ಸುಬ್ಬು ಆಯ್ಕೆ ಮಾಡಿದ ಮದುವೆ ಸೀರೆ ಕಂಡು ಖುಷಿಯಲ್ಲಿ ತೇಲುತ್ತಿರುವ ಶ್ರಾವಣಿಗೆ ಸದ್ಯದಲ್ಲೇ ತಿಳಿಯಲಿದೆ ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ
ಮೊಮ್ಮಗಳ ಬಳಿ ಕ್ಷಮೆ ಕೇಳಿದ್ರು ಲಲಿತಾದೇವಿ. ವರಲಕ್ಷ್ಮೀ ಮದುವೆಗೂ ತಾವೇ ಬಟ್ಟೆ ಕೊಡಿಸುತ್ತೇವೆ ಅಂದ್ರು ಮಿನಿಸ್ಟರ್ ವೀರೇಂದ್ರ. ಮದುವೆ ಸೀರೆ ಖರೀದಿಗೆ ಸುಬ್ಬು ಜೊತೆ ಹೋಗಿ, ಅವನ ಆಯ್ಕೆಯ ಸೀರೆಯನ್ನು ಮೆಚ್ಚಿಕೊಂಡ ಶ್ರಾವಣಿ. ಸುಬ್ಬು ಗೊಂದಲಕ್ಕಿನ್ನೂ ಸಿಕ್ಕಿಲ್ಲ ಪರಿಹಾರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 13ರ ಸಂಚಿಕೆಯಲ್ಲಿ ಏನೇನಾಯ್ತು?

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 13ರ ಸಂಚಿಕೆಯಲ್ಲಿ ಶ್ರಾವಣಿ ತನ್ನ ಪ್ರೀತಿ ವಿಚಾರವನ್ನು ಸುಬ್ಬು ಬಳಿ ಹೇಳಿಕೊಳ್ಳಬೇಕು ಎಂದುಕೊಂಡಾಗಲೇ ತಾನು ತಲೆಸುತ್ತಿ ಬಿದ್ದು, ಮೊಮ್ಮಗಳು ಪ್ರಪೋಸ್ ಮಾಡಲು ಸಾಧ್ಯವಾಗದೇ ಇದ್ದದ್ದು ಲಲಿತಾದೇವಿಯವರಿಗೆ ನೋವು ತಂದಿರುತ್ತದೆ. ಅದಕ್ಕಾಗಿ ಶ್ರಾವಣಿ ಬಳಿ ಕ್ಷಮೆ ಕೇಳುತ್ತಾರೆ. ಅದಕ್ಕೆ ಶ್ರಾವಣಿ ‘ಅಜ್ಜಿ ನಾನು ಸುಬ್ಬುಗೆ ಪ್ರಪೋಸ್ ಮಾಡಲು ಜೀವನಪೂರ್ತಿ ಸಮಯವಿದೆ. ಮದುವೆಯಾದ ಮೇಲೆ ದಿನಕ್ಕೆ 100 ಸಲ ಸುಬ್ಬುಗೆ ಐ ಲವ್ ಯು ಹೇಳ್ತೀನಿ‘ ಅಂತ ಸಂಭ್ರಮದಲ್ಲಿ ತೇಲಾಡುತ್ತಿರುತ್ತಾಳೆ. ಅಷ್ಟೊತ್ತಿಗೆ ಸುರೇಂದ್ರ ಬಂದು ಬಟ್ಟೆ ಮಳಿಗೆಗೆ ಹೋಗಿ ಸೀರೆ ನೋಡಿ ಬರುವಂತೆ ಶ್ರಾವಣಿಗೆ ಹೇಳುತ್ತಾರೆ.
ವರಲಕ್ಷ್ಮೀ ಮದುವೆಗೆ ಮಿನಿಸ್ಟರ್ ಕಡೆಯಿಂದ ಭರ್ಜರಿ ಗಿಫ್ಟ್
ಸುಬ್ಬು, ಪದ್ಮನಾಭ ಮನೆಯಲ್ಲಿ ಊಟ ಮಾಡುತ್ತಿರುವಾಗ ವೀರೇಂದ್ರ ಪದ್ಮನಾಭಗೆ ಕಾಲ್ ಮಾಡುತ್ತಾರೆ. ಯಜಮಾನರ ಕಾಲ್ ಎಂದುಕೊಂಡು ಊಟ ಮಾಡುವುದನ್ನೇ ಬಿಟ್ಟು ಎದ್ದು ಬರುವ ಪದ್ಮನಾಭ ಹೇಳಿ ಯಜಮಾನ್ರೇ, ಇಷ್ಟೊತ್ತಲ್ಲಿ ಕಾಲ್ ಮಾಡಿದ್ರಿ ಅಂತಾರೆ. ಅದಕ್ಕೆ ವೀರೇಂದ್ರ ‘ಏನಿಲ್ಲ ಪದ್ಮನಾಭ ಅವರೇ, ನಮ್ಮ ಸುರೇಂದ್ರ, ಶ್ರಾವಣಿ ಮದುವೆ ಬಟ್ಟೆ ಖರೀದಿಸಲು ಒಂದು ಮಳಿಗೆ ಗೊತ್ತು ಮಾಡಿದ್ದಾನೆ. ನೀವು ಹಾಗೂ ನಿಮ್ಮ ಮನೆಯವರೆಲ್ಲಾ ಅಲ್ಲಿಗೆ ಹೋಗಿ ವರಲಕ್ಷ್ಮೀ ಮದುವೆಗೂ ಬಟ್ಟೆ ಖರೀದಿ ಮಾಡಿ, ಸುರೇಂದ್ರಗೆ ನಾನು ಎಲ್ಲಾ ಹೇಳಿ ಇರ್ತೀನಿ‘ ಅಂತಾರೆ. ಅದಕ್ಕೆ ಪದ್ಮನಾಭ ‘ಅಯ್ಯೋ ಯಜಮಾನ್ರೇ, ಈಗ ಅದೆಲ್ಲಾ ಯಾಕೆ. ನಾವೇ ತಗೋತೀವಿ ಬಿಡಿ, ನಿಮಗೆ ತೊಂದರೆ ಕೊಡೋದು ಸರಿ ಬರೋಲ್ಲ‘ ಅಂತಾರೆ. ಅದಕ್ಕೆ ವೀರೇಂದ್ರ ‘ವರಲಕ್ಷ್ಮೀ ನನಗೂ ಮಗಳು ಇದ್ದ ಹಾಗೆ. ಅವಳ ಮದುವೆಗೆ ನಾನು ಕೊಡುತ್ತಿರುವ ಸಣ್ಣ ಉಡುಗೊರೆ ಇದು ಅಂದ್ಕೊಳ್ಳಿ‘ ಅಂತ ಹೇಳ್ತಾರೆ. ಅದನ್ನ ಕೇಳಿ ಪದ್ಮನಾಭ ಅವರ ಮನಸ್ಸು ತುಂಬಿ ಬರುತ್ತದೆ. ವಿಶಾಲಾಕ್ಷಿ, ಸುಬ್ಬು ಕೂಡ ಈ ವಿಚಾರ ಕೇಳಿ ಸಂತಸ ಪಡುತ್ತಾರೆ.
ಶ್ರಾವಣಿಗೆ ಸೀರೆ ಸೆಲೆಕ್ಟ್ ಮಾಡಿದ ಸುಬ್ಬು
ಇತ್ತ ಸುಬ್ಬವೇ ತನ್ನನ್ನು ಮದುವೆಯಾಗುತ್ತಿರುವ ಹುಡುಗ ಎಂದುಕೊಂಡಿರುವ ಶ್ರಾವಣಿ ಸುಬ್ಬು ಜೊತೆ ಸೀರೆ ಖರೀದಿಗೆ ಬರುತ್ತಾಳೆ. ‘ನಮ್ಮ ಮದುವೆಗೆ ನೀನೇ ನನಗೆ ಸೀರೆ ಸೆಲೆಕ್ಟ್ ಮಾಡು ಸುಬ್ಬು‘ ಅಂತ ಹೇಳ್ತಾಳೆ. ಶ್ರಾವಣಿ ಮಾತು ಸುಬ್ಬುಗೆ ಒಗಟಾಗಿರುತ್ತದೆ. ಆದರೂ ಅವನು ಶ್ರೀವಲ್ಲಿ ಹಾಗೂ ತನ್ನ ಮದುವೆ ಬಗ್ಗೆಯೇ ಮೇಡಂ ಮಾತನಾಡುತ್ತಿರಬಹುದು ಎಂದುಕೊಂಡು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ಮೇಡಂ ನನ್ನ ನಂಬಿ ಸೀರೆ ಸೆಲೆಕ್ಟ್ ಮಾಡಲು ಹೇಳಿದ್ದಾರೆ ಅಂದುಕೊಂಡು ಒಂದು ಚೆಂದದ ಸೀರೆ ಸೆಲೆಕ್ಟ್ ಮಾಡುತ್ತಾನೆ. ಅವನು ಕೊಡಿಸಿದ ಸೀರೆ ಶ್ರಾವಣಿಗೆ ಸಖತ್ ಇಷ್ಟ ಆಗಿರುತ್ತೆ. ಶ್ರಾವಣಿ ಸುಬ್ಬುಗೊಂದು ಶರ್ಟ್ ಕೊಡಿಸುತ್ತಾಳೆ. ಅಷ್ಟೊತ್ತಿಗೆ ಪ್ರಿ ವೆಡ್ಡಿಂಗ್ ಶೂಟ್‌ಗೆ ಹೋಗಬೇಕು ಎಂಬುದು ನೆನಪಾಗುತ್ತದೆ. ಅಲ್ಲಿಂದ ಪ್ರಿ ವೆಡ್ಡಿಂಗ್ ಶೂಟ್‌ಗೆಂದು ಹೊರಡುತ್ತಾರೆ. ಆದರೆ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗುವ ಶ್ರಾವಣಿಗೆ ಒಂದು ಸತ್ಯ ತಿಳಿಯುತ್ತದೆ. ಆ ಸತ್ಯ ಏನು ಎಂಬುದನ್ನು ತಿಳಿಯಲು ನಾಳಿನ ಸಂಚಿಕೆ ವೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
