ಅಪಾಯಗಳನ್ನೆಲ್ಲಾ ಮೆಟ್ಟಿ ದೇವಸ್ಥಾನದವರೆಗೆ ಬಂದ ಶ್ರಾವಣಿಗೆ ಕಾದಿತ್ತು ಮತ್ತೊಂದು ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಪಾಯಗಳನ್ನೆಲ್ಲಾ ಮೆಟ್ಟಿ ದೇವಸ್ಥಾನದವರೆಗೆ ಬಂದ ಶ್ರಾವಣಿಗೆ ಕಾದಿತ್ತು ಮತ್ತೊಂದು ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಪಾಯಗಳನ್ನೆಲ್ಲಾ ಮೆಟ್ಟಿ ದೇವಸ್ಥಾನದವರೆಗೆ ಬಂದ ಶ್ರಾವಣಿಗೆ ಕಾದಿತ್ತು ಮತ್ತೊಂದು ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಕಳಶ ಹೊತ್ತ ಶ್ರಾವಣಿಯನ್ನು ನೋಡಿ ಶಾಕ್ ಆದ ಸಾವಿತ್ರಿ ಹಾಗೂ ಅವಳ ಅಜ್ಜ. ದೇವಸ್ಥಾನ ಕಡೆಗೆ ಬರುವ ದಾರಿಯಲ್ಲಿ ಗಾಜಿನ ಚೂರು ಚೆಲ್ಲಿ ಶ್ರಾವಣಿ ಕಾಲಿನಲ್ಲಿ ರಕ್ತ ಸುರಿಯುವಂತೆ ಮಾಡಿದ ಮದನ್‌. ಊರಿನ ಜನಕ್ಕಾಗಿ ಸಂಕಷ್ಟಗಳನ್ನೆಲ್ಲಾ ದಾಟಿ ಬಂದ ಶ್ರಾವಣಿಗೆ ದೇವಾಲಯದಲ್ಲೇ ಕಾದಿತ್ತು ಇನ್ನೊಂದು ಅಪಾಯ. ಈ ಎಲ್ಲವನ್ನೂ ದಾಟಿ ಉತ್ಸವ ಪೂರ್ಣ ಮಾಡ್ತಾಳಾ ಶ್ರಾವಣಿ?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 20ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್‌ 20ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್‌ 20ರ) ಸಂಚಿಕೆಯಲ್ಲಿ ಕಳಶ ಹೊತ್ತ ಶ್ರಾವಣಿಗೆ ಉತ್ಸವದ ಮಹತ್ವ ಹಾಗೂ ಯಾವುದೇ ಕಷ್ಟ–ನೋವು ಎದುರಾದ್ರೂ ಕಳಶ ಕೆಳಗೆ ಇಳಿಸುವಂತಿಲ್ಲ, ಅದರ ಮಹತ್ವ ಅಂಥದ್ದನ್ನು ಎಂಬುದನ್ನು ಮಾತಿನ ಮೂಲಕ ಅರ್ಥ ಮಾಡಿಸುತ್ತಾರೆ ಶ್ರಾವಣಿಯ ಅಜ್ಜಿ. ಶ್ರಾವಣಿಗೆ ಅಜ್ಜಿಯ ಮಾತು ತಲೆಯಲ್ಲಿ ಕೂತಿರುತ್ತದೆ. ಹೀಗೆ ಉತ್ಸವ ಆರಂಭವಾಗಿ ಶ್ರಾವಣಿ ಕಳಶ ಹೊತ್ತು ಮುಂದೆ ಸಾಗುತ್ತಾಳೆ.

ಕಳಶ ಹೊತ್ತ ಶ್ರಾವಣಿ ಕಂಡು ಸಾವಿತ್ರಿಗೆ ಅಚ್ಚರಿ

ಶ್ರಾವಣಿ ಕಳಶ ಹೊತ್ತು ಮುಂದೆ ಮುಂದೆ ಸಾಗುತ್ತಿದ್ದರೆ ಹಿಂದೆಯಿಂದ ಉತ್ಸವ ನೋಡಲು ಬಂದ ಸಾವಿತ್ರಿ ಹಾಗೂ ಅಜ್ಜ ವೀರೇಂದ್ರನನ್ನು ನೋಡುವ ತವಕದಲ್ಲಿರುತ್ತಾರೆ. ವೀರೇಂದ್ರನಿಗೆ ಕೊಡಲು ಗಣಪತಿ ಮೂರ್ತಿಯನ್ನು ತಾನೇ ಕೈಯಾರೆ ಮಾಡಿ ತಂದಿರುತ್ತಾರೆ ಸಾವಿತ್ರಿ. ಹಿಂದಿನಿಂದ ಏನೂ ಕಾಣಿಸದೇ ಇದ್ದಾಗ ಮುಂದೆ ಮುಂದೆ ಹೋಗುವ ಸಾವಿತ್ರಿ ಹಾಗೂ ಅಜ್ಜನಿಗೆ ಕಳಶ ಹೊತ್ತ ಶ್ರಾವಣಿ ಕಾಣಿಸುತ್ತಾಳೆ. ಆರಂಭದಲ್ಲಿ ಮಿನಿಸ್ಟರ್ ಪಿಎ ಯಾಕೆ ಕಳಶ ಹೊತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುವ ಇವರಿಗೆ ತಮ್ಮ ಮನೆಗೆ ಬಂದಿದ್ದು ಶ್ರಾವಣಿಯೇ ಎಂಬುದು ಅರಿವಾಗುತ್ತದೆ. ಅಲ್ಲದೇ ಶ್ರಾವಣಿಯ ಅಹಂಕಾರವಿಲ್ಲದ ನಿಷ್ಕಕ್ಮಲ ಮನಸ್ಸು ಸಾವಿತ್ರಿ ಹಾಗೂ ಅವಳ ಅಜ್ಜನಿಗೆ ಅವಳ ಮೇಲೆ ಇನ್ನಷ್ಟು ಅಭಿಮಾನ ಮೂಡುವಂತೆ ಮಾಡುತ್ತದೆ. ಸಾವಿತ್ರಿಗೆ ಶ್ರಾವಣಿ ಅವಳನ್ನು ಸ್ನೇಹಿತೆ ಎಂದಿದ್ದು ನೆನಪಾಗಿ ಖುಷಿಯಾಗುತ್ತದೆ.

ದಾರಿಯಲ್ಲಿ ಗಾಜಿನ ಚೂರು ಚೆಲ್ಲಿದ ಮದನ್‌

ಕಳಶ ಹೊತ್ತು ದಿಟ್ಟ ಹೆಜ್ಜೆಯಿಟ್ಟು ಬರುತ್ತಿದ್ದ ಶ್ರಾವಣಿ ಸುಸ್ತಾದರೂ ತೋರಿಸಿಕೊಳ್ಳದೇ ಮುಂದೆ ಮುಂದೆ ಸಾಗುತ್ತಿರುತ್ತಾಳೆ. ಹೇಗಾದರೂ ಅವಳು ದೇವಸ್ಥಾನ ತಲುಪುದನ್ನು ತಡೆಯಬೇಕು ಎಂದುಕೊಂಡಿದ್ದ ಮದನ್‌–ವಿಜಯಾಂಬಿಕಾ ಖತರ್‌ನಾಕ್ ಪ್ಲಾನ್ ಮಾಡುತ್ತಾರೆ. ಆ ಪ್ಲಾನ್‌ನಂತೆ ಶ್ರಾವಣಿ ನಡೆದು ಬರುವ ದಾರಿಯಲ್ಲಿ ಹಾಸಿದ್ದ ಕಾರ್ಪೇಟ್ ಕೆಳಗಡೆ ಗಾಜಿನ ಬಾಟಲಿಯನ್ನು ಒಡೆದು ಗಾಜಿನ ಚೂರುಗಳನ್ನು ಚೆಲ್ಲಿರುತ್ತಾನೆ. ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಾನೆ. ಕಳಶ ಹೊತ್ತು ನಡೆದ ಬರುತ್ತಿದ್ದ ಶ್ರಾವಣಿಯ ಕಾಲಿಗೆ ಗಾಜಿನ ಚೂರು ಚುಚ್ಚುತ್ತದೆ. ಅಮ್ಮಾ ಎಂದು ಕೂಗುವ ಶ್ರಾವಣಿಗೆ ಏನಾಯ್ತು ಎಂಬುದು ಯಾರಿಗೂ ಅರಿವಾಗುವುದಿಲ್ಲ. ಏನಾಯ್ತು ಎಂದು ಕೇಳಿದರೂ ಶ್ರಾವಣಿ ಹೇಳುವುದಿಲ್ಲ. ಅವಳಿಗೆ ಅಜ್ಜಿ ಕಳಶ ಇಳಿಸಿದರೆ ಊರಿಗೆ ಸಂಕಷ್ಟ ಎಂದು ಹೇಳಿದ್ದ ಮಾತುಗಳೇ ನೆನಪಾಗುತ್ತದೆ. ಆ ನೋವಿನ ನಡುವೆಯೂ ಏನಿಲ್ಲ ಎಂದು ಹೇಳಿ ಮುಂದೆ ಸಾಗುತ್ತಾಳೆ. ಸ್ವಲ್ಪ ಹೊತ್ತಿಗೆ ಶ್ರಾವಣಿಯ ಕಾಲು ನೋಡುವ ಸುಬ್ಬುಗೆ ಅವಳ ಕಾಲಲ್ಲಿ ರಕ್ತ ಸುರಿಯುತ್ತಿರುವುದು ಕಾಣಿಸುತ್ತದೆ. ಇತ್ತ ದೇವಸ್ಥಾನದಲ್ಲಿ ಸ್ವಾಮೀಜಿಗೂ ಮದನ್‌ ಮೋಸದ ಅರಿವಾಗುತ್ತದೆ. ಕಾಲಿಗೆ ಗಾಜಿನ ಚೂರು ಚುಚ್ಚಿದ್ದರೂ ನಡೆಯುತ್ತಿರುವ ಶ್ರಾವಣಿ ಕಂಡು ನರಸಯ್ಯ ಕಳಶ ಇಳಿಸುವಂತಿಲ್ಲ, ಪೂಜೆ ನಿಲ್ಲಿಸುವಂತಿಲ್ಲ ಎಂದು ಹೇಳುತ್ತಾರೆ, ಪದ್ಮನಾಭರು ಅದಕ್ಕೆ ದನಿಗೂಡಿಸುತ್ತಾರೆ. ಆದರೆ ವಿಜಯಾಂಬಿಕಾ ತಾನೇ ಗೆದ್ದೆ ಎಂದು ಜಂಭದಲ್ಲಿ ನಗುತ್ತಾಳೆ. ಆದರೆ ಗಾಜಿನ ಚೂರು, ನೋವಿಗೂ ಹೆದರದ ಶ್ರಾವಣಿ ಕಳಶ ಹೊತ್ತು ದೇವಸ್ಥಾನದ ಬಾಗಿಲು ತಲುಪುತ್ತಾಳೆ. ಶ್ರಾವಣಿ ನೋವು ಕಂಡು ಸುಬ್ಬು, ವಂದನಾ, ಪಿಂಕಿ ಕಣ್ಣೀರಾದರೆ ವೀರೇಂದ್ರನಿಗೂ ಮನಸ್ಸಿಗೆ ನೋವಾಗುತ್ತದೆ. ಹಾಗೂ ಹೀಗೂ ದೇವಸ್ಥಾನ ತಲುಪುತ್ತಾಳೆ ಶ್ರಾವಣಿ.

ಮರಕ್ಕೆ ದಾರದಿಂದ 7 ಗಂಟು ಹಾಕಲು ಹೇಳಿದ ಸ್ವಾಮೀಜಿ

ಕಳಶವನ್ನು ಹೊತ್ತು ಕಾಲು ನೋವಿನಲ್ಲೇ ದೇವಾಲಯದ ಒಳಗೆ ಬರುವ ಶ್ರಾವಣಿಗೆ ಸ್ವಾಮೀಜಿ ಕರೆದು ಆಶೀರ್ವಾದ ಮಾಡುತ್ತಾರೆ. ನೋವನ್ನೆಲ್ಲಾ ಮೆಟ್ಟಿ ಮುಂದೆ ಬರುವ ದಿಟ್ಟೆ ನೀನು, ನಿಮಗೆ ದೇವಿ ಆಶೀರ್ವಾದ ಸದಾ ಇರುತ್ತದೆ ಎಂದು ಮನಸಾರೆ ಹಾರೈಸುತ್ತಾರೆ. ಅಲ್ಲದೇ ದಾರವೊಂದನ್ನು ನೀಡಿದ ಅದನ್ನು ದೇವಸ್ಥಾನದ ಹಿಂದಿನ ಮರಕ್ಕೆ 7 ಗಂಟು ಹಾಕಬೇಕು. ಯಾವುದೇ ಕಾರಣಕ್ಕೂ 7 ಗಂಟು ತಪ್ಪುವಂತಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಮತ್ತೆ ವಾಪಸ್ ಕರೆಯುವ ಸ್ವಾಮಿ ಅವಳಿಗೆ ಶಾಲವೊಂದನ್ನು ಹೊದೆಸುತ್ತಾರೆ. ಅವಳು ದೇವಸ್ಥಾನದ ಹಿಂಭಾಗಕ್ಕೆ ಹೋಗುವಾಗಲೂ ಯಾವುದೇ ಕಾರಣಕ್ಕೂ 7 ಗಂಟು ತಪ್ಪುವಂತಿಲ್ಲ ಎಂಬುದನ್ನು ಅಜ್ಜಿ ಮತ್ತೊಮ್ಮೆ ಹೇಳುತ್ತಾರೆ. ಅವಳು ಹೊರಟು ನಿಂತಾಗ ಸುಬ್ಬುವನ್ನು ಕರೆಯುವ ಸ್ವಾಮೀಜಿ ನೀನು ಅವಳ ಜೊತೆ ಹೋಗು ಎಂದು ಕಳುಹಿಸುತ್ತಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗುತ್ತದೆ. ಇತ್ತ ವಿಜಯಾಂಬಿಕಾ ಮದನ್‌ಗೆ ಮೆಸೇಜ್ ಮಾಡಿ ಶ್ರಾವಣಿ ದೇವಸ್ಥಾನದ ಹಿಂಭಾಗ ಇರುವ ಮರದ ಬಳಿ ಬರುತ್ತಿರುವುದಾಗಿ ತಿಳಿಸುತ್ತಾಳೆ. ವಿಜಯಾಂಬಿಕಾ ಮೋಸವನ್ನು ತಮ್ಮ ಅಂತಃಶಕ್ತಿಯ ಮೂಲಕ ತಿಳಿದುಕೊಳ್ಳುತ್ತಾರೆ ಸ್ವಾಮೀಜಿ.

