ಶ್ರಾವಣಿ ಮದುವೆ ಕಾರ್ಡ್ ನೋಡಿ ಸುಬ್ಬುಗೆ ಅಚ್ಚರಿ, ಗೊಂದಲದಲ್ಲಿ ಮಿನಿಸ್ಟರ್ ಮಗಳ ಪ್ರಿಯಕರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರಾವಣಿ ಮದುವೆ ಕಾರ್ಡ್ ನೋಡಿ ಸುಬ್ಬುಗೆ ಅಚ್ಚರಿ, ಗೊಂದಲದಲ್ಲಿ ಮಿನಿಸ್ಟರ್ ಮಗಳ ಪ್ರಿಯಕರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಮದುವೆ ಕಾರ್ಡ್ ನೋಡಿ ಸುಬ್ಬುಗೆ ಅಚ್ಚರಿ, ಗೊಂದಲದಲ್ಲಿ ಮಿನಿಸ್ಟರ್ ಮಗಳ ಪ್ರಿಯಕರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುರೇಂದ್ರ ತೋರಿಸಿದ ಮದುವೆ ಇನ್ವಿಟೇಷನ್ ನೋಡಿ ಸುಬ್ಬುಗೆ ಶಾಕ್‌. ಸುಬ್ಬು–ಶ್ರೀವಲ್ಲಿ ಮದುವೆ ನಿಲ್ಲಿಸುವ ಪ್ರಯತ್ನ ಕೈಬಿಟ್ಟ ಇಂದ್ರಮ್ಮ–ಸುಂದರ. ಮೊಮ್ಮಗಳನ್ನ ಮದುವೆಯಾಗುವ ಹುಡುಗ ಸುಬ್ಬು ಎಂದು ತಿಳಿದು ಅವನಿಗೆ ಬುದ್ಧಿಮಾತು ಹೇಳಿದ ಅಜ್ಜಿ. ಗೊಂದಲದಲ್ಲಿ ಮುಳುಗಿದ್ದಾನೆ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 3ರ ಸಂಚಿಕೆಯಲ್ಲಿ ಏನೇನಾಗುತ್ತೆ ನೋಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 3ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 3ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 3ರ ಸಂಚಿಕೆಯಲ್ಲಿ ವೀರೇಂದ್ರ, ವಿಜಯಾಂಬಿಕಾ, ಸುರೇಂದ್ರ ಪ್ರಿಂಟ್ ಆಗಿರುವ ಮದುವೆ ಕಾಗದ ನೋಡುತ್ತಿರುತ್ತಾರೆ. ಅಕ್ಕ ಸೆಲೆಕ್ಟ್ ಮಾಡಿರುವ ಡಿಸೈನ್ ನೋಡಿ ‘ಅಕ್ಕನ ಟೇಸ್ಟ್‌ ಹಾಗೆ ಸುರೇಂದ್ರ, ಅವಳು ಯಾರಿಗೂ ಆಗದ್ದನ್ನು ಬಹಳ ಆಳವಾಗಿ ನೋಡಿ ಸೆಲೆಕ್ಟ್ ಮಾಡ್ತಾಳೆ. ಅವಳ ಆಲೋಚನೆಗಳನ್ನು ಯಾರಿಂದಲೂ ಮಾಡಲಾಗದು‘ ಎಂದು ಅಕ್ಕನನ್ನು ಮನಸಾರೆ ಹೊಗಳುತ್ತಾನೆ. ಆದರೆ ಇತ್ತ ವಿಜಯಾಂಬಿಕಾ ಮಾತ್ರ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ‘ಹೌದು, ನನ್ನ ಆಲೋಚನೆಗಳನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ನಾನು ಬಹಳ ಆಳವಾಗಿ ಯೋಚಿಸಿಯೇ ನಿನ್ನನ್ನು, ಶ್ರಾವಣಿಯನ್ನು ಮುಗಿಸುವ ಪ್ಲಾನ್ ಮಾಡಿದ್ದೇನೆ. ನನ್ನ ಆಲೋಚನೆಗಳ ಬಗ್ಗೆ ತಿಳಿಯುವ ಹೊತ್ತಿಗೆ, ನಾನು ನೀವಿಬ್ಬರು ಅಪ್ಪ–ಮಗಳನ್ನು ಪರಲೋಕಕ್ಕೆ ಕಳುಹಿಸಿ ಇರುತ್ತೇನೆ, ಆಮೇಲೆ ನನ್ನನ್ನು ಹಿಡಿಯುವವರು ಯಾರೂ ಇಲ್ಲ‘ ಎಂದು ಯೋಚಿಸುತ್ತಿರುತ್ತಾಳೆ. ಅಷ್ಟೊತ್ತಿಗೆ ‘ನಾನಿದ್ದೀನಿ‘ ಎನ್ನುತ್ತಾ ಅಲ್ಲಿಗೆ ಬರ್ತಾನೆ ಸುಬ್ಬು. ನಾನು ಮನಸಲ್ಲಿ ಅಂದುಕೊಂಡಿದ್ದು ಸುಬ್ಬುಗೆ ಹೇಗೆ ತಿಳಿಯಿತು ಎಂಬ ಶಾಕ್‌ನಲ್ಲಿ ಇರ್ತಾಳೆ ವಿಜಯಾಂಬಿಕಾ.

