Muddu Sose Serial: ಮುದ್ದುಸೊಸೆ ಸೀರಿಯಲ್ ಕಥೆಯೇನು? ಕಲರ್ಸ್ ಕನ್ನಡದಲ್ಲಿ ಈ ಸೋಮವಾರದಿಂದ ಹೊಸ ಧಾರಾವಾಹಿ ಆರಂಭ
Muddu Sose Serial: ಕಲರ್ಸ್ ಕನ್ನಡದಲ್ಲಿ ಏಪ್ರಿಲ್ 14ರಿಂದ ಮುದ್ದು ಸೊಸೆ ಎಂಬ ಹೊಸ ಸೀರಿಯಲ್ ಆರಂಭವಾಗಲಿದೆ. ಈ ಸೀರಿಯಲ್‌ನ ತಾರಾಗಣ, ಸೀರಿಯಲ್ ಕಥೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ. ಈ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ತ್ರಿವಿಕ್ರಮ್ ನಾಯಕನಾಗಿ, ಪ್ರತಿಮಾ ಠಾಕುರ್ ನಾಯಕಿಯಾಗಿ ನಟಿಸಲಿದ್ದಾರೆ.

Muddu Sose Serial: ಕಲರ್ಸ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಗಿದಿದೆ. ಇದೇ ಸಮಯದಲ್ಲಿ ಮುದ್ದು ಸೊಸೆ ಎಂಬ ಹೊಸ ಸೀರಿಯಲ್ ಆರಂಭವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ 'ಮುದ್ದು ಸೊಸೆ'ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನಿರೀಕ್ಷಿತ ಧಾರಾವಾಹಿ ಏಪ್ರಿಲ್ 14ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.
ಮುದ್ದು ಸೊಸೆ ಸೀರಿಯಲ್ ಕಥೆಯೇನು?
ವೈದ್ಯೆ ಆಗಬೇಕೆಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದಾರ್ಥಿನಿ ವಿದ್ಯಾ; ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ 'ಮುದ್ದು ಸೊಸೆ'. ಮನಸ್ತುಂಬಾ ಓದು ತುಂಬಿರುವ, ಮನಸೊಪ್ಪದ ಮದುವೆಯಾಗಿರುವ 'ಮುದ್ದು ಸೊಸೆ' ಮನೆಮಂದಿಯೆಲ್ಲ ಸೇರಿ ನೋಡಲೇಬೇಕಾದ ಧಾರಾವಾಹಿ. ಪ್ರೀತಿ, ಸಂಬಂಧಗಳ, ಆತ್ಮವಿಶ್ವಾಸ -ಪ್ರಬಲ ಸಂಕಲ್ಪ ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಕಥಾ ಹಂದರದಿಂದ ' 'ಮುದ್ದು ಸೊಸೆ' ಪ್ರೇಕ್ಷಕರ ಹೃದಯ ಗೆಲ್ಲಲಿದೆ.
'ಎಸ್ಟ್ರೆಲ್ಲಾ ಸ್ಟೋರೀಸ್ ' ನಿರ್ಮಿಸುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯು ಬೊಗಸೆಗಣ್ಣಿನ ಬಯಕೆಯ ವಿದ್ಯಾಳ ಕತೆಯನ್ನು ಹೇಳುತ್ತದೆ. ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಅವಳ ಮದುವೆ ಮಾಡಬೇಕು, ಅಷ್ಟೇ! ವೈದ್ಯೆಯಾಗಬೇಕೆಂಬ ವಿದ್ಯಾಳ ಕನಸು, ಮದುವೆಯ ಕಾರಣದಿಂದ ಬದಿಗಿಡಲ್ಪಡುತ್ತದೆ. ಸಾಮಾಜಿಕ ಒತ್ತಡ ಮತ್ತು ಕುಟುಂಬದ ನಿರೀಕ್ಷೆಗಳ ನಡುವೆ ಅವಳ ಆಸೆ ಆಕಾಂಕ್ಷೆಗಳು ಮನದೊಳಗೆ ಮುದುಡಿದರೂ ಅವಳು ತನ್ನ ಕನಸುಗಳನ್ನು ಹೂವಾಗಿ ಅರಳಿಸಲು ಏನೆಲ್ಲಾ ಮಾಡುತ್ತಾಳೆ ಎನ್ನುವ ಕತೆ ಹೇಳುತ್ತದೆ ಈ ಧಾರಾವಾಹಿ. ಜೀವನದಲ್ಲಿ ಏನೇ ಅಡೆತಡೆ ಬಂದರೂ ತನ್ನ ಕನಸನ್ನು ನನಸಾಗಿಸಲು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ನಿರ್ಧರಿಸುವ ವಿದ್ಯಾಳ ಜೀವನದ ಕತೆಯೇ 'ಮುದ್ದು ಸೊಸೆ'.
ಸಕ್ಕರೆ ನಗರ ಮಂಡ್ಯದಲ್ಲಿ ಚಿತ್ರೀಕರಿಸಲಾಗಿರುವ ಈ ಧಾರಾವಾಹಿ, ಭಾರತದ ಗ್ರಾಮೀಣ ಕುಟುಂಬಗಳ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಈ ಎಲ್ಲ ಚೌಕಟ್ಟಿನಲ್ಲಿ ಒಬ್ಬ ಮಹಿಳೆಯ ರೂಪಾಂತರವನ್ನು ಜನರಿಗೆ ಮನಮುಟ್ಟುವಂತೆ ಹೇಳುತ್ತದೆ. ಧಾರಾವಾಹಿಯು ಪ್ರೀತಿ, ಗೌರವ ಮತ್ತು ಕುಟುಂಬ ಮೌಲ್ಯಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತ ಹೋಗುತ್ತದೆ.
ಹೊನ್ನೆಮಡು ಎಂಬ ಹಳ್ಳಿಯ ಒಂದು ಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾ, ವೈದ್ಯೆಯಾಗಬೇಕೆಂಬ ಕನಸಿನೊಂದಿಗೆ ಬೆಳೆದ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ, ಹುಲಿಕೆರೆಯ ಶ್ರೀಮಂತ ಕುಟುಂಬದಿಂದ ಬಂದ ಭದ್ರಗೌಡ, ತನ್ನ ತಂದೆ ಶಿವರಾಮೇಗೌಡರ ಆದೇಶಗಳನ್ನು ಪಾಲಿಸುವವನು. ಭದ್ರನ ಪಾಲಿಗೆ ಅಪ್ಪನೇ ದೇವ್ರು, ಅಪ್ಪನೇ ಉತ್ಸವ ಮೂರ್ತಿ. ತನ್ನ ತಂದೆಯ ಗೌರವ ಹೆಚ್ಚಿಸುವುದಕ್ಕಾಗಿ ಯಾವುದೇ ಕೆಲಸ ಮಾಡಬಲ್ಲ, ಕೆಣಕಿದರೆ ಯಾರನ್ನೂ ಬಿಡದ ಭದ್ರ ಮತ್ತು ಶಿವರಾಮೇಗೌಡನ ನಡುವೆ ಯಾರೂ ಮುರಿಯಲಾಗದ ಪ್ರೀತಿಯ ಬಂಧವಿರುತ್ತದೆ.
ಯಾರಿಗೂ ಬಗ್ಗದ ಕಠಿಣ ವ್ಯಕ್ತಿತ್ವದ ಜಮೀನ್ದಾರ ಶಿವರಾಮೇಗೌಡರಿಗೆ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಹಾಳಾಗುತ್ತಾರೆ ಎಂಬ ಗಟ್ಟಿಯಾದ ನಂಬಿಕೆ. ಶಿವರಾಮೇಗೌಡರು ತಮ್ಮ ಮಗನಿಗೆ ವಿದ್ಯಾಳನ್ನು ಮದುವೆ ಮಾಡಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ವಿದ್ಯಾಳ ತಂದೆ ಚೆಲುವರಾಯನಿಗೂ ಹೆಣ್ಣುಮಕ್ಕಳು ಓದುವುದರ ಬಗ್ಗೆ ವಿರೋಧ ಇರುವುದರಿಂದ ಅವನು ಕೂಡಾ ಈ ಮದುವೆಗೆ ಒಪ್ಪುತ್ತಾನೆ. ತನ್ನ ಕನಸುಗಳ ಬೆನ್ನತ್ತಿರುವ ವಿದ್ಯಾ ಒತ್ತಾಯದಿಂದ ಮದುವೆಯಾಗಬೇಕಾದಾಗ, ಆಕೆ ಪತ್ನಿಯಾಗಿ, ಸೊಸೆಯಾಗಿ ತನ್ನ ಸ್ವಂತ ಬದುಕನ್ನು ಕನಸನ್ನು ನಿಜ ಮಾಡಲು ಹೋರಾಡಬೇಕಾಗುತ್ತದೆ.
ವಿದ್ಯಾಳ ಮದುವೆ ಅವಳ ಕನಸುಗಳಿಗೆ ಅಡ್ಡಿಯಾಗುತ್ತದೆಯೇ? ತಂದೆಯ ಆದೇಶಗಳಿಗೆ ತಲೆಬಾಗುವ ಭದ್ರ, ವಿದ್ಯಾಳ ಕನಸುಗಳನ್ನು ಅರಿತಾಗ ತಂದೆಯ ವಿರೋಧ ಕಟ್ಟಿಕೊಂಡು ವಿದ್ಯಾಳನ್ನು ಓದಿಸುವನೇ? ಅವಳ ಮನದ ಒಳಗಿನ ನೋವನ್ನು ಅರ್ಥಮಾಡಿಕೊಳ್ಳುತ್ತಾನೆಯೇ? ಭದ್ರ ಮತ್ತು ವಿದ್ಯಾಳ ದಾಂಪತ್ಯವು ವಿದ್ಯಾಳ ಭವಿಷ್ಯಕ್ಕೆ ಸಹಾಯ ಮಾಡುತ್ತದೆಯೇ? ಎನ್ನುವುದನ್ನು ತಿಳಿಯಲು ಈ ಸೀರಿಯಲ್ ನೋಡಬಹುದು. ಏಪ್ರಿಲ್ 14 ರಿಂದ ಸೋಮವಾರದಿಂದ -ಶುಕ್ರವಾರ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ ಈ ಸೀರಿಯಲ್ ಪ್ರಸಾರವಾಗಲಿದೆ.

ವಿಭಾಗ