ವೀರೇಂದ್ರ ಕೊಲೆಗೆ ಮದನ್ ಮಾಸ್ಟರ್‌ಪ್ಲಾನ್‌, ಕತ್ತಲಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಬೆಳಕಾದ ಸಾವಿತ್ರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ವೀರೇಂದ್ರ ಕೊಲೆಗೆ ಮದನ್ ಮಾಸ್ಟರ್‌ಪ್ಲಾನ್‌, ಕತ್ತಲಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಬೆಳಕಾದ ಸಾವಿತ್ರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ವೀರೇಂದ್ರ ಕೊಲೆಗೆ ಮದನ್ ಮಾಸ್ಟರ್‌ಪ್ಲಾನ್‌, ಕತ್ತಲಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಬೆಳಕಾದ ಸಾವಿತ್ರಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Yesterday Episode September 13th: ಯಾರಿಗೂ ತಿಳಿಯದಂತೆ ಸಾಲಿಗ್ರಾಮಕ್ಕೆ ಬಂದು ತಾಯಿಯನ್ನು ಭೇಟಿ ಮಾಡಿ ಹೊರಟ ಮದನ್‌ ಹಿಂಬಾಲಿಸಿ ಹೋದ ಶ್ರಾವಣಿಗೆ ಮನೆ ದಾರಿ ತಪ್ಪಿದೆ. ವೀರೇಂದ್ರ ಪ್ರಾಣ ಸ್ನೇಹಿತನ ಬಗ್ಗೆ ನೆನಪು ಮಾಡಿದ ನರಸಯ್ಯ, ಪದ್ಮನಾಭ. ಸಾಲಿಗ್ರಾಮದಲ್ಲಿ ದಾರಿ ತಪ್ಪಿದ ಶ್ರಾವಣಿಗೆ ಸ್ನೇಹಿತೆಯಾದ ಸಾವಿತ್ರಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 13ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 13ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 13ರ) ಸಂಚಿಕೆಯಲ್ಲಿ ಮದನ್ ಹಾಗೂ ವಿಜಯಾಂಬಿಕ ಮನೆಯಿಂದ ದೂರದಲ್ಲಿ ಭೇಟಿಯಾಗಿ ಮಾತನಾಡುತ್ತಿರುವುದನ್ನು ದೂರದಿಂದ ನಿಂತು ನೋಡುತ್ತಾಳೆ ಶ್ರಾವಣಿ. ಆದರೆ ಅವಳಿಗೆ ಅಲ್ಲಿ ಬಂದಿರುವುದು ಮದನ್ ಹೌದೋ ಅಲ್ಲವೋ ಎನ್ನುವುದ ಖಾತ್ರಿಯಾಗುವುದಿಲ್ಲ. ಆ ಕಾರಣಕ್ಕೆ ಅವನನ್ನು ಹಿಂಬಾಲಿಸಿ ಹೋಗುತ್ತಾಳೆ. ಕಾಡು ದಾರಿಯಲ್ಲಿ ಒಬ್ಬಳೇ ಮದನ್ ಹಿಂದೆ ಹಿಂದೆ ಹೋಗುವ ಶ್ರಾವಣಿ ಕೈಯಿಂದ ತಪ್ಪಿಸಿಕೊಂಡು ಮುಂದೆ ಹೋಗುತ್ತಾನೆ ಮದನ್‌. ಆದರೆ ಇತ್ತ ಶ್ರಾವಣಿಗೆ ದಾರಿ ತಪ್ಪುತ್ತದೆ. ಇಳಿ ರಾತ್ರಿಯಲ್ಲಿ ತಾನೊಬ್ಬಳೇ ಕಾಡಿನಲ್ಲಿ ಸಿಕ್ಕು ಹಾಕಿಕೊಂಡಿರುವುದು ಅವಳಲ್ಲಿ ಭಯ ಮೂಡಿಸುತ್ತದೆ. ಕೂಡಲೇ ಅವಳಿಗೆ ಸುಬ್ಬು ನೆನಪಾಗುತ್ತಾನೆ. ಸುಬ್ಬುಗೆ ಕಾಲ್ ಮಾಡೋಣ ಎಂದು ಮೊಬೈಲ್ ತೆಗೆದರೆ ನೆಟ್‌ವರ್ಕ್ ಇರುವುದಿಲ್ಲ. ಆಗಿದ್ದಾಗಲಿ ಎಂದುಕೊಂಡು ಯಾವುದೋ ಒಂದು ದಾರಿ ಹಿಡಿದು ಮುಂದೆ ಹೋಗುತ್ತೇನೆ ಎಂದುಕೊಂಡು ಹೊರಟು ಬಿಡುತ್ತಾಳೆ, ಕತ್ತಲೆಯಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಿ ನಡೆದುಹೋಗುತ್ತಾಳೆ.

