ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪನಿಗಾಗುವ ಅವಮಾನ ತಪ್ಪಿಸಲು ಪ್ರೆಸ್‌ಮೀಟ್‌ಗೆ ಬಂದೇಬಿಟ್ಲು ಶ್ರಾವಣಿ, ಟಿವಿಯಲ್ಲಿ ಕಂಡ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

ಅಪ್ಪನಿಗಾಗುವ ಅವಮಾನ ತಪ್ಪಿಸಲು ಪ್ರೆಸ್‌ಮೀಟ್‌ಗೆ ಬಂದೇಬಿಟ್ಲು ಶ್ರಾವಣಿ, ಟಿವಿಯಲ್ಲಿ ಕಂಡ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ‌

Shravani Subramanya Kannada Serial Today Episode June 19th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಯಾರಿಗೂ ತಿಳಿಯದಂತೆ ಮನೆಯಿಂದ ಹೊರಟು ಬಿಡುವ ಶ್ರಾವಣಿ, ಸುಬ್ಬ ಮನೆಯವರಿಗೆ ಸುಬ್ಬುವನ್ನು ಟಿವಿಯಲ್ಲಿ ನೋಡುವ ಖುಷಿ. ರಿಪೋರ್ಟರ್‌ ಪ್ರಶ್ನೆಗಳಿಂದ ಅಪ್ಪನನ್ನ ಬಚಾವ್‌ ಮಾಡಲು ಪ್ರೆಸ್‌ಮೀಟ್‌ ನಡೆಯುವ ಜಾಗಕ್ಕೆ ಬಂದ್ಲು ಶ್ರಾವಣಿ.

ಅಪ್ಪನಿಗಾಗುವ ಅವಮಾನ ತಪ್ಪಿಸಲು ಪ್ರೆಸ್‌ಮೀಟ್‌ಗೆ ಬಂದೇ ಬಿಟ್ಲು ಶ್ರಾವಣಿ
ಅಪ್ಪನಿಗಾಗುವ ಅವಮಾನ ತಪ್ಪಿಸಲು ಪ್ರೆಸ್‌ಮೀಟ್‌ಗೆ ಬಂದೇ ಬಿಟ್ಲು ಶ್ರಾವಣಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 19) ಸಂಚಿಕೆಯಲ್ಲಿ ಪ್ರೆಸ್‌ ಕಾನ್ಫರೆನ್ಸ್‌ ಆರಂಭವಾಗುವ ಹೊತ್ತಿಗೆ ಮನೆಯ ಹಾಲ್‌ನಲ್ಲಿರುವ ಟಿವಿ ಮುಂದೆ ಬಂದು ಕುಳಿತುಕೊಳ್ಳುತ್ತಾರೆ ವಿಜಯಾಂಬಿಕ, ಮದನ್‌, ವಂದನಾ ಹಾಗೂ ಪಿಂಕಿ. ಸುಬ್ಬ ಮನೆಯಲ್ಲೂ ಅಂತೂ ಇಂತೂ ಪರದಾಡಿ ಕಾಂತಮ್ಮಳಿಂದ ರಿಮೋಟ್‌ ಕಿತ್ತು ನ್ಯೂಸ್‌ ಚಾನೆಲ್‌ ಹಾಕಿ ಮಿನಿಸ್ಟರ್‌ ಜೊತೆ ಸುಬ್ಬು ಟಿವಿಯಲ್ಲಿ ಕಾಣಿಸಬಹುದು ಎಂದು ಎದುರು ನೋಡುತ್ತಿರುತ್ತಾರೆ. ಶ್ರಾವಣಿ ಟಿವಿ ನೋಡಲು ಬರದಿದ್ದನ್ನು ಕಂಡು ವಿಜಯಾಂಬಿಕ ವಂದನಾ ಬಳಿ ಶ್ರಾವಣಿ ಎಲ್ಲಿ ಎಂದು ಕೇಳುತ್ತಾರೆ. ಅವಳು ರೂಮ್‌ನಲ್ಲಿ ಮೊಬೈಲ್‌ನಲ್ಲಿ ಟಿವಿ ನೋಡುತ್ತಿದ್ದಾಳೆ ಎಂದು ವಂದನಾ ಹೇಳಿದಾಗ ಕೆಡಿ ವಿಜಯಾಂಬಿಕಾ ಮನಸ್ಸು ಸಂತೋಷದಿಂದ ನಲಿಯುತ್ತದೆ.

