ವಿಜಯಾಂಬಿಕಾ ಬಗ್ಗೆ ಗೂಡಾರ್ಥದಲ್ಲಿ ಮಾತನಾಡಿದ ಸ್ವಾಮೀಜಿ, ಕಳಶ ಹೊತ್ತ ಶ್ರಾವಣಿ ದೇವಸ್ಥಾನ ತಲುಪ್ತಾಳಾ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕಣ್ಣಿಲ್ಲ ಅಂದ್ರೂ ಜಗತ್ತಿನ ಸಕಲವನ್ನೂ ತಿಳಿಯುವ ಸ್ವಾಮಿಜಿ ಹೇಳಿದ್ರು ಸುಬ್ಬು, ಶ್ರಾವಣಿ ಭವಿಷ್ಯ. ವಿಜಯಾಂಬಿಕಾ ಬಗ್ಗೆ ನಿಗೂಢವಾಗಿ ಮಾತನಾಡಿದ ಸ್ವಾಮೀಜಿ, ತಲೆಯಲ್ಲಿ ಹುಳ ಬಿಟ್ಟುಕೊಂಡರು ಸುಬ್ಬು–ಶ್ರಾವಣಿ ಹಾಗೂ ಮನೆಯವರು. ಕಲಶ ಹೊತ್ತ ಶ್ರಾವಣಿ ತಲುಪಬೇಕಿದೆ ದೇವಸ್ಥಾನ, ಇದಕ್ಕೆ ಅಡ್ಡಿಪಡಿಸಲೆಂದೇ ಕಾಯುತ್ತಿದ್ದಾರೆ ವಿಜಯಾಂಬಿಕಾ ಮದನ್.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್ 19ರ) ಸಂಚಿಕೆಯಲ್ಲಿ ದೇವಸ್ಥಾನದಲ್ಲಿ ಪುಷ್ಕರಿಣಿ ಉತ್ಸವಕ್ಕೂ ಮುನ್ನ ಸ್ವಾಮೀಜಿಯ ಬಳಿ ಆಶೀರ್ವಾದ ಪಡೆಯುತ್ತಿರುತ್ತಾರೆ ಸಾಲಿಗ್ರಾಮದ ಜನರು. ಕಣ್ಣಿಲ್ಲ ಎಂದರೂ ಕುಳಿತಲ್ಲೇ ಲೋಕದ ಸಮಸ್ತವನ್ನು ತಿಳಿಯುವ ಸ್ವಾಮೀಜಿ ಲೋಕಜ್ಞಾನಿಗಳಾಗಿರುತ್ತಾರೆ. ದೇವರ ಗುಡಿಯಲ್ಲಿ ಹೂ ಬಿದ್ದಿರುವುದನ್ನು ಕುಳಿತಲ್ಲಿಂದಲೇ ಹೇಳುವ ಸ್ವಾಮೀಜಿ ಕಂಡು ಜನರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆ ಹೊತ್ತಿಗೆ ದೇವಸ್ಥಾನದ ಬಾಗಿಲಲ್ಲಿ ಬಂದು ನಿಲ್ಲುತ್ತದೆ ಲಲಿತಾದೇವಿ ಕುಟುಂಬ.
ಸುಬ್ಬುಗೆ ಉಜ್ವಲ ಭವಿಷ್ಯ ಇದೆ ಎಂದ ಸ್ವಾಮೀಜಿ
ದೇವಸ್ಥಾನದೊಳಗೆ ಬರುವ ಲಲಿತಾದೇವಿ ಹಾಗೂ ಕುಟುಂಬ ಸ್ವಾಮೀಜಿಗಳ ಬಳಿಗೆ ಬರುತ್ತಾರೆ. ಲಲಿತಾದೇವಿಯನ್ನು ಉದ್ದೇಶಿಸಿ ಮಾತನಾಡುವ ಸ್ವಾಮೀಜಿ ‘ಲಲಿತಾದೇವಿಯವರ ಮುಖದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಖುಷಿ ಕಾಣಿಸುತ್ತಿದೆ‘ ಎಂದು ಹೇಳುತ್ತಾರೆ. ಅದಕ್ಕೆ ಲಲಿತಾದೇವಿ ನನ್ನ ಖುಷಿಗೆ ಕಾರಣ ಏನು ಎಂಬುದು ನಿಮಗೂ ತಿಳಿದಿದೆ ಎನ್ನುತ್ತಾರೆ. ಅದಕ್ಕೆ ಸ್ವಾಮೀಜಿ ‘ಹೌದು, ಎಷ್ಟೋ ವರ್ಷಗಳ ನಂತರ ಮೊಮ್ಮಗಳು ಬಂದಿದ್ದಾಳೆ, ಮತ್ತೆ ಪುಷ್ಕರಿಣಿ ಉತ್ಸವ ನಡೆಯುತ್ತಿದೆ. ಎಲ್ಲವೂ ಒಳಿತಾಗಲಿ, ಇನ್ನು ಮುಂದೆ ಎಲ್ಲವೂ ಬದಲಾಗಲಿದೆ‘ ಎಂದು ಆಶೀರ್ವಾದ ಮಾಡುತ್ತಾಳೆ. ವೀರೇಂದ್ರನನ್ನು ಕರೆದು ಮಾತನಾಡಿಸುವ ಸ್ವಾಮೀಜಿ ಅವರಿಗೂ ಆಶೀರ್ವಾದ ಮಾಡುತ್ತಾರೆ. ಕೊನೆಗೆ ಪದ್ಮನಾಭ ಅವರನ್ನ ಉದ್ದೇಶಿಸಿ ‘ಪದ್ಮನಾಭ ಹಲವು ವರ್ಷಗಳ ಬಳಿಕ ಮತ್ತೆ ಈ ಮಣ್ಣಿಗೆ ಬಂದಿದ್ದೀಯಾ, ದೂರದಲ್ಲಿ ಇದ್ದರೂ ನಿನಗೆ ಈ ಮಣ್ಣಿನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ‘ ಎಂದು ಹೇಳುತ್ತಾರೆ. ಅಲ್ಲದೇ ಕೃಷ್ಣನಂತಹ ಮಗನನ್ನು ಪಡೆದಿದ್ದೀಯಾ, ನಿಮ್ಮ ಬದುಕಿಗೆ ಅವನು ಬೆಳಕಾಗಿದ್ದಾನೆ ಎಂದು ಹೇಳುತ್ತಾರೆ. ಅದನ್ನ ಕೇಳಿ ಎಲ್ಲರಿಗೂ ಅಚ್ಚರಿಯಾಗುತ್ತದೆ. ನನ್ನ ಮಗ ಸುಬ್ರಹ್ಮಣ್ಯ ಎಂದು ಸ್ವಾಮೀಜಿಗೆ ಸುಬ್ಬುವನ್ನು ಪರಿಚಯಿಸುತ್ತಾರೆ ಪದ್ಮನಾಭ. ಅಪ್ಪನ ಅಣತಿಯಂತೆ ಸ್ವಾಮೀಜಿ ಬಳಿಗೆ ಹೋಗಿ ಆಶೀರ್ವಾದ ಪಡೆಯುವ ಸುಬ್ಬಗೆ ಮನಸಾರೆ ಹಾರೈಸುವ ಸ್ವಾಮೀಜಿಗಳು ‘ನೀನು ಕೃಷ್ಣನಂತೆ, ಕೃಷ್ಣ ಅಸಮಾನ್ಯನಾದ್ರೂ ಸಾಮಾನ್ಯನಂತೆ ಪಾಂಡವರಿಗೆ ಸಾರಥಿಯಾಗುತ್ತಾನೆ. ನೀನು ಹಾಗೆ ನಿನ್ನಲ್ಲಿ ಅಸಾಮಾನ್ಯ ಶಕ್ತಿ ಇದೆ. ಇದು ನಿನ್ನ ಭವಿಷ್ಯದಲ್ಲಿ ಗೋಚರವಾಗುತ್ತೆ, ನೀನು ಮಹಾನ್ ವ್ಯಕ್ತಿಯಾಗಿ ಬೆಳೆಯುತ್ತೀಯಾ‘ ಎಂದು ಸುಬ್ಬು ಭವಿಷ್ಯ ನುಡಿಯುತ್ತಾರೆ. ಶ್ರಾವಣಿಗೂ ಆಶೀರ್ವಾದ ಮಾಡುವ ಸ್ವಾಮೀಜಿ ಅವಳ ಬದುಕು ಬದಲಾಗುತ್ತೆ, ಬೆಳಕು ತುಂಬಿರುತ್ತೆ ಎಂದು ಹೇಳುತ್ತಾರೆ. ಎಲ್ಲರೂ ಆಶೀರ್ವಾದ ಪಡೆದ ಮೇಲೆ ವಿಜಯಾಂಬಿಕಾ ಬಳಿ ಆಶೀರ್ವಾದ ಪಡೆಯುವಂತೆ ಹೇಳುತ್ತಾರೆ ವೀರೇಂದ್ರ.
ವಿಜಯಾಂಬಿಕಾ ಬಗ್ಗೆ ಒಗಟಾಗಿ ಮಾತನಾಡುವ ಸ್ವಾಮೀಜಿ
ವಿಜಯಾಂಬಿಕಾ ಆಶೀರ್ವಾದ ಪಡೆಯಲು ಸ್ವಾಮೀಜಿಯ ಬಳಿಗೆ ಹೋದಾಗ ಚೆನ್ನಾಗಿಯೇ ಇರುವ ಸ್ವಾಮೀಜಿ ನಂತರ ಇದ್ದಕ್ಕಿದ್ದ ಹಾಗೆ ಬದಲಾಗುತ್ತಾರೆ. ವಿಜಯಾಂಬಿಕಾಗೆ ಆಶೀರ್ವಾದ ಮಾಡುವುದಿಲ್ಲ. ಬದಲಾಗಿ ವಿಚಿತ್ರವಾಗಿ ಮಾತನಾಡುತ್ತಾರೆ. ಸುಡುವ ಬೆಂಕಿ, ನೆರಳು ಎಂದೆಲ್ಲಾ ಹೇಳಿ ಅಲ್ಲಿ ಇರುವವರಿಗೆ ಗೊಂದಲ ಮೂಡಿಸುತ್ತಾರೆ. ವಿಜಯಾಂಬಿಕಾ ಮೋಸವೆಲ್ಲಾ ಬಹುಶಃ ಸ್ವಾಮೀಜಿಗೆ ತಿಳಿದಿರುತ್ತದೆ. ಆದರೆ ಸ್ವಾಮೀಜಿ ಆಡಿದ ಮಾತು ಯಾರಿಗೂ ಅರ್ಥವಾಗುವುದಿಲ್ಲ. ಕೊನೆಗೆ ಸ್ವಾಮೀಜಿ ಉತ್ಸವ ಶುರು ಮಾಡಿ ಎಂದು ಊರ ಜನರಿಗೆ ಸಲಹೆ ನೀಡುತ್ತಾರೆ. ಉತ್ಸವ ಆರಂಭವಾಗುತ್ತದೆ.
ಕಳಶ ಹೊತ್ತ ಶ್ರಾವಣಿಗೆ ಕೇಡು ಬಯಸುವ ಯತ್ನದಲ್ಲಿ ವಿಜಯಾಂಬಿಕಾ, ಮದನ್
ದೇವಸ್ಥಾನದ ಕಲ್ಯಾಣಿಯಿಂದ 21 ಕೊಡ ನೀರು ತಂದು ದೇವರಿಗೆ ಅಭಿಷೇಕ ಮಾಡುತ್ತಾಳೆ ಶ್ರಾವಣಿ. ನಂತರ ಪುನಃ ಕಲ್ಯಾಣಿ ಬಳಿಗೆ ಬರುವ ಅವಳು ಕಲಶ ಹೊತ್ತು ದೇವಸ್ಥಾನ ತಲುಪಬೇಕಿರುತ್ತದೆ. ಯಾವುದೇ ಕಾರಣಕ್ಕೂ ಕಳಶದಲ್ಲಿರುವ ನೀರು ತುಳಕಬಾರದು, ಕಳಶ ಕೆಳಗೆ ಇಳಿಸಬಾರದು ಇದರಿಂದ ಊರಿಗೆ ಕಂಟಕ ಎಂಬುದು ಜನ ನಂಬಿಕೆಯಾಗಿರುತ್ತದೆ. ಈ ನಂಬಿಕೆಯನ್ನೇ ದಾಳವನ್ನಾಗಿಸಿಕೊಂಡು ಶ್ರಾವಣಿಯನ್ನು ಊರಿನವರು ದ್ವೇಷ ಮಾಡುವಂತೆ ಮಾಡಬೇಕು ಎಂದು ಪ್ಲಾನ್ ಮಾಡಿರುತ್ತಾರೆ ವಿಜಯಾಂಬಿಕಾ ಹಾಗೂ ಮದನ್. ಎಲ್ಲಾ ಸಂಕಷ್ಟಗಳನ್ನೂ ದಾಟಿ ದೇವಸ್ಥಾನ ತಲುಪ್ತಾಳಾ ಶ್ರಾವಣಿ.
ಶ್ರಾವಣಿ ದೇವಸ್ಥಾನ ತಲುಪಿ ಪುಷ್ಕರಿಣಿ ಉತ್ಸವವನ್ನು ಯಶಸ್ವಿ ಮಾಡುತ್ತಾಳಾ, ಮದನ್–ವಿಜಯಾಂಬಿಕಾ ಅಂದುಕೊಂಡ ಕೆಲಸ ನೆರವೇರುತ್ತಾ, ವೀರೇಂದ್ರನಿಗೆ ನಿಜಕ್ಕೂ ಕಂಟಕವಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.