ಸಾಲಿಗ್ರಾಮದ ನೆಪದಲ್ಲಿ ಅಪ್ಪನಿಗೆ ಹತ್ತಿರವಾಗುವ ಪ್ರಯತ್ನದಲ್ಲಿ ಶ್ರಾವಣಿ; ವಿಜಯಾಂಬಿಕಾ ಪ್ಲಾನೇ ಬೇರೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Shravani Subramanya Kannada Serial Today Episode July 15th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್ನಲ್ಲಿ ಬದಲಾದಂತೆ ನಾಟಕವಾಡುವ ಕಾಂತಮ್ಮಳನ್ನ ನಂಬ್ತಾರಾ ಸುಬ್ಬು ಮನೆಯವರು, ಪೂಜಾಕ್ರಮಗಳನ್ನು ಕಲಿಯುವ ಜೊತೆಗೆ ಅಪ್ಪನಿಗೆ ಹತ್ತಿರವಾಗುವ ಪ್ರಯತ್ನದಲ್ಲಿ ಶ್ರಾವಣಿ. ಅಮ್ಮನಿಗೆ ತಿಳಿದೇ ಬಿಡ್ತು ವರದ ಪ್ರೀತಿ ಮ್ಯಾಟ್ರು.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 15 ) ಸಂಚಿಕೆಯಲ್ಲಿ ಕಾಂತಮ್ಮ ಸಂಪೂರ್ಣ ಬದಲಾದಂತೆ ನಟಿಸುತ್ತಾಳೆ. ಬೆಳಗೆದ್ದು ಮನೆಯವರ ಎದುರು ಮಗನನ್ನು ದೂರುವ ಕಾಂತಮ್ಮ ಅವನಿಂದ ಎಲ್ಲಾ ಕೆಲಸ ಮಾಡಿಸಿಕೊಳ್ಳುವಂತೆ ಮನೆಯವರಲ್ಲಿ ಹೇಳುತ್ತಾಳೆ. ಕಾಂತಮ್ಮ ಬದಲಾಗಿರುವುದು ನೋಡಿ ಸುಂದರನಿಗೆ ಆಶ್ಚರ್ಯವಾಗುತ್ತೆ. ನಿಜಕ್ಕೂ ಕಾಂತಮ್ಮ ಬದಲಾಗಿದ್ದಾಳೆ ಎಂದು ಮನೆಯವರೆಲ್ಲಾ ನಂಬಿದ್ರೆ, ಅವಳ ಪ್ಲಾನೇ ಬೇರೆ. ಮನೆಯವರನ್ನೆಲ್ಲಾ ಸ್ವಲ್ಪ ದಿನದ ಮಟ್ಟಿಗೆ ನಂಬಿಸಿ ನಂತರ ತಮ್ಮ ಅಧಿಕಾರ ಚಲಾಯಿಸುವ ಪ್ಲಾನ್ ಮಾಡಿರುತ್ತಾಳೆ ಚಾಲಾಕಿ ಕಾಂತಮ್ಮ.
ಅಪ್ಪನಿಗೆ ಹತ್ತಿರವಾಗುವ ಯತ್ನದಲ್ಲಿ ಶ್ರಾವಣಿ
ಬೆಳಗೆದ್ದು ಹಾಲ್ಗೆ ಬರುವ ಶ್ರಾವಣಿ ಅಲ್ಲಿ ಪೇಪರ್ ಓದುತ್ತಾ ಕುಳಿತಿರುವ ಅಪ್ಪನ ಬಳಿ ಗುಡ್ ಮಾರ್ನಿಂಗ್ ಅಪ್ಪ ಎನ್ನುತ್ತಾಳೆ. ಮಾತ್ರವಲ್ಲ ನನಗೆ ಆಶೀರ್ವಾದ ಮಾಡಿ ಎಂದು ಕಾಲಿಗೆ ನಮಸ್ಕರಿಸಲು ಹೋಗುತ್ತಾಳೆ. ಇದನ್ನೆಲ್ಲಾ ನೋಡಿ ವೀರೇಂದ್ರಗೆ ಸಿಟ್ಟು ಆಶ್ಚರ್ಯ ಎರಡೂ ಬರುತ್ತದೆ. ಆಗ ಶ್ರಾವಣಿ ʼಅಪ್ಪ ನಾನು ಇದೆಲ್ಲಾ ಮಾಡೋದು ನಿಮಗೆ ಇಷ್ಟ ಇಲ್ಲ ಅಂತ ಗೊತ್ತು. ಆದರೆ ನಾನು ಇದನ್ನೆಲ್ಲಾ ಮಾಡ್ತಾ ಇರೋದು ಸಾಲಿಗ್ರಾಮಕೋಸ್ಕರ, ನೀವೇ ಹೇಳಿದ್ರಿ ಸಾಲಿಗ್ರಾಮವೇ ಬೇರೆ ಪ್ರಪಂಚ. ಅಲ್ಲಿ ನಾವು ಇಲ್ಲಿದ್ದಂತೆ ಇರಲು ಆಗುವುದಿಲ್ಲ. ನಾವು ಅಪ್ಪ ಮಗಳಂತೆ ಇರಬೇಕು ಅಂತ. ಆದರೆ ನಂಗೆ ಅಪ್ಪ-ಮಗಳು ಹೇಗಿರ್ತಾರೆ ಅನ್ನೋದೇ ಗೊತ್ತಿಲ್ಲ. ಒಮ್ಮೆಲೆ ಅಲ್ಲಿಗೆ ಹೋಗಿ ಅಪ್ಪ-ಮಗಳಂತೆ ಇರುವುದು ನನಗೆ ಕಷ್ಟ ಆಗಬಹುದು ಎಂಬ ಕಾರಣಕ್ಕೆ ಈಗಿನಿಂದಲೇ ಅಭ್ಯಾಸ ಮಾಡೋದು ಉತ್ತಮ ಅಂತ ಹೀಗೆ ಮಾಡಿದೆʼ ಎಂದು ಅಪ್ಪನ ಎದುರು ತಾನು ಬಂದು ಗುಡ್ ಮಾರ್ನಿಂಗ್ ಹೇಳಿದ್ದರ ಉದ್ದೇಶ ವಿವರಿಸುತ್ತಾರೆ. ಅದನ್ನು ಕೇಳಿದ ವೀರೇಂದ್ರನಿಗೆ ಹೌದು ಎನ್ನಿಸಿ ಶ್ರಾವಣಿಗೆ ಗುಡ್ ಮಾರ್ನಿಂಗ್ ಹೇಳಿ ಆಶೀರ್ವಾದ ಮಾಡುತ್ತಾರೆ. ಶ್ರಾವಣಿ ಆಕಾಶದಲ್ಲೇ ತೇಲಿ ಹೋಗುತ್ತಾಳೆ.
ವಿಜಯಾಂಬಿಕಾಗೆ ಶ್ರಾವಣಿ ಸೋಲಿನ ಮೇಲೆ ನಂಬಿಕೆ
ಸಾಲಿಗ್ರಾಮಕ್ಕೆ ಹೋಗುವುದನ್ನು ತಡೆಯಲು ಹರಸಾಹಸ ಮಾಡುತ್ತಿದ್ದ ವಿಜಯಾಂಬಿಕ ಇತ್ತೀಚೆಗೆ ಮೌನವಾಗಿರುವುದನ್ನು ಕಂಡ ಮದನ್ ಅವಳ ಬಳಿ ʼಅಮ್ಮಾ ಸಾಲಿಗ್ರಾಮಕ್ಕೆ ಹೋಗುವ ದಿನಗಳು ಹತ್ತಿರ ಬರುತ್ತಿವೆ. ಇಷ್ಟು ದಿನ ಹೇಗಾದ್ರೂ ಸಾಲಿಗ್ರಾಮಕ್ಕೆ ಹೋಗುವುದನ್ನು ತಡೆಯಬೇಕು ಅಂತ ಹೇಳ್ತಿದ್ದ ನೀನು ಈಗ್ಯಾಕೆ ಮೌನವಾಗಿದ್ದು, ಅಲ್ಲಿಗೆ ಹೋದ್ರೆ ಶ್ರಾವಣಿ ಅಜ್ಜಿ ಲಲಿತಾದೇವಿ ಅವರಿಂದ ತೊಂದರೆ ಆಗುತ್ತೆ ಅಂತಿದ್ದೆ. ಈಗ್ಯಾಕೆ ಸುಮ್ಮನಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ʼವಿಜಯಾಂಬಿಕಾ ನನಗೆ ಇಲ್ಲಿ ಶ್ರಾವಣಿ ಪೂಜೆಗೆ ಪ್ರಾಕ್ಟೀಸ್ ಮಾಡೋದು ನೋಡಿದ್ರೆ ಹಾಗೆ ಅನ್ನಿಸ್ತಾ ಇದೆ. ಸಾಲಿಗ್ರಾಮದವರಿಗೆ ಪೂಜೆ, ಪುನಸ್ಕಾರ, ವ್ರತದ ಮೇಲೆ ತುಂಬಾ ನಂಬಿಕೆ. ಆ ವಿಚಾರದಲ್ಲಿ ಸ್ವಲ್ಪ ಯಡವಟ್ಟಾದ್ರೂ ಅವರು ಸಹಿಸುವುದಿಲ್ಲ. ಆದರೆ ಶ್ರಾವಣಿಯಿಂದ ಪುಷ್ಕರಿಣಿ ಉತ್ಸವವನ್ನು ಯಶಸ್ವಿಯಾಗಲು ಮಾಡಲು ಸಾಧ್ಯವೇ ಇಲ್ಲ. ಇದರಿಂದ ಲಲಿತಾದೇವಿ ಶ್ರಾವಣಿ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಇದರಿಂದ ಶ್ರಾವಣಿ ಹಾಗೂ ವೀರು ಇಬ್ಬರು ಇನ್ನಷ್ಟು ದೂರಾಗ್ತಾರೆ, ಶ್ರಾವಣಿ ಮೇಲಿನ ಕೋಪ, ಬೇಸರದಿಂದ ಊರಿನವರು ಯಾರು ಇವಳ ಹತ್ತಿರಕ್ಕೆ ಬರುವುದಿಲ್ಲʼ ಎಂದು ಶ್ರಾವಣಿಯಿಂದ ವ್ರತ, ಪೂಜೆ ಮಾಡಲು ಸಾಧ್ಯವೇ ಇಲ್ಲ ಎಂಬಂತೆ ಮಾತನಾಡುತ್ತಾಳೆ ವಿಜಯಾಂಬಿಕಾ. ಇತ್ತ ಶ್ರಾವಣಿ ನೀರು ತುಂಬಿದ ಕೊಡ ಹೊರುವ ಪ್ರಯತ್ನದಲ್ಲಿ ತೊಡಗಿರುತ್ತಾಳೆ. ಬರಿಗಾಲಲ್ಲಿ ಶ್ರಾವಣಿ ನಡೆಯಬೇಕು ಎಂಬುದನ್ನು ಕೇಳಿ ಸುಬ್ಬು ಕೂಡ ತನ್ನ ಚಪ್ಪಲಿಯನ್ನು ತಾನೇ ಕಿತ್ತು ಅವಳೊಂದಿಗೆ ಬರಿಗಾಲಲ್ಲಿ ಹೆಜ್ಜೆ ಹಾಕುತ್ತಾನೆ. ನೀರಿನ ಕೊಡ ಹೊತ್ತು ಗೊತ್ತಿಲ್ಲದ ಶ್ರಾವಣಿ ಎರಡೆರಡು ಬಾರಿ ಎಡವಿದ್ರೂ ಬಿಡದ ಸುಬ್ಬು ಅವಳಿಗೆ ಹುರಿದುಂಬಿಸುತ್ತಾ, ಅವಳು ಕೊಡ ಹೊರುವುದನ್ನು ಅಭ್ಯಾಸ ಮಾಡಲು ಸ್ಫೂರ್ತಿ ತುಂಬುತ್ತಾನೆ.
