ಸುಬ್ಬು ಬಯಸೋದೆ ಬೇರೆ, ಶ್ರಾವಣಿ ಮನಸ್ಸಲ್ಲಿರೋದೆ ಬೇರೆ; ಶ್ರೀವಲ್ಲಿ ಪ್ರೀತಿ ಉಳಿಸುವ ಮಾತು ಕೊಟ್ಟ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ
ಶ್ರಾವಣಿ ಮದುವೆ ಸಂಭ್ರಮವನ್ನು ಅತ್ತೆಯೊಂದಿಗೆ ಹಂಚಿಕೊಂಡು ಲಲಿತಾದೇವಿಯವರನ್ನು ಮನೆಗೆ ಆಹ್ವಾನಿಸಿದ ವೀರೇಂದ್ರ. ಸುಬ್ಬವನ್ನೇ ತಾನು ಮದುವೆಯಾಗುತ್ತಿರುವುದು ಎಂಬ ಸಂತಸದಲ್ಲಿ ತೇಲುತ್ತಿರುವ ಶ್ರಾವಣಿ. ಮಗಳ ಪ್ರೀತಿಯನ್ನು ಉಳಿಸುವುದಾಗಿ ಮಾತು ಕೊಟ್ಟ ಇಂದ್ರಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್ 25ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್ 25ರ ಸಂಚಿಕೆಯಲ್ಲಿ ಫೈಲ್ ಹಿಡಿದು ಬಂದ ಸುಬ್ಬುವಿನ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ ವೀರೇಂದ್ರ. ನಂತರ ಸುಬ್ಬು ಬಳಿ ನಿನ್ನಿಂದ ನನಗೊಂದು ಸಹಾಯ ಆಗಬೇಕು ಎಂದು ಕೇಳುತ್ತಾರೆ. ಅದಕ್ಕೆ ಸುಬ್ಬು ಏನು ಹೇಳಿ ಯಜಮಾನ್ರೆ, ನೀವು ಹೇಳಿದ್ದನ್ನು ಮಾಡದೇ ಇರೋಲ್ಲ ನಾನು, ಎಷ್ಟು ಹೊತ್ತಾದ್ರೂ ಮಾಡಿ ಮುಗಿಸ್ತೀನಿ ಎನ್ನುತ್ತಾನೆ. ಆಗ ಅದೆಲ್ಲಾ ಏನು ಬೇಡ ಶ್ರಾವಣಿ ಮದುವೆ ಬಗ್ಗೆ ಅತ್ತೆಯವರಿಗೆ ಹೇಳಬೇಕು ಅವರಿಗೆ ಕಾಲ್ ಮಾಡಿ ಕೊಡು ಎಂದು ಹೇಳುತ್ತಾರೆ. ಸುಬ್ಬು ಲಲಿತಾದೇವಿಯವರಿಗೆ ಕಾಲ್ ಮಾಡುತ್ತಾನೆ.
ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಲಲಿತಾದೇವಿ
ವೀರೇಂದ್ರ ಲಲಿತಾದೇವಿಯವರಿಗೆ ಕರೆ ಮಾಡಿ ಕ್ಷೇಮ ಸಾಮಾಚಾರ ವಿಚಾರಿಸಿದ ನಂತರ ಶ್ರಾವಣಿ ಮದುವೆ ನಿಗದಿಯಾಗಿರುವುದರ ಬಗ್ಗೆ ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಲಲಿತಾದೇವಿ ಸಂಭ್ರಮದಲ್ಲಿ ತೇಲಾಡುತ್ತಾರೆ. ಮಾತ್ರವಲ್ಲ ವೀರೇಂದ್ರ ಲಲಿತಾದೇವಿಯವರನ್ನು ತನ್ನ ಮನೆಗೆ ಆಹ್ವಾನಿಸುತ್ತಾನೆ. ಲಲಿತಾದೇವಿ ಶ್ರಾವಣಿಯನ್ನು ಮದುವೆಯಾಗುವ ಹುಡುಗ ಯಾರು ಎಂದು ಕೇಳಿದರೆ ಹೇಳದ ವೀರೇಂದ್ರ ಅವಳು ಇಷ್ಟಪಟ್ಟ ಹುಡುಗನನ್ನೇ ಮದುವೆಯಾಗುತ್ತಿದ್ದಾಳೆ. ನಾಳೆಯೇ ನೀವು ಹೊರಟು ಬನ್ನಿ, ಆಗ ನಿಮಗೆ ಎಲ್ಲಾ ವಿಚಾರ ಹೇಳ್ತೀನಿ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ. ಇತ್ತ ಮೊಮ್ಮಗಳ ಮದುವೆ ವಿಚಾರ ಕೇಳಿದ ಲಲಿತಾದೇವಿ ಖುಷಿಯಿಂದ ವೀರೇಂದ್ರನ ಮನೆಗೆ ಹೊರಡಲು ಸಿದ್ಧತೆ ನಡೆಸುತ್ತಾರೆ.
ಸುಬ್ಬುವನ್ನು ಗಂಡನ ಸ್ಥಾನದಲ್ಲಿ ನೋಡುವ ಶ್ರಾವಣಿ
ಸುಬ್ಬುವೇ ತನ್ನ ತಂದೆ ತನಗೆ ನೋಡಿರುವ ಹುಡುಗ ಎಂಬ ಭ್ರಮೆಯಲ್ಲಿ ಇರುವ ಶ್ರಾವಣಿ ಅವನನ್ನು ತನ್ನ ಗಂಡ ಎಂದು ಕಲ್ಪಿಸಿಕೊಂಡು ಸಂತಸ ಪಡುತ್ತಿರುತ್ತಾಳೆ. ಮನೆಗೆ ಹೋಗುವಾಗ ಹೇಳಿ ಹೋಗಲು ಅವರು ಸುಬ್ಬು ಬಳಿ ವಿಚಿತ್ರವಾಗಿ ಮಾತನಾಡುವ ಶ್ರಾವಣಿಯನ್ನು ನೋಡಿ ಸುಬ್ಬುಗೆ ಆಶ್ಚರ್ಯವಾಗುತ್ತದೆ. ಅಲ್ಲದೇ ಸುಬ್ಬು ಬಳಿ ‘ಸುಬ್ಬು ನಿನಗೆ ಈ ಮದುವೆ ಇಷ್ಟ ತಾನೆ, ನೀನು ಇದಕ್ಕೆ ಮನಸ್ಸಿಂದ ಒಪ್ಪಿಗೆ ನೀಡಿದ್ದೆ ಅಲ್ವಾ‘ ಎಂದು ಪ್ರಶ್ನೆ ಮಾಡುತ್ತಾಳೆ. ಸುಬ್ಬುಗೆ ಶ್ರಾವಣಿ ಮದುವೆಯಾಗುತ್ತಿರುವುದು ಸಂತಸ ತಂದಿರುತ್ತದೆ. ಸುಬ್ಬುಗೂ ಕೂಡ ಹುಡುಗ ಯಾರು ಎಂಬುದು ತಿಳಿದಿರುವುದಿಲ್ಲ. ಆ ಕಾರಣಕ್ಕೆ ಸುಬ್ಬು ಮೇಡ ನೀವು ಖುಷಿಯಾಗಿ ಇರ್ತೀರಾ ಅಂದ್ರೆ ನಂಗೂ ಖುಷಿ ಮೇಡಂ, ಒಟ್ಟಾರೆ ನೀವು ಖುಷಿಯಾಗಿ ಇರ್ಬೇಕು ಅಷ್ಟೇ ಎಂದು ಹೇಳಿ ಶ್ರಾವಣಿ ಮನಸ್ಸಿನಲ್ಲಿ ಸುಬ್ಬುಗೂ ತನ್ನನ್ನು ಮದುವೆಯಾಗುವುದು ಇಷ್ಟ ಎಂಬ ಭಾವನೆ ಬರುವಂತೆ ಮಾತನಾಡುತ್ತಾನೆ. ಆದರೆ ಸುಬ್ಬು ಮಾತಿನ ಆಶಯವೇ ಬೇರೆ, ಶ್ರಾವಣಿ ಅಂದುಕೊಂಡಿದ್ದೇ ಬೇರೆ.
ಮಗಳ ಪ್ರೀತಿಗೆ ಇಂದ್ರಮ್ಮ ಸಾಥ್
ಸುಬ್ಬು ತನ್ನ ಪ್ರೀತಿ ನಿರಾಕರಣೆ ಮಾಡಿದ ಎಂಬ ಕಾರಣಕ್ಕೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ವರ್ತಿಸುತ್ತಿದ್ದ ಮಗಳ ಹಟದ ಮುಂದೆ ಸೋಲುತ್ತಾರೆ ಇಂದ್ರಮ್ಮ. ಆಸ್ತಿ, ಅಂತಸ್ತು ಎಂದು ನೋಡಿದ ಇಂದ್ರಮ್ಮನಿಗೆ ಮಗಳಿಗೆ ಸುಬ್ಬು ಪ್ರೀತಿಯೇ ಎಲ್ಲ ಎಂಬುದು ಅರ್ಥವಾಗುತ್ತದೆ. ಶ್ರೀವಲ್ಲಿ ಬಳಿ ಬರುವ ಅವರು ನನಗೆ ನಿನ್ನ ಪ್ರೀತಿ ಅರ್ಥವಾಗಿದೆ, ನಾನು ನನ್ನ ಎಲ್ಲಾ ಪ್ರತಿಷ್ಠೆ ಬಿಗುಮಾನ ಬಿಟ್ಟು, ಸುಬ್ಬು ಕಾಲು ಹಿಡಿದಾದರೂ ನಿನ್ನ ಪ್ರೀತಿಗೆ ಒಪ್ಪಿಕೊಳ್ಳುವಂತೆ ಮಾಡುತ್ತೇನೆ. ನನಗೆ ನಿನ್ನ ಖುಷಿ ಅಷ್ಟೇ ಮುಖ್ಯ ಎಂದು ಮಾತು ಕೊಡುತ್ತಾರೆ.
ಶ್ರಾವಣಿ ಮದುವೆ ನಿಲ್ಲಿಸಲು ಕಾಂತಮ್ಮ–ಸುಂದರ ಮಾಸ್ಟರ್‌ಪ್ಲಾನ್
ಶ್ರಾವಣಿ ಸುಬ್ಬುವನ್ನೇ ಮದುವೆಯಾಗುವುದು ಎಂದು ಫಿಕ್ಸ್ ಆಗಿದ್ದ ಕಾಂತಮ್ಮ–ಸುಂದರನಿಗೆ ಶ್ರಾವಣಿ ಮದುವೆ ವಿಚಾರ ತಲೆ ಕೆಡಿಸಿದ್ದು ಸುಳ್ಳಲ್ಲ. ಈ ವಿಚಾರವಾಗಿ ಅವರು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಹೇಗಾದರೂ ಶ್ರಾವಣಿ ಮದುವೆ ನಿಲ್ಲಿಸಬೇಕು ಎಂಬ ಹಟಕ್ಕೆ ಬೀಳುತ್ತಾರೆ. ಏನು ಮಾಡೋದು ಎಂದು ಯೋಚಿಸುತ್ತಿದ್ದಾಗ ತನಗೆ ಅರಿಯದಂತೆ ಸುಂದರ ಒಂದು ಐಡಿಯಾ ಹೇಳುತ್ತಾನೆ. ಇದರಿಂದ ಕಾಂತಮ್ಮ ಇನ್ನೊಂದು ಮಾಸ್ಟರ್ ಪ್ಲಾನ್ ಮಾಡುತ್ತಾಳೆ.
ಕಾಂತಮ್ಮ–ಸುಂದರನ ಪ್ಲಾನ್ ಸಕಸ್ಸ್ ಆಗಿ ಶ್ರಾವಣಿ ಮದುವೆ ನಿಂತು ಹೋಗುತ್ತಾ, ಶ್ರಾವಣಿಗೆ ತಾನು ಮದುವೆಯಾಗುವ ಹುಡುಗ ಸುಬ್ಬ ಅಲ್ಲ ಮದನ್ ಅನ್ನೋದು ತಿಳಿಯುತ್ತಾ, ಶ್ರಾವಣಿ ಮದನ್‌ನನ್ನು ಮದುವೆಯಾಗಲು ಲಲಿತಾದೇವಿ ಒಪ್ಪುತ್ತಾರಾ, ಇಂದ್ರಮ್ಮ ಹೇಳಿದಂತೆ ಸುಬ್ಬು ಜೊತೆ ಶ್ರೀವಲ್ಲಿ ಮದುವೆಯಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.