ಬಿಡುಗಡೆಗೆ 9 ದಿನ ಇದೆ ಎನ್ನುವಾಗ ಕೊನೆಗೂ ಮುಗಿದ 'ಪುಷ್ಪ 2' ಸಿನಿಮಾ ಚಿತ್ರೀಕರಣ; ಚಿತ್ರತಂಡ ನಿರಾಳ
ಕನ್ನಡ ಸುದ್ದಿ  /  ಮನರಂಜನೆ  /  ಬಿಡುಗಡೆಗೆ 9 ದಿನ ಇದೆ ಎನ್ನುವಾಗ ಕೊನೆಗೂ ಮುಗಿದ 'ಪುಷ್ಪ 2' ಸಿನಿಮಾ ಚಿತ್ರೀಕರಣ; ಚಿತ್ರತಂಡ ನಿರಾಳ

ಬಿಡುಗಡೆಗೆ 9 ದಿನ ಇದೆ ಎನ್ನುವಾಗ ಕೊನೆಗೂ ಮುಗಿದ 'ಪುಷ್ಪ 2' ಸಿನಿಮಾ ಚಿತ್ರೀಕರಣ; ಚಿತ್ರತಂಡ ನಿರಾಳ

ಬಹುನಿರೀಕ್ಷಿತ ಪುಷ್ಪ 2 ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ. ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದರೂ, ಚಿತ್ರೀಕರಣ ಮುಗಿಯದಿದ್ದ ಬಗ್ಗೆ ಚಿತ್ರತಂಡ ಮಾತ್ರವಲ್ಲದೆ ಅಭಿಮಾನಿಗಳಲ್ಲೂ ಆತಂಕವಿತ್ತು. ಇದೀಗ ಚಿತ್ರೀಕರಣ ಮುಗಿಯುವುದರ ಜೊತೆಗೆ, ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತಕ್ಕೆ ಬಂದಿದೆ.

'ಪುಷ್ಪ 2' ಸಿನಿಮಾ ಚಿತ್ರೀಕರಣ ಕೊನೆಗೂ ಚಿತ್ರತಂಡ ಮುಗಿಸಿದೆ
'ಪುಷ್ಪ 2' ಸಿನಿಮಾ ಚಿತ್ರೀಕರಣ ಕೊನೆಗೂ ಚಿತ್ರತಂಡ ಮುಗಿಸಿದೆ

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’ ಚಿತ್ರವು ಜಗತ್ತಿನಾದ್ಯಂತ ಪ್ಯಾನ್‍ ಇಂಡಿಯಾ ಚಿತ್ರವಾಗಿ ಹಲವು ಭಾಷೆಗಳಲ್ಲಿ ಡಿಸೆಂಬರ್ 5ರಂದು ಬಿಡುಗಡೆಯಾಗುವುದಾಗಿ ಘೋಷಣೆಯಾಗಿದೆ. ಬಿಡುಗಡೆಗೆ ಕೆಲವೇ ದಿನಗಳಿದ್ದರೂ ಚಿತ್ರೀಕರಣ ಮಾತ್ರ ಮುಗಿದಿರಲಿಲ್ಲ. ಇದೀಗ, ಮಂಗಳವಾರ ಚಿತ್ರದ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಹೌದು, ಈ ವಿಷಯವನ್ನು ನಟ ಅಲ್ಲು ಅರ್ಜುನ್ ಸ್ಪಷ್ಟಪಡಿಸಿದ್ದಾರೆ. ಸೋಷಿಯಲ್‍ ಮೀಡಿಯಾ ಮೂಲಕ, ಚಿತ್ರೀಕರಣ ಸಂಪೂರ್ಣ ಆಗಿರುವುದನ್ನು ಖಾತ್ರಿಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ಪುಷ್ಪ ಚಿತ್ರದ ಚಿತ್ರೀಕರಣ ಕೊನೆಯ ದಿನ ಇಂದು. ‘ಪುಷ್ಪ’ ಚಿತ್ರದ ಐದು ವರ್ಷಗಳ ಪ್ರಯಾಣ ಕೊನೆಗೂ ಮುಗಿದಿದೆ. ಎಂಥಾ ಅದ್ಭುತ ಅನುಭವ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು, ನಾಯಕಿ ರಶ್ಮಿಕಾ ಮಂದಣ್ಣ ಸಹ ಚಿತ್ರೀಕರಣ ಮುಗಿದಿರುವ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಈ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ. ಆ ಬಗ್ಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನವೆಂಬರ್ 24ರ ಸಂಜೆಯವರೆಗೂ ಚಿತ್ರೀಕರಣ ಮುಗಿಸಿ, ಚೆನ್ನೈಗೆ ಹೋಗಿ ಅಲ್ಲಿ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಪುನಃ ಹೈದರಾಬಾದ್‍ಗೆ ವಾಪಸ್ಸಾದೆವು. ನಾಲ್ಕೈದು ತಾಸುಗಳ ನಿದ್ದೆಯ ನಂತರ ಪುನಃ ಚಿತ್ರೀಕರಣ ಪ್ರಾರಂಭ. ಅದು ಚಿತ್ರೀಕರಣದ ಕೊನೆಯ ದಿನ. ಒಂದು ಅದ್ಭುತ ಹಾಡಿನ ಚಿತ್ರೀಕರಣ ಮಾಡುವ ಮೂಲಕ, ‘ಪುಷ್ಪ 2’ ಚಿತ್ರದ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಕಳೆದ ಐದು ವರ್ಷಗಳಲ್ಲಿ, ‘ಪುಷ್ಪ’ ಚಿತ್ರದ ಸೆಟ್‍ ನನ್ನ ಮನೆಯಾಗಿತ್ತು. ಈಗ ಚಿತ್ರೀಕರಣ ಮುಗಿದಿದೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ಮುಂದೆ ‘ಪುಷ್ಪ 3’ ಸಹ ಬರಬಹುದು. ಆದರೂ ಈ ಪ್ರಯಾಣ ಸದ್ಯಕ್ಕೆ ಮುಗಿದಿದೆ. ಮನಸ್ಸಿನಲ್ಲಿ ದುಃಖ ಮನೆಮಾಡಿದೆ. ಭಾವನೆಗಳೆಲ್ಲಾ ಉಕ್ಕಿ ಬಂದಿದೆ. ಸತತ ಚಿತ್ರೀಕರಣದಿಂದ ಬಹಳ ಸುಸ್ತಾದರೂ, ಹೆಮ್ಮೆ ಮತ್ತು ಸಾರ್ಥಕತೆಯ ಭಾವ ಮೂಡುತ್ತಿದೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

‘ಪುಷ್ಪ 2’ ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದರೂ, ಚಿತ್ರೀಕರಣ ಮುಗಿಯದಿದ್ದರ ಬಗ್ಗೆ ಚಿತ್ರತಂಡವಷ್ಟೇ ಅಲ್ಲ, ಅಭಿಮಾನಿಗಳಲ್ಲೂ ಆತಂಕ ಮನೆಮಾಡಿತ್ತು. ಇದೀಗ ಚಿತ್ರೀಕರಣ ಮುಗಿಯುವುದರ ಜೊತೆಗೆ, ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತಕ್ಕೆ ಬಂದಿದ್ದು, ಚಿತ್ರವು ಸದ್ಯದಲ್ಲೇ ಸೆನ್ಸಾರ್ ಆಗಿ ಬಿಡುಗಡೆಯಾಗಲಿದೆ.

‘ಪುಷ್ಪ – ದಿ ರೂಲ್‍’ ಚಿತ್ರವು, 2021ರಲ್ಲಿ ಬಿಡುಗಡೆಯಾದ ‘ಪುಷ್ಪ – ದಿ ರೈಸ್‍’ ಚಿತ್ರದ ಮುಂದುವರೆದ ಭಾಗವಾಗಿದ್ದು, ಚಿತ್ರದಲ್ಲಿ ಪುಷ್ಪರಾಜ್‍ ಆಗಿ ಅಲ್ಲು ಅರ್ಜುನ್‍ ನಟಿಸಿದ್ದಾರೆ. ಜೊತೆಗೆ ರಶ್ಮಿಕಾ ಮಂದಣ್ಣ, ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಚಿತ್ರವನ್ನು ನಿರ್ಮಿಸಿದೆ.

Whats_app_banner