ಮದುವೆ ನಿಲ್ಲಿಸುವ ಪ್ಲಾನ್ ಕೈ ಬಿಟ್ಟ ಇಂದ್ರಮ್ಮ–ಸುಂದರ

ಇತ್ತ ಸುಬ್ಬು ಮನೆಯಲ್ಲಿ ಮದುವೆ ಕಾಗದ ಹಿಡಿದು ಕುಳಿತ ಇಂದ್ರಮ್ಮ, ಸುಂದರ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾರೆ. ‘ಹೇಗಪ್ಪಾ ಈ ಮದುವೆ ನಿಲ್ಲಿಸೋದು‘ ಅಂತ ಯೋಚನೆ ಮಾಡ್ತಾ ಇರ್ತಾರೆ. ಆಗ ಸುಂದರ ಇದ್ದಕ್ಕಿದ್ದಂತೆ ‘ಮಮ್ಮಿ, ನಿ‌ನ್ನ ಈ ತಲೆಯಲ್ಲಿ ಏನಾದ್ರೂ ಹಾಳು ಯೋಚನೆಗಳು ಇದ್ದೇ ಇರ್ತದೆ ಮಮ್ಮಿ, ಹೇಗಾದ್ರೂ ಈ ಮದುವೆ ನಿಲ್ಲಿಸಲು ಸಾಧ್ಯವಿದೆಯೇ ಎಂದು ಯೋಚನೆ ಮಾಡು ಮಮ್ಮಿ, ಏನಾದ್ರೂ ಐಡಿಯಾ ಮಾಡು ಮಮ್ಮಿ‘ ಎನ್ನುತ್ತಾನೆ. ಆಗ ಯೋಚನೆ ಮಾಡುವಂತೆ ದೀರ್ಘ ಉಸಿರು ಎಳೆದು ಕೂರುವ ಕಾಂತಮ್ಮ ಸ್ವಲ್ಪ ಹೊತ್ತಿನ ಬಳಿಕ ‘ಸುಂದ್ರ ದರಿದ್ರ, ನಂಗೊಂದು ಒಳ್ಳೆ ಐಡಿಯಾ ಬಂದಿದೆ‘ ಎನ್ನುತ್ತಾಳೆ. ಅದಕ್ಕೆ ಖುಷಿಯಾಗುವ ಸುಂದ್ರ ‘ಐಡಿಯಾನಾ, ನಾ ಹೇಳಿಲ್ವಾ ಮಮ್ಮಿ, ನಿನ್ನ ತಲೆಯಲ್ಲಿ ಐಡಿಯಾ ಇರುತ್ತೆ ಅಂತ, ಅದೇನು ಐಡಿಯಾ ಹೇಳು ಮಮ್ಮಿ‘ಎಂದು ಅವಸರಿಸುತ್ತಾನೆ. ಆಗ ಕಾಂತಮ್ಮ ‘ಅದೇನೆಂದರೆ ನಾವು ಈಗ ಮದುವೆ ನಿಲ್ಲಿಸಬೇಕಾಗಿರುವುದು ಒಂದಲ್ಲ, ಎರಡು. ಆದರೆ ಎರಡು ಮದುವೆ ನಿಲ್ಲಿಸೋದೆಲ್ಲಾ ನಮ್ಮಿಂದ ಆಗದ ಕೆಲಸ. ಅದಕ್ಕೆ ನಾವು ಈ ಮದುವೆ ನಿಲ್ಲಿಸುವ ಪ್ರಯತ್ನ ಕೈಬಿಟ್ಟು ಶ್ರೀವಲ್ಲಿಯನ್ನು ಸುಬ್ಬು ಹೆಂಡತಿ ಎಂದು ಒಪ್ಪಿಕೊಳ್ಳಬೇಕಿದೆ. ಕೊನೆ ಪಕ್ಷ ಇದರಿಂದ ಶ್ರೀವಲ್ಲಿ ಹೆಸರಲ್ಲಿರುವ 8 ಮನೆಗಳಲ್ಲಿ ಒಂದನ್ನು ನಮ್ಮ ಹೆಸರಿಗೆ ಬರೆಸಿಕೊಂಡು ಕೊನೆಗಾಲದಲ್ಲಿ ಹರ ಶಿವ ಎನ್ನುತ್ತಾ ಇದ್ದು ಬಿಡಬಹುದು, ಏನಂತೀಯಾ‘ ಎಂದು ಮಗನನ್ನು ಪ್ರಶ್ನಿಸುತ್ತಾಳೆ. ‘ಅಷ್ಟೇ ಅಂತೀಯಾ ಮಮ್ಮಿ ನಮಗೆ ಕೊನೆಗೆ ಉಳಿದಿರೋದು, ಸರಿ ಬಿಡು ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ಇದ್ದು ಬಿಡೋಣ‘ ಎಂದು ಹೇಳಿ ಇಬ್ಬರೂ ಮದುವೆ ನಿಲ್ಲಿಸುವ ಪ್ರಯತ್ನಕ್ಕೆ ಫುಲ್‌ಸ್ಟಾಪ್ ಇಡ್ತಾರೆ.

ಮದುವೆ ಕಾಗದದಲ್ಲಿ ಮದನ್ ಹೆಸರು ನೋಡಿ ಸುಬ್ಬು ಶಾಕ್‌

ವಿಜಯಾಂಬಿಕಾ ಮಾತಿಗೆ ಟಕ್ಕರ್ ಎಂಬಂತೆ ‘ನಾನಿದೀನಿ‘ ಎನ್ನುತ್ತಾ ಬಂದ ಸುಬ್ಬು ಫೋನ್‌ನಲ್ಲಿ ಮಾತನಾಡುತ್ತಿರುತ್ತಾನೆ. ಯಾವುದೋ ಫೈಲ್‌ ಬಗ್ಗೆ ಯಾರದ್ದೋ ಜೊತೆ ಮಾತನಾಡುತ್ತಾ ಹಾಗೆ ಹೇಳಿರುತ್ತಾನೆ. ಆದರೂ ಈ ಮಾತು ವಿಜಯಾಂಬಿಕಾ ಮೈ ಬೆವರಿಳಿಸುತ್ತದೆ. ಸುಬ್ಬು ಬಂದಿದ್ದು ನೋಡಿ ವೀರೇಂದ್ರ ‘ಸುಬ್ಬು ನೀನು ಬಂದಿದ್ದು ಒಳ್ಳೆದಾಯ್ತು, ಮದುವೆ ಕಾಗದ ಬ್ಲೂಪ್ರಿಂಟ್ ಬಂದಿದೆ. ನೀನು ಒಮ್ಮೆ ನೋಡಿ ಬಿಡು‘ ಎನ್ನುತ್ತಾರೆ, ಸುರೇಂದ್ರ ಸುಬ್ಬುಗೆ ಮದುವೆ ಕಾಗದದ ಬ್ಲೂಪ್ರಿಂಟ್ ನೋಡಲು ಮೊಬೈಲ್ ಕೊಡುತ್ತಾನೆ. ಶ್ರಾವಣಿ ಮದುವೆ ಕಾಗದ ನೋಡಿದ ಸುಬ್ಬು ಶಾಕ್ ಆಗುತ್ತಾನೆ. ಯಾಕೆಂದರೆ ಅಲ್ಲಿ ಶ್ರಾವಣಿ ಹಾಗೂ ಮದನ್ ಎಂದಿರುತ್ತದೆ. ಮದನ್‌ನನ್ನ ಕಂಡರೆ ಆಗದ ಶ್ರಾವಣಿ ಮದುವೆಗೆ ಒಪ್ಪಿದ್ದು ಹೇಗೆ, ಅದೂ ಅಲ್ಲದೇ ಶ್ರಾವಣಿ ಮೇಡಂ ಯಾವುದೋ ಹುಡುಗನನ್ನು ಪ್ರೀತಿಸುತ್ತಿದ್ದರು. ಆ ಹುಡುಗ ಜೊತೆಗೆ ಮದುವೆ ಅಂದುಕೊಂಡಿದ್ದರೆ ಇಲ್ಲಿ ಆಗುತ್ತಿರುವುದೇ ಬೇರೆ ಎಂದು ಯೋಚಿಸುತ್ತಾ ಶಾಕ್‌ನಲ್ಲೇ ನಿಂತಿರುತ್ತಾನೆ. ಅವನು ಮೂಕನಂತೆ ನಿಂತಿರುವುದು ನೋಡಿ ವೀರೇಂದ್ರ ‘ಯಾಕಪ್ಪ ಸುಬ್ಬು, ನಿನಗೆ ಮದುವೆ ಕಾರ್ಡ್ ಇಷ್ಟ ಆಗಿಲ್ವಾ‘ ಅಂತ ಕೇಳ್ತಾನೆ. ಅದಕ್ಕೆ ಕಾರ್ಡ್ ಇಷ್ಟ ಆಯ್ತು ಸರ್. ನಾನು ಬೇರೇನೋ ಯೋಚಿ‌ಸ್ತಾ ಇದ್ದೆ‘ ಅಂತಾನೆ. ವೀರೇಂದ್ರ ಸುಬ್ಬು ಬಳಿ ‘ನೀನೇ ನಿಂತು ಈ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು‘ ಎಂದು ಮದುವೆ ಜವಾಬ್ದಾರಿಯನ್ನು ಸುಬ್ಬು ಹೆಗಲಿಗೆ ವಹಿಸುತ್ತಾರೆ. ಶ್ರಾವಣಿ ಮೇಡಂ ಮರುದಿನವೇ ತನ್ನ ಮದುವೆ ಇರುವ ಕಾರಣ ಹೇಗಪ್ಪಾ ಎಂದು ಚಿಂತಿಸುತ್ತಲೇ ಸುಬ್ಬು, ‘ಆಯ್ತು ಯಜಮಾನ್ರೇ ನೀವೇನೂ ಚಿಂತೆ ಮಾಡ್ಬೇಡಿ. ನಾನು ಎಲ್ಲಾ ನೋಡ್ಕೋತೀನಿ‘ ಎನ್ನುತ್ತಾ ಭರವಸೆ ನೀಡುತ್ತಾನೆ.

ಮೊಮ್ಮಗಳನ್ನ ಮದುವೆಯಾಗುವ ಹುಡುಗ ಸುಬ್ಬು ಎಂದು ಬುದ್ಧಿವಾದ ಹೇಳಿದ ಅಜ್ಜಿ

ಶ್ರಾವಣಿ ಸುಬ್ಬು ಬಗ್ಗೆ ಅಜ್ಜಿ ಬಳಿ ದೂರು ಹೇಳುತ್ತಾಳೆ. ಮದುವೆ ಗೊತ್ತಾದ ಮೇಲೆ ಅವನು ನನ್ನ ಜೊತೆ ಮೊದಲಿನಂತೆ ಮಾತನಾಡುತ್ತಿಲ್ಲ ಎನ್ನುತ್ತಾನೆ. ಪಿಂಕಿ ಕೂಡ ಅದನ್ನೇ ಹೇಳುತ್ತಾಳೆ. ಆದರೆ ಈ ಮೂವರಿಗೂ ಶ್ರಾವಣಿ ಮದುವೆಯಾಗುತ್ತಿರುವ ಹುಡುಗ ಸುಬ್ಬವಲ್ಲ, ಮದನ್ ಎಂಬುದು ತಿಳಿದಿರುವುದಿಲ್ಲ. ಮೊಮ್ಮಗಳ ಮಾತು ಕೇಳಿದ ಲಲಿತಾದೇವಿ ಸುಬ್ಬು ಬಂದಾಗ ಬುದ್ಧಿ ಹೇಳ್ತೀನಿ ಅಂತಾರೆ. ಹಾಗೆಯೇ ಸುಬ್ಬು ಅವರ ಬಳಿ ಬಂದು ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ನಂತರ ಅವರು ಸುಬ್ಬುಗೆ ಮದುವೆಯಾಗುವ ಹುಡುಗಿ ಜೊತೆ ಹೇಗಿರಬೇಕು ಎಂದು ಬುದ್ಧಿವಾದ ಹೇಳುತ್ತಾರೆ. ಸುಬ್ಬುಗೆ ತಾನು ಶ್ರೀವಲ್ಲಿಯನ್ನು ಮದುವೆಯಾಗುವ ವಿಚಾರ ಶ್ರಾವಣಿ ಅಜ್ಜಿಗೆ ಹೇಳಿದ್ದು ಇರಿಸುಮುರಿಸು ತಂದಿರುತ್ತಾರೆ. ಆದರೆ ಈ ಯಾರಿಗೂ ನಿಜ ಸತ್ಯದ ಅರಿವಿರುವುದಿಲ್ಲ.

‘ಮನಸಾರೆ ಮದುವೆಗೆ ಒಪ್ಪಿದ್ರಾ‘‍ ಶ್ರಾವಣಿಗೆ ಪ್ರಶ್ನೆ ಕೇಳುವ ಸುಬ್ಬು

ಶ್ರಾವಣಿ ಮದನ್ ಜೊತೆ ಮದುವೆಯಾಗುವುದು ಸುಬ್ಬಗೂ ಇಷ್ಟವಾಗಿರುವುದಿಲ್ಲ. ಆದರೆ ಶ್ರಾವಣಿ ಈ ಮದುವೆಗೆ ಹೇಗೆ ಒಪ್ಪಿಕೊಂಡಳು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿರುತ್ತದೆ. ಅದಕ್ಕೆ ಅವಳನ್ನು ಪ್ರತ್ಯೇಕವಾಗಿ ಕರೆದು ‘ಮೇಡಂ, ನಿಜಕ್ಕೂ ನೀವು ಈ ಮದುವೆಗೆ ಒಪ್ಪಿದ್ದೀರಾ, ನಿಮಗೆ ಈ ಮದುವೆಯಾಗೋಕೆ ಮನಸಾರೆ ಖುಷಿ ಇದ್ಯಾ‘ ಎಂದು ಕೇಳುತ್ತಾನೆ. ಅವನು ಕೇಳುವ ಕಾರಣ ತಿಳಿದಿಲ್ಲದ ಶ್ರಾವಣಿ, ತಾನು ಮದುವೆಯಾಗುತ್ತಿರುವ ಹುಡುಗ ಸುಬ್ಬುವೇ ಎನ್ನುವ ಭ್ರಮೆಯಲ್ಲಿದ್ದುಕೊಂಡೇ ‘ಅಯ್ಯೋ ಸುಬ್ಬು, ನೀನು ಈಗ ಈ ಮಾತು ಕೇಳ್ತಾ ಇದೀಯಾ, ಪುಣ್ಯ ಮದುವೆಯಾದ ಮೇಲೆ ಕೇಳಿಲ್ಲ. ನನಗೆ ಇಷ್ಟ ಇರೋದಕ್ಕೆ ಈ ಮದುವೆ ಆಗ್ತಾ ಇರೋದು. ಅದು ಅಲ್ದೆ ಈ ಮದುವೆಯನ್ನು ಅಪ್ಪ ಒಪ್ಪಿ, ಇಷ್ಟಪಟ್ಟಿದ್ದಾರೆ. ನನ್ನ ಆಸೆ, ನನ್ನ ಅಪ್ಪನ ಆಸೆ ಒಂದೇ ಆಗಿದ್ದಾಗ ನನ್ಯಾಕೆ ಈ ಮದುವೆಗೆ ಒಪ್ಪದೇ ಇರಲಿ. ನನ್ನ ಬದುಕಿನ ಇಬ್ಬರು ಹೀರೊಗಳು ಒಂದೇ ಮನೆಯಲ್ಲಿ ಇರುತ್ತಾರೆ ಅಂದ್ರೆ ಅದಕ್ಕಿಂತ ಖುಷಿ ಇನ್ನೇನು ಬೇಕು‘ ಎಂದೆಲ್ಲಾ ಗೊಂದಲವಾಗುವಂತೆ ಮಾತನಾಡುತ್ತಾಳೆ. ಸುಬ್ಬುಗೆ ಎಲ್ಲವೂ ಅಯೋಮಯವಾಗಿರುತ್ತದೆ. ಆದರೂ ಶ್ರಾವಣಿ ಮೇಡಂ ಖುಷಿಯಾಗಿರಲಿ ಎಂದು ಮನಸಾರೆ ಬಯಸುತ್ತಾನೆ ಸುಬ್ಬು.

ಸುಬ್ಬುಗೆ ತಿಳಿದಂತೆ ಶ್ರಾವಣಿಗೂ ತಾನು ಮದುವೆಯಾಗುತ್ತಿರುವುದು ಸುಬ್ಬವಲ್ಲ, ಮದನ್ ಎಂಬುದು ತಿಳಿಯುವುದು ಯಾವಾಗ, ವಿಜಯಾಂಬಿಕಾ ಅಂದುಕೊಂಡಂತೆ ಶ್ರಾವಣಿ, ವೀರೇಂದ್ರ ಅಂತ್ಯವಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Whats_app_banner