ಮನೆಯವರ ಸ್ವಾರ್ಥಕ್ಕೆ ಸುಬ್ಬು ಆಸೆ–ಕನಸು ಬಲಿ, ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಅಜ್ಜಿ ಕೆಂಡಾಮಂಡಲ; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಮನೆಯವರ ಸ್ವಾರ್ಥಕ್ಕೆ ಸುಬ್ಬು ಆಸೆ–ಕನಸು ಬಲಿ, ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಅಜ್ಜಿ ಕೆಂಡಾಮಂಡಲ; ಶ್ರಾವಣಿ ಸುಬ್ರಹ್ಮಣ್ಯ

ಮನೆಯವರ ಸ್ವಾರ್ಥಕ್ಕೆ ಸುಬ್ಬು ಆಸೆ–ಕನಸು ಬಲಿ, ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಅಜ್ಜಿ ಕೆಂಡಾಮಂಡಲ; ಶ್ರಾವಣಿ ಸುಬ್ರಹ್ಮಣ್ಯ

ಇಂದ್ರಮ್ಮ ಮದುವೆ ಪ್ರಸ್ತಾಪ ಮಾಡಿದ್ದೇ ತಡ ಸುಬ್ಬುವಿನ ತಾಯಿ, ಅಕ್ಕ–ತಂಗಿ ತಮ್ಮ ಸ್ವಾರ್ಥಕ್ಕೆ ಶ್ರೀವಲ್ಲಿಯನ್ನ ಮದುವೆಯಾಗಲು ಒಪ್ಪುವಂತೆ ಒತ್ತಾಯಿಸುತ್ತಾರೆ. ತಂದೆ ಮಾತ್ರ ಮಗನಿಗೆ ಮನಸ್ಸಿಗೆ ತೋಚಿದಂತೆ ಮಾಡು ಎನ್ನುತ್ತಾರೆ. ಇತ್ತ ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಲಲಿತಾದೇವಿ ಕೆಂಡಾಮಂಡಲ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್‌ 30ರ ಸಂಚಿಕೆ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 30ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 30ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್‌ 30ರ ಸಂಚಿಕೆಯಲ್ಲಿ ಇಂದ್ರಮ್ಮನವರು ಸುಬ್ಬು ಶ್ರೀವಲ್ಲಿಯನ್ನು ಮದುವೆಯಾಗಲೇಬೇಕು ಎಂದು ಹಟ ಹಿಡಿದವರಂತೆ ಮಾತನಾಡುತ್ತಾರೆ. ಇಂದ್ರಮ್ಮ ಮಾತ್ರವಲ್ಲದೇ ಇಂದ್ರಮ್ಮನ ತಂಗಿ, ಸುಬ್ಬು ಅಕ್ಕ ಧನಲಕ್ಷ್ಮೀ, ತಾಯಿ ವಿಶಾಲಾಕ್ಷಿ, ತಂಗಿ ವರಲಕ್ಷ್ಮೀ ಎಲ್ಲರೂ ಸುಬ್ಬು ಬಳಿ ಶ್ರೀವಲ್ಲಿಯನ್ನ ಮದುವೆಯಾಗು ಎಂದು ಒತ್ತಾಯ ಮಾಡುತ್ತಾರೆ. ಎಲ್ಲರೂ ಒಂದೊಂದು ಕಾರಣ ಹೇಳಿ ಶ್ರೀವಲ್ಲಿಯನ್ನ ಮದುವೆಯಾಗು ಎಂದು ಒತ್ತಾಯ ಮಾಡುವುದು ಕೇಳಿ ಸುಬ್ಬುಗೆ ತಲೆ ಚಿಟ್ಟು ಹಿಡಿದಂತಾಗುತ್ತೆ. ಅದೇ ಒತ್ತಡದಲ್ಲಿ ಸುಬ್ಬು ‘ಅಯ್ಯೋ ಎಲ್ಲರೂ ಒಮ್ಮೆ ಸುಮ್ನೆ ಇರ್ತೀರಾ‘ ಅಂತ ಒಂದೇ ಉಸಿರಿಗೆ ಹೇಳುತ್ತಾನೆ. ಆಗ ತಂದೆ ಪದ್ಮನಾಭ ‘ನನ್ನ ಮಗನಿಗೆ ಸ್ವಲ್ಪ ಸಮಯ ಕೊಡಿ, ಎಲ್ಲರೂ ಹೀಗೆ ನಿಮ್ಮ ನೇರಕ್ಕೆ ಹೇಳಿದ್ರೆ ಹೇಗೆ, ಅವನು ಒಂದು ನಿಮಿಷ ನೀರು ಕುಡಿದು ಸುಧಾರಿಸಿಕೊಳ್ಳುತ್ತಾನೆ. ಇರಿ ನಾನು ಅವನಿಗೆ ನೀರು ಕೊಟ್ಟು ಬರುತ್ತೇನೆ‘ ಎಂದು ಮಗನನ್ನು ಅಡುಗೆಮನೆಗೆ ಕರೆದುಕೊಂಡು ಹೋಗುತ್ತಾರೆ.

ಮನೆಯವರ ಸ್ವಾರ್ಥಕ್ಕೆ ಬಲಿಯಾಗಬೇಡ, ಮಗನಿಗೆ ಪದ್ಮನಾಭರ ಸಲಹೆ

ಅಡುಗೆಮನೆಗೆ ಮಗನ ಜೊತೆ ಬರುವ ಪದ್ಮನಾಭ ‘ಸುಬ್ಬು ಇದು ನಿನ್ನ ಜೀವನ, ನೀನು ಯಾರನ್ನು ಮದುವೆಯಾಗಬೇಕು ಎಂದು ನಿರ್ಧಾರ ಮಾಡುವವನು ನೀನೇ ಆಗಬೇಕು. ಇಲ್ಲಿ ಎಲ್ಲರೂ ಅವರವರ ಸ್ವಾರ್ಥಕ್ಕೆ ಮಾತನಾಡುತ್ತಿದ್ದಾರೆ. ನಿನ್ನ ತಾಯಿ, ತಂಗಿ, ಅಕ್ಕ ಎಲ್ಲರೂ ತಮ್ಮ ಸ್ವಾರ್ಥದ ಉದ್ದೇಶದಿಂದಲೇ ನೀನು ಶ್ರೀವಲ್ಲಿಯನ್ನು ಮದುವೆಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ನಿನ್ನ ಮನಸ್ಸಿಗೆ ಯಾವುದು ಖುಷಿ ಬರುತ್ತೋ ಅದನ್ನೇ ನೀನು ಮಾಡು‘ ಎಂದು ಮಗನಿಗೆ ಬುದ್ಧಿವಾದ ಹೇಳುತ್ತಾರೆ. ಆಗ ಅಡುಗೆಮನೆಗೆ ಬರುವ ವಿಶಾಲಾಕ್ಷಿ, ಧನಲಕ್ಷ್ಮೀ, ವರಲಕ್ಷ್ಮೀ ಮತ್ತೆ ಸುಬ್ಬು ಬಳಿ ಶ್ರೀವಲ್ಲಿಯನ್ನು ಮದುವೆಯಾಗುವಂತೆ ಹೇಳಿ ಹಟ ಹಿಡಿಯುತ್ತಾರೆ.

ಸುಬ್ಬು ಮಾತು ಕೇಳಿ ಇಂದ್ರಮ್ಮ ರಂಪ

ಅಡುಗೆಮನೆಯಿಂದ ಹಾಲ್‌ಗೆ ಬರುವ ಸುಬ್ಬು ‘ಇಂದ್ರಮ್ಮನವರೇ ನಾನು ಎಂದಿಗೂ ನನ್ನ ಮದುವೆ ಬಗ್ಗೆ ಯೋಚಿಸಿದವನೇ ಅಲ್ಲ, ನನಗೆ ಈಗಲೇ ಮದುವೆಯಾಗುವ ಆಸೆಯೂ ಇಲ್ಲ‘ ಎಂದು ಹೇಳುತ್ತಾನೆ. ಸುಬ್ಬು ಹೇಳಿದ ಮಾತು ಕೇಳಿ ಇಂದ್ರಮ್ಮ ರಂಪಾಟ ಮಾಡುತ್ತಾರೆ. ‘ನನ್ನ ಮಗಳು ಕಣ್ಣೀರು ಹಾಕುವ ಮನೆಗೆ ನಿಮ್ಮ ತಂಗಿ ಸೊಸೆಯಾಗಿ ಬರೋದು ಅನ್ನೋದು ನೆನಪಿರಲಿ. ನನ್ನ ಮಗಳು ಖುಷಿಯಾಗಿ ಇಲ್ಲದ ಮನೆಯಲ್ಲಿ ನಿನ್ನ ತಂಗಿ ಅದ್ಹೇಗೆ ಖುಷಿಯಾಗಿ ಇರ್ತಾಳೆ ನಾನು ನೋಡ್ತೀನಿ‘ ಅಂತೆಲ್ಲಾ ಕೂಗಾಡುತ್ತಾಳೆ. ಸುಬ್ಬು ಮಾತ್ರ ಏನು ಮಾಡಬೇಕೆಂಡು ತೋಚದೇ ಕಂಗಾಲಾಗುತ್ತಾನೆ.

ಲಲಿತಾದೇವಿಯವರಿಗೆ ಇಷ್ಟವಾಗಿಲ್ಲ ಶ್ರಾವಣಿ ಪ್ರೀತಿಸಿದ ಹುಡುಗ

ಮೊಮ್ಮಗಳು ಶ್ರಾವಣಿ ಪ್ರೀತಿಸಿದ ಹುಡುಗ ಯಾರೆಂದು ತಿಳಿಯುವ ಕುತೂಹದಲ್ಲಿದ್ದಾರೆ ಲಲಿತಾದೇವಿ. ಎಲ್ಲರೂ ತಿಂಡಿ ತಿನ್ನುತ್ತಿರುವಾಗ ವೀರೇಂದ್ರನ ಬಳಿ ‘ವೀರು ನೀನು ಎಲ್ಲಾ ವಿಚಾರ ಹೇಳಿದೆ, ಆದರೆ ಶ್ರಾವಣಿ ಮದುವೆಯಾಗುತ್ತಿರುವ ಹುಡುಗ ಯಾರು ಎಂದು ಮಾತ್ರ ಹೇಳಿಲ್ಲ. ನನ್ನ ಮೊಮ್ಮಗಳು ಇಷ್ಟಪಟ್ಟು ಮದುವೆಯಾಗುತ್ತಿರುವ ಹುಡುಗ ಯಾರು‘ ಎಂದು ಕೇಳುತ್ತಾರೆ. ಆಗ ವೀರೇಂದ್ರ ‘ಅವಳು ಇಲ್ಲೇ ಇದ್ದಾಳಲ್ಲ ಅವಳ ಬಳಿಯೇ ಕೇಳಿ. ಅವರಿಬ್ಬರು ನಮಗೆ ಗೊತ್ತಿಲ್ಲದೇ ಇಷ್ಟಪಟ್ಟು ಪ್ರೀತಿಸಿ ಈಗ ಮದುವೆಯಾಗುತ್ತಿದ್ದಾರೆ‘ ಎಂದು ಹೇಳುತ್ತಾನೆ. ಅಪ್ಪನ ಮಾತು ಕೇಳಿ ಶ್ರಾವಣಿ ನಾಚಿ ನೀರಾಗುತ್ತಾಳೆ. ಮದುವೆಯಾಗುತ್ತಿರುವ ಹುಡುಗನ ಹೆಸರು ಹೇಳಲು ಶ್ರಾವಣಿ ನಾಚಿಕೊಳ್ಳುತ್ತಿರುವುದು ನೋಡಿ ಮದನ್‌, ವಿಜಯಾಂಬಿಕಾ, ವಂದನಾಗೆ ಅಚ್ಚರಿಯಾಗುತ್ತೆ. ಆದರೆ ಅಪ್ಪ ಹೇಳಿದ ಹುಡುಗ ಸುಬ್ಬು ಅಲ್ಲ ಎಂಬ ಅರಿವಿಲ್ಲದ ಶ್ರಾವಣಿ ಮಾತ್ರ ಹುಡುಗ ಹೆಸರು ಹೇಳದೇ ಕೋಣೆಗೆ ಓಡಿ ಹೋಗುತ್ತಾಳೆ. ಮೊಮ್ಮಗಳ ಕೋಣೆಗೆ ಹೋದ ಅಜ್ಜಿ ಶ್ರಾವಣಿ ಬಳಿ ಅವಳು ಪ್ರೀತಿಸಿದ ಹುಡುಗ ಯಾರು ಎಂದು ಕೇಳುತ್ತಾರೆ. ಅದಕ್ಕೆ ಶ್ರಾವಣಿ ‘ಆ ಹುಡುಗ ನಿನ್ನ ಬಾಯಿಂದಲೇ ಚಿನ್ನದಂಥ ಹುಡುಗ ಎಂದು ಹೇಳಿಸಿಕೊಂಡವನು‘ ಎಂದು ಹೇಳಿ ‘ಅವನು ಬೇರಾರೂ ಅಲ್ಲ ಸುಬ್ಬು‘ ಎನ್ನುತ್ತಾಳೆ. ಶ್ರಾವಣಿ ಪ್ರೀತಿಸಿದ ಹುಡುಗ ಸುಬ್ಬು ಎಂದು ತಿಳಿದ ಲಲಿತಾದೇವಿ ‘ನೀನು ಕೂಡ ನಿನ್ನ ತಾಯಿಯ ದಾರಿಯಂತೆ ತುಳಿದೆ ಅಲ್ವಾ?‘ ಎಂದು ಮೊಮ್ಮಗಳ ಮೇಲೆ ರೇಗುತ್ತಾರೆ. ಅಜ್ಜಿ ಕೋಪ ನೋಡಿ ಶ್ರಾವಣಿಗೆ ಶಾಕ್ ಆಗುತ್ತೆ.

ಇತ್ತ ಶ್ರೀವಲ್ಲಿ ತಂದೆ ಸುಬ್ಬುವನ್ನು ಮನೆಯಿಂದ ಹೊರಗೆ ಕರೆದು ‘ಸುಬ್ಬು, ನೀನು ಶ್ರೀವಲ್ಲಿಯನ್ನು ಮದುವೆಯಾದರೆ ಖಂಡಿತ ನಿನ್ನ ಜೀವನ ಸುಂದರವಾಗಿರುತ್ತೆ. ನನ್ನ ಮಗಳು ತುಂಬಾ ಒಳ್ಳೆಯವಳು, ನಿನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾಳೆ. ನಾನು ಹೀಗೆಲ್ಲಾ ಹೇಳ್ತೀನಿ ಅಂತ ತಪ್ಪು ತಿಳಿಬೇಡ. ನೀನು ಹೇಳಿದೆ ಅಲ್ವಾ ನಿನ್ನ ಕಷ್ಟಗಳ ಬಗ್ಗೆ, ನೀನು ಅವಳನ್ನ ಮದುವೆಯಾದರೆ ನಿನ್ನ ಕಷ್ಟಗಳೆಲ್ಲಾ ನಮ್ಮ ಕಷ್ಟಗಳಂತೆ. ನಾವೆಲ್ಲಾ ಸೇರಿ ಅದನ್ನು ಪರಿಹರಿಸೋಣ. ನೀನು ಅವಳನ್ನು ಮದುವೆಯಾಗೊಲ್ಲ ಅಂತ ಮಾತ್ರ ಹೇಳಬೇಡ. ನಿನ್ನ ಕಾಲಿಗೆ ಬೀಳ್ತೀನಿ‘ ಅಂತ ಕಾಲು ಹಿಡಿಯಲು ಮುಂದೆ ಬರುತ್ತಾರೆ.

ತನ್ನ ಮನೆಯವರು, ಶ್ರೀವಲ್ಲಿ ಮನೆಯವರು ತಮ್ಮ ಸ್ವಾರ್ಥಕ್ಕೆ ಶ್ರೀವಲ್ಲಿಯನ್ನ ಮದುವೆಯಾಗು ಎಂದು ಹೇಳುತ್ತಿರುವುದು ಸುಬ್ಬುವನ್ನು ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ. ಸುಬ್ಬು ಈಗ ಶ್ರೀವಲ್ಲಿಯನ್ನು ಮದುವೆಯಾಗಲು ಒಪ್ಪುತ್ತಾನಾ, ಶ್ರಾವಣಿ ಪ್ರೀತಿಸಿದ ಹುಡುಗ ಸುಬ್ಬು ಲಲಿತಾದೇವಿಯವರಿಗೆ ಇಷ್ಟ ಆಗೋದಿಲ್ವಾ, ಎಲ್ಲಿಗೆ ಹೋಗಿ ಮುಟ್ಟಬಹುದು ಸುಬ್ಬು, ಶ್ರಾವಣಿ ಮದುವೆ ಕಥೆ ಇದೆಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಮ್ಮಾಯಿಗಾರು ಅಬ್ಬಾಯಿಗಾರು‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner