ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗೋರು ಯಾರು? ನಾಮಿನೇಷನ್ ಪ್ರಕ್ರಿಯೆ ಆರಂಭ, ಇಂದು ಚೂರಿ ಚುಚ್ಚುವ ಟಾಸ್ಕ್
Bigg Boss Kannada Season 10: ಬಿಗ್‌ಬಾಸ್ ಕನ್ನಡ ಫಿನಾಲೆ ಹೊಸ್ತಿಲಲ್ಲಿದೆ. ಇಂದಿನ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಜಿಯೋ ಸಿನೆಮಾ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ನಾಮಿನೇಷನ್ ಚಟುವಟಿಕೆಯ ಝಲಕ್ ಕಾಣಿಸಿದೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10 ಫಿನಾಲೆ ಹಂತಕ್ಕೆ ತಲುಪಲು ಇನ್ನೇನೂ ಕೆಲವು ವಾರ ಬಾಕಿ ಇದೆ. ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್ ಫೈನಲ್ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನಾಮಿನೇಷನ್ ಚಟುವಟಿಕೆ ನಡೆದಿದೆ. ಅದರ ಝಲಕ್ ಜಿಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಗೆ ವಿಶೇಷ ಟಾಸ್ಕ್ ನೀಡಿರುವುದು ಬಹಿರಂಗಗೊಂಡಿದೆ.
ನಾಮಿನೇಷನ್ ಟಾಸ್ಕ್ ಏನು?
ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.
ಈ ಚಟುವಟಿಕೆಯಲ್ಲಿ ಕಾರ್ತಿಕ್ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ತನಿಷಾ ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ.
ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು.
ಬಿಗ್‌ಬಾಸ್ ಕನ್ನಡದ ನಿನ್ನೆಯ ಎಪಿಸೋಡ್‌ನಲ್ಲಿ ಎಂದಿನಂತೆ ಸಾಕಷ್ಟು ಚರ್ಚೆ, ಕಿತ್ತಾಟ ನಡೆದಿದೆ. ವಿಶೇಷವಾಗಿ ವಿನಯ್ ಗೌಡ ಮತ್ತು ಪ್ರತಾಪ್ ಮಧ್ಯೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಫಿನಾಲಿ ತಲುಪಲು ಅರ್ಹತೆ ಇಲ್ಲದೆ ಇರುವವರ ಹೆಸರು ಸೂಚಿಸಲು ತಿಳಿಸಿದಾಗ ವಿನಯ್ ಅವರು ಡ್ರೋನ್ ಪ್ರತಾಪ್ ಹೆಸರು ಸೂಚಿಸಿದ್ದಾರೆ. ಇದಾದ ಬಳಿಕ ಪ್ರತಾಪ್ ಕೂಡ ವಿನಯ್ ಹೆಸರನ್ನು ಸೂಚಿಸಿದ್ದಾರೆ. ವಿನಯ್ ನಾಲಗೆಗೆ ಲಗಾಮು ಬೀಳುವ ತನಕ ಅವರಿಗೆ ಇಲ್ಲಿರಲು ಅರ್ಹತೆಯಿಲ್ಲ ಎಂದು ಪ್ರತಾಪ್ ಹೇಳಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಅಮಾಯಕರ ರೀತಿ ಇರೋದು ಎಂಬ ವಿಷಯದ ಚರ್ಚೆ ನಡೆಯುತ್ತಿದ್ದಾಗ ವಿನಯ್ ಅವರು ಪ್ರತಾಪ್ ಹೆಸರು ಸೂಚಿಸಿದ್ದರು. ಈ ಸಂದರ್ಭದಲ್ಲಿ ವಿನಯ್ ಬಳಸಿರುವ ಕೆಲವು ಪದಗಳಿಗೂ ಬಿಗ್‌ಬಾಸ್ ಮನೆಯೊಳಗೆ ಆಕ್ಷೇಪ ವ್ಯಕ್ತವಾಗಿತ್ತು. "ಮಾತಿನ ಮೇಲೆ ನಿಗಾ ಇರಲಿ ಅಣ್ಣ. ಗೌರವ ಕೊಟ್ಟು ತೆಗೆದುಕೊಳ್ಳಿ" ಎಂದು ಪ್ರತಾಪ್ ಕೇಳಿಕೊಂಡಾಗಲೂ "ನಿನ್ನ ಯೋಗ್ಯತೆ ಜಗತ್ತಿಗೆ ಗೊತ್ತು" ಎಂದು ವಿನಯ್ ದಬಾಯಿಸಿದರು. ವಿನಯ್ ಎಷ್ಟು ಕೋಪದಿಂದ ಪ್ರತಿಕ್ರಿಯೆ ನೀಡಿದರೂ ಪ್ರತಾಪ್ ಮೌನವಾಗಿ ಸಾವಧಾನವಾಗಿ ಉತ್ತರಿಸುತ್ತಿದ್ದರು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನೆಮಾದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.