BBK 11: ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬೆಂಕಿ ಬಿರುಗಾಳಿ ಪ್ರವಾಹ, ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೊದಲ ವಿಡಿಯೋ
Bigg boss kannada: ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ದಿನಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ ಕಲರ್ಸ್ ಕನ್ನಡವು ಬಿಗ್‌ಬಾಸ್ ಲೋಗೊ ಅನಾವರಣ ಮಾಡಿದೆ. ಬೆಂಕಿ ಬಿರುಗಾಳಿ ಜತೆಗೆ ಪ್ರವಾಹವೂ ಲೋಗೋದಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಕಲರ್ಸ್ ಕನ್ನಡವು ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಂತಹ ಮೊದಲ ವಿಡಿಯೋ ಬಿಡುಗಡೆ ಮಾಡಿದೆ. ಈ ಬಾರಿಯ ಬಿಬಿಕೆಯಲ್ಲಿ ಬೆಂಕಿ ಮತ್ತು ಬಿರುಗಾಳಿ ಇರುವ ಸೂಚನೆ ನೀಡಿದೆ. ಆದರೆ, ಕಿಚ್ಚ ಸುದೀಪ್ ಈ ಬಾರಿ ಬಿಗ್‌ಬಾಸ್ ಹೋಸ್ಟ್ ಮಾಡ್ತಾರೋ ಇಲ್ವೋ ಎನ್ನುವುದಕ್ಕೆ ಆ ವಿಡಿಯೋದಲ್ಲಿ ಉತ್ತರ ದೊರಕಿಲ್ಲ. ಕೇವಲ ಬಿಗ್‌ಬಾಸ್ ಕಣ್ಣು ಮಾತ್ರ ಬೆಂಕಿ ಮತ್ತು ಬಿರುಗಾಳಿಯ ನಡುವೆ ಕಾಣಿಸಿಕೊಂಡಿದೆ. ಜತೆಗೆ, ಎಂದಿನಂತೆ ಹಿನ್ನೆಲೆಯಲ್ಲಿ "ಬಿಗ್‌ಬಾಸ್... ಬಿಗ್‌ಬಾಸ್" ಯುವತಿಯ ಧ್ವನಿ ಕೇಳಿಸಿದೆ. ಈ ವಿಡಿಯೋದಲ್ಲಿ "ಹೌದು ಸ್ವಾಮಿ" ಎಂದು ಕಿಚ್ಚ ಹೇಳಿಲ್ಲ.
ಬಿಗ್‌ಬಾಸ್ ಕನ್ನಡದ ಪ್ರಮೋ ವಿಡಿಯೋ
ಈ ಪ್ರಮೋ ವಿಡಿಯೋದಲ್ಲಿ ಮಿಂಚು ಇದೆ. ಮಿಂಚಿನ ಜತೆಗೆ ಬೆಂಕಿಯೂ ಇದೆ. ಬೆಂಕಿಯನ್ನು ಆರಿಸಲು ನೀರೂ ಇದೆ. ಎಂತಹ ಗುಡುಗು ಸಿಡಿಲು ಮಿಂಚೇ ಬರಲಿ, ನೋಡಿಕೊಳ್ತಿವೆ ಅನ್ನೋ ರೀತಿ ಮೊದಲ ಪ್ರಮೋ ಇದೆ. ಕಲರ್ಸ್ ಕನ್ನಡವು ಬಿಗ್‌ಬಾಸ್ ಕನ್ನಡ ಸೀಸನ್ 11 ಎಂಬ ಶೀರ್ಷಿಕೆಯಡಿಯಲ್ಲಿ ಕಲರ್‌ಫುಲ್ ಕತೆ, ಕಿಚ್ಚ ಸುದೀಪ್ ಹ್ಯಾಷ್ ಟ್ಯಾಗ್‌ನಡಿ ಈ ವಿಡಿಯೋ ಹಂಚಿಕೊಂಡಿದೆ. ಈ ಹ್ಯಾಷ್‌ಟ್ಯಾಗ್ ನೀಡಿರುವುದರಿಂದ ಈ ಬಾರಿ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ ಹೋಸ್ಟ್ ಮಾಡುವುದು ಪಕ್ಕಾ ಆಗಿದೆ.
ಬಿಗ್‌ಬಾಸ್ ಕನ್ನಡ 11ರ ಲೋಗೋ
ಪ್ರತಿಬಾರಿಯೂ ಬಿಗ್‌ಬಾಸ್ ಕನ್ನಡದ ಲೋಗೋ ವಿಭಿನ್ನವಾಗಿರುತ್ತದೆ. ಅದೇ ಕಣ್ಣಾದರೂ ಕಣ್ಣಿನ ಸುತ್ತ ಸಾಕಷ್ಟು ಹೊಸತನವನ್ನು ಅಳವಡಿಸಲಾಗುತ್ತದೆ. ಈ ಬಾರಿಯ ಲೋಗೋದಲ್ಲಿ ಬೆಂಕಿಯ ಜತೆಗೆ ನೀರೂ ಇದೆ. ಸುದೀಪ್ ಹುಟ್ಟುಹಬ್ಬದ ಮುನ್ನದಿನವೇ ಈ ಪ್ರಮೋ ಬಿಡುಗಡೆ ಮಾಡಿ ಕಿಚ್ಚನ ಅಭಿಮಾನಿಗಳ ಮನಸ್ಸಲ್ಲಿ ಬೆಂಕಿ ಬಿರುಗಾಳಿಯ ತರಂಗ ಮೂಡಿಸಿದೆ ಕಲರ್ಸ್ ಕನ್ನಡ. ಸದ್ಯದಲ್ಲಿಯೂ ಬಿಗ್‌ಬಾಸ್‌ನ ಪೂರ್ಣ ಪ್ರಮಾಣದ ಪ್ರಮೋ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಸಾಕಷ್ಟು ಜನರ ಹೆಸರುಗಳು ಕೇಳಿಬರುತ್ತಿವೆ. ಸದ್ಯದಲ್ಲಿಯೇ ಮುಗಿಯಲಿರುವ ಸೀರಿಯಲ್ ಕಲಾವಿದರ ಹೆಸರುಗಳೂ ಕೇಳಿಬರುತ್ತಿವೆ. ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಬಿಗ್‌ಬಾಸ್ ಹಬ್ಬ ಆರಂಭವಾಗಲಿದೆ.
ಎಲ್ಲಿದೆ ಬಿಗ್‌ಬಾಸ್ ಮನೆ?
ಬಿಗ್‌ಬಾಸ್ ಮನೆ ಈಗ ಉದ್ಯಾನನಗರಿ ಬೆಂಗಳೂರಿನಲ್ಲಿಯೇ ಇದೆ. ಬಿಬಿಕೆಯ ಮೊದಲ ಎರಡು ಪ್ರದರ್ಶನಗಳು ಪುಣೆಯ ಲೋನಾವಾಲಾದಲ್ಲಿ ನಡೆದಿತ್ತು. ಇದಾದ ಬಳಿಕ ಬೆಂಗಳೂರಿನ ಫಿಲ್ಮ್ ಸಿಟಿಯಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣ ಮಾಡಲಾಯಿತು. ಕಳೆದ ವರ್ಷ ಹೊಸ ಮನೆಯಲ್ಲಿ ಶೋ ನಡೆಯುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಶೋ ಮುಗಿದ ಬಳಿಕ ಮುಂದಿನ ಶೋ ನಡೆಯುವ ಅವಧಿಯವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಈ ಬಾರಿ ಕಳೆದ ವರ್ಷದ ಮನೆಯಲ್ಲೇ ಶೋ ನಡೆಯುವ ಸೂಚನೆಯಿದೆ.