ಕಿರುತೆರೆಯಲ್ಲಿ ನೋಡಿ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಸಂಭ್ರಮ, ಯಾವ ಚಾನೆಲ್, ಯಾವಾಗ ಪ್ರಸಾರ? ಇಲ್ಲಿದೆ ವಿವರ
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಕಾರ್ಯಕ್ರಮವು ಇದೇ ಸೆಪ್ಟೆಂಬರ್ 8ರಂದು ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಮಧ್ಯಾಹ್ನ 3-5 ಗಂಟೆಗೆ ಪ್ರಸಾರವಾಗಲಿದೆ. ಕನ್ನಡ ಮಾತ್ರವಲ್ಲದೆ ಸ್ಟಾರ್ ಮಾ ಮೂವೀಸ್, ವಿಜಯ್ ಸೂಪರ್, ಏಷ್ಯಾನೆಟ್ ಮೂವೀಸ್‌ನಲ್ಲೂ ಕಮರ್ ಫಿಲ್ಮ್ ಫ್ಯಾಕ್ಟರಿಯ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಬೆಂಗಳೂರು: ರಕ್ಷಿತ್ ಶೆಟ್ಟಿ, ಸಿರಿ ರವಿಕುಮಾರ್ ಸೇರಿದಂತೆ ಹಲವು ಕಲಾವಿದರಿಗೆ ಇತ್ತೀಚೆಗೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ದೊರಕಿರುವ ಸಂಗತಿ ನಿಮಗೆ ತಿಳಿದಿರಬಹುದು. ಈ ಪ್ರಶಸ್ತಿ ಸಮಾರಂಭದ ಸಂಭ್ರಮದ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 8ರಂದು ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಮಧ್ಯಾಹ್ನ 3-5 ಗಂಟೆಗೆ ಪ್ರಸಾರವಾಗಲಿದೆ. ಕನ್ನಡ ಮಾತ್ರವಲ್ಲದೆ ಸ್ಟಾರ್ ಮಾ ಮೂವೀಸ್, ವಿಜಯ್ ಸೂಪರ್, ಏಷ್ಯಾನೆಟ್ ಮೂವೀಸ್‌ನಲ್ಲೂ ಕಮರ್ ಫಿಲ್ಮ್ ಫ್ಯಾಕ್ಟರಿಯ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಟಿವಿಯಲ್ಲಿ ನೋಡಿ ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮ
ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಯಶೋಗಾತೆಯನ್ನು ಸಾರುವ ಕಮರ್ ಫಿಲ್ಮ್ ಫ್ಯಾಕ್ಟರಿ ಪ್ರಸ್ತುತಪಡಿಸಿದ 69 ನೇ ಶೋಭಾ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಕಿರುತೆರೆಯಲ್ಲಿ ಪ್ರಸಾರಗೊಳ್ಳಲಿದೆ. ಪ್ರಣಯ ರಾಜ ಎಂದೇ ಪ್ರಖ್ಯಾತರಾಗಿರುವ ಶ್ರೀನಾಥ್ ಅವರಿಗೆ ವಿಶೇಷ ಗೌರವ ಸಮರ್ಪಿಸುವುದನ್ನೂ ಈ ಕಾರ್ಯಕ್ರಮ ಒಳಗೊಂಡಿರುತ್ತದೆ. ಇವರಿಗೆ ಗಮನಾರ್ಹ 57 ವರ್ಷಗಳ ವೃತ್ತಿಜೀವನ ಮತ್ತು 300 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಿದ್ಧಾರ್ಥ್ ಸೂರ್ಯನಾರಾಯಣ್ ಅವರು ತಮಿಳು ಚಿತ್ರ ಚಿತ್ತಾದಿಂದ "ಉನಕ್ಕುತಾನ್" ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಇದೇ ಚಿತ್ರದ ಅಭಿನಯಕ್ಕಾಗಿ ವಿಮರ್ಶಕರು ಮೆಚ್ಚಿದ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದು ಇದೇ ಸೆಪ್ಟೆಂಬರ್ 1 ರಂದು ಏಷ್ಯಾನೆಟ್ ಮೂವೀಸ್‌ನಲ್ಲಿ ಸಂಜೆ 4:30-6:30 ರವರೆಗೆ ಮಲಯಾಳಂ ಭಾಷೆಯಲ್ಲಿ ಪ್ರಸಾರಗೊಂಡಿತ್ತು. ತಮಿಳು ಪ್ರಸಾರವು ಸೆಪ್ಟೆಂಬರ್ 7 ರಂದು ವಿಜಯ್ ಸೂಪರ್‌ನಲ್ಲಿ ಸಂಜೆ 4-6 ಗಂಟೆಗೆ ಇರಲಿದೆ.
ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಮಧ್ಯಾಹ್ನ 3-5 ಗಂಟೆಗೆ ಕನ್ನಡದಲ್ಲಿ ಪ್ರಸಾರವಾದರೆ, ತೆಲುಗು ಪ್ರಸಾರವು ಸೆಪ್ಟೆಂಬರ್ 8 ರಂದು ಸಂಜೆ 6-8 ಗಂಟೆಗೆ ಸ್ಟಾರ್ ಮಾ ಮೂವೀಸ್‌ನಲ್ಲಿ ಮೂಡಿಬರಲಿದೆ. ಸಮಾರಂಭದಲ್ಲಿ ಗೌರವಾನ್ವಿತ ನಟರು, ಚಲನಚಿತ್ರ ನಿರ್ಮಾಪಕರು ಮಾತ್ರವಲ್ಲದೆ ಎಲ್ಲ ನಾಲ್ಕು ಚಲನಚಿತ್ರೋದ್ಯಮಗಳಲ್ಲಿನ ಬರಹಗಾರರು, ಸಂಗೀತಗಾರರು, ಛಾಯಾಗ್ರಾಹಕರು ಮತ್ತು ಸಂಕಲನಕಾರರ ಅಮೂಲ್ಯ ಕೊಡುಗೆಗಳನ್ನು ಗೌರವಿಸಲಾಗುತ್ತದೆ ಎಂದು ಫಿಲ್ಮ್ ಫೇರ್ ಪ್ರಕಟಣೆಯಲ್ಲಿ ತಿಳಿಸಿದೆ.
ಯಾರಿಗೆಲ್ಲ ಪ್ರಶಸ್ತಿ?
ಪುರುಷರ ಲೀಡಿಂಗ್ ರೋಲ್ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಗಳಿಸಿದ್ದಾರೆ. ಮಹಿಳಾ ಲೀಡಿಂಗ್ ರೋಲ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಸಿರಿ ರವಿಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿ ತೆಲುಗು ಸಿನಿಮಾದಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಲೀಡಿಂಗ್ ರೋಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ಪುರುಷ ವಿಭಾಗದ ಲೀಡಿಂಗ್ ರೋಲ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮಮ್ಮೂಟಿ ಹಾಗೂ ವಿನ್ಸಿ ಆಲೋಷಿಯಸ್ ಮಹಿಳಾ ವಿಭಾಗದ ಲೀಡಿಂಗ್ ರೋಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಹಾಗೆಯೇ ತಮಿಳು ಸಿನಿಮಾರಂಗದಲ್ಲಿ ವಿಕ್ರಮ್ ಮತ್ತು ನಿಮಿಷಾ ಸಜಯನ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಲೀಡಿಂಗ್ ರೋಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಎಲ್ಲ ತಾರೆಯರು ಕಳೆದ ವರ್ಷದಲ್ಲಿನ ತಮ್ಮ ಅತ್ಯುತ್ತಮ ಸಾಧನೆಗಳಿಗಾಗಿ ಅಸ್ಕರ್ ಬ್ಲ್ಯಾಕ್ ಲೇಡಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಚಾನೆಲ್ ಮತ್ತು ಪ್ರಸಾರ ಸಮಯ
- ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಕನ್ನಡ ಪ್ರಸಾರ: 8ನೇ ಸೆಪ್ಟೆಂಬರ್ 2024, ಅಪರಾಹ್ನ 3:00 ರಿಂದ 5:00
- ಸ್ಟಾರ್ ಮಾ ಮೂವೀಸ್‌ನಲ್ಲಿ ತೆಲುಗು ಪ್ರಸಾರ: 8ನೇ ಸೆಪ್ಟೆಂಬರ್ 2024, ಸಂಜೆ 6:00 ರಿಂದ ರಾತ್ರಿ 8:00
- ವಿಜಯ್ ಸೂಪರ್‌ನಲ್ಲಿ ತಮಿಳು ಪ್ರಸಾರ: 7ನೇ ಸೆಪ್ಟೆಂಬರ್ 2024, ಸಂಜೆ 4:00 ರಿಂದ 6:00