ಕೂಡಿ ಬರುತ್ತಿಲ್ಲ ಸುಬ್ಬುಗೂ– ಶ್ರೀವಲ್ಲಿಗೂ ಕಂಕಣಬಲ, ಪದ್ಮನಾಭರಿಗೆ ಸಿಕ್ಕಿದೆ ಮುನ್ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಶ್ರೀವಲ್ಲಿಯನ್ನು ಹಾಡಿ ಹೊಗಳಿ ಅವಳ ಹೆಸರಲ್ಲಿರುವ ಮನೆಗಳಲ್ಲಿ ತನಗೊಂದು ಬರೆಸಿಕೊಡುವಂತೆ ಬೇಡಿಕೆ ಇಟ್ಟ ಕಾಂತಮ್ಮ. ದೇವಸ್ಥಾನದಲ್ಲಿ ಶ್ರಾವಣಿ ಸುಬ್ಬುಗೆ ಪ್ರೇಮ ನಿವೇದನೆ ಮಾಡುವಾಗಲೇ ನಡೆಯುತ್ತದೆ ಅನಾಹುತ. ಕೂಡಿ ಬರುತ್ತಿಲ್ಲ ಸುಬ್ಬಗೂ– ಶ್ರೀವಲ್ಲಿಗೂ ಕಂಕಣಭಾಗ್ಯ, ಪದ್ಮನಾಭರಿಗೆ ಸಿಕ್ಕಿದೆ ಮುನ್ಸೂಚನೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜ. 10ರ ಸಂಚಿಕೆಯ ವಿವರ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 10ರ ಸಂಚಿಕೆಯಲ್ಲಿ ಸುಬ್ಬು ಮನೆಯಲ್ಲಿ ಎಲ್ಲರೂ ಮನೆ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬರುವ ಶ್ರೀವಲ್ಲಿ ‘ನಾನು ಕೂಡ ನಿಮ್ಮ ಜೊತೆ ಸೇರಿ ಕೆಲಸ ಮಾಡುತ್ತೇನೆ‘ ಎನ್ನುತ್ತಾಳೆ. ಆಗ ಕಾಂತಮ್ಮ ಸೇರಿ ಎಲ್ಲರೂ ಬೇಡಮ್ಮ, ನಾವೇ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ಕಾಂತಮ್ಮ ಶ್ರೀವಲ್ಲಿಯನ್ನ ಹೊಗಳುವುದು ಮಿಕ್ಕವರಿಗೆ ಶಾಕ್ ನೀಡುತ್ತದೆ. ಇತ್ತ ಪದ್ಮನಾಭ ಮಾತ್ರ ಜಾತಕ, ಪಂಚಾಂಗ ಹಿಡಿದು ಕೂತು ತಲೆ ಕೆಡಿಸಿಕೊಂಡಿರುತ್ತಾರೆ.
ಸುಬ್ಬು–ಶ್ರಾವಣಿಯನ್ನ ಜೋಡಿ ಎಂದುಕೊಂಡ ಅರ್ಚಕರು
ಸುಬ್ಬು ಶ್ರಾವಣಿಯನ್ನ ಎತ್ತಿಕೊಂಡು ದೇವಾಲಯಕ್ಕೆ ಬಂದಾಗ ಇವರಿಬ್ಬರು ಜೋಡಿ ಎಂದುಕೊಂಡು ಅರ್ಚಕರು ಹರಸುತ್ತಾರೆ. ಅದನ್ನ ಕೇಳಿ ಸುಬ್ಬುಗೆ ಶಾಕ್ ಆಗುತ್ತದೆ. ‘ಏನ್ ಮೇಡಂ ಇವರು ನಮ್ಮನ್ನ ಜೋಡಿ ಅಂತ ಹೇಳ್ತಾ ಇದಾರೆ, ನಾವು ಹೇಗೆ ಮೇಡಂ ಜೋಡಿ ಆಗ್ತೀವಿ‘ ಅಂತ ಪ್ರಶ್ನೆ ಮಾಡ್ತಾನೆ. ‘ಅವರು ಹೇಳಿದ್ರಲ್ಲಿ ತಪ್ಪೇನಿದೆ, ನೀನ್ಯಾಕೆ ಹೀಗೆ ಮಾತಾಡ್ತಾ ಇದೀಯಾ‘ ಅಂತ ಶ್ರಾವಣಿ ಶಾಕ್‌ನಲ್ಲಿ ಕೇಳುವಾಗ ಅರ್ಚಕರು ಸುಬ್ಬುವನ್ನು ಕರೆಯುತ್ತಾರೆ. ಆಗ ಶ್ರಾವಣಿ ಅಜ್ಜಿ ಬಳಿ ‘ನೋಡಜ್ಜಿ ಇವನು, ಈಗಲೂ ನಿಮ್ಮಿಬ್ಬರಿಗೆ ಮದುವೆ ನಡೆಯುತ್ತೆ ಅನ್ನೋದೇ ಮರೆತವನಂತೆ ಮಾತನಾಡ್ತಾ ಇದಾನೆ‘ ಅಂತಾಳೆ, ಅಲ್ಲದೇ ‘ಇವನು ಈ ರೀತಿ ಪ್ರಶ್ನೆ ಕೇಳಿದ್ದೇ ನನಗೆ ತಡೆದುಕೊಳ್ಳಲು ಆಗ್ತಿಲ್ಲ, ಅವನು ನನ್ನ ಜೀವನದಲ್ಲಿ ಇಲ್ಲ ಅಂದ್ರೆ ನಾನು ಸತ್ತೇ ಹೋಗ್ತೀನಿ ಅಜ್ಜಿ‘ ಎಂದು ದೇವರ ಮುಂದೆ ನಿಂತು ಹೇಳುತ್ತಾಳೆ ಶ್ರಾವಣಿ. ಅಜ್ಜಿ ಅವಳನ್ನು ಸಮಾಧಾನ ಮಾಡಿ, ‘ಇವತ್ತೇ ಸುಬ್ಬು ಮುಂದೆ ಎಲ್ಲವನ್ನೂ ಹೇಳಿ ಬಿಡು‘ ಎಂದು ಸಲಹೆ ನೀಡುತ್ತಾರೆ. ಶ್ರಾವಣಿ ಕೂಡ ಸುಬ್ಬುಗೆ ಪ್ರಪೋಸ್ ಮಾಡಲು ರೆಡಿ ಆಗ್ತಾಳೆ.
ಸುಬ್ಬು ಮುಂದೆ ಮನ ಬಿಚ್ಚಿ ಮಾತನಾಡಿದ ಶ್ರಾವಣಿ
ಸುಬ್ಬು ಮುಂದೆ ಇವತ್ತು ತನ್ನ ಮನಸ್ಸಿನಲ್ಲಿ ಇರುವುದೆಲ್ಲಾ ಹೇಳಬೇಕು ಎಂದು ಶ್ರಾವಣಿ ನಿರ್ಧಾರ ಮಾಡಿರುತ್ತಾಳೆ. ಅವನನ್ನು ದೇವಸ್ಥಾನದ ಹೊರ ಭಾಗಕ್ಕೆ ಕರೆದೊಯ್ದು ತನಗೆ ಸುಬ್ಬು ಮೇಲೆ ಪ್ರೀತಿ ಆಗಿದ್ದು, ಸಾಲಿಗ್ರಾಮದಲ್ಲಿ ಸುಬ್ಬು ಅವಳನ್ನು ಕಾಪಾಡಿದ್ದು, ಅಪ್ಪ ಕೂಡ ಅವನನ್ನೇ ಮದುವೆಯಾಗಲು ನಿಶ್ಚಯ ಮಾಡಿದ್ದು ಎಲ್ಲವನ್ನೂ ಹೇಳಿ ಸುಬ್ಬು ಐ ಲವ್ ಯು ಎಂದು ಪ್ರಪೋಸ್ ಮಾಡಿ ಹಿಂದೆ ತಿರುಗಿ ನೋಡಿದ್ರೆ ಸುಬ್ಬು ಗಾಬರಿಯಲ್ಲಿ ಜೋರಾಗಿ ಓಡುತ್ತಿರುತ್ತಾನೆ. ಅದನ್ನ ಕಂಡು ಶ್ರಾವಣಿಗೆ ದಿಗಿಲಾಗುತ್ತದೆ. ದೂರದಲ್ಲಿ ನೋಡಿದಾಗ ಅಜ್ಜಿ ತಲೆ ಸುತ್ತಿ ಬಿದ್ದಿರುವುದು ಕಾಣುತ್ತದೆ. ಶ್ರಾವಣಿ ಹೇಳಿದ ಮಾತುಗಳು ಸುಬ್ಬು ತಲುಪಿಯೇ ಇರುವುದಿಲ್ಲ. ಕೊನೆಗೆ ಸುಬ್ಬು ಹಾಗೂ ಶ್ರಾವಣಿ ಸೇರಿ ಅಜ್ಜಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.
ದುರಾಸೆ ಬಿಡದ ಕಾಂತಮ್ಮ, ಶ್ರೀವಲ್ಲಿ ಬಳಿ ಮನೆ ಕೇಳೇಬಿಟ್ಲು
ಶ್ರೀವಲ್ಲಿಯನ್ನು ರಾಣಿ ಅಂತೆಲ್ಲಾ ಹೊಗಳುವ ಕಾಂತಮ್ಮ ಅವಳನ್ನು ಒಂದು ಕಡೆ ಕೂರಿಸಿಕೊಂಡು ತನಗೆ ಮನೆಯಿಲ್ಲ, ಮಗ ಕೂಡ ಬೇಜವಾಬ್ದಾರಿ. ಆ ಕಾರಣಕ್ಕೆ ನಾನು ಕೂಡ ಸೊಸೆ ಮನೆಗೆ ಬಂದು ಇರುವಂತಾಗಿದೆ. ಆದರೆ ಎಷ್ಟು ದಿನ ಇದೇ ಮನೆಯಲ್ಲಿ ಇರೋದು. ನಿನ್ನ ಅಪ್ಪ ನಿನ್ನ ಹೆಸರಿಗೆ ಒಂದಿಷ್ಟು ಮನೆ ಮಾಡಿದ್ದರಂತಲ್ಲ, ಅದರಲ್ಲಿ ನನಗೆ ಒಂದೇ ಒಂದು ಮನೆ ಕೊಡು ಸಾಕು. ಸಾಯೋವರೆಗೂ ನಿನ್ನ ಹೆಸರು ಹೇಳಿಕೊಂಡು ಬದುಕಿ ಬಿಡ್ತೀನಿ ಅಂತ ತನ್ನ ದುರಾಸೆಯಿಂದ ಶ್ರೀವಲ್ಲಿಯನ್ನು ಬಳಸಿಕೊಳ್ಳುವ ಪ್ರಯತ್ನ ಮಾಡ್ತಾಳೆ. ಆರಂಭದಲ್ಲಿ ನಿಮಗೆ ಮನೆ ಯಾಕೆ ಎಲ್ಲರೂ ಒಟ್ಟಿಗೆ ಇರೋಣ ಎನ್ನುವ ಶ್ರೀವಲ್ಲಿ ನಂತರ ಮದುವೆಯಾದ ಮೇಲೆ ನಾನು ಅಪ್ಪನ ಬಳಿ ಕೇಳಿ ಮನೆ ಬರೆದು ಕೊಡ್ತೀನಿ ಅಂತ ಕಾಂತಮ್ಮನಿಗೆ ಹೇಳ್ತಾಳೆ. ತನ್ನ ಮಾತು ಸಾಧಿಸಿದ ಖುಷಿಯಲ್ಲಿ ಇರುತ್ತಾಳೆ ಕಾಂತಮ್ಮ.
ಶ್ರೀವಲ್ಲಿ– ಸುಬ್ಬು ಮದುವೆಯಾಗೊಲ್ಲ, ಪದ್ಮನಾಭರಿಗೆ ತಿಳಿಯಿತು ಸತ್ಯ
ಮನೆಯವರೆಲ್ಲ ಮದುವೆ ತಯಾರಿ, ಮನೆ ಕ್ಲೀನಿಂಗ್ ಕೆಲಸದಲ್ಲಿ ಬ್ಯುಸಿ ಇದ್ರೆ ಪದ್ಮನಾಭ ಮಾತ್ರ ಪಂಚಾಂಗ ಹಿಡಿದು ಕುಳಿತಿರುತ್ತಾರೆ. ಪಂಚಾಂಗ, ಜಾತಕ ನೋಡಿ ತಲೆ ಕೆಡಿಸಿಕೊಂಡಿರುತ್ತಾರೆ. ಅವರು ಸುಬ್ಬು ಹಾಗೂ ಶ್ರೀವಲ್ಲಿ ಜಾತಕ ನೋಡುತ್ತಿರುತ್ತಾರೆ. ಅವರಿಗೆ ಎಷ್ಟೇ ನೋಡಿದ್ರು ಇವರ ಜಾತಕ ಹೊಂದಾಣಿಕೆ ಬಂದಿರುವುದಿಲ್ಲ. ಇದರಿಂದ ಅವರಿಗೆ ಇಲ್ಲೇನೋ ತೊಂದರೆ ಇದೆ, ಇಂದ್ರಮ್ಮ ಸುಬ್ಬು–ಶ್ರೀವಲ್ಲಿ ಜಾತಕ ನೋಡಿಸಿದವರು ಈ ಇಬ್ಬರಿಗೂ ಕಂಕಣಬಲ ಇಲ್ಲ ಎನ್ನುವ ಸತ್ಯ ಯಾಕೆ ಹೇಳಿಲ್ಲ. ಹಾಗಾದರೆ ನಮ್ಮ ಸುಬ್ಬು ಬದುಕೋದು ಯಾರ ಜೊತೆ, ಸುಬ್ಬುಗೆ ಯಾರ ಜೊತೆ ಮದುವೆ ಆಗಬಹುದು ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ಪದ್ಮನಾಭರಿಗೆ ಶ್ರೀವಲ್ಲಿ ಜೊತೆ ಸುಬ್ಬು ಮದುವೆ ನಡೆಯುವುದಿಲ್ಲ ಎನ್ನುವ ವಿಚಾರ ದೃಢವಾಗುತ್ತದೆ.
ಶ್ರಾವಣಿಯಿಂದ ಸುಬ್ಬುಗೆ ಪ್ರೇಮ ನಿವೇದನೆ ಮಾಡಲು ಸಾಧ್ಯವಾಗುತ್ತಾ, ಪದ್ಮನಾಭ ಅಂದುಕೊಂಡಂತೆ ಸುಬ್ಬು ಬಾಳಿಗೆ ಬರುವ ಹುಡುಗಿ ಶ್ರೀವಲ್ಲಿ ಆಗಿರೋದಿಲ್ವಾ, ವಿಜಯಾಂಬಿಕಾ ಉಪಾಯಗಳೆಲ್ಲಾ ತಲೆ ಕೆಳಗಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