ಕನ್ನಡ ಸುದ್ದಿ  /  Entertainment  /  Televison News Colors Kannada Chukki Tare Serial Start From March 18 Chukki Tare Story Cast And Other Details Pcp

Chukki Tare Serial: ಕಲರ್ಸ್‌ ಕನ್ನಡದಲ್ಲಿ ಇಂದಿನಿಂದ ಚುಕ್ಕಿತಾರೆ ಧಾರಾವಾಹಿ ಆರಂಭ, ಚುಕ್ಕಿ-ಇಬ್ಬನಿಯ ಸ್ನೇಹ, ಅಪ್ಪ-ಮಗಳ ಬಾಂಧವ್ಯದ ಕಥೆ

Chukki Tare Kannada Serial: ಕಲರ್ಸ್‌ ಕನ್ನಡದಲ್ಲಿ ಮಾರ್ಚ್‌ 18ರಿಂದ ಚುಕ್ಕಿತಾರೆ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಗಾಯಕ ನವೀನ್‌ ಸಜ್ಜು ನಾಯಕನಾಗಿ ನಟಿಸುತ್ತಿರುವ, ಮಹಿತಾ ಚುಕ್ಕಿಯಾಗಿ ನಟಿಸುತ್ತಿರುವ ಈ ಸೀರಿಯಲ್‌ ಕಿರುತೆರೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.

Chukki Tare Serial: ಕಲರ್ಸ್‌ ಕನ್ನಡದಲ್ಲಿ ಇಂದಿನಿಂದ ಚುಕ್ಕಿತಾರೆ ಧಾರಾವಾಹಿ ಆರಂಭ
Chukki Tare Serial: ಕಲರ್ಸ್‌ ಕನ್ನಡದಲ್ಲಿ ಇಂದಿನಿಂದ ಚುಕ್ಕಿತಾರೆ ಧಾರಾವಾಹಿ ಆರಂಭ

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯ ಸೀರಿಯಲ್‌ಗಳೆಂದರೆ ಪ್ರೇಕ್ಷಕರಿಗೆ ಏನೋ ಮಹತ್ವದ ನಿರೀಕ್ಷೆ. ಒಂದಕ್ಕಿಂತ ಒಂದು ಸುಂದರವಾದ ಸೀರಿಯಲ್‌ಗಳನ್ನು ವಾಹಿನಿಯು ಪ್ರಸಾರ ಮಾಡುತ್ತಿದೆ. ಟಿಆರ್‌ಪಿ ರೇಸ್‌ನಲ್ಲೂ ಕಲರ್ಸ್‌ ಕನ್ನಡ ಇತರೆ ವಾಹಿನಿಗಳಿಗೆ ಸಮರ್ಥ ಪೈಪೋಟಿ ನೀಡುತ್ತಿರುತ್ತದೆ. ಇದೀಗ ಕಲರ್ಸ್‌ ಕನ್ನಡವು ಚುಕ್ಕಿತಾರೆ ಎಂಬ ಸೀರಿಯಲ್‌ ಪ್ರಸಾರ ಮಾಡಲಿದೆ. ಈ ಸೀರಿಯಲ್‌ನಲ್ಲಿರುವ ಅಪ್ಪ ಮತ್ತು ಮಗುವಿನ ಬಾಂಧವ್ಯ, ಪುಟ್ಟ ಮಕ್ಕಳ ಗೆಳೆತನ ಇತ್ಯಾದಿಗಳು ಈಗಾಗಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಚುಕ್ಕಿ ತಾರೆ ಸೀರಿಯಲ್‌ ಯಾವ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ (ಮಾರ್ಚ್ 18ರಿಂದ) ಹೊಸ ಟಿವಿ ಧಾರಾವಾಹಿ 'ಚುಕ್ಕಿತಾರೆ' ಶುರುವಾಗಲಿದೆ.

ಚುಕ್ಕಿ ತಾರೆ ಸೀರಿಯಲ್‌ ಪ್ರಸಾರ ಸಮಯ

ಸೋಮವಾರದಿಂದ ಶನಿವಾರ ಪ್ರತಿದಿನ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಚುಕ್ಕಿತಾರೆ ಸೀರಿಯಲ್‌ ಪ್ರಸಾರವಾಗುತ್ತಿದೆ.

ಚುಕ್ಕಿತಾರೆ ಧಾರಾವಾಹಿ ಕಥೆಯೇನು?

