ಶ್ರೀವಲ್ಲಿ ಜತೆ ಸುಬ್ಬು ಮದುವೆ ಮಾಡಿಕೊಡಿ ಎಂದ ಇಂದ್ರಮ್ಮ, ಶ್ರಾವಣಿ ಮನೆಯಲ್ಲಿ ಅಪ್ಪ–ಮಗಳ ಭಾವುಕ ಕ್ಷಣ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀವಲ್ಲಿ ಜತೆ ಸುಬ್ಬು ಮದುವೆ ಮಾಡಿಕೊಡಿ ಎಂದ ಇಂದ್ರಮ್ಮ, ಶ್ರಾವಣಿ ಮನೆಯಲ್ಲಿ ಅಪ್ಪ–ಮಗಳ ಭಾವುಕ ಕ್ಷಣ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರೀವಲ್ಲಿ ಜತೆ ಸುಬ್ಬು ಮದುವೆ ಮಾಡಿಕೊಡಿ ಎಂದ ಇಂದ್ರಮ್ಮ, ಶ್ರಾವಣಿ ಮನೆಯಲ್ಲಿ ಅಪ್ಪ–ಮಗಳ ಭಾವುಕ ಕ್ಷಣ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಕಾಲು ಮುಟ್ಟಿ ನಮಸ್ಕರಿಸಲು ಬಂದ ವಿಜಯಾಂಬಿಕಾ ಮೇಲೆ ಮುನಿಸಿಕೊಂಡ ಲಲಿತಾದೇವಿ. ಮಗಳ ಮದುವೆ ಸಂದರ್ಭ ಅಪ್ಪ ಹೇಗಿರಬೇಕು ಎಂದು ಅಳಿಯನಿಗೆ ಅತ್ತೆಯ ಪಾಠ. ಮಗನ ಮದುವೆ ದಿನ ನಾಲ್ಕು ಹಸೆಮಣೆ ಇರಬೇಕು ಎಂದು ಹೇಳಿ, ಶ್ರೀವಲ್ಲಿ ಜತೆ ಸುಬ್ಬು ಮದುವೆ ಮಾಡಿಕೊಡಿ ಎಂದು ಕೇಳಿದ ಇಂದ್ರಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್‌ 27ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 27ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 27ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 27ರ ಸಂಚಿಕೆಯಲ್ಲಿ ಲಲಿತಾದೇವಿಯವರು ತಿಂಡಿ ತಿನ್ನಲು ಡೈನಿಂಗ್ ಹಾಲ್ ಬಳಿ ಬರುತ್ತಾರೆ. ಅವರು ಕುಳಿದ್ದನ್ನು ನೋಡಿ ಎಲ್ಲರೂ ನಿಂತೇ ಇರುತ್ತಾರೆ. ವೀರೇಂದ್ರ ಕೂಡ ಕುಳಿತುಕೊಳ್ಳುವುದಿಲ್ಲ. ಆಗ ಲಲಿತಾದೇವಿ ‘ಬನ್ನಿ, ಎಲ್ಲರೂ ಕುಳಿತುಕೊಳ್ಳಿ‘ ಎಂದಾಗ ‘ಬೇಡ ಅತ್ತೆಯವರೇ, ನಿಮ್ಮ ತಿಂಡಿ ಆಗಲಿ. ಆಮೇಲೆ ನಾವು ತಿನ್ನುತ್ತೇವೆ‘ ಎಂದು ವಿಧೇಯತೆಯಿಂದ ಹೇಳುತ್ತಾರೆ ವೀರೇಂದ್ರ. ಆಗ ಲಲಿತಾದೇವಿ ‘ಪರ್ವಾಗಿಲ್ಲ, ನೀನೇ ಹೇಳಿದ್ದಲ್ವಾ ವೀರು, ಎಲ್ಲರೂ ಒಟ್ಟಿಗೆ ತಿಂಡಿ ತಿನ್ನೋಣ ಎಂದು. ಎಲ್ಲರೂ ಬನ್ನಿ ಒಟ್ಟಿಗೆ ತಿನ್ನೋಣ‘ ಎಂದು ಎಲ್ಲರನ್ನೂ ಡೈನಿಂಗ್‌ ಟೇಬಲ್‌ಗೆ ಕರೆಯುತ್ತಾರೆ. ತಿಂಡಿಗೆ ಕುಳಿತಾಗ ವಿಜಯಾಂಬಿಕಾ ಬಂದು ಲಲಿತಾದೇವಿ ಕಾಲು ಮುಟ್ಟಿ ನಮಸ್ಕರಿಸಲು ಬರುತ್ತಾಳೆ. ಆಗ ಲಲಿತಾದೇವಿ ಇರುಸುಮುರಿಸು ಮಾಡಿಕೊಳ್ಳುತ್ತಾರೆ. ವಿಧಿಯಿಲ್ಲದೇ ಚೆನ್ನಾಗಿರು ಎಂದು ಆಶೀರ್ವಾದ ಮಾಡುತ್ತಾರೆ. ಎಲ್ಲರಿಗೂ ತಿಂಡಿ ಬಡಿಸಿ ಇನ್ನೇನು ತಿನ್ನಲು ಶುರು ಮಾಡಬೇಕು ಎಂದುಕೊಂಡಾಗ ಲಲಿತಾದೇವಿ ವೀರು ಕೈ ಹಿಡಿದು ತಡೆಯುತ್ತಾರೆ.

ಮದುವೆ ಗೊತ್ತಾದ ಮಗಳ ಜೊತೆ ಹೇಗಿರಬೇಕು ಎಂದು ಲಲಿತಾದೇವಿ ಪಾಠ

ವೀರು ಕೈ ಹಿಡಿದು ತಡೆದ ಲಲಿತಾದೇವಿ ತನ್ನ ಹಿಂದಿನ ದಿನಗಳನ್ನು ನೆನೆಯುತ್ತಾರೆ. ನನ್ನ ಮಗಳು ತನಗೆ ಇಷ್ಟವಿಲ್ಲದೇ ವೀರುವನ್ನು ಮದುವೆಯಾಗಿದ್ದು, ಅವರು ಮನೆಗೆ ಬಂದಾಗ ಕೋವಿ ಹಿಡಿದು ಈ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹಟ ಮಾಡಿದ್ದು, ಮಗಳನ್ನು ಸತ್ಕರಿಸದೇ ಇದಿದ್ದು, ಎಲ್ಲವನ್ನೂ ಹೇಳುತ್ತಾರೆ. ಅಲ್ಲದೇ ವೀರೇಂದ್ರನಿಗೆ ಮದುವೆ ಗೊತ್ತಾದ ಮಗಳ ಜೊತೆ ಪೋಷಕರು ಹೇಗಿರಬೇಕು ಎಂಬ ಪಾಠವನ್ನು ಹೇಳುತ್ತಾರೆ. ಹುಟ್ಟಿದಾಗಿನಿಂದ ಅಪ್ಪನ ಜೊತೆ ಖುಷಿಯಾಗಿ ಇದ್ದ ಮಗಳು ಗಂಡನ ಮನೆಗೆ ಹೋಗುವ ಸಂದರ್ಭ ಅಪ್ಪ ಇನ್ನಷ್ಟು ಪ್ರೀತಿ ಕೊಡಬೇಕು. ಮಗಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅಳಿಯನಿಗೆ ಮಗಳ ಜೊತೆ ಹೇಗಿರಬೇಕು ಎಂದು ಹೇಳುತ್ತಾರೆ. ಇದನ್ನ ಕೇಳಿದ ಶ್ರಾವಣಿ ಹಾಗೂ ವೀರೇಂದ್ರ ಕಣ್ಣಲ್ಲಿ ಅರಿಯದೇ ಕಣ್ಣೀರು ಜಿನುಗುತ್ತದೆ.

ಪ್ರೇಕ್ಷಕರಿಗೆ ಕಣ್ಣೀರು ತರಿಸಿದ ಅಪ್ಪ–ಮಗಳ ಭಾವುಕ ಕ್ಷಣ

ಹುಟ್ಟಿದಾಗಿನಿಂದ ಶ್ರಾವಣಿಯನ್ನು ದ್ವೇಷ ಮಾಡುತ್ತಲೇ ಬಂದಿದ್ದ ವೀರೇಂದ್ರ ಇದೀಗ ಅತ್ತೆಯ ಮಾತು ಕೇಳಿ ಕರಗುತ್ತಾರೆ. ಅತ್ತೆಯವರ ಆಣತಿಯಂತೆ ಮಗಳಿಗೆ ಕೈ ತುತ್ತು ತಿನ್ನಿಸಲು ಮುಂದೆ ಬರುತ್ತಾರೆ. ಆಗ ಅವರ ಕಣ್ಣಲ್ಲೂ ನೀರು ಜಿನುಗುತ್ತಿರುತ್ತದೆ. ಜೀವನದಲ್ಲಿ ಎಂದಿಗೂ ಅಪ್ಪನ ಕೈತುತ್ತು ತಿನ್ನದ ಶ್ರಾವಣಿ ಅಳುತ್ತಲೇ ಹಿಂಜರಿಕೆ ಮಾಡುತ್ತಾಳೆ. ಆದರೆ ವೀರೇಂದ್ರ ಕಣ್ಸನ್ನೆ ಮಾಡಿ ತಿನ್ನು ಎನ್ನುವಂತೆ ಹೇಳುತ್ತಾರೆ. ಇದರಿಂದ ಶ್ರಾವಣಿ ಹೃದಯ ಭಾರವಾಗಿ ಕಣ್ಣೀರು ಹರಿಯುತ್ತದೆ. ಲಲಿತಾದೇವಿ ಕೂಡ ಶ್ರಾವಣಿಗೆ ಒಂದು ತುತ್ತು ತಿನ್ನಿಸುತ್ತಾರೆ. ವಂದನಾ ಕೂಡ ತನ್ನ ಪಾಲಿನ ಒಂದು ತುತ್ತು ತಿನ್ನಿಸಿದಾಗ ಮದನ್ ವಿಜಯಾಂಬಿಕಾಗೆ ಕಣ್ಸನ್ನೆ ಮಾಡಿ ನೀನು ತಿನ್ನಿಸು ಎಂದು ಹೇಳುತ್ತಾನೆ. ಆಗ ವಿಜಯಾಂಬಿಕಾ ಬೇರೆ ದಾರಿ ಕಾಣದೆ ತಾನು ತಿನ್ನಿಸಲು ಮುಂದಾದಾಗ ಕೋಪಗೊಳ್ಳುವ ಲಲಿತಾದೇವಿ ‘ಸಾಕು, ಇದೇನು ಮಕ್ಕಳಾಟವೇ ಎಲ್ಲರೂ ತುತ್ತು ತಿನ್ನಿಸೋಕೆ. ಅವಳ ಪಾಡಿಗೆ ಅವಳನ್ನು ತಿನ್ನಲು ಬಿಡಿ‘ ಎಂದು ಜೋರು ಮಾಡುತ್ತಾರೆ. ಇದರಿಂದ ವಿಜಯಾಂಬಿಕಾಗೆ ಮುಖಭಂಗವಾಗುತ್ತದೆ.

ವರದ–ವರಲಕ್ಷ್ಮೀ ಮದುವೆಯಲ್ಲಿ ಸುಬ್ಬು–ಶ್ರೀವಲ್ಲಿ ಮದುವೆ

ಸುಬ್ಬು ಮನೆಗೆ ಮದುವೆ ಮಾತುಕತೆಗೆಂದು ಬಂದ ಇಂದ್ರಮ್ಮ ಮದುವೆ ಬಗ್ಗೆ ಎಲ್ಲಾ ಮಾತು, ಅವರ ಬೇಡಿಕೆಗಳನ್ನ ಹೇಳುತ್ತಾರೆ. ಅದಕ್ಕೆಲ್ಲಾ ಸುಬ್ಬು ಮನೆಯವರು ಒಪ್ಪಿಕೊಂಡಾಗ ಕೊನೆಯಲ್ಲಿ ಇನ್ನೊಂದು ಷರತ್ತಿನಂತಹ ಮಾತು ಹೇಳುತ್ತಾರೆ. ಅದನ್ನು ಕೇಳಿ ಸುಬ್ಬು ನಿಂತಲ್ಲೇ ನಡುಗಿದ್ರೆ, ಪದ್ಮನಾಭ ದಾರಿ ಕಾಣದೇ ಕಂಗಾಲಾಗುತ್ತಾರೆ. ಇಂದ್ರಮ್ಮ– ಸುಂದರ ಅಂತೂ ಬೆಟ್ಟವೇ ತಲೆ ಮೇಲೆ ಬಿದ್ದವರಂತೆ ನಿಂತಿರುತ್ತಾರೆ. ಆದರೆ ಉಳಿದವರೆಲ್ಲಾ ಖುಷಿಯಲ್ಲಿ ಸಂಭ್ರಮಿಸುತ್ತಾರೆ. ಇಂದ್ರಮ್ಮ ಸುಬ್ಬು ಮನೆಯವರ ಬಳಿ ‘ಈ ಮದುವೆಯಲ್ಲಿ ಒಂದಲ್ಲ ಎರಡು ಮದುವೆ ನಡೆಯುಬೇಕು, ಎರಡಲ್ಲ 4 ಹಸೆಮಣೆ ಇರಬೇಕು‘ ಎಂದು ಹೇಳುವುದು ಕೇಳಿ ಆರಂಭದಲ್ಲಿ ಸುಬ್ಬು ಮನೆಯವರಿಗೆ ಅರ್ಥವಾಗುವುದಿಲ್ಲ. ಕೊನೆಗೆ ಇಂದ್ರಮ್ಮ ‘ನಿಮ್ಮ ಸುಬ್ಬುವನ್ನು ಶ್ರೀವಲ್ಲಿ ಜೊತೆ ಮದುವೆ ಮಾಡಿ ಕೊಡಬೇಕು. ಅದರಲ್ಲೂ ಒಂದೇ ದಿನ, ಒಂದೇ ಮಂಟಪದಲ್ಲಿ ಈ ಎರಡೂ ಮದುವೆ ಆಗಬೇಕು‘ ಎಂದು ಹಟ ಹಿಡಿದವರಂತೆ ಹೇಳುತ್ತಾರೆ. ಆಗ ಪದ್ಮನಾಭ ‘ನೀವು ನಿಮ್ಮ ಮಕ್ಕಳನ್ನು ಎಷ್ಟು ಆಸೆ, ಪ್ರೀತಿಯಿಂದ ಸಾಕಿದ್ದಿರೋ, ನಾವು ನಮ್ಮ ಮಗನನ್ನು ಅಷ್ಟೇ ಪ್ರೀತಿ, ಒತ್ತಾಸೆಯಿಂದ ಸಾಕಿದ್ದೇವೆ. ಅವನಿಗೂ ಅವನದೇ ಆದ ಆಸೆ ಇದೆ. ಅದಕ್ಕೆ ನಾವು ಅಡ್ಡಿಪಡಿಸಬಾರದು ಇಂದ್ರಮ್ಮನವರೇ‘ ಎಂದು ಅವನಿಗೆ ಶ್ರೀವಲ್ಲಿ ಮದುವೆಯಾಗುವುದು ಇಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಾರೆ.

ಸುಬ್ಬು ಜೊತೆ ಶ್ರೀವಲ್ಲಿ ಮದುವೆಯಾಗಲೇಬೇಕು ಎಂದು ಇಂದ್ರಮ್ಮ ಹಟ ಹಿಡಿಯುತ್ತಾರಾ, ಸುಬ್ಬು ತಂಗಿಗೋಸ್ಕರ ಶ್ರೀವಲ್ಲಿಯನ್ನು ಮದುವೆಯಾಗಲು ಒಪ್ಪಿಗೆ ನೀಡ್ತಾನಾ, ಶ್ರಾವಣಿಗೆ ತನಗೆ ಅಪ್ಪ ಫಿಕ್ಸ್ ಮಾಡಿದ ಹುಡುಗ ಸುಬ್ಬು ಅಲ್ಲಾ ಮದನ್ ಎಂದು ತಿಳಿದರೆ ಏನು ಮಾಡಬಹುದು, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner