ಹೆಣದ ಉಗುರು ಕತ್ತರಿಸಿ ನಟ ಅಂಬರೀಶ್‍ಗೆ ಅಂಟಿಸಲಾಗಿತ್ತು; ರಾಜೇಂದ್ರ ಸಿಂಗ್ ಬಾಬು ಹೇಳಿದ ‘ಅಂತ’ ಚಿತ್ರದ ರೋಚಕ ಕಥೆ
ಅಂತ ಚಿತ್ರವನ್ನು ಡಾ. ರಾಜಕುಮಾರ್ ಅವರ ಜೊತೆಗೆ ಮಾಡಬೇಕು ಎಂಬ ಪ್ರಯತ್ನ ನಡೆದಿತ್ತಂತೆ. ವಿಷ್ಣುವರ್ಧನ್ ಜೊತೆಗೆ ಮಾಡುವ ಯೋಚನೆಯೂ ಇತ್ತಂತೆ. ಆದರೆ, ಅಂತಿಮವಾಗಿ ಈ ಚಿತ್ರದಲ್ಲಿ ಅಂಬರೀಶ್ ನಾಯಕನಾಗಿ ಕಾಣಿಸಿಕೊಂಡರು.

Antha Kannada Movie: ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳಲ್ಲೊಂದು 1981ರಲ್ಲಿ ಬಿಡುಗಡೆಯಾದ ಅಂಬರೀಶ್ ಅಭಿನಯದ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಅಂತ’. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಎಚ್.ಕೆ. ಅನಂತ ರಾವ್ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಈ ಚಿತ್ರದಲ್ಲಿ ಹಿಂಸೆ ಹೆಚ್ಚಿದ್ದ ಕಾರಣ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸೆನ್ಸಾರ್ ಮಂಡಳಿ ಮೊದಲು ಒಪ್ಪಿರಲಿಲ್ಲ. ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿ ಕೊನೆಗೆ ಚಿತ್ರದ ಬಿಡುಗಡೆಗೆ ಅನುಮತಿ ನೀಡಲಾಗಿತ್ತು. ಬಿಡುಗಡೆಯ ನಂತರ ದೊಡ್ಡ ಯಶಸ್ಸು ಕಾಣುವುದರ ಜೊತೆಗೆ, ತೆಲುಗು, ತಮಿಳು ಮತ್ತು ಹಿಂದಿಗೆ ರೀಮೇಕ್ ಸಹ ಆಗಿತ್ತು.
ಈ ಚಿತ್ರವನ್ನು ಡಾ. ರಾಜಕುಮಾರ್ ಅವರ ಜೊತೆಗೆ ಮಾಡಬೇಕು ಎಂಬ ಪ್ರಯತ್ನ ನಡೆದಿತ್ತಂತೆ. ವಿಷ್ಣುವರ್ಧನ್ ಜೊತೆಗೆ ಮಾಡುವ ಯೋಚನೆಯೂ ಇತ್ತಂತೆ. ಆದರೆ, ಅಂತಿಮವಾಗಿ ಈ ಚಿತ್ರದಲ್ಲಿ ಅಂಬರೀಶ್ ನಾಯಕನಾಗಿ ಕಾಣಿಸಿಕೊಂಡರು. ಇಷ್ಟಕ್ಕೂ ‘ಅಂತ’ ಚಿತ್ರದಲ್ಲಿ ಡಾ. ರಾಜಕುಮಾರ್ ಯಾಕೆ ನಟಿಸಲಿಲ್ಲ, ವಿಷ್ಣುವರ್ಧನ್ ಯಾಕೆ ನಟಿಸಲಿಲ್ಲ? ಎಂಬ ಪ್ರಶ್ನೆ ಸಹಜ. ಈ ವಿಷಯವಾಗಿ, ರಾಜೇಂದ್ರ ಸಿಂಗ್ ಬಾಬು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರಾಜ್- ವಿಷ್ಣು ಬಳಿಕ ಅಂಬರೀಶ್ ಸರದಿ
ಈ ಕುರಿತು ಮಾತನಾಡಿರುವ ಅವರು, ‘ನನಗೂ ಮೊದಲು ದೊರೈ- ಭಗವಾನ್ ಅವರು ಈ ಚಿತ್ರ ಮಾಡಬೇಕು ಅಂತಿದ್ದರು. ಆದರೆ, ನನಗೆ ಚಿತ್ರದ ಹಕ್ಕುಗಳು ಸಿಕ್ಕವು. ನನಗೆ ಡಾ. ರಾಜಕುಮಾರ್ ಅವರ ಜೊತೆಗೆ ಈ ಚಿತ್ರ ಮಾಡಬೇಕು ಎಂಬ ಆಸೆ ಇದ್ದರೂ, ಅವರ ಇಮೇಜ್‍ಗೆ ಕಥೆ ಸರಿಯಾಗುತ್ತಿರಲಿಲ್ಲ. ಚಿತ್ರದಲ್ಲಿ ಹಿಂಸೆಯ ದೃಶ್ಯಗಳಿದ್ದವು. ಈ ತರಹದ ದೃಶ್ಯಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿರಲಿಲ್ಲ. ವಿಷ್ಣುವರ್ಧನ್ ಅವರ ಇಮೇಜ್‍ಗೂ ಸರಿ ಹೊಂದುತ್ತಿರಲಿಲ್ಲ. ನಾಯಕನ ಪಾತ್ರಕ್ಕೆ ಇಮೇಜ್ ಇಲ್ಲದಿರುವ ಒಬ್ಬ ಪಾತ್ರಧಾರಿ ಬೇಕಿತ್ತು. ಆತ ಮುಂದೇನು ಮಾಡುತ್ತಾನೆ ಎಂದು ಊಹಿಸುವುದಕ್ಕೆ ಸಾಧ್ಯವಾಗಬಾರದಿತ್ತು. ಹಾಗಾಗಿ, ಅಂಬರೀಶ್ ಅವರನ್ನು ಸಂಪರ್ಕಿಸಿದೆ. ಅವರು ಸಹ ಆ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು’ ಎನ್ನುತ್ತಾರೆ.
ನಿಜವಾದ ರಕ್ತ, ಹೆಣದ ಉಗುರು ಬಳಕೆ
ಅಂಬರೀಶ್ ಅವರಿಗೆ ‘ಕುತ್ತೆ, ಕನ್ವರ್ ನಹೀ ಕನ್ವರ್ ಲಾಲ್ ಬೋಲೋ …’ ಎಂಬ ಸಂಭಾಷಣೆ ಹೇಳಿಕೊಡುವುದಕ್ಕೆ ಒಂದೂವರೆ ತಿಂಗಳು ಬೇಕಾಯಿತು ಎಂದಿರುವ ಬಾಬು, ‘ಅಂಬರೀಶ್ ಅವರಿಂದ ಸಂಭಾಷಣೆ ಹೇಳಿಸುವುದಕ್ಕೆ ಸಾಕಷ್ಟು ಕಷ್ಟಪಡಬೇಕಾಯಿತು. ಈ ಚಿತ್ರದಲ್ಲಿ ಅಂಬರೀಶ್‍ಗೆ ಸಾಕಷ್ಟು ಕಾಟ ಕೊಟ್ಟಿದ್ದೇನೆ. ಅದಕ್ಕೆ ಅವನು ನನಗೆ ‘ಟಾರ್ಚರ್ ಡೈರೆಕ್ಟರ್’ ಎಂದು ಕರೆಯುತ್ತಿದ್ದ. ನೈಜವಾಗಿ ಬರಬೇಕು ಎಂದು ಅವನ ಮೈಮೇಲೆ ನಿಜವಾದ ರಕ್ತ ಹಾಕಿಸುತ್ತಿದ್ದೆ. ಅದು ಸಿಕ್ಕಾಪಟ್ಟೆ ವಾಸನೆ ಬರುತ್ತಿತ್ತು. ಇನ್ನು, ಹೆಣಗಳಿಂದ ನಿಜವಾದ ಉಗುರುಗಳನ್ನು ಕತ್ತರಿಸಿತಂದು, ಅದನ್ನು ಅವನು ಉಗುರುಗಳ ಮೇಲೆ ಅಂಟಿಸಿದ್ದೆವು. ಇದೆಲ್ಲದರಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದರೆ, ಅಂಬರೀಶ್ ಅದನ್ನೆಲ್ಲಾ ಸಹಿಸಿಕೊಂಡು ಬಹಳ ಅದ್ಭುತವಾಗಿ ಅಭಿನಯಿಸಿದ’ ಎಂದು ಬಾಬು ನೆನಪಿಸಿಕೊಂಡಿದ್ದಾರೆ.
ಲಕ್ಷ್ಮೀ ಆಗ ಬೇಡಿಕೆಯಲ್ಲಿದ್ದ ನಟಿ. ಅಂಬರೀಶ್ ಜೊತೆಗೆ ನಟಿಸುತ್ತಾರೋ ಇಲ್ಲವೋ ಎಂಬ ಭಯವಿತ್ತು. ಹೋಗಿ ಅವರನ್ನು ಕೇಳಿದಾಗ, ‘ನಾನೊಬ್ಬ ನಟಿ. ನನಗೆ ಪಾತ್ರ ಮುಖ್ಯ. ಪಾತ್ರ ಚೆನ್ನಾಗಿದ್ದರೆ ಯಾರ ಜೊತೆಗೆ ಬೇಕಾದರೂ ನಟಿಸುವುದಕ್ಕೆ ನಾನು ಸಿದ್ಧ ಎಂದರು. ಜಯಮಾಲ ಸಹ ಒಂದೊಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಅವರು ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು’ ಎಂದಿದ್ದಾರೆ.
20 ಲಕ್ಷ ಬಜೆಟ್, 40 ಲಕ್ಷ ಆದಾಯ
ಚಿತ್ರರಂಗ ಇರುವವರೆಗೂ ‘ಅಂತ’ ನೆನಪಿನಲ್ಲಿರುತ್ತದೆ ಎನ್ನುವ ಬಾಬು, ‘ಆ ಕಾಲದಲ್ಲಿ ಗ್ರಾಫಿಕ್ಸ್ ಇರಲಿಲ್ಲ. ಎಲ್ಲವನ್ನೂ ಮ್ಯಾನ್ಯುಯಲ್ ಆಗಿಯೇ ಮಾಡಬೇಕಿತ್ತು. ಅಂಬರೀಶ್ ಅವರ ದ್ವಿಪಾತ್ರಗಳ ಫೈಟ್ ಇದೆ. ಅದನ್ನು ಮಾಸ್ಕ್ ಹಾಕಿ ಚಿತ್ರೀಕರಣ ಮಾಡಿದೆವು. ಇಡೀ ತಂಡದ ಶ್ರಮದಿಂದ ಆ ಚಿತ್ರ ಸಾಧ್ಯವಾಯಿತು. ಎಲ್ಲರ ಪರಿಶ್ರಮದಿಂದ ಈ ಚಿತ್ರ ಸಾಧ್ಯವಾಯಿತು. ರಾಜಕುಮಾರ್ ಮತ್ತು ವಿಷ್ಣುವರ್ಧನ್ ನಂತರ ಅಂಬರೀಶ್‍ಗೆ 200 ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಯಿತು ಎಂದರೆ ಅದಕ್ಕೆ ಕಾರಣ ‘ಅಂತ’. ಈಗಿನ ತರಹ ಪ್ರಚಾರ ಇರಲಿಲ್ಲ. ಆದರೂ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿತು. ಹಾಲಿವುಡ್‍ನ ‘ವೆರೈಟಿ’ ಮ್ಯಾಗಜೀನ್‍ನಲ್ಲಿ ಈ ಚಿತ್ರದ ಬಗ್ಗೆ ಬರೆಯಲಾಯಿತು. ಕಥೆ, ಪಾತ್ರ, ಚಿತ್ರಕಥೆ ಬಹಳ ಮುಖ್ಯ ಎಂದು ತೋರಿಸಿಕೊಟ್ಟ ಚಿತ್ರ. ಆಗಿನ ಕಾಲಕ್ಕೆ 20 ಲಕ್ಷದಲ್ಲಿ ತಯಾರಾದ ಚಿತ್ರ, 40 ಲಕ್ಷ ದುಡಿಯಿತು’ ಎಂದು ಬಾಬು ಹೇಳಿದ್ದಾರೆ.
‘ಅಂತ’ ಚಿತ್ರದಲ್ಲಿ ಅಂಬರೀಶ್, ಲಕ್ಷ್ಮೀ, ಜಯಮಾಲ, ಪಂಡರಿಬಾಯಿ, ವಜ್ರಮುನಿ, ಟೈಗರ್ ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ.
ಬರಹ: ಚೇತನ್ ನಾಡಿಗೇರ್
