ಸ್ಟಾರ್‌ ಸುವರ್ಣದ ಹೊಸ ಧಾರಾವಾಹಿಗೆ ದಕ್ಷಿಣ ಭಾರತದ ಖ್ಯಾತ ನಟನ ಆಗಮನ; ಸ್ನೇಹದ ಕಡಲಲ್ಲಿ ಕುರಿತು ಕಿರುತೆರೆ ವೀಕ್ಷಕರಲ್ಲಿ ಹೆಚ್ಚಿದ ಕಾತರ
ಕನ್ನಡ ಸುದ್ದಿ  /  ಮನರಂಜನೆ  /  ಸ್ಟಾರ್‌ ಸುವರ್ಣದ ಹೊಸ ಧಾರಾವಾಹಿಗೆ ದಕ್ಷಿಣ ಭಾರತದ ಖ್ಯಾತ ನಟನ ಆಗಮನ; ಸ್ನೇಹದ ಕಡಲಲ್ಲಿ ಕುರಿತು ಕಿರುತೆರೆ ವೀಕ್ಷಕರಲ್ಲಿ ಹೆಚ್ಚಿದ ಕಾತರ

ಸ್ಟಾರ್‌ ಸುವರ್ಣದ ಹೊಸ ಧಾರಾವಾಹಿಗೆ ದಕ್ಷಿಣ ಭಾರತದ ಖ್ಯಾತ ನಟನ ಆಗಮನ; ಸ್ನೇಹದ ಕಡಲಲ್ಲಿ ಕುರಿತು ಕಿರುತೆರೆ ವೀಕ್ಷಕರಲ್ಲಿ ಹೆಚ್ಚಿದ ಕಾತರ

Snehada Kadalalli Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸ್ನೇಹದ ಕಡಲಲ್ಲಿ‘ ಧಾರಾವಾಹಿ ಪ್ರೋಮೊ ಮೂಲಕ ಗಮನ ಸೆಳೆದಿತ್ತು. ಇದೀಗ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಈ ಧಾರಾವಾಹಿಯ ಭಾಗವಾಗಲಿದ್ದು, ಯಾರಿರಬಹುದು ಆ ನಟ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಸ್ಟಾರ್ ಸುವರ್ಣ ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಬರ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟ
ಸ್ಟಾರ್ ಸುವರ್ಣ ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಬರ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟ

ಆಸೆ, ನಿನ್ನ ಜೊತೆ ನನ್ನ ಕಥೆ, ಶಾರದೆ, ನೀನಾದೆ ನಾ, ಗೌರಿಶಂಕರ, ಅವನು ಮತ್ತೆ ಶ್ರಾವಣಿ ಮುಂತಾದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಸ್ನೇಹದ ಕಡಲಲ್ಲಿ‘ ಎಂಬ ಹೊಸ ಧಾರಾವಾಹಿ ಸದ್ಯದಲ್ಲೇ ಪ್ರಸಾರ ಆರಂಭಿಸಲಿದೆ. ಪ್ರೋಮೊ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಧಾರಾವಾಹಿ ಇದೀಗ ಮತ್ತೊಂದು ಆಕರ್ಷಣೆಗೆ ಕಾರಣವಾಗಿದೆ.

ಸ್ನೇಹದ ಕಡಲಲ್ಲಿ ಧಾರಾವಾಹಿ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆ ಬರ್ತಿದ್ದಾರಂತೆ ದಕ್ಷಿಣ ಭಾರತದ ಖ್ಯಾತ ನಟ. ಆದರೆ ಅವರು ಯಾರು ಎಂಬುದನ್ನು ರಿವೀಲ್ ಮಾಡಿಲ್ಲ ವಾಹಿನಿ. ಬದಲಾಗಿ ಯಾರು ಎಂಬುದನ್ನು ಗೆಸ್ ಮಾಡಲು ಪ್ರೇಕ್ಷಕರಿಗೆ ಪ್ರೋಮೊ ಬಿಡುಗಡೆ ಮಾಡುವ ಮೂಲಕ ಚಾಲೆಂಜ್ ನೀಡಿದೆ. ಅಲ್ಲದೇ ಈ ಧಾರಾವಾಹಿಯಲ್ಲಿ ನಟಿಸಿರುವ ಇತರ ಕಲಾವಿದರು ಈ ಖ್ಯಾತ ನಟನ ಬಗ್ಗೆ ಮಾತನಾಡಿರುವ ವಿಡಿಯೊವನ್ನು ಕೂಡ ಪ್ರೋಮೊ ರೂಪದಲ್ಲಿ ಹಂಚಿಕೊಂಡಿದೆ.

ಹೊಸದೊಂದು ಮೈಲುಗಲ್ಲಿಗೆ ಸಜ್ಜಾಗಿರುವ ಸ್ಟಾರ್ ಸುವರ್ಣ ವಾಹಿನಿಯ ಹೊಸ ಧಾರಾವಾಹಿಯಲ್ಲಿ ನಟಸಿಲಿರುವ ಆ ಸ್ಟಾರ್ ನಟ ಯಾರಿರಬಹುದು ಎಂಬ ಕುತೂಹಲ ಈಗ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಅಲ್ಲದೇ ಪ್ರೋಮೊ ನೋಡಿದ ಹಲವು ಧಾರಾವಾಹಿ ಅಭಿಮಾನಿಗಳು ತಮಗೆ ಅನ್ನಿಸಿದ ಹೆಸರುಗಳನ್ನು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ. ಇದರಲ್ಲಿ ಹಲವರು ಗೆಸ್ ಮಾಡಿರುವ ಹೆಸರು ಖ್ಯಾತ ತೆಲುಗು ನಟ ಸುಮನ್ ಅವರದ್ದು. ಕೆಲವರು ದೇವರಾಜ್‌, ಅವಿನಾಶ್ ಅವರ ಹೆಸರನ್ನೂ ಹೇಳುತ್ತಿದ್ದಾರೆ.

ಹಾಗಾದರೆ ಪ್ರೇಕ್ಷಕರ ಊಹೆಯಂತೆ ನಿಜವಾಗ್ಲೂ ಟಾಲಿವುಡ್ ನಟ ಸುಮನ್ ಕನ್ನಡ ಕಿರುತೆರೆಗೆ ಬರ್ತಿದ್ದಾರಾ, ಬಂದರೂ ಅವರು ಅತಿಥಿ ಪಾತ್ರ ಮಾಡ್ತಾರಾ ಸಂಪೂರ್ಣ ಧಾರಾವಾಹಿಯಲ್ಲಿ ಇರ್ತಾರಾ, ಇವರಲ್ಲ ಅಂದ್ರೆ ಆ ವ್ಯಕ್ತಿ ಇನ್ನೂ ಯಾರಾಗಿರಬಹುದು ಈ ಎಲ್ಲವನ್ನೂ ಕಾದು ನೋಡಬೇಕಿದೆ.

ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ಚಂದು ಗೌಡ ಹಾಗೂ ನಮ್ಮನೆ ಯುವರಾಣಿ ಧಾರಾವಾಹಿ ಖ್ಯಾತಿಯ ಕಾವ್ಯಾ ಮಹಾದೇವ್ ನಾಯಕ ಹಾಗೂ ನಾಯಕಿಯಾಗಿ ನಟಿಸಲಿದ್ದು, ಸಮೀಪ್ ಆಚಾರ್ಯ ಅವರದ್ದು ನೆಗೆಟಿವ್ ರೋಲ್ ಎಂದು ಪ್ರೋಮೊ ನೋಡಿ ಅಂದುಕೊಳ್ಳಬಹುದು. ಈ ಧಾರಾವಾಹಿ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ನೀನಾದೆ ನಾ, ಕಾವೇರಿ ಕನ್ನಡ ಮೀಡಿಯಂ ಖ್ಯಾತಿಯ ಪ್ರೀತಂ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಅಂದ ಹಾಗೆ ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು ಗೌಡ, ಕಾವ್ಯ ಮಹಾದೇವ್‌, ಸಮೀಪ್ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೇಮಾ ಬೆಳವಾಡಿ, ಅನನ್ಯಾ ಕಾಸರವಳ್ಳಿ, ಕಾಮಿಡಿ ಕಿಲಾಡಿ ನಯನಾ, ಅಭಿಜ್ಞಾ ಭಟ್ ಮೊದಲಾದವರು ನಟಿಸಿದ್ದಾರೆ.

ನಟ ಸುಮನ್ ಹಿನ್ನೆಲೆ

ಸುಮನ್ ತೆಲುಗು ಮಾತ್ರವಲ್ಲ ಕನ್ನಡ ಮಲಯಾಳಂ ಹಾಗೂ ಹಿಂದಿ ಸಿನಿಮಾಗಳನ್ನೂ ನಟಿಸಿದ್ದಾರೆ. 10 ಭಾಷೆಯ ಒಟ್ಟು 700ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ ಖ್ಯಾತಿ ಇವರದ್ದು. ತುಳುನಾಡಿನ ಮೂಲದವರಾದ ಸುಮನ್‌ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಕರುಣಂ ಉಲ್ಲೈ ತಮಿಳು ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ಜಾಕಿ ಚಾನ್‌, ಮಿಸ್ಟರ್ ಪುಟ್ಸಾಮಿ, ಒನ್ ಮ್ಯಾನ್‌ ಆರ್ಮಿ, ನಿಲಾಂಬರಿ, ಬಿಂದಾಸ್‌, ಅರ್ಜುನ, ಸ್ವಯಂ ಖುಷಿ, ಅಂಜದ ಗಂಡು, ವಜ್ರಕಾಯ, ಭರಾಟೆ, ಹೋಮ್‌ ಮಿನಿಸ್ಟರ್ ಮುಂತಾದ ಕನ್ನಡ ಸಿನಿಮಾಗಳಲ್ಲು ಇವರು ನಟಿಸಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಲಿರುವ ಕನ್ನಡದ ರಿದಂ ಪಾತ್ರದಲ್ಲೂ ನಾಯಕಿy ತಂದೆಯ ಪಾತ್ರ ಮಾಡುತ್ತಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner