BBK 11: ಬಿಗ್‌ಬಾಸ್‌ ಕನ್ನಡ ನಿರೂಪಣೆಗೆ ಸುದೀಪ್‌ ಸಂಭಾವನೆ ಎಷ್ಟು? ಕಲರ್ಸ್‌ ಕನ್ನಡ ಪತ್ರಿಕಾಗೋಷ್ಠಿಯಲ್ಲಿ ವೇತನದ ಪ್ರಶ್ನೆಗೆ ಕಿಚ್ಚನ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ಬಾಸ್‌ ಕನ್ನಡ ನಿರೂಪಣೆಗೆ ಸುದೀಪ್‌ ಸಂಭಾವನೆ ಎಷ್ಟು? ಕಲರ್ಸ್‌ ಕನ್ನಡ ಪತ್ರಿಕಾಗೋಷ್ಠಿಯಲ್ಲಿ ವೇತನದ ಪ್ರಶ್ನೆಗೆ ಕಿಚ್ಚನ ಉತ್ತರ

BBK 11: ಬಿಗ್‌ಬಾಸ್‌ ಕನ್ನಡ ನಿರೂಪಣೆಗೆ ಸುದೀಪ್‌ ಸಂಭಾವನೆ ಎಷ್ಟು? ಕಲರ್ಸ್‌ ಕನ್ನಡ ಪತ್ರಿಕಾಗೋಷ್ಠಿಯಲ್ಲಿ ವೇತನದ ಪ್ರಶ್ನೆಗೆ ಕಿಚ್ಚನ ಉತ್ತರ

Kiccha Sudeep Bigg Boss Kannada Remuneration: ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ನಡೆಯಲಿದೆ. ಬಿಬಿಕೆ11 ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಕಿಚ್ಚ ಸುದೀಪ್‌ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಬಿಬಿಕೆ 11 ನಿರೂಪಣೆಗೆೆ ಪಡೆಯುವ ಸಂಭಾವನೆಯ ವಿಚಾರವೂ ಚರ್ಚೆಯಾಗಿದೆ.

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸುದೀಪ್‌ ಸಂಭಾವನೆ ಎಷ್ಟು?
BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸುದೀಪ್‌ ಸಂಭಾವನೆ ಎಷ್ಟು?

ಬೆಂಗಳೂರು: ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಸೀಸನ್‌ 11ರ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್‌ ಮತ್ತು ಬಿಬಿಕೆ 11 ತಂಡದ ಇತರರಿಗೆ ಮಾಧ್ಯಮಗಳು ಹಲವು ಪ್ರಶ್ನೆಗಳು ಕೇಳಿವೆ. ಈ ಬಾರಿ ಒಂದಿಷ್ಟು ಬಿಗ್‌ಬಾಸ್‌ ಸ್ಪರ್ಧಿಗಳ ಹೆಸರನ್ನು ಒಂದು ದಿನ ಮೊದಲೇ ಘೋಷಿಸುವ ಮಾಹಿತಿಯನ್ನು ಬಿಬಿಕೆ ತಂಡ ಹಂಚಿಕೊಂಡಿದೆ. ಇದೇ ಸಮಯದಲ್ಲಿ ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಈ ಬಾರಿ ಬಿಗ್‌ಬಾಸ್‌ ಮನೆ ಇರುವ ಸೂಚನೆಯೂ ದೊರಕಿದೆ. ದೊಡ್ಮನೆಯೊಳಗಿನ ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ದಿನಸಿ ಅಥವಾ ರೇಷನ್‌ ಕೊರತೆ ಇರದು, ಆದರೆ, ನರಕದಲ್ಲಿ ಇರುವವರಿಗೆ ಹೊಟ್ಟೆ ಕಟ್ಟುವುದು ಅನಿವಾರ್ಯವಾಗುವ ಸೂಚನೆಯಿದೆ. ಇದೇ ಸಮಯದಲ್ಲಿ "ಬಿಗ್‌ಬಾಸ್‌ ಸೀಸನ್‌ 11 ಹಂತದಲ್ಲಿದ್ದೇವೆ. ಈ ಸಮಯದಲ್ಲಿ ನಿಮ್ಮ ರೆಮ್ಯುನರೇಷನ್‌ ಹೆಚ್ಚಾಗಿದೆಯೇ" ಎಂಬ ಪ್ರಶ್ನೆಯನ್ನು ಕೇಳಿಬಂದಿದೆ. ಈ ಪ್ರಶ್ನೆಗೆ ಕಿಚ್ಚ ಸುದೀಪ್‌ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ಬಿಗ್‌ಬಾಸ್‌ ಸಂಭಾವನೆ ಪ್ರಶ್ನೆಗೆ ಕಿಚ್ಚ ಸುದೀಪ್‌ ಉತ್ತರ ಏನೆಂಬ ವಿವರ ಮುಂದಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸುದೀಪ್‌ ಸಂಭಾವನೆ ಎಷ್ಟು?

ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಕಿಚ್ಚ ಸುದೀಪ್‌ ಸಂಭಾವಣೆ ಎಷ್ಟು? ನಿಮ್ಮ ಸಂಭಾವನೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ "ನಾನು ನನ್ನ ತಟ್ಟೆ ಎಷ್ಟು ದೊಡ್ಡದಾಗಿದೆಯೇ ಅಷ್ಟೇ ತಿನ್ನೋದು, ನನ್ನ ಯೋಗ್ಯತೆ ಎಷ್ಟಿದೆಯೋ ಅಷ್ಟೇ ದುಡಿಯೋದು" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈಗ ನನ್ನ ಯೋಗ್ಯತೆಯನ್ನು ನೀವು ಹೇಳಿ ಎಂದು ಸುದೀಪ್‌ ಪ್ರಶ್ನಿಸಿದರು. ಇದು ಹನ್ನೊಂದನೇ ಸೀಸನ್‌, ಅಷ್ಟೇ ಡಿಮ್ಯಾಂಡ್‌ ಇರಬೇಕಲ್ವ ಸರ್‌ ಎಂದು ಕೇಳಿದಾಗ "ನಿಮಗೆ ಖುಷಿ ಆಗುತ್ತಿದೆಯೇ, ಬೇಜಾರ್‌ ಆಗುತ್ತಿದೆಯಾ" ಎಂದು ಸುದೀಪ್‌ ಹೇಳಿದರು. "ಇಲ್ಲ ಖುಷಿ ಆಗ್ತಾ ಇದೆ. ಆದರೆ, ಎಷ್ಟು ಸಂಭಾವನೆ ಎಂದು ಹೇಳಿ" ಎಂದು ಪತ್ರಕರ್ತೆ ಪ್ರಶ್ನಿಸಿದರು. "ಹೊಸ ಅಧ್ಯಾಯ. ಇದು ಖಂಡಿತಾ ಹೊಸ ಅಧ್ಯಾಯ. ಈ ಸಂದರ್ಭದಲ್ಲಿ ಒಂದು ವಿಚಾರ ಹೇಳ್ತಿನಿ. ನಾನು ಈ ಸೀಸನ್‌ ಮಾಡೋದಿಲ್ಲ ಎಂದು ಹೇಳಿದ್ದು ರೆಮ್ಯುನರೇಷನ್‌ ವಿಷಯಕ್ಕೆ ಅಲ್ಲ. ಪೇಮೆಂಟ್‌ ವಿಷಯಕ್ಕೆ ಅಲ್ಲ. ನಾನು ತುಂಬಾ ಎಥಿಕಲ್‌ ವ್ಯಕ್ತಿ. ನನಗೆ ಸುಸ್ತಾಗ್ತಾ ಇತ್ತು, ಟ್ರಾವೆಲ್‌ ಮಾಡಲು ಕಷ್ಟವಾಗ್ತಾ ಇತ್ತು. ಅದನ್ನೇ ಹೇಳಿದೆ. ನೀವೆಲ್ಲರೂ ತಿಳಿದಿರಬೇಕು, ಎಲ್ಲದಕ್ಕೂ ಮಾರುಕಟ್ಟೆ ಇದೆ. ಈ ರೀಜನ್‌ಗೆ ಮಾರುಕಟ್ಟೆ ಇದೆ. ಪ್ರತಿಯೊಂದಕ್ಕೂ ಮಾರುಕಟ್ಟೆ ಇದೆ. ಅಫ್‌ಕೋರ್ಸ್‌, ನನಗೆ ಏನು ದುಡಿಯಬೇಕೋ ಅದನ್ನು ದುಡಿಯುತ್ತೇನೆ, ಹತ್ತು ವರ್ಷ ಇಲ್ಲಿ ತೆಗೆದುಕೊಂಡಿದ್ದೇನೆ, ಇಪ್ಪತ್ತು ವರ್ಷ ಇಂಡಸ್ಟ್ರಿಯಲ್ಲಿ ತೆಗೆದುಕೊಂಡಿದ್ದೇನೆ, ಚೆನ್ನಾಗಿಯೇ ದುಡೀತ ಇರ್ತೆನೆ ತಾನೇ. ಬನ್ನಿ ಯಾವತ್ತಾದ್ರೂ ಊಟಕ್ಕೆ" ಎಂದು ಪ್ರಶ್ನೆಗೆ ಉತ್ತರ ಮುಗಿಸಿದರು. ಈ ಮೂಲಕ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಕಿಚ್ಚ ಸುದೀಪ್‌ ಪಡೆಯುವ ಸಂಭಾವನೆ ವಿಷಯ ರಹಸ್ಯವಾಗಿಯೇ ಉಳಿಯಿತು.

ಈ ಹಿಂದಿನ ವರದಿಗಳ ಆಧಾರದಲ್ಲಿ ಹೇಳುವುದಾರೆ ಬಿಗ್‌ಬಾಸ್‌ ಕನ್ನಡ ಹೋಸ್ಟ್‌ ಮಾಡಲು ಸುದೀಪ್‌ ಹಲವು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 2015ರಲ್ಲಿ ಸುದೀಪ್‌ ಅವರು ಕಲರ್ಸ್‌ ಕನ್ನಡದ ಜತೆ ಬಿಗ್‌ಬಾಸ್‌ ನಿರೂಪಣೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೊದಲು ಇದು ಐದು ವರ್ಷದ ಅಗ್ರಿಮೆಂಟ್‌ ಆಗಿತ್ತು. ವರದಿಗಳ ಪ್ರಕಾರ ಆ ಸಮಯದಲ್ಲಿ 20 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸುದೀಪ್‌ ಸಹಿ ಹಾಕಿದ್ದರು. ಇದಾದ ಬಳಿಕ ಇವರ ಮುಂದಿನ ವರ್ಷಗಳ ಬಿಗ್‌ಬಾಸ್‌ ಕನ್ನಡ ನಿರೂಪಣೆಯ ಸಂಭಾವಣೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಇನ್ನೂ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಸದ್ಯ ಸುದೀಪ್‌ಗೆ ಬಿಗ್‌ಬಾಸ್‌ ಎಷ್ಟು ಸಂಭಾವನೆ ನೀಡುತ್ತದೆ ಎಂಬ ರಹಸ್ಯ ಹೊರಬಿದ್ದಿಲ್ಲ.

ಯಾರಿಗೆ ಎಷ್ಟು ಸಂಭಾವನೆ?

ವರದಿಗಳ ಪ್ರಕಾರ ಕಮಲ್‌ ಹಾಸನ್‌ ಅವರು ಬಿಗ್‌ಬಾಸ್‌ ತಮಿಳು ಸೀಸನ್‌ 7ಕ್ಕೆ 130 ಕೋಟಿ ರೂಪಾಯಿ ಪಡೆದಿದ್ದಾರೆ. ಸೀಸನ್‌ 8ಕ್ಕೆ ವಿಜಯ್‌ ಸೇತುಪತಿ 60 ಕೋಟಿ ಪಡೆದಿದ್ದಾರೆ. ಬಿಗ್‌ಬಾಸ್‌ ತೆಲುಗು 8ನೇ ಸೀಸನ್‌ಗೆ ನಾಗಾರ್ಜುನ ಅಕ್ಕಿನೇನಿ ಅವರು ಈ ಹಿಂದಿನ ಸೀಸನ್‌ಗಿಂತ ಡಬಲ್‌ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಎಷ್ಟೆಂಬ ವಿವರ ಇಲ್ಲ. ಬಿಗ್‌ಬಾಸ್‌ ಹಿಂದಿ ಹೋಸ್ಟ್‌ ಮಾಡಲು ಸಲ್ಮಾನ್‌ ಖಾನ್‌ ಹೆಚ್ಚು ಮೊತ್ತ ಪಡೆಯುತ್ತಿದ್ದಾರೆ. ಬಿಗ್‌ಬಾಸ್‌ 16ಗೆ 1000 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ. ಬಿಗ್‌ಬಾಸ್‌ 15ಗೆ 350 ಕೋಟಿ ರೂಪಾಯಿ ಪಡೆದಿದ್ದಾರಂತೆ. ಬಿಗ್‌ಬಾಸ್‌ 14ಗೆ 20 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

Bigg boss kannada season 11 date: ಸೆಪ್ಟೆಂಬರ್‌ 29, 2024ರಂದು ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲಿದೆ. ಈ ರಿಯಾಲಿಟಿ ಶೋವನ್ನು ಕಿಚ್ಚ ಸುದೀಪ್‌ ಹೋಸ್ಟ್‌ ಮಾಡುತ್ತಿದ್ದಾರೆ. ಕಲರ್ಸ್‌ ಕನ್ನಡ ಟಿವಿಯಲ್ಲಿ ಮತ್ತು ಜಿಯೋ ಸಿನಿಮಾ ಒಟಿಟಿ ಆಪ್‌ನಲ್ಲಿ ಬಿಗ್‌ಬಾಸ್‌ ಕನ್ನಡ ವೀಕ್ಷಿಸಬಹುದು.

Whats_app_banner