Allu Arjun: ಹೈದ್ರಾಬಾದ್ ಚಂಚಲಗೂಡ ಜೈಲಿನಿಂದ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ; ನಾನೀಗ ಏನೂ ಹೇಳಲಾರೆ
ಪುಷ್ಪ 2 ಚಿತ್ರದ ಬಿಡುಗಡೆ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಟಾಲಿವುಡ್ ನಟ ಅಲ್ಲು ಅರ್ಜುನ್ ಹೈದ್ರಾಬಾದ್ ಜೈಲಿನಿಂದ ಹೊರ ಬಂದರು. ಅವರು ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು.
ಹೈದ್ರಾಬಾದ್: ನಾನು ಕಾನೂನನ್ನು ಗೌರವಿಸುವವನು. ಈ ಬೆಳವಣಿಗೆಗಳ ಕುರಿತು ಏನನ್ನೂ ಮಾತನಾಡಲಾರೆ. ಏನನ್ನೂ ಹೇಳುವುದಿಲ್ಲ. ಇದು ಶನಿವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾದ ಟಾಲಿವುಡ್ ನಾಯಕ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ.ಪುಷ್ಪ 2 ಚಿತ್ರ ಬಿಡುಗಡೆಯ ದಿನದಂದು ಭಾರೀ ಕಾಲ್ತುಳಿತ ಉಂಟಾಗಿ ರೇವತಿ ಎನ್ನುವ ಮಹಿಳೆ ಮೃತಪಟ್ಟಿದ್ದರು. ಈ ಕುರಿತು ನಟ ಅಲ್ಲು ಅರ್ಜುನ್ ವಿರುದ್ದ ಮೊಕದ್ದಮೆ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಹೈದ್ರಾಬಾದ್ ಪೊಲೀಸರು ಶುಕ್ರವಾರ ಮನೆಯಿಂದ ಬಂಧಿಸಿ ಕರೆದೊಯ್ದಿದ್ದರು. ಆನಂತರ ತೆಲಂಗಾಣ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಕಾನೂನು ಪ್ರಕ್ರಿಯೆ ಮುಗಿಯದೇ ಇದ್ದುದರಿಂದ ಅವರನ್ನು ಚಂಚಲಗುಡ ಜೈಲಿಗೆ ಕರೆದೊಯ್ಯಲಾಗಿತ್ತು. ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿ ಶನಿವಾರ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಅವರು ಜುಬಿಲಿ ಹಿಲ್ಸ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನಾನು ಕಾನೂನನ್ನು ಗೌರವಿಸುತ್ತೇನೆ. ಈ ವೇಳೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಆದರೆ ಒಟ್ಟಾರೆ ಘಟನೆ, ನನ್ನ ಬಂಧನದ ಕುರಿತು ನಾನು ಈಗ ಏನನ್ನೂ ಹೇಳಲಾರೆ ಎಂದರು ಅಲ್ಲು ಅರ್ಜುನ್.
ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ಚಿತ್ರ ಬಿಡುಗಡೆ ವೇಳೆ ನಡೆದ ಘಟನೆ ದುರದೃಷ್ಟಕರ . ರೇವತಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೊಂದು ಅನಿರೀಕ್ಷಿತ ಘಟನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಈ ವೇಳೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಮಾಹಿತಿ ನೀಡುತ್ತಿದ್ದೇನೆ. ನಾನು ಎಂದಿಗೂ ಕಾನೂನನ್ನು ಗೌರವಿಸುವೆ ಎಂದು ಪ್ರಕ್ರಿಯಿಸಿದರು.
ಭಾವುಕರಾದ ಅಲ್ಲು ಅರ್ಜುನ್!
ಜೈಲಿನಿಂದ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಗೀತಾ ಆರ್ಟ್ಸ್ ಕಚೇರಿಗೆ ತಲುಪಿದರು. ಅಲ್ಲಿಂದ ಅವರು ಜುಬಿಲಿ ಹಿಲ್ಸ್ ನಲ್ಲಿರುವ ತಮ್ಮ ನಿವಾಸಕ್ಕೆ ಹೋದರು. ಅಲ್ಲು ಅರ್ಜುನ್ ಮನೆಗೆ ಹೋಗುವುದನ್ನು ನೋಡಿ ಅವರ ಪತ್ನಿ ಸ್ನೇಹಾ ರೆಡ್ಡಿ ಭಾವುಕರಾದರು. ಅಲ್ಲು ಅರ್ಜುನ್ ಕೂಡ ತಮ್ಮ ಪತ್ನಿ ಮತ್ತು ಮಕ್ಕಳನ್ನು ತಬ್ಬಿಕೊಂಡ ನಂತರ ಭಾವುಕರಾದರು.
ಚಂಚಲಗುಡ ಜೈಲಿನಲ್ಲಿದ್ದ ಅಲ್ಲು ಅರ್ಜುನ್ ಶನಿವಾರ ಬೆಳಿಗ್ಗೆ ಬಿಡುಗಡೆಯಾಗಿ ಜೈಲಿನ ಹಿಂದಿನ ಗೇಟ್ ನಿಂದ ಹೊರಬಂದು ಅಲ್ಲಿಂದ ಅವರು ನೇರವಾಗಿ ಗೀತಾ ಆರ್ಟ್ಸ್ ಕಚೇರಿಗೆ ಹೋದರು.
ಮಂಜೀರಾ ಬ್ಯಾರಕ್ ನಲ್ಲಿ ಅಲ್ಲು
ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದ ಹಿನ್ನೆಲೆಯಲ್ಲಿ, ಅಲ್ಲು ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಆತನನ್ನು ಮೊದಲು ಚಿಕ್ಕದಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಗಾಂಧಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು ಮತ್ತು ನಂತರ ನಾಂಪಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಸಮಯಕ್ಕೆ ಸರಿಯಾಗಿ ಜಾಮೀನು ಆದೇಶ ಸಿಗದ ಕಾರಣ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅಲ್ಲು ಅರ್ಜುನ್ ಇಡೀ ರಾತ್ರಿ ಜೈಲಿನಲ್ಲಿರಬೇಕಾಯಿತು. ಶುಕ್ರವಾರ ರಾತ್ರಿ ಅಲ್ಲು ಅರ್ಜುನ್ ಮಂಜೀರಾ ಬ್ಯಾರಕ್ ನಲ್ಲಿದ್ದರು.
ತನ್ನ ವಿರುದ್ಧದ ಪ್ರಕರಣವನ್ನು ಪ್ರಶ್ನಿಸಿ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಪರವಾಗಿ ನಿರಂಜನ್ ರೆಡ್ಡಿ ವಾದ ಮಂಡಿಸಿದ್ದರು. ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿತು. ಅಲ್ಲು ಅರ್ಜುನ್ ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು