ಗಂಡಿನಿಂದಲೇ ಘನತೆ ಉಳಿಯುತ್ತೆ ಎಂದು ಭಾವಿಸುವುದರಲ್ಲಿ ತಪ್ಪೇನಿದೆ? ನಟ ಚಿರಂಜೀವಿ ಹೇಳಿಕೆಗೆ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ
ರಕ್ತಹಂಚಿಕೊಂಡು ಹುಟ್ಟಿದ ಮಗಳು ಮದುವೆಯಾದ ಕ್ಷಣದಿಂದ ನನ್ನ ಕುಲದವಳಲ್ಲವಂತೆ. ಅವಳು ಇನ್ಯಾರೋ ಕುಲ ಬೆಳಗೋ ದೇವತೆ. ಅಂದ ಮೇಲೆ, ನಮ್ಮಲ್ಲಿ ಉಳಿದವನು ಗಂಡು ತಾನೇ? ಹಾಗಿದ್ದ ಮೇಲೆ, ಆ ಗಂಡಿನಿಂದಲೇ ಕುಟುಂಬದ ಘನತೆ ಉಳಿಯುತ್ತೆ ಅಂತ ಭಾವಿಸುವುದರಲ್ಲಿ ಯಾವ ತಪ್ಪಿದೆ? ಪರಂಪರೆ ಉಳಿವಿನ ಬಗ್ಗೆ ನಟ ಚಿರಂಜೀವಿ ಹೇಳಿಕೆಗೆ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು, ನಮಗೂ ಒಂದು ಗಂಡು ಬೇಕು ಎಂದು ಮನದಾಳ ಬಿಚ್ಚಿಟ್ಟಿದ್ದರು. ಹೀಗೆ ತಮ್ಮ ಅನಿಸಿಕೆ ಹೇಳಿಕೊಳ್ಳುತ್ತಿದ್ದಂತೆ, ಅವರ ವಿರುದ್ಧ ಕೆಲವರು ಟೀಕಾಸ್ತ್ರವನ್ನೇ ಆರಂಭಿಸಿದರು. ಹೆಣ್ಣು ಯಾವ ಕ್ಷೇತ್ರದಲ್ಲಿ ಕಡಿಮೆ ಇದ್ದಾಳೆ? ಹೆಣ್ಣೆಕೇ ಬೇಡ, ಗಂಡು- ಹೆಣ್ಣಿನ ನಡುವೆ ಈ ತಾರತಮ್ಯವೇಕೆ ಎಂದು ಚಿರಂಜೀವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚಯೂ ನಡೆಯುತ್ತಿದೆ. ಇದೀಗ ಇದೇ ಹೇಳಿಕೆಗೆ ಡಾ. ವಿಷ್ಣುವರ್ಧನ್ ಅವರ ಅಭಿಮಾನಿ, ಪುಸ್ತಕ ಪ್ರೇಮಿ ವೀರಕಪುತ್ರ ಶ್ರೀನಿವಾಸ್ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಹೀಗಿದೆ
ಸಂಬಂಧಿಕರು: ನಿಂಗೊಂದು ಗಂಡ್ ಆಗ್ಬೇಕಿತ್ತು ಸೀನಪ್ಪಾ!
ಸ್ನೇಹಿತರು: ಹೇ, ಒಂದು ಗಂಡ್ ಮಗು ಮಾಡ್ಕೋಂಡುಬಿಡು.
ಹಿತೈಷಿಗಳು: ಇಷ್ಟೆಲ್ಲಾ ಯಾರಿಗಾಗಿ? ಒಂದು ಮಾಡ್ಕೋ.
ಇಂತಹ ಚಿರಂಜೀವಿಗಳು ನಮ್ಮ ಸುತ್ತಮುತ್ತಲೇ ಇರುವಾಗ ನಾವು ನಟ ಚಿರಂಜೀವಿಯನ್ನೇ ಯಾಕೆ ಟೀಕಿಸ್ತಾ ಇದ್ದೀವಿ ಅನ್ನೋದು ನನಗೆ ಅರ್ಥವಾಗದ ವಿಷಯ. ನಮ್ಮ ಇಡೀ ಸಮಾಜ ಯೋಚಿಸುವುದೇ ಹಾಗೆ. ಮನೆಗೊಂದು ಗಂಡು ಬೇಕು ಅಂತ ಕೇವಲ ಗಂಡಸು ಮಾತ್ರ ಬಯಸಲ್ಲ ಪ್ರತಿ ಹೆಣ್ಣೂ ಬಯಸ್ತಾಳೆ. ಹಾಗೆ ಬಯಸುವುದರಲ್ಲಿ ತಪ್ಪೇನಿಲ್ಲ. ಏಕೆಂದರೆ ಗಂಡಿನಿಂದ ಮಾತ್ರ ಕೌಟುಂಬಿಕ ಘನತೆ ಉಳಿಯುತ್ತೆ ಅನ್ನೋದನ್ನು ನಾವೆಲ್ಲರೂ ನಂಬಿ ಪೋಷಿಸುತ್ತಿದ್ದೇವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಮಾತನ್ನು ನಾವು ಒಪ್ಪಿಕೊಂಡಾಗಲೇ ನಾವೆಲ್ಲರೂ ಚಿರಂಜೀವಿಗಳಾಗಿದ್ದೇವೆ. ರಕ್ತಹಂಚಿಕೊಂಡು ಹುಟ್ಟಿದ ಮಗಳು, ಮದುವೆಯಾದ ತಕ್ಷಣ ನಮ್ಮ ಕುಲ, ಕುಟುಂಬದ ಹೊರಗೆ ಅನ್ನೋ ಮಾತನ್ನು ಒಪ್ಪಿದ ಯಾರಿಗೇ ಆದರೂ ಚಿರಂಜೀವಿಯನ್ನು ಟೀಕಿಸುವ ಹಕ್ಕಿಲ್ಲ.
ರಕ್ತಹಂಚಿಕೊಂಡು ಹುಟ್ಟಿದ ಮಗಳು ಮದುವೆಯಾದ ಕ್ಷಣದಿಂದ ನನ್ನ ಕುಲದವಳಲ್ಲವಂತೆ. ಅವಳು ಇನ್ಯಾರೋ ಕುಲ ಬೆಳಗೋ ದೇವತೆ. ಅಂದ ಮೇಲೆ, ನಮ್ಮಲ್ಲಿ ಉಳಿದವನು ಗಂಡು ತಾನೇ? ಹಾಗಿದ್ದ ಮೇಲೆ, ಆ ಗಂಡಿನಿಂದಲೇ ಕುಟುಂಬದ ಘನತೆ ಉಳಿಯುತ್ತೆ ಅಂತ ಭಾವಿಸುವುದರಲ್ಲಿ ಯಾವ ತಪ್ಪಿದೆ? ಅದೆಲ್ಲಾ ಬಿಡಿ, ಒಂದು ಹೆಣ್ಣಿಗೆ ಗಂಡು ಮಗುವಾಗಲಿಲ್ಲವೆಂದರೆ ಮೊದಲ ದೂಷಣೆ ಕೇಳಿಬರೋದೇ ಅವಳ ಅತ್ತೆಯಿಂದ. ಈ ಮೂದೇವಿ ನಮ್ಮ ವಂಶಕ್ಕೊಂದು ಗಂಡನ್ನು ಕೊಡಲಿಲ್ಲ ಅಂತ. ನೆನಪಿರಲಿ ಅವಳೂ ಹೆಣ್ಣೇ! ಗಂಡಿನ ತಪ್ಪಿದ್ದಾಗಲೂ ಹೆಣ್ಣನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಬೈಯುವುದು ನಮಗೆಲ್ಲಾ ಅಭ್ಯಾಸವಾಗಿಬಿಟ್ಟಿದೆ. ಅಂದ್ಮೇಲೆ ಚಿರಂಜೀವಿಯನ್ನು ಯಾಕೆ ಟೀಕಿಸ್ತಾ ಕೂರ್ತೀರಿ? ಓಹ್... ಆತ ಸೆಲೆಬ್ರಿಟಿ, ಆತನ ಮಾತುಗಳಿಂದ ಜನ ಪ್ರೇರಿತರಾಗಿಬಿಡ್ತಾರೆ ಅಂತಾನ? ಡೋಂಟ್ ವರಿ, ಜನರಿಗೆ ಇದೇನು ಹೊಸ ವಿಷ್ಯವಲ್ಲ. ಅವರೆಲ್ಲರ ಮನಸಲ್ಲಿರೋದನ್ನೇ ಚಿರಂಜೀವಿ ಹೇಳಿರುವುದರಿಂದ ಹೊಸದಾಗಿ ಪ್ರೇರಿತರಾಗಲು ಅಲ್ಲಿ ಏನೂ ಇಲ್ಲ.
ಚಿರಂಜೀವಿಯನ್ನು ಟೀಕಿಸುವ ಬದಲು, ನಮ್ಮ ನಮ್ಮ ಹೆಣ್ಮಕ್ಕಳನ್ನು ಚಿರಂಜೀವಿಯಂತಾಗಿಸಬಹುದೇ ನೋಡಿ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ದೊಡ್ಡ ದೊಡ್ಡ ನಟಿಯರೂ ತಮ್ಮ ಅಸ್ತಿತ್ವವನ್ನು ತೋರುವುದು ಮೈಮಾಟದಿಂದಲೇ! ಅದು ಬದಲಾಗಬಹುದಾ ನೋಡಿ. ಮಹಿಳಾವಾದ ಮಂಡಿಸುವ ಮಹಿಳೆಯರೂ ಕನ್ನಡಿ ಎದುರು ಗಂಟೆಗಟ್ಟಲೆ ಕಳೆದು ಹೋಗುತ್ತಿದ್ದಾರೆ. ಕನ್ನಡಿ ಮರೆತು ಬದುಕಬಹುದಾ ನೋಡಿ. ಇವತ್ತಿಗೂ ಹೆಣ್ಮಕ್ಕಳ ಬಗ್ಗೆ ಉದಾಹರಣೆ ಕೊಡಬೇಕು ಅಂದರೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮದರ್ ತೆರೆಸಾ, ಕಿರಣ್ ಮಜುಂದಾರ್, ಸುಧಾಮೂರ್ತಿ ತರಹದ ಬೆರಳೆಣಿಕೆಯ ಮಂದಿಯಷ್ಟೇ ಸಿಗೋದು! ಊರಿಗೊಂದು ಇಂತಹ ಹೆಣ್ಣು ಹುಟ್ಟುವಂತೆ ನೋಡಿಕೊಳ್ಳಬಹುದಾ ನೋಡಿ.
ಸಾನಿಯಾ ಮಿರ್ಜಾ ಆಗಲಿ, ಪಿವಿ ಸಿಂಧು, ಶ್ರೇಯಾಂಕ್ ಪಟೇಲ್ ಆಗಲಿ ಅವರು ಎಷ್ಟೇ ಸಾಧನೆ ಮಾಡಿದ್ರೂ, ಸುದ್ದಿಯಾಗೋದು, ಪೋಸ್ಟರ್ ಆಗೋದು ಮಾತ್ರ ಹೆಚ್ಚು ಸುಂದರಿಯಾಗಿದ್ದರೆ ಮಾತ್ರ! ಈ ಮನಸ್ಥಿತಿ ಬದಲಾಗಬಹುದಾ ನೋಡಿ. ಮಗಳನ್ನು ಅದ್ಯಾರದ್ದೋ ಮನೆಗೆ ಮಗಳನ್ನಾಗಿಸುವ ಬದಲು, ಅದ್ಯಾರದ್ದೋ ಮಗನನ್ನು ನಿಮ್ಮನೆಗೆ ಮಗನನ್ನಾಗಿಸಿಕೊಳ್ಳಬಹುದಾ ನೋಡಿ! ಮಗಳಿಗೆ ವರ ಹುಡುಕುವಾಗ ಹುಡುಗನ ಉದ್ಯೋಗ, ವಿದ್ಯಾಭ್ಯಾಸ, ಆಸ್ತಿ ನೋಡುವುದು. ಮಗನಿಗೆ ವಧು ಹುಡುಕುವಾಗ ಆಕೆಯ ರೂಪ, ಕ್ಯಾರೆಕ್ಟರ್ ಮಾತ್ರ ನೋಡುವುದು. ಅದನ್ನು ಬದಲಾಯಿಸಬಹುದಾ ನೋಡಿ. ಅದ್ಯಾವುದೂ ಆಗದಿದ್ರೆ, ಚಿರಂಜೀವಿಯನ್ನು ಮರೆತು ಆಗೋ ಕೆಲಸ ನೋಡಿ" ಎಂದಿದ್ದಾರೆ.