ಶ್ರಾವಣಿಯನ್ನು ಸುಟ್ಟು ಹಾಕಲು ಮದನ್‌ ಪ್ಲಾನ್‌

ದೇವಸ್ಥಾನದ ಹಿಂಭಾಗಕ್ಕೆ ಶ್ರಾವಣಿ ಬರುವುದನ್ನು ತಿಳಿದ ಮದನ್ ಆ ಮರದ ಸುತ್ತಲೂ ಪೆಟ್ರೋಲ್ ಚೆಲ್ಲುತ್ತಾನೆ. ಉದ್ದಕ್ಕೆ ಪೆಟ್ರೋಲ್ ಚೆಲ್ಲಿಕೊಂಡು ಬಂದು ತಾನು ಒಂದು ಮರದ ಕೆಳಗೆ ನಿಲ್ಲುತ್ತಾನೆ. ಸುಬ್ಬು ಜೊತೆ ಮರದ ಬಳಿಗೆ ಬರುವ ಶ್ರಾವಣಿ ತನಗೆ ಸುಸ್ತಾದರೂ 7 ಗಂಟು ಹಾಕೇ ಹಾಕುತ್ತೇನೆ ಎಂದು ನಿರ್ಧಾರ ಮಾಡುತ್ತಾಳೆ. ಅವಳನ್ನು ನೋಡಿ ಶ್ರಾವಣಿಗೆ ಸುಸ್ತಾಗಿದೆ ಎಂದು ಭಾವಿಸುವ ಸುಬ್ಬು ಸ್ವಾಮೀಜಿ ತೀರ್ಥ ಕುಡಿಯಬಹುದು ಎಂದು ಹೇಳಿದ್ದು ನೆನಪಾಗಿ ತೀರ್ಥ ತರಲು ಹೋಗುತ್ತಾನೆ. ಅಷ್ಟೊತ್ತಿಗೆ ಮದನ್ ಬೆಂಕಿ ಹಚ್ಚುತ್ತಾನೆ. ಆರಂಭದಲ್ಲಿ ಇದು ಅರಿವಿಗೆ ಬರದ ಶ್ರಾವಣಿ ಗಂಟು ಹಾಕುತ್ತಿರುತ್ತಾಳೆ. ಬೆಂಕಿ ಬಂದು ಸ್ವಾಮೀಜಿ ಹೊದೆಸಿದ್ದ ಶಾಲಿಗೆ ಅಂಟಿಕೊಂಡ ಗಾಬರಿಯಲ್ಲಿ ಸುಬ್ಬು ಎಂದು ಕೂಗುತ್ತಾಳೆ ಶ್ರಾವಣಿ. ಮರದ ಸುತ್ತಲೂ ಬೆಂಕಿ ಬಿದ್ದಿದ್ದು ನೋಡಿ ಗಾಬರಿ ಓಡಿ ಬರುತ್ತಾನೆ ಸುಬ್ಬು. ಆದರೆ ಶ್ರಾವಣಿಗೆ ಅಜ್ಜಿ 7 ಗಂಟು ಹಾಕಲು ಹೇಳಿದ್ದು ನೆನಪಾಗಿ ಬೇರೆ ದಾರಿ ಕಾಣದೆ ಬೆಂಕಿಯ ನಡುವೆಯೂ ಗಂಟು ಹಾಕುತ್ತಿರುತ್ತಾಳೆ. ಸುಬ್ಬು ಆಚೆಯಿಂದ ಅದನ್ನು ಬಿಡಿ ಮೇಡಂ, ನೀವು ಬನ್ನಿ ಎಂದು ಕರೆಯುತ್ತಿರುತ್ತಾನೆ. ಇತ್ತ ಶ್ರಾವಣಿ ಕೂಗಿದ್ದು ಕೇಳಿ ಮನೆಯವರೆಲ್ಲಾ ಗಾಬರಿಯಲ್ಲಿ ಅತ್ತ ಓಡುತ್ತಾರೆ.

ಸ್ವಾಮೀಜಿ ಹೇಳಿದಂತೆ, ಅಜ್ಜಿ ಸಲಹೆಯಂತೆ 7 ಗಂಟು ಹಾಕಿ ಪೂಜೆ ಸಂಪನ್ನ ಮಾಡ್ತಾಳಾ ಶ್ರಾವಣಿ. ಶ್ರಾವಣಿಗೆ ಬೆಂಕಿಯಿಂದ ಅಪಾಯವಾಗುತ್ತಾ, ವಿಜಯಾಂಬಿಕಾ–ಮದನ್ ಮೋಸ ವೀರೇಂದ್ರಗೆ ತಿಳಿಯುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner