ಅಲ್ಲು ಅರ್ಜುನ್ ಬಂಧನಕ್ಕೆ ಮಮ್ಮಲ ಮರುಗಿದ ರಶ್ಮಿಕಾ ಮಂದಣ್ಣ; ಇದು ನಂಬಲಾಗದ, ಹೃದಯ ವಿದ್ರಾವಕ ಘಟನೆ ಎಂದ ಪುಷ್ಪ ನಟಿ
Allu Arjun's Arrest In Stampede Case: ಅಲ್ಲು ಅರ್ಜುನ್ ಬಂಧನ ಘಟನೆಗೆ ಸಂಬಂಧಪಟ್ಟಂತೆ ಪುಷ್ಪ 2 ನಟಿ ರಶ್ಮಿಕಾ ಮಂದಣ್ಣ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ದುರದೃಷ್ಟಕರ ಮತ್ತು ತೀವ್ರ ದುಃಖಕರವಾಗಿದೆ. ಎಲ್ಲದಕ್ಕೂ ಒಬ್ಬನೇ ವ್ಯಕ್ತಿಯನ್ನು ದೂಷಿಸುವುದನ್ನು ನೋಡಲು ದುಃಖವಾಗುತ್ತದೆ ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್‌ನ ಸಂದ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತಕ್ಕೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಪುಷ್ಪ 2 ನಟ ಅಲ್ಲು ಅರ್ಜುನ್ ಬಂಧನವಾಗಿತ್ತು. ಹೈಕೋರ್ಟ್ ಇವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದೇ ಸಮಯದಲ್ಲಿ ಪುಷ್ಪ 1 ಮತ್ತು ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜತೆ ನಟಿಸಿರುವ ಕರ್ನಾಟಕದ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.
"ನಾನು ಈಗ ಏನು ನೋಡುತ್ತಿದ್ದೇನೆ ಎನ್ನುವುದನ್ನು ನನಗೆ ನಂಬಲಾಗುತ್ತಿಲ್ಲ. ಈ ಘಟನೆಯು ದುರದೃಷ್ಟಕರ ಮತ್ತು ತೀವ್ರ ದುಃಖಕರವಾಗಿದೆ. ಎಲ್ಲದಕ್ಕೂ ಒಬ್ಬನೇ ವ್ಯಕ್ತಿಯನ್ನು ದೂಷಿಸುವುದನ್ನು ನೋಡಲು ದುಃಖವಾಗುತ್ತದೆ" ಎಂದು ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ.
ಏನಿದು ಘಟನೆ?
ಪುಷ್ಪ 2 ಸಿನಿಮಾ ಬಿಡುಗಡೆಗೆ ಮುನ್ನ ಪ್ರೀಮಿಯರ್ ಶೋ ಸಂದರ್ಭದಲ್ಲಿ ಒಂದು ದುರ್ಘಟನೆ ನಡೆದಿತ್ತು. ಪುಷ್ಪ 2; ದಿ ರೂಲ್ ಚಿತ್ರ ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಆ ಸಂದರ್ಭ ಅಲ್ಲಿಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಕಾಲ್ತುಳಿತ ಕೂಡ ಉಂಟಾಯಿತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿತ್ತು. ಅವರ ಒಂಬತ್ತು ವರ್ಷದ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್‌ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಅನುಮತಿ ನೀಡದೆ ಈ ರೀತಿ ಅಲ್ಲು ಅರ್ಜುನ್ ಆಗಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ರೀತಿ ಬಂದಾಗ ಅಭಿಮಾನಿಗಳು ಹೆಚ್ಚಾಗಿ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅಲ್ಲು ಅರ್ಜುನ್ ಬಂಧನವಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಕೂಡ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ.