Kannada Film 2025: ಹೊಸ ವರ್ಷಕ್ಕೆ ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತಿರುವ ಕನ್ನಡ ಸಿನಿಮಾಗಳಿವು
ಕನ್ನಡ ಚಿತ್ರರಂಗ ಈ ವರ್ಷ ಸಾಕಷ್ಟು ಸಿನಿಮಾಗಳನ್ನು ಸಿನಿಪ್ರಿಯರಿಗಾಗಿ ಬಿಡುಗಡೆ ಮಾಡುತ್ತಿದೆ. ಕೆಲ ವರ್ಷಗಳಿಂದ ಚಿತ್ರೀಕರಣಗೊಳ್ಳುತ್ತಿದ್ದು, ಬಿಡುಗಡೆಗೆ ತಡವಾದ ಸಿನಿಮಾಗಳೂ ಸಹ ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ.

ಕಳೆದ ವರ್ಷದ ಮಾತು. 2024ರಲ್ಲಿ ಬಿಡುಗಡೆಯಾದ 220 ಪ್ಲಸ್ ಚಿತ್ರಗಳ ಪೈಕಿ 10ಕ್ಕೂ ಹೆಚ್ಚು ಚಿತ್ರಗಳು, ಹಳೆಯ ಚಿತ್ರಗಳಾಗಿದ್ದವು. ಹಳೆಯ ಚಿತ್ರಗಳೆಂದರೆ ಕೋವಿಡ್‍ಗೂ ಮೊದಲು ಪ್ರಾರಂಭವಾದ ಚಿತ್ರಗಳು. ರಾಧಿಕಾ ಕುಮಾರಸ್ವಾಮಿ ಅಭಿನಯದ ಮತ್ತು ನಿರ್ಮಾಣದ ‘ಭೈರಾದೇವಿ’, ರಿಷಿ ಅಭಿನಯದ ‘ರಾಮನ ಅವತಾರ’, ಪ್ರದೀಪ್ ರಾಜ್ ನಿರ್ದೇಶನದ ‘ಕಿರಾತಕ 2’, ದಿಗಂತ್ ಅಭಿನಯದ ‘ಮಾರಿಗೋಲ್ಡ್’, ಅಭಿಮನ್ಯು ಕಾಶೀನಾಥ್ ಅಭಿನಯದ ‘ಎಲ್ಲಿಗೆ ಪಯಣ ಯಾವುದೋ ದಾರಿ’, ‘ಮಿಸ್ಟರ್ ನಟ್ವರ್ ಲಾಲ್’, ‘ರಮೇಶ ಸುರೇಶ’, ‘ಅವತಾರ್ ಪುರುಷ 2’ ಮುಂತಾದ ಚಿತ್ರಗಳು ಕೋವಿಡ್‍ಗೂ ಮುನ್ನ ಪ್ರಾರಂಭವಾಗಿ, ಕಾರಣಾಂತರಗಳಿಂದ ವಿಳಂಬವಾಗಿ, ಕೊನೆಗೆ 2024ರಲ್ಲಿ ಬಿಡುಗಡೆಯಾದವು.
ಈ ವರ್ಷವೂ ಅದಕ್ಕೆ ಹೊರತಲ್ಲ. ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಜನವರಿ ಮೊದಲ ವಾರದಿಂದ ವಾರಕ್ಕೆ ಮಿನಿಮಮ್ ಎಂಬಂತೆ ಮೂರು ಚಿತ್ರಗಳು ತೆರೆಕಾಣುತ್ತಿವೆ. ಕೆಲವು ವಾರಗಳಲ್ಲಿ ಆ ಸಂಖ್ಯೆ ಐದರವರೆಗೂ ಮುಟ್ಟಿದರೆ ಆಶ್ಚರ್ಯವಿಲ್ಲ. ಅಷ್ಟೊಂದು ಸಂಖ್ಯೆಯ ಚಿತ್ರಗಳು ಇದೀಗ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಪೈಕಿ ಕೋವಿಡ್ ಕಾಲದ ಮತ್ತು ಅದಕ್ಕೂ ಮುನ್ನ ಪ್ರಾರಂಭವಾದ ಕೆಲವು ಚಿತ್ರಗಳಿವೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ಈಗಾಗಲೇ ಜನವರಿ ಎರಡನೇ ವಾರದಲ್ಲಿ ದಿಲೀಪ್ ರಾಜ್ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎಂಬ ಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ಚಿತ್ರವು ನಾಲ್ಕೈದು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಎಂದು ಹೇಳಲಾಗುತ್ತದೆ. ಇನ್ನು, ಶರಣ್ ಅಭಿನಯದ ‘ಛೂ ಮಂತರ್’ ಸಹ ಕೆಲವು ವರ್ಷಗಳ ಹಿಂದಿನ ಚಿತ್ರವಾಗಿದ್ದು, ಕಳೆದ ವರ್ಷವೇ ಎರಡು ಬಾರಿ ಬಿಡುಗಡೆ ದಿನಾಂಕ ಘೋಷಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಎರಡೂ ದಿನಗಳಂದು ಚಿತ್ರ ಬಿಡುಗಡೆಯಾಗದೆ, ಈ ವರ್ಷ ಕೊನೆಗೂ ಬಿಡುಗಡೆಯಾಗಿದೆ.
ಗಣ
ಜನವರಿ 31ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿರುವ ಐದು ಚಿತ್ರಗಳ ಪೈಕಿ ಎರಡು ಚಿತ್ರಗಳು ಹಳೆಯ ಚಿತ್ರಗಳು. ಪ್ರಜ್ವಲ್ ಅಭಿನಯದ ‘ಗಣ’, 2021ರಲ್ಲೇ ಪ್ರಾರಂಭವಾಗಿತ್ತು. 2023ರ ಹೊತ್ತಿಗೆ ಚಿತ್ರ ಮುಗಿದು, ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾದರೂ ಬಿಡುಗಡೆಯಾಗಲೇ ಇಲ್ಲ. ಈ ವರ್ಷ ಕೊನೆಗೂ ಚಿತ್ರ ಬಿಡುಗಡೆಯಾಗತ್ತಿದೆ. ಅದೇ ದಿನ ಬಿಡುಗಡೆಯಾಗುತ್ತಿರುವ ನವೀನ್ ಶಂಕರ್ ಅಭಿನಯದ ‘ನೋಡಿದವರು ಏನಂತಾರೆ’ ಚಿತ್ರದ ಶೀರ್ಷಿಕೆಯನ್ನು ನಟ ಶ್ರೀಮುರಳಿ 2020ರಲ್ಲಿ ನಡೆದ ಒಂದು ಸಮಾರಂಭದಲ್ಲೇ ಬಿಡುಗಡೆ ಮಾಡಿದ್ದರು. ಆ ನಂತರ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರವು ಜನವರಿ 31ರಂದು ಬಿಡುಗಡೆಯಾಗುತ್ತಿದೆ.
ಗಜರಾಮ
ಫೆಬ್ರವರಿ 07ಕ್ಕೆ ಬಿಡುಗಡೆಯಾಗಲಿರುವ ‘ಗಜರಾಮ’ ಚಿತ್ರವು 2022ರಲ್ಲಿ ಪ್ರಾರಂಭವಾದ ಚಿತ್ರವೇ. ಚಿತ್ರದ ಚಿತ್ರೀಕರಣ ಮುಗಿದು ಎರಡು ವರ್ಷಗಳೇ ಆಗಿವೆ. ಕಳೆದ ವರ್ಷದ ಕೊನೆಯಲ್ಲೇ ಚಿತ್ರದ ಬಿಡುಗಡೆಯ ಘೋಷಣೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಗಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅದೇ ವಾರ ಬಿಡಗುಡೆಯಾಗುಗುತ್ತಿರುವ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ ‘ಕೋರ’ ಎಂಬ ಚಿತ್ರವು 2018ರಲ್ಲೇ ಘೋಷಣೆಯಾಗಿತ್ತು. ಆಗ ಚಿತ್ರಕ್ಕೆ ‘ಆದಿವಾಸಿ’ ಎಂಬ ಹೆಸರಿತ್ತು. ಇದೀಗ ಆ ಚಿತ್ರ ‘ಕೋರ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.
ಭುವನಂ ಗಗನಂ
ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ 2022ರಲ್ಲಿ ಪ್ರಾರಂಭವಾಗಿತ್ತು. ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಚಿತ್ರ ಕೋವಿಡ್‍ಗೂ ಮೊದಲು ಪ್ರಾರಂಭವಾದ ಚಿತ್ರ. ಫೆಬ್ರವರಿ 21ಕ್ಕೆ ಬಿಡುಗಡೆಯಾಗುತ್ತಿರುವ ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಕೋವಿಡ್‍ಗೂ ಮೊದಲು ಶುರುವಾಗಿತ್ತು. 2021ರಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಗಿ ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಯಾವ್ಯಾವುದೋ ಕಾರಣಕ್ಕೆ ತಡವಾದ ಚಿತ್ರಗಳೆಲ್ಲಾ ಈಗ ಕೊನೆಗೂ ಬಿಡುಗಡೆಯಾಗುತ್ತಿವೆ. ಸ್ವಲ್ಪ ಲೇಟ್ ಆದರೂ, ಚಿತ್ರ ಲೇಟೆಸ್ಟ್ ಆಗಿ ಬರುತ್ತಿರುವುದಾಗಿ ಚಿತ್ರತಂಡಗಳೂ ಹೇಳುತ್ತಿವೆ. ಈ ಚಿತ್ರಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಬರಹ: ಚೇತನ್ ನಾಡಿಗೇರ್
ಇದನ್ನೂ ಓದಿ: Lakshmi Baramma Serial: ಜೈಲಿನಿಂದಲೇ ಕುತಂತ್ರ ಆರಂಭಿಸಿದ ಕಾವೇರಿ; ಕೀರ್ತಿ ಮಾತು ಕೇಳಿ ಕಂಗಾಲಾದ ಲಕ್ಷ್ಮೀ ಫ್ಯಾಮಿಲಿ
