ಸುಬ್ಬು–ಶ್ರೀವಲ್ಲಿ, ಶ್ರಾವಣಿ–ಮದನ್ ಮದುವೆ ದಿನಾಂಕ ಫಿಕ್ಸ್‌, ಎರಡೂ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು–ಶ್ರೀವಲ್ಲಿ, ಶ್ರಾವಣಿ–ಮದನ್ ಮದುವೆ ದಿನಾಂಕ ಫಿಕ್ಸ್‌, ಎರಡೂ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು–ಶ್ರೀವಲ್ಲಿ, ಶ್ರಾವಣಿ–ಮದನ್ ಮದುವೆ ದಿನಾಂಕ ಫಿಕ್ಸ್‌, ಎರಡೂ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಊರಿನವರ ಬಗ್ಗೆ, ಸಾವಿತ್ರಿ ಬಗ್ಗೆ ವೀರೇಂದ್ರ ಜೊತೆ ಮಾತನಾಡುವ ನರಸಯ್ಯ. ಶ್ರಾವಣಿ–ಮದನ್‌, ಸುಬ್ಬು–ಶ್ರೀವಲ್ಲಿ, ವರದ–ವರಲಕ್ಷ್ಮೀ ಮದುವೆಗೆ ಡೇಟ್ ಫಿಕ್ಸ್. ಸುಬ್ಬು–ಶ್ರಾವಣಿ ಮದುವೆಗೆ ಒಂದೇ ದಿನದ ವ್ಯತ್ಯಾಸ. ಎರಡೂ ಮನೆಯಲ್ಲಿ ಮದುವೆಯ ಸಂಭ್ರಮ ಜೋರು. ಆದರೆ ಸುಬ್ಬು ಮಾತ್ರ ನಿರ್ಲಿಪ್ತ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 1ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 1ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 1ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 1ರ ಸಂಚಿಕೆಯಲ್ಲಿ ನರಸಯ್ಯನವರು ಹಾಗೂ ವೀರೇಂದ್ರ ಸಾಲಿಗ್ರಾಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಊರಿನ ಜನರು ವೀರೇಂದ್ರನನ್ನು ಯಜಮಾನರ ಪ್ರತಿರೂಪ ಎಂದು ಹೇಳುತ್ತಿರುವುದು, ವೀರೇಂದ್ರ ಊರಿನವರ ಜೊತೆ ನಡೆದುಕೊಂಡಿರುವ ರೀತಿ ಅವರಿಗೆಲ್ಲಾ ಮೆಚ್ಚುಗೆಯಾಗಿರುವುದು ಇದನ್ನೆಲ್ಲಾ ವೀರೇಂದ್ರನ ಮುಂದೆ ಹೇಳುತ್ತಾರೆ ನರಸಯ್ಯ. ಮಾತಿನ ಮಧ್ಯೆ ವೀರೇಂದ್ರ ಸಾವಿತ್ರಿಯ ಬಗ್ಗೆಯೂ ಕೇಳುತ್ತಾನೆ. ಆಗ ನರಸಯ್ಯ ‘ಆಕೆ ಎರಡು ಬಾರಿ ಮನೆಗೆ ಬಂದಿದ್ದಳು, ಒಮ್ಮೆ ನಿನ್ನನ್ನು ಶ್ರಾವಣಿ ಅಮ್ಮನನ್ನು ನೋಡಲು ಬೆಂಗಳೂರಿಗೆ ಬರುತ್ತೇನೆ ಎಂದು ಹೊರಟಿದ್ದಳು, ಸದ್ಯಕ್ಕೆ ಹೋಗೋದು ಬೇಡ ಅಂತ ಹೇಳಿ ನಾವೇ ಅವಳನ್ನು ತಡೆದಿದ್ದೆವು‘ ಎಂದು ಹೇಳಿ ಸಾಲಿಗ್ರಾಮ ಹಾಗೂ ಸಾವಿತ್ರಿಯ ಬಗ್ಗೆ ಮಾತನಾಡುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಸುರೇಂದ್ರ ಬರುತ್ತಾನೆ.

ಸುಬ್ಬು ಮನೆಯಲ್ಲಿ ಶ್ರೀವಲ್ಲಿ ದರ್ಬಾರ್

ಸುಬ್ಬು ಹಾಗೂ ವರಲಕ್ಷ್ಮೀ ಮದುವೆ ಗೊತ್ತಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ. ವಿಶಾಲಾ‌ಕ್ಷಿ, ಧನಲಕ್ಷ್ಮೀ, ವರಲಕ್ಷ್ಮೀ ಅಡುಗೆಮನೆಯಲ್ಲಿ ಸೇರಿಕೊಂಡು ಮಾತನಾಡುತ್ತಿರುತ್ತಾರೆ. ಆ ಹೊತ್ತಿಗೆ ಅಲ್ಲಿಗೆ ಬರುವ ಶ್ರೀವಲ್ಲಿ ತಾನು ಪಾಯಸ ಮಾಡುತ್ತೇನೆ ಎನ್ನುತ್ತಾಳೆ. ‘ನೀನು ಮನೆಯಿಂದ ಪಾಯಸ ಮಾಡಿ ತರ್ತೀಯಾ‘ ಅಂತ ಧನಲಕ್ಷ್ಮೀ ಕೇಳಿದ್ದಕ್ಕೆ ಶ್ರೀವಲ್ಲಿ ‘ಅಯ್ಯೋ ಇಲ್ಲಪ್ಪಾ, ನಾನು ನನ್ನ ಮನೆಯಲ್ಲಿ ಅಂದ್ರೆ ಈ ಮನೆಯಲ್ಲೇ ಪಾಯಸ ಮಾಡ್ತೀನಿ‘ ಅಂತ ಹೇಳಿ ನಾಚಿಕೊಳ್ಳುತ್ತಾಳೆ. ಮದುವೆಗೆ ಮೊದಲೇ ಅವಳು ಇದು ತನ್ನ ಮನೆ ಅಂದುಕೊಳ್ಳುತ್ತಿರುವುದಕ್ಕೆ ಧನಲಕ್ಷ್ಮೀ, ವರಲಕ್ಷ್ಮೀ ಆಡಿಕೊಂಡು ನಗುತ್ತಿರುತ್ತಾರೆ. ಒಟ್ಟಾರೆ ಆ ಮನೆಯಲ್ಲಿ ಮದುವೆ ಸಂಭ್ರಮ ತುಂಬಿರುತ್ತದೆ.  

ಶ್ರಾವಣಿ ಮದುವೆಗೆ ಡೇಟ್ ಫಿಕ್ಸ್

ಇತ್ತ ಶ್ರಾವಣಿ ಮದುವೆ ಮುಹೂರ್ತ ಕೇಳಲು ಹೋದ ಸುರೇಂದ್ರ ಮದುವೆ ಡೇಟ್ ಫಿಕ್ಸ್ ಮಾಡಿಕೊಂಡು ಬಂದಿರುತ್ತಾನೆ. ಶ್ರಾವಣಿ ಹಾಗೂ ಮದನ್ ಮದುವೆಗೆ 27ನೇ ತಾರೀಕು ಫಿಕ್ಸ್ ಆಗಿರುತ್ತದೆ. ಶ್ರಾವಣಿ ಮದುವೆ ದಿನಾಂಕ ಗೊತ್ತು ಮಾಡಿಕೊಂಡು, ಮದುವೆ ಕಾಗದ ಬರೆಸಿಕೊಂಡು ಬಂದಿರುತ್ತಾನೆ ಸುರೇಂದ್ರ. ಅದನ್ನು ವೀರೇಂದ್ರ ಹಾಗೂ ನರಸಯ್ಯನವರ ಮುಂದೆ ಹೇಳುತ್ತಾನೆ. ಮದುವೆ ಕಾಗದದಲ್ಲಿ ಲಲಿತಾದೇವಿ ಹಾಗೂ ಗಂಗಾಧರಯ್ಯನವರ ಹೆಸರೇ ಮೊದಲು ಬರಬೇಕು ಎಂದು ವೀರೇಂದ್ರ ತಿದ್ದುಪಡಿ ಹೇಳುತ್ತಾನೆ. ಅಲ್ಲದೇ ನರಸಯ್ಯನವರ ಬಳಿ ಸಾಲಿಗ್ರಾಮದಿಂದ ಮದುವೆಗೆ ಯಾರು ಯಾರನ್ನ ಕರಿಬೇಕು ಅಂತ ಪಟ್ಟಿ ಕೊಡಿ ಎಂದು ಕೂಡ ಕೇಳುತ್ತಾನೆ.

ಸುಬ್ಬು ಮದುವೆಗೂ ದಿನಾಂಕ ಗೊತ್ತು 

ಇತ್ತ ಶ್ರಾವಣಿ ಮದುವೆಗೆ ದಿನಾಂಕ ಗೊತ್ತಾಗಿದ್ದರೆ, ಅತ್ತ ಸುಬ್ಬು ಮದುವೆಗೂ ಡೇಟ್ ಫಿಕ್ಸ್ ಆಗಿರುತ್ತದೆ. ಜೋಯಿಸರ ಬಳಿ ಹೋಗಿ ದಿನಾಂಕ ಗೊತ್ತು ಮಾಡಿಕೊಂಡು ಬಂದ ಇಂದ್ರಮ್ಮನ ಗಂಡ ಶಂಕರ, ಅದನ್ನು ಹೇಳಲು ಸುಬ್ಬು ಮನೆಗೆ ಬರುತ್ತಾರೆ. ಸುಬ್ಬು–ಶ್ರೀವಲ್ಲಿ ಹಾಗೂ ವರದ–ವರಲಕ್ಷ್ಮೀ ಮದುವೆಗೆ 27ನೇ ತಾರೀಕು ಫಿಕ್ಸ್ ಆಗಿರುವುದನ್ನು ಹೇಳುತ್ತಾರೆ. ಆವೇಳೆ ಶ್ರೀವಲ್ಲಿ ಸುಬ್ಬು ಮನೆಯಲ್ಲಿ ಇರುವುದು ನೋಡಿ ‘ಏನಮ್ಮಾ ಶ್ರೀವಲ್ಲಿ ಮದುವೆ ಆಗುವವರೆಗಾದರೂ ನಮ್ಮ ಮನೆಯಲ್ಲಿ ಇರು, ಆಮೇಲೆ ನೀನು ಈ ಮನೆಯಲ್ಲಿ ಇರುವುದು ಇದ್ದಿದ್ದೇ, ಈಗ ನಮ್ಮನೆಗೆ ಬಾರಮ್ಮ‘ ಎಂದು ಕಿಚಾಯಿಸಿ ಕರೆದುಕೊಂಡು ಹೋಗುತ್ತಾರೆ.

ಮನಸ್ಸಿಲ್ಲದ ಮದುವೆಗೆ ಸುಬ್ಬು ನಿರ್ಲಿಪ್ತ

ಮದುವೆ ದಿನಾಂಕ ಗೊತ್ತಾಗಿದ್ದಕ್ಕೆ ಮನೆಯವರೆಲ್ಲಾ ಖುಷಿ ಪಡುತ್ತಾರೆ. ಆಗ ಪದ್ಮನಾಭ ಇದನ್ನು ಸುಬ್ಬುಗೂ ಹೇಳಬೇಕು ಎಂದುಕೊಂಡು ಅವನನ್ನು ಕರೆಯುತ್ತಾರೆ. ಅವನು ನಿರ್ಲಿಪ್ತನಾಗಿ ‘ಯಾವ ಡೇಟ್ ಆದ್ರೆ ಏನಪ್ಪಾ ಮನೆಯವರಿಗೆಲ್ಲಾ ಖುಷಿ ಆದ್ರೆ ನಂಗೂ ಖುಷಿ‘ ಎಂದಷ್ಟೇ ಹೇಳುತ್ತಾನೆ. ಕಾಂತಮ್ಮ ಮಾತ್ರ ಸುಬ್ಬುಗೆ ಈ ಮದುವೆ ಇಷ್ಟ ಇಲ್ಲ ಎನ್ನುವುದನ್ನು ಬಾಯಿಬಿಟ್ಟು ಹೇಳುತ್ತಾರೆ.

ಅಷ್ಟೊತ್ತಿಗೆ ಪದ್ಮನಾಭ ‘ಶ್ರಾವಣಿ ಅಮ್ಮವರ ಮದುವೆ ಯಾವಾಗ ಅಂತೆ ಸುಬ್ಬು, ಯಾಕಂದ್ರೆ ನಿನ್ನ ಮದುವೆಗಿಂತ ಅವರ ಮದುವೆ ಸಾಂಗವಾಗಿ ನೆರವೇರುವುದು ಮುಖ್ಯ‘ ಎಂದು ಹೇಳುತ್ತಾರೆ. ಆಗ ಸುಬ್ಬುಗೆ ಶ್ರಾವಣಿ ಮೆಸೇಜ್ ಮಾಡಿರುವುದು ನೆನಪಾಗುತ್ತದೆ. ಆ ಮೆಸೇಜ್‌ನಲ್ಲಿ ಶ್ರಾವಣಿ ತನ್ನ ಮದುವೆ ದಿನಾಂಕ 28ಕ್ಕೆ ಹೇಳಿರುತ್ತಾಳೆ. ಒಂದೇ ದಿನ ಹೆಚ್ಚು ಕಡಿಮೆಯಲ್ಲಿ ಸುಬ್ಬು ಹಾಗೂ ಶ್ರಾವಣಿ ಮದುವೆಯಾಗುತ್ತಿದ್ದರೂ ಪದ್ಮನಾಭ ಮಾತ್ರ ಯಾವುದೇ ಕಾರಣಕ್ಕೂ ಶ್ರಾವಣಿ ಮದುವೆಗೆ ತೊಂದರೆ ಆಗಬೇಕು, ಸುಬ್ಬುವೇ ಮುಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳಬೇಕು, ಅದು ನಮ್ಮ ಮೇಲಿರುವ ದೊಡ್ಡ ಮನೆಯ ಋಣ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಎರಡೂ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿರುತ್ತದೆ.

ಸುಬ್ಬು–ಶ್ರಾವಣಿ ಇಷ್ಟವಿಲ್ಲದ ಮದುವೆಗೆ ಕೊರಳೊಡ್ಡುತ್ತಾರಾ, ಕಾಂತಮ್ಮ–ಸುಂದರ ಈ ಮದುವೆಯನ್ನು ಹೇಗೆ ತಡಿತಾರೆ... ಶ್ರಾವಣಿ ಸುಬ್ಬು ಮದುವೆಯಲ್ಲಿ ಏನೆಲ್ಲಾ ಆಗಬಹುದು ಎಂಬ ವಿವರಗಳನ್ನ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಮ್ಮಾಯಿಗಾರು ಅಬ್ಬಾಯಿಗಾರು‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner