ಕನ್ನಡ ನಂದಿನಿ ಧಾರಾವಾಹಿ ನಟ ರಾಹುಲ್ ರವಿ ವಿರುದ್ಧ ಅರೆಸ್ಟ್ ವಾರೆಂಟ್; ಪತ್ನಿ ಲಕ್ಷ್ಮಿಗೆ ಕಿರುಕುಳ ಆರೋಪ
Serial Actor Rahul Ravi: ಕನ್ನಡದ ನಂದಿನಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಜನಪ್ರಿಯತೆ ಪಡೆದಿದ್ದ ರಾಹುಲ್ ರವಿ ವಿರುದ್ಧ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ಪತ್ನಿಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ರಾಹುಲ್ ರವಿ ತರೆಮರೆಸಿಕೊಂಡಿದ್ದಾರೆ.
ಕನ್ನಡದ ನಂದಿನಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಜನಪ್ರಿಯತೆ ಪಡೆದಿದ್ದ ರಾಹುಲ್ ರವಿ ವಿರುದ್ಧ ಚೆನ್ನೈ ಪೊಲೀಸರು ಬಂಧನ ವಾರೆಂಟ್ ಹೊರಡಿಸಿದ್ದಾರೆ. ಇತ್ತೀಚೆಗೆ ರಾಹುಲ್ ರವಿ ವಿರುದ್ಧ ಅವರ ಪತ್ನಿ ಕಿರುಕುಳ ದೂರು ದಾಖಲಿಸಿದ್ದರು. ದೂರಿನ ಬಳಿಕ ಬಂಧನ ಭೀತಿಯಿಂದ ರಾಹುಲ್ ತಲೆಮರೆಸಿಕೊಂಡಿದ್ದರು. ರಾಹುಲ್ ರವಿ ಅವರು ತಮಿಳು ಮತ್ತು ಕನ್ನಡ ಕಿರುತೆರೆಯ ಜನಪ್ರಿಯ ನಟ.
ನಂದಿನಿ ಧಾರಾವಾಹಿಯಲ್ಲಿ ನಟಿಸಿ ಕನ್ನಡ ಟಿವಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ರಾಹುಲ್ ರವಿ ಅದಾದ ಬಳಿಕ ಹಲವು ಟಿವಿ ಕಾರ್ಯಕ್ರಮಗಳು, ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದರು. ಇವರು 2020ರಲ್ಲಿ ಲಕ್ಷ್ಮಿಯನ್ನು ಮದುವೆಯಾಗಿದ್ದರು. ಕೆಲವು ದಿನಗಳ ಹಿಂದೆ ಲಕ್ಷ್ಮಿ ಅವರು ರಾಹುಲ್ ವಿರುದ್ಧ ಚೆನ್ನೈ ಪೊಲೀಸರಿಗೆ ಕಿರುಕುಳದ ದೂರು ನೀಡಿದ್ದರು.
ಲಕ್ಷ್ಮೀಯವರನ್ನು ವಿವಾಹವಾದ ಮೂರೇ ವರ್ಷಗಳಲ್ಲಿ ಇವರಿಬ್ಬರ ನಡುವೆ ಜಗಳ ಆರಂಭವಾಗಿತ್ತು. ರಾಹುಲ್ ರವಿ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ . ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದೆ ಎಂದು ವರದಿಗಳು ತಿಳಿಸಿವೆ.
ರಾಹುಲ್ ರವಿ ಅವರು ಮದುವೆಯಾದ ಬಳಿಕವೂ ಬೇರೆ ಯುವತಿ ಜತೆ ಆತ್ಮೀಯತೆ, ಸಂಬಂಧ ಹೊಂದಿದ್ದರು ಎಂದು ಪತ್ನಿ ಆರೋಪಿಸಿದ್ದರು. ತನ್ನ ಪತಿಗೆ ಬೇರೆ ಯುವತಿ ಜತೆ ಸಂಬಂಧ ಇರುವ ವಿಚಾರ ತಿಳಿದ ಬಳಿಕ ಲಕ್ಷ್ಮೀ ಅವರು ನೇರವಾಗಿ ಪೊಲೀಸರ ಜತೆ ಯುವತಿ ಇರುವ ಅಪಾರ್ಟ್ಮೆಂಟ್ಗೆ ಮಧ್ಯರಾತ್ರಿ ಹೋಗಿದ್ದರು. ಈ ಸಂದರ್ಭದಲ್ಲಿ ತನ್ನ ಪತಿ ಬೇರೊಬ್ಬ ಯುವತಿ ಜತೆ ಬೆಡ್ರೂಂನಲ್ಲಿರುವುದನ್ನು ತಿಳಿದುಬಂದಿತ್ತು. ನಂದಿನಿ ಧಾರಾವಾಹಿ ನಟನ ವಿರುದ್ಧ ಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನ ಪತ್ನಿಗೆ ಮಾನಸಿಕ ಆರೋಗ್ಯ ಸರಿಯಿಲ್ಲ, ಆಕೆ ಮೆಂಟಲ್ ಎಂದೆಲ್ಲ ರಾಹುಲ್ ರವಿ ಅವರು ಕೋರ್ಟ್ನಲ್ಲಿ ವಾದಿಸಿದ್ದರು. ಆದರೆ, ಅವರ ಆರೋಪವನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿತ್ತು. ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು. ಇದೀಗ ರಾಹುಲ್ ರವಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.
ಕನ್ನಡದ ನಂದಿನಿ ಧಾರಾವಾಹಿಯಲ್ಲಿ ನಟನೆ
ರಾಹುಲ್ ರವಿ ಅವರು ಕನ್ನಡ ಟಿವಿ ವೀಕ್ಷಕರಿಗೆ ನಂದಿನಿ ಧಾರಾವಾಹಿ ಮೂಲಕ ಚಿರಪರಿಚಿತರು. ನಂದಿನಿ ಧಾರಾವಾಹಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಸಾರವಾಗುತ್ತಿತ್ತು. ಮಾಡೆಲ್ ಆಗಿಯೂ ರಾಹುಲ್ ಜನಪ್ರಿಯತೆ ಪಡೆದಿದ್ದರು. ತಮಿಳಿನ ಪೊನ್ನಂಬಿಲಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಇವರು ಇಂಡಿಯನ್ ಲವ್ ಸ್ಟೋರಿ, ಕಟ್ಟುಮ್ ಮಕನ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.