ನಂದಿನಿ ಟ್ರಂಕ್‌ ಮೇಲೆ ವಿಜಯಾಂಬಿಕಾ ಕಣ್ಣು; ಮುಂದಾಗುವ ಅಪಾಯದ ಅರಿವಿಲ್ಲದ ಸುಬ್ಬು–ಶ್ರಾವಣಿ ಜಾಲಿರೈಡ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಂದಿನಿ ಟ್ರಂಕ್‌ ಮೇಲೆ ವಿಜಯಾಂಬಿಕಾ ಕಣ್ಣು; ಮುಂದಾಗುವ ಅಪಾಯದ ಅರಿವಿಲ್ಲದ ಸುಬ್ಬು–ಶ್ರಾವಣಿ ಜಾಲಿರೈಡ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ನಂದಿನಿ ಟ್ರಂಕ್‌ ಮೇಲೆ ವಿಜಯಾಂಬಿಕಾ ಕಣ್ಣು; ಮುಂದಾಗುವ ಅಪಾಯದ ಅರಿವಿಲ್ಲದ ಸುಬ್ಬು–ಶ್ರಾವಣಿ ಜಾಲಿರೈಡ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಊರಿಂದ ತನ್ನೂರಿಗೆ ಹೊರಟ ಶ್ರಾವಣಿಗೆ ಅಜ್ಜಿ ಕೊಟ್ಟ ಕಾರಿನಲ್ಲಿ ಸುಬ್ಬು ಜೊತೆ ಪ್ರಯಾಣ ಮಾಡುವ ಬಯಕೆ. ವಿಜಯಾಂಬಿಕಾಗೆ ನಂದಿನಿ ಟ್ರಂಕ್ ಶ್ರಾವಣಿ ನೋಡಿದರೆ ಎಂಬ ಭಯ. ವರದ–ವರಲಕ್ಷ್ಮೀ ಮನೆಯಲ್ಲಿ ಮದುವೆ ತಯಾರಿ ಜೋರು. ಜಾಲಿರೈಡ್‌ನಲ್ಲಿರುವ ಸುಬ್ಬು–ಶ್ರಾವಣಿಯನ್ನ ಹಿಂಬಾಲಿಸುತ್ತಿರುವ ರೌಡಿಗಳು. ಅಕ್ಟೋಬರ್‌ 16ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಅಕ್ಟೋಬರ್‌ 16ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಅಕ್ಟೋಬರ್‌ 16ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಅಕ್ಟೋಬರ್ 16ರ ಸಂಚಿಕೆಯಲ್ಲಿ ವೀರೇಂದ್ರ ಮನೆಯವರೆಲ್ಲಾ ಸಾಲಿಗ್ರಾಮದಿಂದ ಬೆಂಗಳೂರಿಗೆ ಮರಳಲು ಸಿದ್ಧರಾಗಿರುತ್ತಾರೆ. ಲಲಿತಾದೇವಿಯವರು ವೀರೇಂದ್ರ ಅವರ ಮನೆಯವರಿಗಾಗಿ ಒಂದು ಓಮ್ನಿ ಕಾರನ್ನು ಉಡುಗೊರೆ ರೂಪದಲ್ಲಿ ನೀಡಿರುತ್ತಾರೆ. ಆ ಓಮ್ನಿಯನ್ನು ಯಾರು ಓಡಿಸಿಕೊಂಡು ಹೋಗೋದು ಅಂತ ಯೋಚಿಸಿದಾಗ ವೀರೇಂದ್ರ ಪದ್ಮನಾಭ ಅವರ ಬಳಿ ‘ಪದ್ಮನಾಭ ಅವರೇ, ನೀವು ಆ ಗಾಡಿಯನ್ನು ಓಡಿಸಿಕೊಂಡು ಬನ್ನಿ. ನಾವು ಮುಂದೆ ಹೋಗಿರುತ್ತೇವೆ‘ ಎಂದು ರಿಕ್ವೆಸ್ಟ್ ಮಾಡುತ್ತಾರೆ. ಆಗ ಸುಬ್ಬು ‘ಬೇಡ ಬೇಡ ಅಪ್ಪಂಗೆ ಅಷ್ಟು ದೂರ ಡ್ರೈವ್ ಮಾಡೋಕೆ ಆಗೊಲ್ಲ. ಆ ಕಾರು ನಾನೇ ಓಡಿಸಿಕೊಂಡು ಬರ್ತೀನಿ, ನೀವೆಲ್ಲಾ ಹೋಗಿರಿ‘ ಎಂದು ಹೇಳುತ್ತಾನೆ. ಅದಕ್ಕೆ ಒಪ್ಪುವ ವೀರೇಂದ್ರ ಹಾಗೂ ಮನೆಯವರು ಹೊರಡಲು ರೆಡಿಯಾಗುತ್ತಾರೆ. ಆದರೆ ಸುಬ್ಬು ಮೇಲೆ ಒಲವಧಾರೆ ಹರಿಸುತ್ತಿರುವ ಶ್ರಾವಣಿ ತಾನು ಅವನ ಜೊತೆ ಬರುವುದಾಗಿ ಹೇಳುತ್ತಾಳೆ. ವಂದನಾ ಬೇಡ ಎಂದು ಹೇಳಲು ಹೊರಟರು ಸಾಧ್ಯವಾಗದೇ ಸುಬ್ಬು ಜೊತೆಗೆ ಆ ಕಾರಿನಲ್ಲೇ ಶ್ರಾವಣಿ ಹೋಗುವಂತಾಗುತ್ತದೆ.

