಟ್‌, ನಾನು ಇವತ್ತು ಸುಬ್ಬು ಜೊತೆ ಬೈಕ್‌ನಲ್ಲೇ ಹೋಗ್ತೀನಿʼ ಅಂತ ಬೈಕ್‌ ಏರಿ ಹೊರಟು ಬಿಡುತ್ತಾರೆ. ದಾರಿಯಲ್ಲಿ ಹೋಗ್ತಾ ಪಾನಿಪುರಿ ನೋಡೋವ ಶ್ರಾವಣಿ ಪಾನಿಪಾರಿ ಪಾರ್ಟಿ ಕೇಳುತ್ತಾಳೆ. ಸುಬ್ಬು ಶ್ರಾವಣಿ ಖುಷಿ ಪಾನಿಪುರಿ ಪಾರ್ಟಿ ಮಾಡುತ್ತಾರೆ. ಆಗ ಸುಬ್ಬು ಬಳಿ ಶ್ರಾವಣಿ ನಿಂಗೆ ಕಷ್ಟ ಇದ್ರು ನನ್ನ ಬಳಿ ಯಾಕೆ ಹೇಳಿಕೊಳ್ಳುವುದಿಲ್ಲ ಅಂತಾಳೆ, ಆಗ ಸುಬ್ಬು ʼನನಗೆ ಏನ್‌ ಕಷ್ಟ ಇದೆ ಅಂತ ಹೇಳ್ಕೋಬೇಕು ಮೇಡಂ, ನನಗೆ ಏನೂ ಕಷ್ಟ ಇಲ್ಲ. ಇದೆಲ್ಲಾ ಮಿಡಲ್‌ಕ್ಲಾಸ್‌ ಫ್ಯಾಮಿಲಿಗಳಲ್ಲಿ ಸಹಜʼ ಎಂದು ತನಗೇನೂ ಕಷ್ಟ ಇಲ್ಲ ಎಂಬಂತೆ ಶ್ರಾವಣಿ ಮುಂದೆ ಮಧ್ಯಮವರ್ಗದವರ ಕಷ್ಟ, ಬದುಕಿನ ಚಿತ್ರಣವನ್ನು ಬಿಚ್ಚಿಡುತ್ತಾನೆ. ಆ ಹೊತ್ತಿಗೆ ಸುರೇಂದ್ರ ಕಾಲ್‌ ಮಾಡಿ ನಾಳಿನ ಪ್ರೆಸ್‌ ಕಾನ್ಫರೆನ್ಸ್‌ಗೆ ಬೇಗ ಬರುವಂತೆ ಸುಬ್ಬು ಬಳಿ ಅಣ್ಣ ಹೇಳಿರುವುದಾಗಿ ಹೇಳುತ್ತಾನೆ.

ಶ್ರೀವಲ್ಲಿ ಕಣ್ಣೀರ ಕೋಡಿ

ಸುಬ್ಬು ಶ್ರಾವಣಿ ಬೈಕ್‌ನಲ್ಲಿ ಹೋಗಿದ್ದು ನೋಡಿ ತನ್ನ ಕನಸು ನುಚ್ಚುನೂರಾದ ಬೇಸರದಲ್ಲಿ ಹೊರಗಡೆ ನಿಂತು ಅಳುತ್ತಿರುತ್ತಾಳೆ. ಆಗ ಅಲ್ಲಿಗೆ ಬರುವ ಸುಬ್ಬು ಅಕ್ಕ ಶ್ರೀವಲ್ಲಿ ಬಳಿ ಅದು, ಹಳೇ ಬೈಕ್‌ ನೀನು ಸುಬ್ಬುಗೆ ಹೊಸ ಬೈಕ್‌ ಕೊಡ್ಸು, ಆಗ ಸುಬ್ಬು ಹಳೆ ಬೈಕ್‌ ಮನೆಯಲ್ಲಿ ಯಾರಿಗಾದ್ರೂ ಆಗುತ್ತೆ, ನಿನ್ನ ಕನಸು ನನಸಾಗುತ್ತೆ ಅಂತ ಬಿಟ್ಟಿ ಸಲಹೆ ಕೊಡುತ್ತಾಳೆ. ಅವಳು ಶ್ರೀವಲ್ಲಿ ಸುಬ್ಬುಗೆ ಬೈಕ್‌ ಕೊಡಿಸಿದ್ರೆ ಹಳೆ ಬೈಕ್‌ ತನ್ನ ಗಂಡಂಗೆ ಆಗುತ್ತೆ ಅನ್ನೋ ಸ್ವಾರ್ಥದಲ್ಲಿ ಹೇಳ್ತಾಳೆ. ಆದ್ರೆ ಇದರ ಅರಿವಾಗದ ಶ್ರೀವಲ್ಲಿ ಧನಲಕ್ಷ್ಮೀ (ಸುಬ್ಬು ಅಕ್ಕ) ಐಡಿಯಾ ಕೇಳಿ ಸಂತಸದಲ್ಲಿ ತೇಲಿ ಹೋಗ್ತಾಳೆ.

ಪ್ರೆಸ್‌ ಕಾನ್ಫರೆನ್ಸ್‌ ನಡೆಸುವ ಹೋಟೆಲ್‌ನಲ್ಲಿ ಸುಬ್ಬು ಇರುವಾಗಲೇ ವರಲಕ್ಷ್ಮೀ (ಸುಬ್ಬು ತಂಗಿ) ತನ್ನ ಬಾಯ್‌ಫ್ರೆಂಡ್‌ ಜೊತೆ ಅದೇ ಹೋಟೆಲ್‌ಗೆ ಬರುತ್ತಾಳೆ. ಸುಬ್ಬು ಕಣ್ಣಿಗೆ ವರ ಬೀಳ್ತಾಳಾ, ಕಾನ್ಫರೆನ್ಸ್‌ನಲ್ಲಿ ವೀರೇಂದ್ರಗೆ ಅವಮಾನ ಆಗೋಕೆ ಸುಬ್ಬು ಬಿಡ್ತಾನಾ, ಶ್ರೀವಲ್ಲಿ ಸುಬ್ಬುಗೆ ಹೊಸ ಬೈಕ್‌ ಕೊಡಿಸ್ತಾಳಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಪಾತ್ರ ಪರಿಚಯ

ಸುಬ್ಬು: ಅಮೋಘ್‌ ಆದಿತ್ಯ (ನಾಯಕ)

ಶ್ರಾವಣಿ: ಐಶ್ವರ್ಯಾ ಫಿರ್ಡೋಸ್‌ (ನಾಯಕಿ)

ಅನಂತ ಪದ್ಮನಾಭ: ಬಾಲರಾಜ್‌ (ಸುಬ್ಬು ತಂದೆ)

ಅಪೂರ್ವಶ್ರೀ: ವಿಶಾಲಾಕ್ಷಿ (ಸುಬ್ಬು ತಾಯಿ)

ಮೋಹನ್‌: ವೀರೇಂದ್ರ (ಶ್ರಾವಣಿ ತಂದೆ)

ಸ್ನೇಹ ಈಶ್ವರ್‌ : ವಿಜಯಾಂಬಿಕಾ (ಶ್ರಾವಣಿ ಅತ್ತೆ)

ಪ್ರತಿ ಶೆಟ್ಟಿ: ಪಿಂಕಿ (ಶ್ರಾವಣಿ ಚಿಕ್ಕಪ್ಪನ ಮಗಳು)

ಜ್ಯೋತಿ: ವಂದನಾ (ಶ್ರಾವಣಿ ಚಿಕ್ಕಪ್ಪನ ಹೆಂಡತಿ) 

ಅಥರ್ವ: ಮದನ್‌ (ವಿಜಯಾಂಬಿಕಾ ಮಗ)