ಕದ್ದು ಮನೆಯಿಂದ ಹೊರಡುವ ಶ್ರಾವಣಿ

ಮನೆಯವರೆಲ್ಲಾ ಟಿವಿ ನೋಡುವುದರಲ್ಲಿ ಮಗ್ನರಾಗಿರುವಾಗ ನಿಧಾನಕ್ಕೆ ಬಾಸ್ಕೆಟ್‌ ಹಿಡಿದು ಅಡುಗೆಮನೆಗೆ ಬರುವ ಶ್ರಾವಣಿ ಮನೆಯವರಿಗೆ ಗೊತ್ತಾಗದಂತೆ ತಾನು ಮಾಡಿರುವ ಅಡುಗೆಯನ್ನೆಲ್ಲಾ ಬಾಕ್ಸ್‌ನಲ್ಲಿ ಹಾಕಿಕೊಂಡು ಹಾಲ್‌ನಲ್ಲಿ ಕುಳಿತಿರುವವರ ಗಮನಕ್ಕೆ ಬರದಂತೆ ನಿಧಾನಕ್ಕೆ ಮನೆಯಿಂದ ಹೊರ ಹೋಗಿ ಆಟೊ ಹಿಡಿದು ಪ್ರೆಸ್‌ ಕಾನ್ಫರೆನ್ಸ್‌ ನಡೆಯವ ಜಾಗಕ್ಕೆ ಹೊರಟು ನಿಲ್ಲುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ವೀರೇಂದ್ರ ಭಾರಿ ಮುಜುಗರ

ಪ್ರೆಸ್‌ ಕಾನ್ಫರೆನ್ಸ್‌ ಆರಂಭವಾದಾಗ ನಮ್ಮ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ಮಾಡಿರುವ ಎಲ್ಲಾ ಸಾಧನೆ, ಕೆಲಸಗಳನ್ನು ವಿವರಿಸುತ್ತಾರೆ ವೀರೇಂದ್ರ ಸರ್‌ದೇಸಾಯಿ. ನಂತರ ಪ್ರಶ್ನೆಗಳನ್ನು ಕೇಳುವಂತೆ ಪತ್ರಕರ್ತರಿಗೆ ಹೇಳುತ್ತಾರೆ. ಆರಂಭದಲ್ಲಿ ಒಂದಿಬ್ಬರು ಪತ್ರಕರ್ತರು ಶಿಕ್ಷಣ ಇಲಾಖೆಯ ಮುಂದಿನ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ನಂತರ ಮದನ್‌ ನಿಯೋಜಿಸಿದ್ದ ರಿಪೋರ್ಟರ್‌ ಮೊದಲೇ ಪ್ಲಾನ್‌ ಮಾಡಿದಂತೆ ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ʼರಾಜ್ಯದ ಮಕ್ಕಳ ಶಿಕ್ಷಣಕ್ಕೆ ಇಷ್ಟೆಲ್ಲಾ ಮಾಡುವ ನೀವು ನಿಮ್ಮ ಮಗಳಿಗೆ ಯಾಕೆ ಮಾಡಿಲ್ಲ, ನಿಮ್ಮ ಮಗಳು ಫೇಲ್‌ ಆಗಲು ಕಾರಣ ಏನು, ಅದಕ್ಕೂ ನಿಮಗೂ ಸಂಬಂಧ ಇಲ್ವಾ, ಇದರ ನೈತಿಕ ಹೊಣೆ ಹೊತ್ತು ನೀವು ಈ ಸ್ಥಾನದಿಂದ ಕೆಳಗಿಳಿದು ರಾಜೀನಾಮೆ ಕೊಡಬೇಕುʼ ಎಂದು ಅಸಂಬದ್ಧ ಪ್ರಶ್ನೆ ಕೇಳುತ್ತಾನೆ. ಇದನ್ನು ನಿರೀಕ್ಷಿಸದ ಸುಬ್ಬು, ವೀರೇಂದ್ರ, ಸುರೇಂದ್ರ ಗೊಂದಲಕ್ಕೆ ಸಿಲುಕುತ್ತಾರೆ. ಅಲ್ಲೇ ಇರುವ ಪ್ರೆಸ್‌ಮೀಟ್‌ ಆಯೋಜಕರು ವೈಯಕ್ತಿಕ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಂದರೂ ಬಿಡದ ರಿಪೊರ್ಟರ್‌ ʼನಿಮಗೂ ನಿಮ್ಮ ಮಗಳಿಗೂ ಸಂಬಂಧ ಸರಿಯಿಲ್ಲ, ಒಂದೇ ಮನೆಯಲ್ಲಿ ಇದ್ದರೂ ನೀವು ಒಬ್ಬರ ಮುಖ ಒಬ್ಬರು ನೋಡುತ್ತಿಲ್ಲ, ಮಾತನಾಡುತ್ತಿಲ್ಲ ಇದಕ್ಕೆಲ್ಲಾ ಕಾರಣ ಏನು, ನಿಮ್ಮ ಮಗಳ ಜೊತೆಗೆ ಸಂಬಂಧ ಸರಿಯಿಲ್ಲ ಎಂದ ಮೇಲೆ ನೀವು ರಾಜ್ಯಕ್ಕೆ ಏನ್‌ ಮಾಡ್ತೀರಿʼ ಎಂದು ತೀರಾ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಮೂಲಕ ವೀರೇಂದ್ರ ಅವರಿಗೆ ಮುಜುಗರ, ಅವಮಾನ ಮಾಡುತ್ತಾನೆ, ಏನೂ ಮಾತನಾಡದೇ ಸುಮ್ಮನೇ ಇರುವ ವೀರೇಂದ್ರ ಅವರನ್ನು ಟಿವಿಯಲ್ಲಿ ಕಾಣುವ ಸುಬ್ಬು ಮನೆಯವರು ಹಾಗೂ ವಂದನಾ, ಪಿಂಕಿ ಮರುಕ ಪಡುತ್ತಾರೆ. ಆದರೆ ಮದನ್‌, ವಿಜಯಾಂಬಿಕ ತಾವು ಗೆದ್ವಿ ಎನ್ನುವ ಖುಷಿಯಲ್ಲಿ ಬೀಗುತ್ತಾರೆ.

ಶ್ರಾವಣಿಯನ್ನು ಕಾನ್ಫರೆನ್ಸ್‌ ಹಾಲ್‌ಗೆ ಕರೆ ತರುವ ಸುಬ್ಬು

ಈ ನಡುವೆ ಕಾನ್ಫರೆನ್ಸ್‌ ಹಾಲ್‌ನಿಂದ ಹೊರ ಬರುವ ಸುಬ್ಬು ಶ್ರಾವಣಿಗೆ ಕಾಲ್‌ ಮಾಡಿ ಎಲ್ಲಿದ್ದೀರಾ ಎಂದು ವಿಚಾರಿಸುತ್ತಾನೆ, ಆರಂಭದಲ್ಲಿ ಹೇಳದ ಶ್ರಾವಣಿ ನಂತರ ಬಾಯಿ ಬಿಡುತ್ತಾಳೆ. ಶ್ರಾವಣಿ ಕೂಡ ಕಾನ್ಫರೆನ್ಸ್‌ ಹಾಲ್‌ಗೆ ಬರುತ್ತಿರುವುದನ್ನು ಕೇಳಿ ಸುಬ್ಬು ಫುಲ್‌ ಖುಷಿ ಆಗುತ್ತಾನೆ. ಅಲ್ಲದೇ ಮೇಡಂ ಬೇಗ ಬನ್ನಿ ದಯವಿಟ್ಟು, ಇಲ್ಲಿಗೆ ಬಂದ ಮೇಲೆ ಯಾಕೆ, ಏನು ಎಂಬುದನ್ನು ಹೇಳ್ತೀನಿ ಎಂದು ಹೇಳಿ ಫೋನ್‌ ಕಟ್‌ ಮಾಡಿ ಹೋಟೆಲ್‌ ಆವರಣದಲ್ಲಿ ಶ್ರಾವಣಿಗಾಗಿ ಕಾಯುತ್ತಿರುತ್ತಾನೆ.

‌ʼಅಪ್ಪ ಅಸಾಮಾನ್ಯʼ, ಶ್ರಾವಣಿಯ ಮೆಚ್ಚುಗೆಯ ಮಾತು

ರಿಪೋರ್ಟರ್‌ ಪ್ರಶ್ನೆಗೆ ತಬ್ಬಿಬ್ಬಾಗಿ ಏನೂ ಉತ್ತರಿಸಲಾಗದೇ ಮುಜಗರದಿಂದ ಮಿಡಿಯಾಗಳ ಮುಂದೆ ಕುಳಿತ ಅಪ್ಪನನ್ನ ರಕ್ಷಿಸಲು ಶ್ರಾವಣಿಯೇ ಬರುತ್ತಾಳೆ. ಶ್ರಾವಣಿಯನ್ನ ಪ್ರೆಸ್‌ ಕಾನ್ಫರೆನ್ಸ್‌ ಹಾಲ್‌ನಲ್ಲಿ ನೋಡಿ ವಿಜಯಾಂಬಿಕ, ಮದನ್‌ಗೆ ಶಾಕ್‌ ಆದ್ರೆ ಸುಬ್ಬು ಮನೆಯವರು, ಶ್ರಾವಣಿ ಮನೆಯವರು ಅವಳನ್ನು ಟಿವಿಯಲ್ಲಿ ನೋಡಿ ಖುಷಿ ಪಡುತ್ತಾರೆ. ಕಾನ್ಫರೆನ್ಸ್‌ ಹಾಲ್‌ಗೆ ಬರುವ ಶ್ರಾವಣಿ ʼಅಪ್ಪ ಎಂದರೆ ಅಸಮಾನ್ಯ, ಅಪ್ಪನ ಬಗ್ಗೆ ಹೇಳಲು ಮಾತುಗಳೇ ಇಲ್ಲ. ಅಪ್ಪ ನನಗೆ ಸ್ನೇಹಿತ, ಅಪ್ಪ ನನಗೆ ಎಲ್ಲವೂ ಅಪ್ಪನೆಂದರೆ ಆಕಾಶ್‌ʼ ಎಂದೆಲ್ಲಾ ಮನಸ್ಸು ತುಂಬಿ ಮಾತನಾಡುತ್ತಾಳೆ ಶ್ರಾವಣಿ. ಮಗಳ ಮಾತು ಕೇಳಿ ಇನ್ನಾದ್ರೂ ಬದಲಾಗ್ತಾರಾ ವೀರೇಂದ್ರ ಎನ್ನುವುದನ್ನು ಕಾದು ನೋಡಬೇಕು.