ಇದು ‘UI’ ಸ್ಪೆಷಲ್: ಇಬ್ಬರು ಸಂಗೀತ ನಿರ್ದೇಶಕರು, ಇಬ್ಬರು ಛಾಯಾಗ್ರಾಹಕರು, ಮೂವರು ಸಂಕಲನಕಾರರು
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ನಾಳೆ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆಂಬ ವಿಷಯ ಈಗಾಗಲೇ ಗೊತ್ತಾಗಿದೆ. ಆದರೆ ಈ ಸಿನಿಮಾದ ನಿರ್ಮಾಣದಲ್ಲೂ ವಿಶೇಷವಿದೆ.
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿ.20ರಂದು ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆಂಬ ವಿಷಯ ಈಗಾಗಲೇ ಗೊತ್ತಾಗಿದೆ. ಚಿತ್ರದ ಟೀಸರ್‌ನಲ್ಲಿ ಅಚ್ಯುತ್ ಕುಮಾರ್, ಸಾಧು ಕೋಕಿಲ, ರವಿಶಂಕರ್, ರೀಷ್ಮಾ ನಾಣಯ್ಯ ಮುಂತಾದವರು ಕಾಣಿಸುತ್ತಾರೆ. ಆದರೆ, ಚಿತ್ರಕ್ಕೆ ದುಡಿದ ತಂತ್ರಜ್ಞರು ಯಾರು ಎಂಬ ವಿಷಯ ಗೊತ್ತಿದೆಯೇ?
ಉಪೇಂದ್ರರ ಜೊತೆಗೆ ಕೆಲಸ ಮಾಡುವುದು ಬಹಳ ಕಷ್ಟ ಎಂಬ ಮಾತು ಕನ್ನಡ ಚಿತ್ರರಂಗದಲ್ಲಿದೆ. ಏಕೆಂದರೆ, ಉಪೇಂದ್ರ ಅವರು ತಮ್ಮ ತಂತ್ರಜ್ಞರಿಂದ ಸಾಕಷ್ಟು ಕೆಲಸ ತೆಗೆಯುತ್ತಾರೆ. ಅವರನ್ನು ತೃಪ್ತಿಪಡಿಸುವುದು ಕಷ್ಟ ಎಂಬ ಮಾತಿದೆ. ಅವರ ಜೊತೆಗೆ ಹೊಂದಿಕೊಳ್ಳುವುದು ಕಷ್ಟವಾದ್ದರಿಂದ, ತಂತ್ರಜ್ಞರು ಬದಲಾಗುತ್ತಲೇ ಇರುತ್ತಾರೆ.
‘UI’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿರುವ ವಿಷಯ ಗೊತ್ತೇ ಇದೆ. ಆದರೆ, ಅಜನೀಶ್ ಲೋಕನಾಥ್‍ಗೂ ಮುನ್ನ ಗುರುಕಿರಣ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಇದಕ್ಕೂ ಮೊದಲು ‘ಎ’, ‘ಉಪೇಂದ್ರ’ ಮುಂತಾದ ಉಪೇಂದ್ರ ನಿರ್ದೇಶನದ ಚಿತ್ರಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದರು. ಬಹುಶಃ ಅವರೇ ಸಂಗೀತ ಸಂಯೋಜಕರು ಎಂದುಕೊಳ್ಳುವಷ್ಟರಲ್ಲಿ ಆ ಜಾಗಕ್ಕೆ ಅಜನೀಶ್ ಲೋಕನಾಥ್ ಬಂದಿದ್ದರು.
ಆದರೆ ಅಜನೀಶ್ ಲೋಕನಾಥ್ ಸಂಗೀತದ ಬಗ್ಗೆ ಉಪೇಂದ್ರ ಬಹಳ ಖುಷಿಯಾಗಿದ್ದಾರೆ. ಅಜನೀಶ್ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಈ ಚಿತ್ರದ ವಿಶೇಷತೆಯೆಂದರೆ ಚಿತ್ರದ ಹಿನ್ನೆಲೆ ಸಂಗೀತದ ಕೆಲಸಗಳು ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದಿದ್ದು ಅದಕ್ಕಾಗಿ 90 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ. ಇದರಲ್ಲಿ 15 ಪಿಟೀಲು ವಾದಕರು, 12 ವಯೋಲಾಸ್, 12 ಸೆಲ್ಲೋಸ್, ಎಂಟು ಡಬಲ್ ಬಾಸ್, ತಲಾ ನಾಲ್ಕು ಕೊಳಲು ವಾದಕರು, ಕ್ಲಾರಿನೆಟ್, ಟ್ಂಪೆಟ್, ಟ್ರೋಂಬೋನ್‍ಗಳು ಸೇರಿದಂತೆ ಹಲವು ವಾದ್ಯಗಳನ್ನು ಬಳಸಿಕೊಳ್ಳಲಾಗಿದೆ.
ಇಬ್ಬರು ಛಾಯಾಗ್ರಾಹಕರು
ಇನ್ನು, ‘UI’ ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕರು ಕೆಲಸ ಮಾಡಿದ್ದಾರಂತೆ. ಮೊದಲು ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಾಹಕರು ಎಂದು ಹೇಳಲಾಗಿತ್ತು. ಕೊನೆಗೆ ಆ ಜಾಗಕ್ಕೆ ಉಪೇಂದ್ರರ ಖಾಯಂ ಛಾಯಾಗ್ರಾಹಕ ಎಂದು ಗುರುತಿಸಿಕೊಂಡಿರುವ ಎಚ್.ಸಿ. ವೇಣು ಬಂದಿದ್ದಾರೆ. ವೇಣು ಇದಕ್ಕೂ ಮೊದಲು ‘ಎ’, ‘ಉಪೇಂದ್ರ’, ‘ಎಚ್2ಓ’ ಮುಂತಾದ ಚಿತ್ರಗಳಿಗೂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಮೂವರು ಸಂಕಲನಕಾರರು
‘UI’ಗೆ ಮೂವರು ಸಂಕಲನಕಾರರು ಕೆಲಸ ಮಾಡಿರುವುದು ವಿಶೇಷ. ಮೊದಲು ‘ಕ್ರೇಜಿ ಮೈಂಡ್ಸ್’ ಶ್ರೀ ಸಂಕಲನಕಾರರಾಗಿದ್ದರು. ‘ಉಪ್ಪಿ 2’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದು ಅವರೇ. ಬೇರೆ ಕೆಲಸಗಳ ಒತ್ತಡವಿದ್ದ ಕಾರಣ, ಅವರು ಸ್ವಲ್ಪ ಕೆಲಸ ಮಾಡಿ ದೀಪು ಎಸ್. ಕುಮಾರ್‍ಗೆ ಜಾಗ ಬಿಟ್ಟುಕೊಟ್ಟಿದ್ದಾರೆ. ದೀಪು ತಂದೆ ಶಶಿಕುಮಾರ್, ಉಪೇಂದ್ರರ ‘ಓ’ ಸೇರಿದಂತೆ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಈಗ ಅವರ ಮಗ ದೀಪು ಸಹ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಅವರು ಕಾರಣಾಂತರಗಳಿಂದ ಚಿತ್ರದಿಂದ ಹೊರನಡೆದಾಗ, ವಿಜಿ ಎನ್ನುವವರು ಸಂಕಲನವನ್ನು ಮುಗಿಸಿದ್ದಾರೆ.
ಚಿತ್ರತಂಡ
ಚಿತ್ರಕ್ಕೆ ಥ್ರಿಲ್ಲರ್ ಮಂಜು, ರವಿ ವರ್ಮ ಮತ್ತು ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದರೆ, ಚಿನ್ನಿ ಪ್ರಕಾಶ್ ಮತ್ತು ಇಮ್ರಾನ್ ಸರದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರ ಸಹಕಾರದಿಂದಲೇ ‘UI’ ಮೂಡಿಬಂದಿದೆ ಎಂದು ಇತ್ತೀಚೆಗೆ ನಡೆದ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಉಪೇಂದ್ರ ಹೇಳಿಕೊಂಡಿದ್ದಾರೆ.
‘UI’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‍ಟೈನರ್ಸ್ ಸಂಸ್ಥೆಗಳಡಿ ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಇನ್ನು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಉಪೇಂದ್ರ ಬರೆದಿದ್ದಾರೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ರಾನಾ ದಗ್ಗುಬಾಟಿ ಟಾಕ್ ಶೋನಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ; ಬಿಡುಗಡೆಯಾಯ್ತು ಪ್ರೋಮೋ - ಸ್ಟ್ರೀಮಿಂಗ್ ಎಲ್ಲಿ?