ಅಮ್ಮನ ಟ್ರಂಕ್ ಜೊತೆಗೆ ತೆಗೆದುಕೊಂಡ ಹೋದ ಶ್ರಾವಣಿ

ಅಜ್ಜಿಯ ಬಳಿ ಅಮ್ಮನ ಬಗ್ಗೆ ಕೇಳಿದ್ದ ಶ್ರಾವಣಿಗೆ ಅವಳ ಫೋಟೊ ತೋರಿಸಿರುವುದು ಮಾತ್ರವಲ್ಲ, ನಂದಿನಿಯ ಟ್ರಂಕ್ ಒಂದನ್ನು ಕೂಡ ಶ್ರಾವಣಿಗೆ ಕೊಟ್ಟು ಕಳುಹಿಸುತ್ತಾರೆ ಲಲಿತಾದೇವಿ. ಆ ಟ್ರಂಕ್ ತನ್ನ ಜೊತೆಗೆ ಇರಬೇಕು ಎನ್ನುವ ಶ್ರಾವಣಿ ಅದನ್ನು ಮೊದಲಿದ್ದ ಕಾರಿನಿಂದ ಎತ್ತಿ ತಾನು ಹೋಗುವ ಅಜ್ಜಿ ಮನೆಯಿಂದ ಉಡುಗೊರೆಯಾಗಿ ಬಂದ ಕಾರಿನಲ್ಲಿ ತೆಗೆದುಕೊಂಡು ಹೋಗುವ ಪ್ಲಾನ್ ಮಾಡುತ್ತಾಳೆ. ಸುಬ್ಬು ಜಾಗ ಇಲ್ಲ ಬೇಡ ಅಂದರೂ ಕೇಳುವುದಿಲ್ಲ ಶ್ರಾವಣಿ. ಆದರೆ ಇದು ವಿಜಯಾಂಬಿಕಾಗೆ ಒಂದು ರೀತಿಯ ವರದಂತಾಗುತ್ತದೆ. ಅವಳು ಕೂಡಲೇ ಮದನ್‌ಗೆ ಸುಬ್ಬು, ಶ್ರಾವಣಿ ಬರುತ್ತಿರುವ ಕಾರಿನ ನಂಬರ್ ಮೆಸೇಜ್ ಮಾಡಿ, ಹೇಗಾದರೂ ಮಾಡಿ ಆ ಕಾರಿನಲ್ಲಿರುವ ಟ್ರಂಕ್ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತಾರೆ. ಅಮ್ಮನ ಮಾತನ್ನು ಪಾಲಿಸುವ ಮದನ್ ಟ್ರಂಕ್ ಕದಿಯಲು ರೌಡಿಗಳನ್ನು ನೇಮಿಸುತ್ತಾನೆ.

ಕಾರಿನಲ್ಲಿ ಸುಬ್ಬು ಜಾಲಿ ಮೂಡ್‌, ಶ್ರಾವಣಿಗೆ ಮೈ ಉರಿ

ಕಾರಿನಲ್ಲಿ ಇಬ್ಬರು ಆರಾಮಾಗಿ ಹೋಗುತ್ತಿರುವಾಗ ಮದರ್ ಸೆಂಟಿಮೆಂಟ್ ಹಾಡನ್ನು ಹಾಕುತ್ತಾನೆ ಸುಬ್ಬು. ಆದರೆ ಶ್ರಾವಣಿಗೆ ರೊಮ್ಯಾಂಟಿಕ್ ಹಾಡು ಕೇಳುವಾಸೆ, ಅದು ಸುಬ್ಬು ಬಾಯಿಂದ. ಅಷ್ಟೊತ್ತಿಗೆ ಸುಬ್ಬು ಮನೆಗೆ ಕಾಲ್ ಮಾಡಬೇಕು ಎಂದು ನೆನಪಾಗಿ, ಅಮ್ಮ, ಅಕ್ಕ, ವರ ಎಲ್ಲರಿಗೂ ಕಾಲ್ ಮಾಡುವಂತೆ ಶ್ರಾವಣಿಗೆ ಹೇಳುತ್ತಾನೆ. ಅವರು ಯಾರೂ ಕಾಲ್ ತೆಗೆಯದೇ ಕೊನೆಗೆ ಶ್ರೀವಲ್ಲಿ ಕಾಲ್ ಮಾಡಲು ಹೇಳುತ್ತಾನೆ. ಇದರಿಂದ ಶ್ರಾವಣಿ ಉರಿದು ಬೀಳುತ್ತಾಳೆ. ಅದರಲ್ಲೂ ಶ್ರೀವಲ್ಲಿ ಮಾತು ಕೇಳಿದ ಮೇಲೆ ಅವಳ ಕೋಪ ಇನ್ನಷ್ಟು ಹೆಚ್ಚಾಗುತ್ತದೆ. ಕಾರಿನಲ್ಲಿ ಹೋಗುವಾಗ ತನ್ನ ಶಾಲಾ ದಿನಗಳ ಬಗ್ಗೆ ಹೇಳುವ ಸುಬ್ಬು ತನಗೆ ಗೆಳೆಯರಿಗಿಂತ ಗೆಳತಿಯರೇ ಹೆಚ್ಚು ಎಂದು ಹೇಳಿ ಶ್ರಾವಣಿ ಇನ್ನಷ್ಟು ಉರಿದು ಬೀಳುವಂತೆ ಮಾಡುತ್ತಾನೆ. ಆದರೆ ಸುಬ್ಬುಗೆ ಶ್ರಾವಣಿಯ ಯಾವ ಮಾತುಗಳು ಅವಳಿಗೆ ತನ್ನ ಮೇಲೆ ಪ್ರೀತಿ ಇದೆ ಎಂಬುದು ಅರ್ಥವಾಗುವಂತೆ ಮಾಡುವುದಿಲ್ಲ.

ವರದ–ವರಲಕ್ಷ್ಮೀ ಮದುವೆ ಸಂಭ್ರಮ

ಸುಬ್ಬು ಮನೆಯಲ್ಲಿ ಹಾಗೂ ವರದನ ಮನೆಯಲ್ಲಿ ಜೋರಾಗಿರುತ್ತದೆ. ವರದನ ತಂದೆ ಮದುವೆಯಾದ ಮೇಲೆ ಹೇಗಿರಬೇಕು ಎಂದು ಮಗನಿಗೆ ಸಲಹೆ ನೀಡುತ್ತಿದ್ದರೆ, ಇಂದ್ರಮ್ಮನಿಗೆ ಮನೆಗೆಲಸಕ್ಕೆ ಸಹಾಯ ಮಾಡಲು ವರಲಕ್ಷ್ಮೀ–ಧನಲಕ್ಷ್ಮೀ ಬರುತ್ತಾರೆ. ವರಳ ಬಾಯಿಂದ ಅತ್ತೆ ಎಂದು ಕರೆಸಿಕೊಳ್ಳುವ ಇಂದ್ರಮ್ಮ, ವರದನಿಗೆ ವರಲಕ್ಷ್ಮೀ ಮೇಲೆ ಫುಲ್ ಲವ್‌. ಸುಬ್ಬು, ಪದ್ಮನಾಭ ಬಂದ ಕೂಡಲೇ ವರದ–ವರಲಕ್ಷ್ಮೀ ನಿಶ್ಚಿತಾರ್ಥ ಎಂದು ನಿರ್ಧಾರವಾಗಿರುತ್ತದೆ. 

ಸುಬ್ಬು–ಶ್ರಾವಣಿ ಹಿಂಬಾಲಿಸುತ್ತಿರುವ ರೌಡಿಗಳು

ಸುಬ್ಬು ಮೇಲೆ ಉರಿದುಕೊಳ್ಳುತ್ತಲೇ ಜೊತೆಗೆ ಬಂದಿದ್ದಕ್ಕೆ ಸಂತೋಷ ಪಡುತ್ತಿರುವ ಶ್ರಾವಣಿಗಾಗಲಿ, ಮನೆ ತಲುಪಿ ತಂಗಿ ನಿಶ್ಚಿತಾರ್ಥ ಮಾಡುವ ಸಂಭ್ರಮದಲ್ಲಿರುವ ಸುಬ್ಬುಗಾಗಲಿ ತಮ್ಮನ್ನು ರೌಡಿಗಳು ಹಿಂಬಾಲಿಸುತ್ತಿರುವ ವಿಚಾರ ತಿಳಿದಿರುವುದಿಲ್ಲ. ಆದರೆ ಟ್ರಂಕ್ ತೆಗೆದುಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದಂತೆ ರೌಡಿಗಳು ಸುಬ್ಬು–ಶ್ರಾವಣಿಯನ್ನು ಬೆಂಬಿಡದಂತೆ ಹಿಂಬಾಲಿಸಿ ಬರುತ್ತಾರೆ.

ವರದ–ವರಲಕ್ಷ್ಮೀ ನಿಶ್ಚಿತಾರ್ಥ ಸುಸೂತ್ರವಾಗಿ ನಡೆಯುತ್ತಾ, ಶ್ರಾವಣಿ ತಾಯಿಯ ಟ್ರಂಕ್‌ ರೌಡಿಗಳ ಕೈ ಸೇರುತ್ತಾ, ಶ್ರಾವಣಿಗೆ ನಿಜಕ್ಕೂ ಸುಬ್ಬು ಪ್ರೀತಿ ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲಾರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್ 

ವಂದನಾ – ಜ್ಯೋತಿ 

Whats_app_banner