Allu Arjun: ಬಂಧನವಾದಷ್ಟೇ ಬೇಗ ಮಧ್ಯಂತರ ಜಾಮೀನು ಪಡೆದ ಪುಷ್ಪ 2 ನಟ ಅಲ್ಲು ಅರ್ಜುನ್
Allu Arjun: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿನ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Allu Arjun Arrest: 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಬೀಳುತ್ತಿದ್ದಂತೆ, ಇದೀಗ ನಟ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ಪುಷ್ಪ 2 ಚಿತ್ರದ ಪ್ರದರ್ಶನದ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಬಿದ್ದ ಕೆಲವೇ ನಿಮಿಷಗಳಲ್ಲಿಯೇ ಅಲ್ಲು ಅರ್ಜುನ್ ಅವರಿಗೆ ಜಾಮೀನು ಸಿಕ್ಕಿದೆ.
ಇದಕ್ಕೂ ಮುನ್ನ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅದಾದ ಮೇಲೆ ವಿಚಾರಣೆ ನಡೆಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿತ್ತು.
ದೂರು ಹಿಂಪಡೆಯಲು ನಿರ್ಧಾರ
ಶುಕ್ರವಾರ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅಲ್ಲು ಅರ್ಜುನ್ ಅವರನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೃತ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಆಕೆಯ ಸಾವಿಗೆ ಅಲ್ಲು ಅರ್ಜುನ್ ಮತ್ತು ಥಿಯೇಟರ್ ಮ್ಯಾನೇಜ್‌ಮೆಂಟ್ ಹೊಣೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಪುಷ್ಪ 2 ಚಿತ್ರದ ಬಿಡುಗಡೆಯ ವೇಳೆ ಹೈದರಾಬಾದ್ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಏನಿದು ಘಟನೆ?
ಇದೇ ತಿಂಗಳ 4ರಂದು ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ದಿ ರೂಲ್ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಸಂಖ್ಯೆಯಲ್ಲಿ ಅಭಿಮಾನಿಗಳ ಆಗಮನವಾಗಿದ್ದರಿಂದ ಕಾಲ್ತುಳಿತವೂ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ರೇವತಿ ಎಂಬುವವರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದಾದ ಬಳಿಕ ಸ್ವತಃ ಅಲ್ಲು ಅರ್ಜುನ್ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕುಟುಂಬಕ್ಕೆ ಹಣಕಾಸಿನ ನೆರವು ನೀಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ಪುಷ್ಪ 2 ಸಿನಿಮಾದ ಪ್ರದರ್ಶನದ ವೇಳೆ ಘಟಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಇದೇ ಪ್ರಕರಣದಲ್ಲಿ ಚಿತ್ರದ ನಾಯಕ, ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಇಂದು ( ಡಿ. 13) ಬಂಧಿಸಿದ್ದಾರೆ. ಅಭಿಮಾನಿ ವಲಯದ ಜತೆಗೆ ಟಾಲಿವುಡ್‌ನ ಆಪ್ತರೂ ಪೊಲೀಸರ ಈ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಮಾತುಗಳು ಮುನ್ನೆಲೆಗೆ ಬಂದಿವೆ. ಪರ ವಿರೋಧ ಚರ್ಚೆ ನಡೆಯುತ್ತಿವೆ.
ಪುಷ್ಪ 2 ಸಿನಿಮಾದಲ್ಲಿ ಪುಷ್ಪರಾಜನನ್ನು ಬಂಧಿಸಲು ಇಡೀ ಪೊಲೀಸ್ ಇಲಾಖೆ ಹರಸಾಹಸ ಪಟ್ಟಿತ್ತು. ಖಾಕಿ ಪಡೆಗೇ ಪುಷ್ಪರಾಜ್ ಮತ್ತವರ ಗ್ಯಾಂಗ್ ಚಳ್ಳೆಹಣ್ಣು ತಿನ್ನಿಸಿತ್ತು. ಇದೀಗ ನಿಜ ಜೀವನದಲ್ಲಿಯೇ ಪೊಲೀಸರ ಅತಿಥಿಯಾಗಿದ್ದಾರೆ ಅಲ್ಲು ಅರ್ಜುನ್. ಪುಷ್ಪ 2 ಸಿನಿಮಾ ವೀಕ್ಷಣೆ ವೇಳೆ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪುತ್ತಿದ್ದಂತೆ, ನಟನ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ, ಇಂದು ಅವರ ಬಂಧನವಾಗಿದೆ. ಹೀಗೆ ಬಂಧನ ಆಗುತ್ತಿದ್ದಂತೆ, ಅಲ್ಲು ಅರ್ಜುನ್‌ಗೆ ರಿಯಲ್ ಪೊಲೀಸ್ ವರಸೆ ಹೇಗಿದೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.
ಭನ್ವರ್ ಸಿಂಗ್ ಶೇಖಾವತ್
ಪುಷ್ಪ 2 ಸಿನಿಮಾದಲ್ಲಿ ಸ್ಮಗ್ಲರ್ ಪುಷ್ಪರಾಜನನ್ನು ಬಂಧಿಸುವ ನಿಟ್ಟಿನಲ್ಲಿ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಾಗಿರಲಿಲ್ಲ. ಸೂಕ್ತ ಸಾಕ್ಷಗಳಿದ್ದರೂ, ಖಾಕಿ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸಿದ್ದ ಪುಷ್ಪ. ಪುಷ್ಪ ಸಿಗದಿದ್ದಕ್ಕೆ ಭನ್ವರ್ ಸಿಂಗ್ ಸಹ ಕುಪಿತನಾಗಿದ್ದ. ಈಗ ನಿಜ ಜೀವನದಲ್ಲಿ ಪುಷ್ಪ ಪಾತ್ರಧಾರಿ ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದಾರೆ. ಈ ಬಂಧನದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಬಗೆಬಗೆ ಮೀಮ್‌ಗಳು ಸದ್ದು ಮಾಡುತ್ತಿವೆ. "ಯಾರು ಏನೇ ಮಾಡಿದರೂ, ಕೊನೆಗೆ ಗೆಲ್ಲುವುದು ಭಾರತೀಯ ಪೊಲೀಸ್ ಇಲಾಖೆ" ಎಂದು ಕೆಲವರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.