Thangalaan ott: ಕೊನೆಗೂ ಒಟಿಟಿಗೆ ಬಂತು ತಂಗಲಾನ್; ವಿಕ್ರಮ್, ಪಾ ರಂಜಿತ್ ಬಹುನಿರೀಕ್ಷಿತ ಸಿನಿಮಾವನ್ನು ಕನ್ನಡದಲ್ಲಿಯೇ ನೋಡಿ
Thangalaan out on OTT: ಕರ್ನಾಟಕದ ಕೆಜಿಎಫ್ ಪೂರ್ವಜರ ಕಥೆ ಹೊಂದಿರುವ ತಂಗಲಾನ್ ಸಿನಿಮಾ ಕೊನೆಗೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ವಿವಿಧ ಕಾರಣಗಳಿಂದ ಒಟಿಟಿಗೆ ಆಗಮಿಸುವುದು ತಡವಾಗಿತ್ತ. ವಿಕ್ರಮ್ ನಟನೆಯ, ಪಾ ರಂಜಿತ್ ನಿರ್ದೇಶನದ ಸಿನಿಮಾವನ್ನು ಸಿನಿಪ್ರಿಯರು ಈಗ ಮನೆಯಲ್ಲೇ ನೋಡಬಹುದು.
Thangalaan ott: ಈ ವರ್ಷದ ತಮಿಳು ಸೂಪರ್‌ಹಿಟ್ ಸಿನಿಮಾ ತಂಗಲಾನ್ ಕೊನೆಗೂ ಒಟಿಟಿಗೆ ಆಗಮಿಸಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಸಾಕಷ್ಟು ದಿನಗಳಿಂದ ಕಾಯುತ್ತಿದ್ದರು. ಇನ್ನೇನೂ ಒಟಿಟಿಗೆ ಬಂದೇ ಬಿಡ್ತು ಎನ್ನುವಷ್ಟರಲ್ಲಿ ಕಾನೂನು ತೊಡಕೊಂದರಲ್ಲಿ ಚಿತ್ರ ರಿಲೀಸ್ ಆಗಿರಲಿಲ್ಲ. ಈಗ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಪಾ ರಂಜಿತ್ ಕಥೆ ಬರೆದು ನಿರ್ದೇಶಿಸಿರುವ ಸಿನಿಮಾ. ಆಗಸ್ಟ್ 15ರಂದು ತಂಗಲಾನ್ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಈಗ ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ತಂಗಲಾನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ
ತಂಗಲಾನ್ ಸಿನಿಮಾದ ಒಟಿಟಿ ಹಕ್ಕುಗಳನ್ನು ದೊಡ್ಡಮೊತ್ತಕ್ಕೆ ನೆಟ್‌ಫ್ಲಿಕ್ಸ್ ತನ್ನದಾಗಿಸಿಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈ ಹಿಂದೆಯೇ ವರದಿ ಮಾಡಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೂರು ತಿಂಗಳ ಬಳಿಕ ತಂಗಲಾನ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ತಂಗಲಾನ್ ಒಟಿಟಿ ಬಿಡುಗಡೆ ತಡವಾಗಿದ್ಯಾಕೆ?
ತಂಗಲಾನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ತಿರುವಲ್ಲೂರ್‌ನ ಪೊರ್ಕೊಡಿ ಎಂಬವರು ಪಿಐಎಲ್ ಸಲ್ಲಿಸಿದ್ದರು. ಈ ಸಿನಿಮಾದಲ್ಲಿ ಬೌದ್ಧ ಧರ್ಮವನ್ನು ಪವಿತ್ರವೆಂಬಂತೆ ಚಿತ್ರಿಸುವ ಸಮಯದಲ್ಲಿ ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ದೃಶ್ಯಗಳು ಇರುವ ತಂಗಲಾನ್ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದರಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.
ಕರ್ನಾಟಕದ ಕೆಜಿಎಫ್ ಮತ್ತು ತಂಗಲಾನ್ ನಂಟು
ಈ ಪಿರಿಯಾಡಿಕಲ್ ಆಕ್ಷನ್ ಕಥೆಯ ಸಿನಿಮಾಕ್ಕೆ ಪಾ ರಂಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯರಾಗಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ನಟಿಸಿದ್ದಾರೆ. ಕೆಜಿಎಫ್ ಇರುವ ಕರ್ನಾಟಕದ ಕಥೆ ಹೊಂದಿದ್ದರೂ ಕನ್ನಡದಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ನೆಟ್‌ಫ್ಲಿಕ್ಸ್ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಂಗಲಾನ್ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. ಬುಡಕಟ್ಟು ಜನಾಂಗವು ಸ್ವಾತಂತ್ರ್ಯ ಹೋರಾಟಕ್ಕೆ ನಿಧಿ ಹುಡುಕಾಟ ನಡೆಸುವುದು, ಕೆಜಿಎಫ್‌ನ ಚಿನ್ನದ ಶೋಧ ಇತ್ಯಾದಿ ಅಂಶಗಳನ್ನು ಸೇರಿಸಿ ಸಾಹಸಮಯ ಥ್ರಿಲ್ಲರ್ ಸಿನಿಮಾ ತಂಗಲಾನ್ ಅನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕುರಿತು ಒಂದಿಷ್ಟು ನೆಗೆಟಿವ್ ವಿಮರ್ಶೆಗಳೂ ಬಂದಿವೆ. ಕಥೆ ತುಂಬಾ ನಿಧಾನವಾಗಿ ಸಾಗಿರುವುದು ಮಾತ್ರವಲ್ಲದೆ, ದ್ವಿತೀಯಾರ್ಧದಲ್ಲಿ ನಿರ್ದೇಶಕರು ಕಥೆಯನ್ನು ಸ್ಪಷ್ಟವಾಗಿ ಹೇಳದೆ ಪ್ರೇಕ್ಷಕರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ತಂಗಲಾನ್‌ಗೆ ಕೆಜಿಎಫ್ ಸ್ಪೂರ್ತಿ
ಯಶ್ ಅಭಿನಯದ ಕೆಜಿಎಫ್ ಸಿನಿಮಾ ದೇಶದಲ್ಲಿ ಖ್ಯಾತಿ ಪಡೆದ ಸಂದರ್ಭದಲ್ಲಿ ನಿರ್ದೇಶಕರಿಗೆ ತಂಗಲಾನ್ ಸಿನಿಮಾದ ಐಡಿಯಾ ದೊರಕಿತ್ತಂತೆ. ಆದರೆ, ಇವೆರಡು ಬೇರೆಬೇರೆ ಕಾಲಘಟ್ಟದ ಸಿನಿಮಾಗಳು. ಯಶ್ ನಟನೆಯ ಕೆಜಿಎಫ್ ಸಿನಿಮಾವು ಕೋಲಾರ ಚಿನ್ನದ ಗಣಿಯ ಆಡಳಿತವನ್ನು ತನ್ನದಾಗಿಸಿಕೊಂಡು ಶ್ರೀಮಂತನಾಗಿ ಬೆಳೆದ ವ್ಯಕ್ತಿಯ ಕಥೆಯಾಗಿದೆ. ಆದರೆ, ತಂಗಲಾನ್ ಸಿನಿಮಾವು ಕೆಜಿಎಫ್ ಅನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಉಳಿಸಿಕೊಳ್ಳಲು ನಡೆಸುವ ಸ್ವಾತಂತ್ರ್ಯದ ಹೋರಾಟದ ಹಿನ್ನಲೆಯನ್ನು ಹೊಂದಿದೆ.