ವೀರೇಂದ್ರ ಪ್ರಾಣ ಸ್ನೇಹಿತರನ್ನು ನೆನೆದ ನರಸಯ್ಯ, ಸುಬ್ಬುಗೆ ಸಿಕ್ತು ಹಿಂಟ್

ನರಸಯ್ಯನವರು ರಾತ್ರಿ ಹೊತ್ತಿಗೆ ವೀರೇಂದ್ರನನ್ನು ಭೇಟಿ ಮಾಡಲು ಬರುತ್ತಾರೆ. ಪದ್ಮನಾಭ, ವೀರೇಂದ್ರ ಹಾಗೂ ನರಸಯ್ಯನವರು ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಮೂವರು ಸೇರಿ ಹಿಂದಿನ ದಿನಗಳ ಬಗ್ಗೆ ಮಾತನಾಡುತ್ತಾರೆ. ಯಜಮಾನರು ಆ ಕಾಲದಲ್ಲಿ ಹೇಗೆ ಇರುತ್ತಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಾರೆ ವೀರೇಂದ್ರ. ಅಷ್ಟೊತ್ತಿಗೆ ನರಸಯ್ಯನವರು ವೀರೇಂದ್ರನ ಪ್ರಾಣ ಸ್ನೇಹಿತನ ಬಗ್ಗೆ ಮಾತನಾಡುತ್ತಾರೆ. ಅವನ್ನೊಬ್ಬ ಇಲ್ಲ, ಅವನು ಎಲ್ಲಿ ಹೋದ, ಏನು ಎಂಬುದು ಒಂದೂ ಅರ್ಥವಾಗಿಲ್ಲ ಎಂದು ನೆನಪು ಮಾಡಿಕೊಂಡು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ವೀರೇಂದ್ರ ಮಾತ್ರ ಪ್ರಾಣ ಸ್ನೇಹಿತನ ಬಗ್ಗೆ ಮಾತನಾಡುವಾಗ ಮುಖ ಕಿವುಚುತ್ತಾರೆ. ಅಷ್ಟೊತ್ತಿಗೆ ಸುಬ್ಬು ಕಷಾಯ ಹಿಡಿದು ಬರುವುದನ್ನು ನೋಡಿ ಅಡ್ಡ ಮಾತನಾಡುತ್ತಾರೆ ಪದ್ಮನಾಭ. ಎಲ್ಲರಿಗೂ ಕಷಾಯ ಕೊಡುವ ಸುಬ್ಬು ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ ವೀರೇಂದ್ರ. ಆದರೆ ಸುಬ್ಬುಗೆ ಇವರು ತಾನು ಬಂದಾಗ ಬೇರೆ ಮಾತನಾಡಿದ್ದು ಯಾಕೆ, ಯಾರೋ ಅವನೊಬ್ಬ ಇಲ್ಲ ಎಲ್ಲ ಎನ್ನುತ್ತಿದ್ದರು ಅವನು ಎಂದರೆ ಯಾರು ಎಂದು ಯೋಚಿಸುತ್ತಾನೆ. ಆಗ ಅವನಿಗೆ ಫಾರ್ಮ್ ಹೌಸ್‌ನಲ್ಲಿ ವಿಜಯಾಂಬಿಕಾ ಕೂಡಿ ಹಾಕಿದ್ದ ವ್ಯಕ್ತಿಯ ನೆನಪಾಗುತ್ತದೆ. ಅಲ್ಲದೇ ಈ ಸಾಲಿಗ್ರಾಮಕ್ಕೂ ವಿಜಯಾ ಮೇಡಂಗೂ ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಿರುವ ವ್ಯಕ್ತಿಗೂ ಏನೋ ಸಂಬಂಧ ಇದೆ ಎನ್ನುವುದು ಸುಬ್ಬುಗೆ ಖಾತ್ರಿಯಾಗುತ್ತದೆ. ಇದನ್ನು ಕೂಡಲೇ ಮೇಡಂಗೆ (ಶ್ರಾವಣಿ) ಹೇಳಬೇಕು ಎಂದುಕೊಂಡು ಅಲ್ಲಿಂದ ಹೋಗುತ್ತಾನೆ.

ದಾರಿ ತಪ್ಪಿದ ಶ್ರಾವಣಿಗೆ ಬೆಳಕಾದ ಸಾವಿತ್ರಿ

ಇತ್ತ ಎಷ್ಟೋ ವರ್ಷಗಳಿಂದ ಮಿನಿಸ್ಟರ್ ವೀರೇಂದ್ರ ಅವರನ್ನು ನೋಡಲು ಖಾತರಳಾಗಿರುವ ಸಾವಿತ್ರಿ ಅವರಿಗಾಗಿ ಗೊಂಬೆ ಮಾಡುತ್ತಿದ್ದರೆ, ದಾರಿ ತಪ್ಪಿದ ಶ್ರಾವಣಿ ಹೇಗೋ ಮೊಬೈಲ್ ಟಾರ್ಚ್‌ನ‌ಲ್ಲಿ ನಡೆದು ಬಂದು ಸಾವಿತ್ರಿ ಮನೆ ಹತ್ತಿರ ತಲುಪುತ್ತಾಳೆ. ದೂರದಲ್ಲಿ ಬೆಳಕು ನೋಡಿದ ಸಾವಿತ್ರಿ ಕಂಬಳಿ ಹೊದ್ದು, ಕೈಯಲ್ಲಿ ಕೋಲು ಹಿಡಿದು ಶ್ರಾವಣಿ ಕಡೆಗೆ ಬರುತ್ತಾಳೆ. ಆದರೆ ಕತ್ತಲಲ್ಲಿ ಸಾವಿತ್ರಿಯನ್ನು ಹುಡುಗಿ ಎಂದು ಗುರುತಿಸದ ಶ್ರಾವಣಿ ಯಾರೋ ದರೋಡೆಕೋರರು ಇರಬಹುದು ಎಂದುಕೊಂಡು ಅಲ್ಲಿಂದ ಹೊರಡಲು ಸಿದ್ಧಳಾಗುತ್ತಾಳೆ. ಆದರೆ ಶ್ರಾವಣಿಯನ್ನು ನೋಡಿ ನಿಂತ್ಕೋ ಅಲ್ಲಿ ಎಂದು ಜೋರು ಮಾಡುತ್ತಾಳೆ ಸಾವಿತ್ರಿ. 

ಹತ್ತಿರ ಬಂದಾಗ ಸಾವಿತ್ರಿಗೆ ಅಲ್ಲಿ ಇರುವುದು ಹುಡುಗಿ ಎಂದು ತಿಳಿಯುತ್ತದೆ. ಅವಳು ಶ್ರಾವಣಿಗೆ ನೀನ್ಯಾರು, ಇಲ್ಲಿಗೇಕೆ ಬಂದೆ ಎಂದಾಗ ನಾನು ಇದೇ ಊರಿನವಳು ಎಂದು ಹೇಳುತ್ತಾಳೆ ಶ್ರಾವಣಿ, ಅದಕ್ಕೆ ಸಾವಿತ್ರಿ ಈ ಊರಿನವಳಾ? ನಾನು ಹಿಂದೆಂದೂ ನಿನ್ನ ಇಲ್ಲಿ ನೋಡಿಲ್ಲ. ಸುಳ್ಳು ಹೇಳಬೇಡ ಎನ್ನುತ್ತಾಳೆ. ಅದಕ್ಕೆ ಶ್ರಾವಣಿ ಅಂದರೆ ನಾನು ಇವತ್ತಷ್ಟೇ ಸಾಲಿಗ್ರಾಮಕ್ಕೆ ಬಂದೆ, ನಾನು ಬೆಂಗಳೂರಿನಿಂದ ಬಂದಿರೋದು ಎನ್ನುತ್ತಾಳೆ. ಆಗ ಸಾವಿತ್ರಿಗೆ ಇವಳು ಮಿನಿಸ್ಟರ್ ಜೊತೆ ಬಂದವಳು ಇರಬಹುದು ಎನ್ನಿಸುತ್ತದೆ. ನೀನು ಮಿನಿಸ್ಟರ್ ಜೊತೆ ಬಂದಿದ್ದಾ, ನೀನು ಮಿನಿಸ್ಟರ್ ಪಿಎನಾ ಎಂದು ಕೇಳುತ್ತಾಳೆ. ಶ್ರಾವಣಿ ತಾನು ಮಿನಿಸ್ಟರ್ ಮಗಳು ಎಂದು ಹೇಳಿದರೆ ತಪ್ಪಾಗುತ್ತದೆ ಎಂದುಕೊಂಡು ಹೌದು ನಾನು ಮಿನಿಸ್ಟರ್ ಪಿಎ ಎನ್ನುತ್ತಾಳೆ. 

ಅದನ್ನ ಕೇಳಿ ಆಕಾಶದೆತ್ತರಕ್ಕೆ ಹಾರುವ ಸಾವಿತ್ರಿ ಒಮ್ಮೆ ನಮ್ಮ ಮನೆಗೆ ಬಂದು ನನ್ನ ಅಜ್ಜಯ್ಯನನ್ನು ಭೇಟಿ ಮಾಡಿ ಹೋಗಿ, ಆಮೇಲೆ ನಿಮ್ಮ ಮನೆ ಹತ್ತಿರಕ್ಕೆ ನಾನು ಸೇಫಾಗಿ ಕರೆದುಕೊಂಡು ಹೋಗುತ್ತಾಳೆ ಎನ್ನುತ್ತಾಳೆ. ಆರಂಭದಲ್ಲಿ ಶ್ರಾವಣಿ ಒಪ್ಪದೇ ಇದ್ದಾಗ ಅವಳಿಗೆ ಒತ್ತಾಯ ಮಾಡುವ ಸಾವಿತ್ರಿ ಅವಳನ್ನು ಮನೆಗೆ ಕರೆದುಕೊಂಡು ಹೋಗಿ ಮಣ್ಣಿನ ಮಡಕೆಯ ನೀರು ಕೊಟ್ಟು ಸತ್ಕಾರ ಮಾಡುತ್ತಾಳೆ. ವೀರೇಂದ್ರ ಬಗ್ಗೆ ಸಾವಿತ್ರಿಗಿರುವ ಅಭಿಮಾನವನ್ನು ತಿಳಿಸುತ್ತಾರೆ ಸಾವಿತ್ರಿ ತಾತ. ಇದನ್ನ ಕೇಳಿ ಶ್ರಾವಣಿಗೆ ಸಂತಸವಾಗುತ್ತದೆ, ಮಾತ್ರವಲ್ಲ, ಸಾವಿತ್ರಿ ಮನೆಯಲ್ಲಿ ದೇವರ ಫೋಟೊ ಇರುವ ಜಾಗದಲ್ಲಿ ತನ್ನಪ್ಪನ ಫೋಟೊ ಇರುವುದು ನೋಡಿ ಶ್ರಾವಣಿಗೆ ಅಚ್ಚರಿಯಾಗಿ ಅವಳಿಗೆ ತಿಳಿಯದಂತೆ ಅಪ್ಪನ ಫೋಟೊ ಎಂಬ ಉದ್ಘಾರ ಬರುತ್ತದೆ.

ಸಾವಿತ್ರಿ ಹಾಗೂ ಅವಳ ತಾತ ಯಾರು, ಅವರಿಗೆ ವೀರೇಂದ್ರ ಮೇಲೆ ಯಾಕಷ್ಟು ಅಭಿಮಾನ, ನರಸಯ್ಯ–ಪದ್ಮನಾಭ ಹೇಳಿದ ವೀರು ಪ್ರಾಣಸ್ನೇಹಿತ ಯಾರು, ಸುಬ್ಬು ಅಂದುಕೊಂಡಂತೆ ಫಾರ್ಮ್‌ಹೌಸ್‌ನಲ್ಲಿರುವ ವ್ಯಕ್ತಿಗೂ ವೀರು ಪ್ರಾಣ ಸ್ನೇಹಿತನಿಗೂ ಸಂಬಂಧ ಇದ್ಯಾ, ಸಾಲಿಗ್ರಾಮದಲ್ಲಿ ನಡೆಯುವ ಪುಷ್ಕರಣಿ ಉತ್ಸವ ಸಾಂಗವಾಗಿ ನೆರವೇರುತ್ತಾ, ಮದನ್‌–ವಿಜಯಾಂಬಿಕಾ ಅಂದುಕೊಂಡಂತೆ ವೀರೇಂದ್ರ ಕೊಲೆ ಆಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner