ಅಜ್ಜಿ ಮನೆಗೆ ಬಂದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಮಾತುಕತೆ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಮನೆಗೆ ಬಂದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಮಾತುಕತೆ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಮನೆಗೆ ಬಂದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಮಾತುಕತೆ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಲಲಿತಾದೇವಿ ಮನೆಗೆ ಬರುವ ವಿಚಾರ ಎಲ್ಲರೆದುರು ಹೇಳಿದ ವೀರೇಂದ್ರ. ಶ್ರೀವಲ್ಲಿಯನ್ನು ಮದುಮಗಳಂತೆ ಅಲಂಕರಿಸಿ ವರಲಕ್ಷ್ಮೀ ಮದುವೆ ಮಾತುಕತೆಗೆ ಸುಬ್ಬು ಮನೆಗೆ ಕರೆದುಕೊಂಡ ಹೋದ ಇಂದ್ರಮ್ಮ. ಸುಂದರ–ಕಾಂತಮ್ಮನಿಗೆ ಶ್ರಾವಣಿ ಮದುವೆ ತಪ್ಪಿಸುವುದು ಹೇಗೆ ಎಂಬುದೇ ಚಿಂತೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್‌ 26ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 26ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 26ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 26ರ ಸಂಚಿಕೆಯಲ್ಲಿ ಮನೆಯವರೆಲ್ಲರನ್ನೂ ಕರೆಯುವ ವೀರೇಂದ್ರ ಅವರ ಮುಂದೆ ಲಲಿತಾದೇವಿ ಮನೆಗೆ ಬರುತ್ತಿರುವ ವಿಚಾರವನ್ನು ಹೇಳುತ್ತಾರೆ. ಇದರಿಂದ ಶ್ರಾವಣಿ ಸೇರಿ ಮನೆಯವರೆಲ್ಲಾ ಖುಷಿಯಲ್ಲಿ ಕುಣಿದಾಡಿದ್ರೆ, ವಿಜಯಾಂಬಿಕಾ ಮಾತ್ರ ಗರ ಬಡಿದವಳಂತೆ ನಿಲ್ಲುತ್ತಾಳೆ. ಅಲ್ಲದೇ ಲಲಿತಾದೇವಿ ಬಂದರೆ ಎಲ್ಲಿ ತನ್ನ ಪ್ಲಾನ್‌ಗಳೆಲ್ಲಾ ಉಲ್ಟಾ ಆಗುವುದೋ ಎಂಬ ಚಿಂತೆಯಲ್ಲಿ ವಿಜಯಾಂಬಿಕಾಗೆ ಆತಂಕ ಶುರುವಾಗುತ್ತದೆ.

ಮಗಳನ್ನು ಮನಸಾರೆ ಹೊಗಳಿದ ವೀರೇಂದ್ರ

ಲಲಿತಾದೇವಿಯವರು ಇದೇ ಮೊದಲ ಬಾರಿಗೆ ತನ್ನ ಮನೆಗೆ ಬರುತ್ತಿರುವುದು ವೀರೇಂದ್ರಗೆ ಬಹಳ ಸಂತೋಷ ತಂದಿರುತ್ತದೆ. ಆ ಕಾರಣಕ್ಕೆ ಅವರು ವಂದನಾ ಬಳಿ ಅವರ ಊಟ, ತಿಂಡಿಯಿಂದ ಹಿಡಿದು ಎಲ್ಲಾವನ್ನೂ ನೀನೇ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ. ಆಗ ಶ್ರಾವಣಿ ಇದ್ದಕ್ಕಿದ್ದಂತೆ ‘ನೀವೇನೂ ಚಿಂತೆ ಮಾಡ್ಬೇಡಿ ಅಪ್ಪಾ, ನಾನು ಎಲ್ಲವನ್ನೂ ನೋಡಿಕೊಳ್ತೀನಿ‘ ಅಂತ ಒಂದೇ ಉಸಿರಿಗೆ ಹೇಳುತ್ತಾಳೆ. ಇದರಿಂದ ಒಮ್ಮೆ ಎಲ್ಲರೂ ವೀರೇಂದ್ರ ಶ್ರಾವಣಿಗೆ ಬಯ್ಯಬಹುದು ಎಂದು ಗಾಬರಿಯಾಗುತ್ತಾರೆ. ಆದರೆ ವೀರೇಂದ್ರ ಶ್ರಾವಣಿಯನ್ನು ಮುಂದೆ ಕರೆದು ‘ನಾನು ಅತ್ತೆಯವರು ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವರು ಮತ್ತೆ ನನ್ನನ್ನು ಕ್ಷಮಿಸಿ, ನಮ್ಮನ್ನು ಮನೆಗೆ ಕರೆದು ಆಧರಿಸಿದ್ದರು. ಅದಕ್ಕೆಲ್ಲಾ ಕಾರಣ ನೀನೇ ಕಣಮ್ಮ ಶ್ರಾವಣಿ. ಅತ್ತೆಯವರು ಈ ಮನೆಗೆ ಬರಲು ಕೂಡ ನಿನ್ನ ಮದುವೆಯೇ ಕಾರಣ. ಹಾಗಾಗಿ ನಿನಗೆ ನಾನು ಎಷ್ಟು ಕೃತಜ್ಞತೆ ಹೇಳಿದ್ರು ಸಾಲುವುದಿಲ್ಲ, ನನ್ನ ಇಂದಿನ ಈ ಖುಷಿಗೆ ನೀನೇ ಕಾರಣ‘ ಎಂದು ಮನಸಾರೆ ಹೊಗಳುತ್ತಾರೆ. ಇದನ್ನು ಕೇಳಿದ ವಂದನಾ, ಸುರೇಂದ್ರ, ಶ್ರಾವಣಿ, ಪಿಂಕಿಗೆ ತುಂಬಾನೇ ಖುಷಿಯಾಗುತ್ತದೆ. ಆದರೆ ಅಪ್ಪ–ಮಗಳು ಒಂದಾಗುವುದನ್ನು ಸಹಿಸದ ವಿಜಯಾಂಬಿಕಾ ಮಾತ್ರ ‘ಏ ಶ್ರಾವಣಿ, ಮದನ್ ಜೊತೆ ನಿನ್ನ ಮದುವೆಯೊಂದು ಆಗಿ ಬಿಡಲಿ. ಉಳಿದದ್ದು ನಾನು ಆಮೇಲೆ ನೋಡಿಕೊಳ್ಳುತ್ತೇನೆ‘ ಎಂದು ಶ್ರಾವಣಿ ಬದುಕನ್ನೇ ನಾಶ ಮಾಡುವ ಪಟ ತೊಟ್ಟವಳಂತೆ ಮಾತನಾಡುತ್ತಾಳೆ.

ವರದ–ವರಲಕ್ಷ್ಮೀ ಮದುವೆ ಮಾತುಕತೆ

ಶ್ರೀವಲ್ಲಿ ಮನೆಯಲ್ಲಿ ವರದನ ಮದುವೆ ಮಾತುಕತೆ ಸಂಭ್ರಮ ತುಂಬಿರುತ್ತದೆ. ಮಂಕಾಗಿದ್ದ ಮಗಳಿಗೆ ಸುಬ್ಬವನ್ನೇ ಮದುವೆ ಮಾಡಿಸುತ್ತೇನೆ ಎಂದು ಮಾತು ಕೊಟ್ಟ ಇಂದ್ರಮ್ಮ ಮದುವೆ ಮಾತುಕತೆಗೆ ಹೋಗಲು ಮಗಳನ್ನು ಮದುಮಗಳಂತೆ ಅಲಂಕಾರ ಮಾಡಿಕೊಂಡು ಕರೆದುಕೊಂಡು ಹೋಗುತ್ತಾರೆ. ವರದ, ಇಂದ್ರಮ್ಮ, ಇಂದ್ರಮ್ಮನ ತಂಗಿ, ವರದನ ಅಪ್ಪ, ವರಲಕ್ಷ್ಮೀ ಎಲ್ಲರೂ ಸುಬ್ಬು ಮನೆ ಮುಂದೆ ನಿಲ್ಲುತ್ತಾರೆ. ಶ್ರೀವಲ್ಲಿ ಸುಬ್ಬು–ತಂದೆ ತಾಯಿಯನ್ನು ಅತ್ತೆ–ಮಾವ ಎಂದು ಕರೆದು ಮನೆಯೊಳಗೆ ಹೋಗುತ್ತಾಳೆ. ಸುಬ್ಬು ಮನೆಯಲ್ಲಿ ವರಲಕ್ಷ್ಮೀ ಮದುವೆಗೆ ಮಾತುಕತೆ ಸಿದ್ಧತೆ ನಡೆದಿರುತ್ತದೆ.

ಕಾಂತಮ್ಮ, ಸುಂದರನ ಪ್ಲಾನ್ ಪ್ಲಾಪ್

ಹೇಗಾದರೂ ಮಾಡಿ ಶ್ರಾವಣಿ ಮದುವೆ ನಿಲ್ಲಿಸಬೇಕು ಎಂದು ಹಟ ತೊಡುವ ಕಾಂತಮ್ಮ, ಸುಂದರ ಯಾವುದೋ ಸ್ವಾಮೀಜಿ ಹೆಸರು ಹೇಳಿಕೊಂಡು ಶ್ರಾವಣಿಗೆ ಕಾಲ್ ಮಾಡುತ್ತಾರೆ. ಶ್ರಾವಣಿಯ ಪ್ರೀತಿಯ ಬ‌ಗ್ಗೆಲ್ಲಾ ಮಾತನಾಡುವ ಅವರು ನಿನ್ನ ಮದುವೆಯಲ್ಲಿ ಕಂಟಕ ಎದುರಾಗುತ್ತದೆ ಎನ್ನುತ್ತಾರೆ. ಆದರೆ ಶ್ರಾವಣಿ ಯಾರೋ ತನ್ನ ಸ್ನೇಹಿತರು ಫ್ರಾಂಕ್‌ ಮಾಡುತ್ತಿದ್ದಾರೆ ಎಂದುಕೊಂಡು ನಾನು ಮದುವೆಯಾಗುತ್ತಿರುವುದು ನಾನು ಪ್ರೀತಿಸುವ ಹುಡುಗ ಜೊತೆಯಲ್ಲಿ, ಭೂಮಿ ತಲೆ ಕೆಳಗಾದ್ರೂ ನಾನು ಪ್ರೀತಿಸುವ ಹುಡುಗನನ್ನೇ ಮದುವೆಯಾಗುತ್ತೇನೆ. ಇನ್ನು ಮುಂದೆ ಏನಾದ್ರೂ ಸ್ವಾಮೀಜಿ ಅದು ಇದು ಹೇಳಿಕೊಂಡು ಕಾಲ್ ಮಾಡಿದ್ರೆ ನಿಮ್ ನಂಬರ್ ಟ್ರೇಸ್ ಮಾಡಿ ಪೊಲೀಸರಿಗೆ ಹಿಡಿದು ಕೊಡುತ್ತೇನೆ ಎಂದು ಹೆದರಿಸುತ್ತಾಳೆ. ಇದರಿಂದ ಗಾಬರಿಯಾಗುವ ಕಾಂತಮ್ಮ–ಸುಂದರ ಥಟ್ಟಂತ ಕಾಲ್ ಕಟ್ ಮಾಡುತ್ತಾರೆ. ನಮ್ಮ ಪ್ಲಾನ್ ಪ್ಲಾಪ್ ಆದ್ರೂ ಶ್ರಾವಣಿ ಪ್ರೀತಿಸಿದ ಹುಡುಗನನ್ನೇ ಮದುವೆ ಆಗುತ್ತೇನೆ ಎಂದಿದ್ದು ಅವರಿಗೆ ಸಮಾಧಾನ ತಂದಿರುತ್ತದೆ.

‌ಅಜ್ಜಿ ಮನೆಗೆ ಬಂದ ಖುಷಿಯಲ್ಲಿ ಶ್ರಾವಣಿ

ಮೊದಲೇ ಹೇಳಿದಂತೆ ನರಸಯ್ಯನವರ ಜೊತೆಗೆ ವೀರು ಮನೆಗೆ ಬರುತ್ತಾರೆ ಲಲಿತಾದೇವಿ. ಮೊದಲಿಗೆ ಅವರ ಕಣ್ಣಿಗೆ ಮದನ್ ಕಾಣಿಸುತ್ತಾನೆ. ಅವನು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಾಗ ನೀನ್ಯಾರು ಗೊತ್ತಾಗಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಅವನು ನಾನು ವಿಜಯಾಂಬಿಕಾ ಮಗ ಎಂದಾಗ ಲಲಿತಾದೇವಿಯ ಮುಖಭಾವ ಬದಲಾಗುತ್ತದೆ. ಕೊನೆಗೆ ಎಲ್ಲರೂ ಹಾಲ್‌ಗೆ ಬಂದು ಲಲಿತಾದೇವಿಯವರ ಆಶೀರ್ವಾದ ಪಡೆಯುತ್ತಾರೆ. ಶ್ರಾವಣಿಗಂತೂ ಅಜ್ಜಿಯನ್ನು ನೋಡಿ ಸ್ವರ್ಗ ಸಿಕ್ಕಷ್ಟು ಖುಷಿಯಾಗುತ್ತದೆ.

ಲಲಿತಾದೇವಿಯವರಿಗೆ ಶ್ರಾವಣಿ ಮದುವೆಯಾಗುವ ಹುಡುಗ ಮದನ್ ಎನ್ನುವುದು ತಿಳಿಯುತ್ತಾ, ಸುಬ್ಬು ಮನೆಗೆ ಹೋದ ಇಂದ್ರಮ್ಮ ಶ್ರೀವಲ್ಲಿ ಮದುವೆ ಬಗ್ಗೆ ಮಾತನಾಡುತ್ತಾರಾ, ಶ್ರಾವಣಿ–ಶ್ರೀವಲ್ಲಿ ಸುಬ್ಬು ಯಾರ ಪಾಲಿಗೆ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

Whats_app_banner