ಬೇರೆ ಬೇರೆ ಕೌಟುಂಬಿಕ ಹಿನ್ನೆಲೆಯ ಇಬ್ಬರು ಪುಟಾಣಿ ಹುಡುಗಿಯರ ಈ ಸ್ನೇಹದ ಕತೆ ಮತ್ತು ಅಪ್ಪ ಮಗುವಿನ ಬಾಂಧವ್ಯದ ಸ್ಟೋರಿಯನ್ನು ಚುಕ್ಕಿತಾರೆ ಹೊಂದಿದೆ. ಚುಕ್ಕಿ ಮತ್ತು ಇಬ್ಬನಿ ಎಂಬ ಇಬ್ಬರು ಗೆಳತಿಯರ ಸ್ನೇಹ ಬಡತನ ಶ್ರೀಮಂತಿಕೆಗಳ ಗಡಿಗಳನ್ನು ದಾಟಿ ಅರಳುವ ಈ ಕತೆಯು ಮನೆಮಂದಿಗೆಲ್ಲಾ ಇಷ್ಟವಾಗುವಂಥ ಕಥಾಹಂದರ ಹೊಂದಿದೆ. ಉತ್ಸಾಹದ ಬುಗ್ಗೆಯಾಗಿರುವ ಪುಟ್ಟ ಹುಡುಗಿ ಚುಕ್ಕಿಗೆ ತನ್ನ ಕಾಲಿನ ಸಮಸ್ಯೆಯ ಬಗ್ಗೆ ತಿಳಿದಿಲ್ಲ. ಅವಳನ್ನು ಇನ್ನಿಲ್ಲದಂತೆ ಪ್ರೀತಿಸೋ ಅವಳ ಅಪ್ಪ ಅದು ಅವಳಿಗೆ ತಿಳಿಯದಷ್ಟು ಜೋಪಾನವಾಗಿ ಅವಳನ್ನು ಬೆಳೆಸುತ್ತಿದ್ದಾನೆ. ಮತ್ತೊಂದೆಡೆ ಶ್ರೀಮಂತರ ಮನೆ ಹುಡುಗಿ ಇಬ್ಬನಿ ತನ್ನ ಕಟ್ಟುನಿಟ್ಟಿನ ಚಿಕ್ಕಮ್ಮನ ನಿರೀಕ್ಷೆಗಳ ಭಾರದಲ್ಲಿ ನಲುಗುತ್ತಿದ್ದಾಳೆ. ಈ ಎರಡು ಮಕ್ಕಳು ಭೇಟಿಯಾದಾಗ ಸ್ನೇಹ ಸಾಂಗತ್ಯದ ಪಯಣವೊಂದು ಶುರುವಾಗುತ್ತದೆ ಎಂದು ಕಲರ್ಸ್‌ ಕನ್ನಡ ವಾಹಿನಿಯು ಚುಕ್ಕಿತಾರೆಯ ಕಥೆಯ ವಿವರ ನೀಡಿದೆ.

'ಕೌಟುಂಬಿಕ ಮೌಲ್ಯಗಳನ್ನು ಗೌರವಿಸುವಂಥ ಆಸಕ್ತಿಕರ ಕತೆಗಳನ್ನೇ ಕಲರ್ಸ್ ಕನ್ನಡ ತೆರೆಯ ಮೇಲೆ ತರುತ್ತಾ ಬಂದಿದೆ. ಚುಕ್ಕಿತಾರೆಯೂ ಆ ಎಲ್ಲ ಗುಣಗಳನ್ನು ಒಳಗೊಂಡಿದೆ' ಎಂದರು. ಈ ಮೊದಲು ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಸೋದರ ವಾತ್ಸಲ್ಯ, ಅಪ್ಪ ಮಗಳ ಬಂಧ, ಅತ್ತೆ ಸೊಸೆಯ ಅನುಬಂಧ, ಅಮ್ಮ-ಮಗನ ಸಂಬಂಧಗಳನ್ನು ನೋಡಿದವರಿಗೆ ಚುಕ್ಕಿತಾರೆ ಗೆಳೆತನದ ಸವಿಯನ್ನು ಉಣಬಡಿಸಲಿದೆ" ಎಂದು ಕಲರ್ಸ್‌ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಚುಕ್ಕಿತಾರೆ ಧಾರಾವಾಹಿಯ ಪಾತ್ರವರ್ಗ

ಗಾಯಕ ನವೀನ್ ಸಜ್ಜು ಮೊದಲ ಬಾರಿಗೆ ಅಭಿನಯಿಸಿರುವುದು ಈ ಧಾರಾವಾಹಿಯ ಒಂದು ವಿಶೇಷ. ಅವರು ಚುಕ್ಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟಿವಿಯ ಹಲವು ಹೆಸರಾಂತ ನಟನಟಿಯರೂ ಇಲ್ಲಿದ್ದಾರೆ. ಜಯಶ್ರೀ, ವಿಶಾಲ್ ಹೆಗಡೆ, ರಾಧಾ ರಾಮಚಂದ್ರ ಮತ್ತಿತರರು ಅಭಿನಯಿಸಿರುವ ಚುಕ್ಕಿತಾರೆ ತನ್ನ ತಾರಾಗಣ ಹಾಗೂ ಬಿಗಿಯಾದ ನಿರೂಪಣೆಯಿಂದ ವೀಕ್ಷಕರನ್ನು ಸೆಳೆಯಲಿದೆ. ಇಷ್ಟೆಲ್ಲಾ ಹೊಸತುಗಳಿರುವ ಈ ಧಾರಾವಾಹಿಯ ಮೊದಲ ಸಂಚಿಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇಂದು ಅಂದರೆ ಮಾರ್ಚ್‌ 18ರಂದು ಪ್ರಸಾರವಾಗಲಿದೆ.

IPL_Entry_Point