ಅಂದು ಉಮಾಶ್ರೀ, ಇಂದು ಗೀತಪ್ರಿಯ; ತಾಯವ್ವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ್
Thayavva Movie: ತಾಯವ್ವ ಶೀರ್ಷಿಕೆಯ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾಗಿದೆ. ಎರಡೂವರೆ ದಶಕಗಳ ಹಿಂದೆ ಇದೇ ಹೆಸರಿನ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸಿದ್ದರು. ಈಗ ಹೊಸ ತಾಯವ್ವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ ಕಿಚ್ಚ.

Thayavva Movie: ತಾಯವ್ವ ಹೀಗೊಂದು ಹೆಸರಿನ ಚಿತ್ರ ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದು, ಹಲವರಿಗೆ ಗೊತ್ತಿರಬಹುದು. ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರವದು. ಆಗ ತೆರೆಗೆ ಬಂದಿದ್ದ ತಾಯವ್ವ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ ತಾಯವ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ತಾಯವ್ವ ಎಂಬ ಹೆಸರಿನಲ್ಲಿ, ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಬಾರಿ ತಾಯವ್ವ ಪಾತ್ರದಲ್ಲಿ ನವ ಪ್ರತಿಭೆ ಗೀತಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಸದ್ದಿಲ್ಲದೆ ತಾಯವ್ವ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ತಾಯವ್ವ ಚಿತ್ರದ ಹಾಡುಗಳು ಬಿಡುಗಡೆಯಾಯಿತು. ಅನಂತ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಗೀತೆಗಳಿಗೆ ಸ್ವತಃ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ತಾಯವ್ವನಾಗಿ ಅಭಿನಯಿಸಿರುವ, ಗೀತಪ್ರಿಯ ಅವರೇ ಧ್ವನಿಯಾಗಿದ್ದಾರೆ. ಅಪ್ಪಟ ಕನ್ನಡದ ಗ್ರಾಮೀಣ ಸೊಗಡಿನ ಜನಪದ ಗೀತೆಗಳ ಗುಚ್ಚವನ್ನು ಈ ಚಿತ್ರದಲ್ಲಿ ಹೊಸರೂಪದಲ್ಲಿ ತೆರೆಮೇಲೆ ತರಲಾಗುತ್ತಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ಜಿ. ಟಿ ವರ್ಲ್ಡ್ ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿ, ತಾಯವ್ವ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ತಾಯವ್ವನ ಬಗ್ಗೆ ಸುದೀಪ್ ಹೇಳಿದ್ದೇನು?
ಇದೇ ವೇಳೆ ಮಾತನಾಡಿದ ನಟ ಕಿಚ್ಚ ಸುದೀಪ್, “ನಾನು ಆಗಷ್ಟೇ ಕಾಲೇಜು ಮುಗಿಸುತ್ತಿರುವ ಸಂದರ್ಭದಲ್ಲಿ ತಾಯವ್ವ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನೆಮಾ ನನಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಟ್ಟಿತ್ತು. ನನ್ನ ವೃತ್ತಿ ಜೀವನದಲ್ಲಿ ಈ ಸಿನೆಮಾ ಇಂದಿಗೂ ಒಂದು ಸುಮಧುರ ನೆನಪಾಗಿ ಉಳಿದಿದೆ. ಈಗ ಅದೇ ತಾಯವ್ವ ಹೆಸರಿನಲ್ಲಿ ಅಂಥದ್ದೇ ಮತ್ತೊಂದು ಸಿನೆಮಾ ತೆರೆಗೆ ಬರುತ್ತಿರುವುದು ಒಳ್ಳೆಯ ವಿಷಯ. ತಾಯವ್ವ ಎಂಬ ಹೆಸರಿನಲ್ಲೇ ಒಂದು ಭಾವನಾತ್ಮಕ ಸೆಳೆತವಿದೆ. ಈ ಸಿನೆಮಾದಲ್ಲೂ ಅದೇ ಅಂಶಗಳಿರಬಹುದು ಎಂಬ ನಿರೀಕ್ಷೆಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.
ತಾಯವ್ವ ಪಾತ್ರದಲ್ಲಿ ಗೀತಪ್ರಿಯ
ತಾಯವ್ವ ಚಿತ್ರದ ಮೂಲಕ ಮೊದಲ ಬಾರಿಗೆ ಹೊಸ ಪ್ರತಿಭೆ ಗೀತಪ್ರಿಯ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. "ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನೆಮಾ. ಹೆಣ್ಣುಮಕ್ಕಳನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ನಾನು ತಾಯವ್ವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನೆಮಾದಲ್ಲಿ ಒಂದು ಸಂದೇಶವಿದೆ. ಎಲ್ಲರಿಗೂ ತಲುಪುವಂಥ ವಿಷಯ ಈ ಸಿನೆಮಾದಲ್ಲಿದೆ. ಕಿಚ್ಚ ಸುದೀಪ್ ಅವರ ಮೊದಲ ಸಿನೆಮಾದ ಹೆಸರನ್ನೇ ನಮ್ಮ ಸಿನೆಮಾಕ್ಕೆ ಇಟ್ಟುಕೊಂಡು ತೆರೆಗೆ ತರುತ್ತಿದ್ದೇವೆ. ನಮ್ಮ ಸಿನೆಮಾಕ್ಕೆ ಬೆಂಬಲವಾಗಿ ಸುದೀಪ್ ನಿಂತಿರುವುದು ನಮಗೆ ದೊಡ್ಡ ಬಲ ತಂದಂತಾಗಿದೆ. ಈಗಾಗಲೇ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆʼ ಎಂದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ಮೊದಲ ಬಾರಿಗೆ ಭಾ. ಮ. ಹರೀಶ್ ಆಡಿಯೋ ಹೆಸರಿನಲ್ಲಿ ಹೊಸ ಆಡಿಯೋ ಕಂಪೆನಿಯನ್ನು ಪ್ರಾರಂಭಿಸಿದ್ದು, ಈ ಕಂಪೆನಿಯ ಅಡಿಯಲ್ಲಿ ತಾಯವ್ವ ಸಿನೆಮಾದ ಆಡಿಯೋ ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್, ನಿರ್ಮಾಪಕರಾದ ಭಾ. ಮ. ಹರೀಶ್, ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಐಪ್ಲೆಕ್ಸ್ ಮುಖ್ಯಸ್ಥ ಗಿರೀಶ್, ಶಿಕ್ಷಣ ತಜ್ಞ ನಾಗಪಾಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