ವರದನ ಪ್ರೀತಿ ವಿಚಾರ ಅಮ್ಮನ ಮುಂದೆ ಬಯಲು
ವರಲಕ್ಷ್ಮೀ ಕಾಲ್ ಮಾಡದೇ ಹಿಂಸೆ ಅನುಭವಿಸುವ ವರದ ತಾನೇ ಕಾಲ್ ಮಾಡುತ್ತಾನೆ. ಅಪರೂಪಕ್ಕೆಂಬಂತೆ ಕಾಲ್ ರಿಸೀವ್ ಮಾಡುವ ವರಲಕ್ಷ್ಮೀ ಬಳಿ ʼನೀನ್ಯಾಕೆ ಕಾಲ್ ರಿಸೀವ್ ಮಾಡ್ತಾ ಇಲ್ಲ, ನಾನಿಲ್ಲಿ ನೀನು ಕಾಲ್ ಮಾಡದೇ ಸಿಗದೇ ಎಷ್ಟು ಕಷ್ಟ ಪಡ್ತಾ ಇದೀನಿ ಗೊತ್ತಾ. ನಾನು ಕಾಯ್ತೀನಿ ಅಂತ ಹೇಳ್ದೆ ಹೊರತು ನಿನ್ನನ್ನು ಮೀಟ್ ಮಾಡದೇ ಇರಲು ಆಗುತ್ತೆ ಅಂತ ಹೇಳಿಲ್ಲ. ಇವತ್ತು ಹೇಗಾದ್ರೂ ಮಾಡಿ ಸ್ವಲ್ಪ ಹೊತ್ತು ಸಿಗುʼ ಎಂದು ಬೇಡಿಕೊಳ್ಳುತ್ತಾನೆ. ಆ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಿದ್ದೆ ತಡ ಖುಷಿಯಲ್ಲಿ ಪೋನ್ ಇಟ್ಟು ಹಿಂದೆ ತಿರುಗಿದ್ರೆ ಅಲ್ಲಿ ಅಮ್ಮ ನಿಂತಿರುತ್ತಾಳೆ. ಅಮ್ಮನ ಮುಂದೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುತ್ತಾನೆ ವರದ. ಆದರೆ ವರದನ ತಾಯಿಗೆ ಅವನು ಯಾರ ಜೊತೆ ಮಾತನಾಡಿದ್ದು ಎಂಬುದು ತಿಳಿದಿರುವುದಿಲ್ಲ. ಇನ್ನು ಅಮ್ಮನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ವರದ ಅಮ್ಮನ ಮುಂದೆ ಪ್ರೀತಿ ವಿಚಾರ ಒಪ್ಪಿಕೊಳ್ಳುತ್ತಾನೆ. ಮದುವೆ ಅಂತ ಆದ್ರೆ ಆ ಹುಡುಗಿಯನ್ನೇ ಆಗೋದು ಎಂದು ಕಡ್ಡಿ ಮುರಿದಂತೆ ಹೇಳಿ ಮೇಲೆ ತನ್ನ ಕೋಣೆಗೆ ಹೊರಟು ಹೋಗುತ್ತಾನೆ. ಇದರಿಂದ ಕೋಪಗೊಳ್ಳುವ ವರದನ ತಾಯಿ ಈಗಲೇ ವರದನಿಗೆ ಬೇರೆ ಸಂಬಂಧ ನೋಡಿ ತಮ್ಮ ಅಂತಸ್ತಿಗೆ ಸರಿ ಹೊಂದುವ ಅಥವಾ ಅದಕ್ಕಿಂತ ಹೆಚ್ಚಿರುವ ಹುಡುಗನನ್ನು ನೋಡಿ ಮದುವೆ ಮಾಡೋಣ ಎಂದು ತಾಕೀತು ಮಾಡುತ್ತಾಳೆ.
ವಿಜಯಾಂಬಿಕ ಅಂದುಕೊಂಡಂತೆ ಶ್ರಾವಣಿಗೆ ವ್ರತ, ಪೂಜೆ ಮಾಡಲು ಆಗೋದಿಲ್ವಾ?, ಸಾಲಿಗ್ರಾಮದಿಂದ ಅಪ್ಪನ ಜೊತೆ ಹತ್ತಿರವಾಗುವ ಕನಸು ಕಾಣುತ್ತಿದ್ದ ಶ್ರಾವಣಿಯ ಕನಸು ಕನಸಾಗಿಯೇ ಉಳಿಯುತ್ತಾ, ವರದನ ತಾಯಿಯ ಹಠಕ್ಕೆ ವರಲಕ್ಷ್ಮೀ-ವರದನ ಪ್ರೀತಿ ಬಲಿಯಾಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.