SaReGaMaPa: ಸರಿಗಮಪದಲ್ಲಿ ದರ್ಶನ್ ನಾರಾಯಣ್‌ಗೆ ಗೆಲುವಿನ ಕಿರೀಟ; ಟ್ರೋಫಿ, 25 ಲಕ್ಷ ರೂ ನಗದು ಗೆದ್ದ ಯುವ ಗಾಯಕ
Sa Re Ga Ma Pa Season 20: ಸರಿಗಮಪ ಸೀಸನ್ 20 ಗ್ರ್ಯಾಂಡ್ ಫಿನಾಲೆಯಲ್ಲಿ ದರ್ಶನ್ ನಾರಾಯಣ್ ಗೆಲುವು ಪಡೆದಿದ್ದಾರೆ. ಇವರಿಗೆ ಸರಿಗಮಪ ಟ್ರೋಫಿ ಮತ್ತು 25 ಲಕ್ಷ ರೂ ನಗದು ಬಹುಮಾನ ದೊರಕಿದೆ. ಮೊದಲ ರನ್ನರ್ ಅಪ್ ಆಗಿ ರಮೇಶ್ ಲಮಾಣಿ ಮತ್ತು ಎರಡನೇ ರನ್ನರ್‌ಅಪ್ ಆಗಿ ಡಾ.ಶ್ರಾವ್ಯಾ ರಾವ್ ಹೊರಹೊಮ್ಮಿದ್ದಾರೆ.
ಬೆಂಗಳೂರು: ಜೀ ಕನ್ನಡ ವಾಹಿನಿಯ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಸೀಸನ್ 20ರ ಫಲಿತಾಂಶ ಪ್ರಕಟವಾಗಿದೆ. ಭಾನುವಾರ ನಡೆದ ಸರಿಗಮಪ ಫಿನಾಲೆಯಲ್ಲಿ ದರ್ಶನ್ ನಾರಾಯಣ್ ಗೆಲುವು ಪಡೆದು ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಸರಿಗಮಪ ರಿಯಾಲಿಟಿ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ರಮೇಶ್ ಲಮಾಣಿ ಹೊರಹೊಮ್ಮಿದ್ದಾರೆ. ಡಾ.ಶ್ರಾವ್ಯಾ ರಾವ್ ಅವರು ಎರಡನೇ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
25 ಲಕ್ಷ ರೂಪಾಯಿ ನಗದು ಬಹುಮಾನ
ಕನ್ನಡದ ಪ್ರಮುಖ ರಿಯಾಲಿಟಿ ಶೋ ಸರಿಗಮಪ ಸೀಸನ್ 20ರಲ್ಲಿ ಗೆಲುವು ಪಡೆಯುವ ಮೂಲಕ ದರ್ಶನ್ ನಾರಾಯಣ್ ಅವರು ಟ್ರೋಫಿ ಮತ್ತು 25 ಲಕ್ಷ ರೂಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಈ ರಿಯಾಲಿಟಿ ಶೋದ ಆರಂಭದಿಂದಲೇ ಇವರು ತನ್ನ ಸಂಗೀತ ಪ್ರತಿಭೆ, ಶ್ರದ್ಧೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಟ್ರೋಫಿ ಗೆದ್ದ ಬಳಿಕ ದರ್ಶನ್ ನಾರಾಯಣ್ ತನ್ನ ಬೆಂಬಲಿಗರು, ಮೆಂಟರ್‌ಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಮ್ರತೆಯಿಂದ ಮಾತನಾಡಿದ ಅವರು ಈ ಯಶಸ್ಸು ನನ್ನ ಜವಾಬ್ದಾರಿ ಹೆಚ್ಚಿಸಿದ್ದು, ಕಠಿಣ ಪರಿಶ್ರಮ ಮುಂದುವರೆಸುವುದಾಗಿ ಹೇಳಿದ್ದಾರೆ.
ಈ ರಿಯಾಲಿಟಿ ಶೋನಲ್ಲಿ ಈ ಮೂವರ ನಡುವೆ ಗೆಲ್ಲುವುದು ಯಾರೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಮೂವರು ಕಠಿಣ ಹಾಡುಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಗಾಯನ ಪ್ರತಿಭೆಯೆನ್ನು ವೇದಿಕೆಯ ಮೇಲೆ ತೋರಿಸಿದ್ದಾರೆ. ಮೂವರಲ್ಲಿ ಯಾರು ಗೆಲ್ಲಲ್ಲಿದ್ದಾರೆ ಎಂಬ ಪ್ರಶ್ನೆ ಕೊನೆಯವರೆಗೂ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತ್ತು. ಹಂಸಲೇಖ ಅವರು ಯಾರ ಕೈ ಮೇಲಕ್ಕೆತ್ತಲಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದರು.
ಹಂಸಲೇಖ ಅವರು ದರ್ಶನ್ ನಾರಾಯಣ್ ಕೈಯನ್ನು ಮೇಲಕ್ಕೆ ಎತ್ತಿ "ಸರಿಗಮಪ ಸೀಸನ್ 10"ರ ವಿಜೇತ ಎಂದು ಘೋಷಿಸಿದರು. ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಅವರು ಜೀ ಕುಟುಂಬಕ್ಕೆ ವಾಪಸ್ ಬಂದಿದ್ದಾರೆ.
ಈ ಹಿಂದೆ ಯಾದಗಿರಿಯಲ್ಲಿ ಸರಿಗಮಪ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕಾರ್ಯಕ್ರಮ ಆರಂಭವಾಗಲು ಇನ್ನೇನೂ ಅರ್ಧಗಂಟೆ ಇದೆ ಎಂದಾಗ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಸಂಜೆ ಆರು ಗಂಟೆಗೆ ಈ ಕಾರ್ಯಕ್ರಮ ನಡೆಯಲು ಸಜ್ಜಾಗಿತ್ತು. ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.
ಆದರೆ, ಇನ್ನೇನೂ ಕಾರ್ಯಕ್ರಮ ಆರಂಭವಾಗಲು ಅರ್ಧಗಂಟೆ ಇದೆ ಎಂದಾಗ ಜೀ ಕನ್ನಡ ವಾಹಿನಿಯವರು, ಜಿಲ್ಲಾಧಿಕಾರಿಗಳು, ಪೊಲೀಸರು ಆಗಮಿಸಿ ಸರಿಗಮಪ ರಿಯಾಲಿಟಿ ಶೋ ಕ್ಯಾನ್ಸಲ್ ಆಗಿರುವ ಕುರಿತು ಮಾಹಿತಿ ನೀಡಿದ್ದರು. ಬೆಂಗಳೂರಿನಲ್ಲಿ ಬಾಂಬ್ ದಾಳಿಯಾದ ಬಳಿಕ ಈ ಕಾರ್ಯಕ್ರಮಕ್ಕೂ ಆತಂಕ ಕಾಡಿತ್ತು. ಮುಂಜಾಗ್ರತ ಕ್ರಮವಾಗಿ ಶೋ ಕ್ಯಾನ್ಸಲ್ ಮಾಡಲಾಗಿತ್ತು.
ಈ ರೀತಿ ಶೋ ಕಾರ್ಯಕ್ರಮ ರದ್ದಾಗಿದ್ದರಿಂದ ಪ್ರೇಕ್ಷಕರು, ಸ್ಪರ್ಧಿಗಳು ನಿರಾಶೆಗೊಂಡಿದ್ದರು. ಕಾರ್ಯಕ್ರಮ ರದ್ದಾದ ಒಂದೇ ವಾರದಲ್ಲಿ ಬೆಂಗಳೂರಿನಲ್ಲಿ ಅದ್ಧೂರಿ ಗ್ರ್ಯಾಂಡ್ ಫಿನಾಲೆ ನಡೆಸಲಾಗಿದೆ.