ನನ್ನ ಅಡುಗೆ ಭಯಾನಕ, ಅದಕ್ಕೆ ನಾರಾಯಣ ಮೂರ್ತಿ ತೂಕ ಇಷ್ಟಿದೆ! ಕಪಿಲ್‌ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್‌ ಸೀಕ್ರೇಟ್‌
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಅಡುಗೆ ಭಯಾನಕ, ಅದಕ್ಕೆ ನಾರಾಯಣ ಮೂರ್ತಿ ತೂಕ ಇಷ್ಟಿದೆ! ಕಪಿಲ್‌ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್‌ ಸೀಕ್ರೇಟ್‌

ನನ್ನ ಅಡುಗೆ ಭಯಾನಕ, ಅದಕ್ಕೆ ನಾರಾಯಣ ಮೂರ್ತಿ ತೂಕ ಇಷ್ಟಿದೆ! ಕಪಿಲ್‌ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್‌ ಸೀಕ್ರೇಟ್‌

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಸುಧಾ ಮೂರ್ತಿಯವರು ತಿಂಡಿ ತಯಾರಿಸಿದ ಬಳಿಕ ಉಪ್ಪು ಹಾಕಲು ಮರೆತ ಘಟನೆ ನೆನಪಿಸಿಕೊಂಡಿದ್ದಾರೆ. ಆದರೆ, ನಾರಾಯಣ ಮೂರ್ತಿಯವರು ಈಕೆ ಮಾಡಿದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ರಂತೆ.

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್‌ ಸೀಕ್ರೇಟ್‌
ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್‌ ಸೀಕ್ರೇಟ್‌

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ ಶನಿವಾರದ ಸಂಚಿಕೆಯಲ್ಲಿ ಇನ್ಫೋಸಿಸ್‌ ಸಹ ಸ್ಥಾಪಕ ನಾರಾಯಣ ಮೂರ್ತಿ ಮತ್ತು ತನ್ನ ಸಮಾಜಸೇವೆ, ಬರಹ, ಇನ್ಫೋಸಿಸ್‌ ಫೌಂಡೇಶನ್‌ ಕಾರ್ಯಗಳಿಂದ ಜನಪ್ರಿಯತೆ ಪಡೆದ ಸುಧಾ ಮೂರ್ತಿಯವರ ಬದುಕಿನ ಪ್ರೀತಿಯ ಕಥೆಗಳನ್ನು ಕೇಳಿ ಕಿರುತೆರೆ ಪ್ರೇಕ್ಷಕರು ಖುಷಿಯಾಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಸುಧಾ ಮೂರ್ತಿಯವರು ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಅನೇಕ ವಿಚಾರಗಳನ್ನು ಈ ಶೋನಲ್ಲಿ ಬಿಚ್ಚಿಟ್ಟಿದ್ದಾರೆ. ನಾನಾಗ ಟೆರ್ರಿಬಲ್‌, ಭಯಾನಕ ಅಡುಗೆ ಮಾಡುತ್ತಿದ್ದೆ ಎಂದು ಸುಧಾಮೂರ್ತಿ ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ, ನನ್ನ ಅಡುಗೆ ಚೆನ್ನಾಗಿಲ್ಲದೆ ಇದ್ದರೂ ನನ್ನ ಪಾಕ ಪ್ರಯತ್ನಗಳನ್ನು ನಾರಾಯಣ ಮೂರ್ತಿ ಮೆಚ್ಚುತ್ತಿದ್ದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಸುಧಾ ಮೂರ್ತಿ ಅಡುಗೆಮನೆ ಸೀಕ್ರೇಟ್‌

ನಾವಿಬ್ಬರು ಒಬ್ಬರಿಂದ ಒಬ್ಬರು ಹೇಗೆ ಸ್ಪೂರ್ತಿ ಪಡೆಯುತ್ತಿದ್ದೇವು ಎಂದು ಸುಧಾ ಮೂರ್ತಿ ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ತಿಳಿಸಿದ್ದಾರೆ. "ನಾನು ನಾರಾಯಣ ಮೂರ್ತಿಯಂತೆ ಕೆಲಸದ ಕುರಿತು ವರ್ಕಾಲಿಕ್‌ ಆಗಿದ್ದೇನೆ. ಸಮಯ ಪಾಲನೆಗೆ ಆದ್ಯತೆ ನೀಡುತ್ತೇನೆ. ನಾನು ಜೀವನದಲ್ಲಿ ಅದು ಇಲ್ಲ ಇದು ಇಲ್ಲ ಎಂದು ಎಂದಿಗೂ ದೂರುವುದಿಲ್ಲ. ನನ್ನದು ದೂರುವ ಪ್ರವೃತ್ತಿಯಲ್ಲ. ನನ್ನ ಜೀವನದ ಕುರಿತು ಕಂಪ್ಲೇಟ್‌ ಮಾಡುವುದಿಲ್ಲ. ಆದರೆ, ನಾನು ಚೆನ್ನಾಗಿ ಅಡುಗೆ ಮಾಡುವುದಿಲ್ಲ (ಟೆರ್ರಿಬಲ್‌ ಕುಕ್‌)" ಎಂದು ಸುಧಾ ಮೂರ್ತಿ ಹೇಳಿದ್ದಾರೆ.

"ನಾರಾಯಣ ಮೂರ್ತಿಯವರ ತೂಕ ನೋಡಿ, ಇದು ನನ್ನ ಅಡುಗೆಯ ಫಲ.... ಎಲ್ಲಾ ಪತ್ನಿಯರಿಗೆ ನನ್ನ ಸಲಹೆ ಏನೆಂದರೆ, ನಿಮ್ಮ ಪತಿಯ ತೂಕ ಇಳಿಕೆಯಾಗಬೇಕೆಂದರೆ ಚೆನ್ನಾಗಿ ಅಡುಗೆ ಮಾಡಬೇಡಿ" ಎಂದು ತಮಾಷೆ ಮಾಡಿದ್ದಾರೆ ಸುಧಾ ಮೂರ್ತಿ.

ಈ ಮಾತುಕತೆಯಲ್ಲಿ ಕಪಿಲ್‌ ಶರ್ಮಾ ಅವರು "ನಿಮ್ಮ ಪತಿ ಆಗಾಗ ಏನು ತಿನ್ನಲು ಬಯಸುತ್ತಾರೆ?" ಎಂದು ಪ್ರಶ್ನಿಸಿದರು. "ನಾನು ಅಡುಗೆಯಲ್ಲಿ ಎಕ್ಸ್‌ಪರ್ಟ್‌ ಅಲ್ಲ. ನಿಮಗೆ ಏನು ಅಡುಗೆ ಬೇಕು ಎಂದು ಕೇಳುವ ರಿಸ್ಕ್‌ ನಾನು ತೆಗೆದುಕೊಳ್ಳುವುದಿಲ್ಲ. ಅವರಿಗೆ ಏನು ಬೇಕು ಎಂದು ನನಗೆ ತಿಳಿದಿದೆ. ಅವರು ಫುಡ್ಡೀ ಅಲ್ಲ. ಅದು ನನಗಾದ ದೊಡ್ಡ ಲಾಭ" ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಹಿಂದೊಮ್ಮೆ ಅಡುಗ ಮಾಡುವಾಗ ಉಪ್ಪು ಹಾಕಲು ಮರೆತ ಪ್ರಸಂಗವನ್ನೂ ಸುಧಾ ಮೂರ್ತಿ ನೆನಪಿಸಿಕೊಂಡಿದ್ದಾರೆ. ಆದರೆ, ಉಪ್ಪು ಹಾಕಿಲ್ಲ, ನಿನಗೆ ಅಡುಗೆ ಬರೋದಿಲ್ಲ ಎಂದು ನಾರಾಯಣ ಮೂರ್ತಿ ಬೈದಿಲ್ವಂತೆ. ಇದರ ಬದಲು ಇವರು ಮಾಡಿರುವ ಪಾಕ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ರಂತೆ. "ನೀನು ಅಡುಗೆ ಮಾಡಲು ಸಮಯ ವಿನಿಯೋಗಿಸಿದೆ. ನಾನು ಅಡುಗೆ ಬಗ್ಗೆ ದೂರೋದಿಲ್ಲ ಎಂದು ಅವರು ಹೇಳಿದ್ದರು" ಎಂದು ಸುಧಾ ಮೂರ್ತಿ ನೆನಪಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ "ಹುಡುಗರ ಈಗಲೇ ಅಡುಗೆ ಕಲಿಯಬೇಕು, ಈ ಮೂಲಕ ತಮ್ಮ ಭವಿಷ್ಯದಲ್ಲಿ ಪತ್ನಿಯರಿಗೆ ಸಹಾಯ ಮಾಡಬಹುದು" ಎಂದು ತಮಾಷೆ ಮಾಡಿದ್ದಾರೆ.

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಸುಧಾ ಮೂರ್ತಿಯವರು ತಮ್ಮ ಪ್ರೇಮ ಕಥೆಯನ್ನೂ ಹಂಚಿಕೊಡಿದ್ದಾರೆ. ಸುಧಾ ಮೂರ್ತಿಯವರ ತಂದೆಯನ್ನು ಮೊದಲ ಬಾರಿಗೆ ಭೇಟಿಯಾಗಲು ನಾರಾಯಣ ಮೂರ್ತಿ ತಡವಾಗಿ ಬಂದ ಘಟನೆಯನ್ನು ಹೇಳಿದ್ದಾರೆ. ಇದೇ ಶೋನಲ್ಲಿ ತನ್ನ ಪತ್ನಿಯನ್ನು ಮೊದಲ ಬಾರಿಗೆ ಭೇಟಿಯಾಗುವಾಗ ಫ್ರೆಶ್‌ ಏರ್‌ ಅಂದ್ರೆ ತಾಜಾ ಗಾಳಿ ಸೇವಿಸಿದಂತೆ ಆಗುತ್ತಿತ್ತು ಎಂದು ಹೇಳಿದ್ದಾರೆ. 

Whats_app_banner