Pushpa 2 Review: ಪುಷ್ಪ ಇದು ಒನ್‌ ಮ್ಯಾನ್‌ ಶೋ! ಅತಿಯಾಯ್ತು ಬಿಲ್ಡಪ್‌, ರುಚಿಸದ ಕಥೆಗೆ ವೈಭವೀಕರಣದ ಲೇಪನ
ಕನ್ನಡ ಸುದ್ದಿ  /  ಮನರಂಜನೆ  /  Pushpa 2 Review: ಪುಷ್ಪ ಇದು ಒನ್‌ ಮ್ಯಾನ್‌ ಶೋ! ಅತಿಯಾಯ್ತು ಬಿಲ್ಡಪ್‌, ರುಚಿಸದ ಕಥೆಗೆ ವೈಭವೀಕರಣದ ಲೇಪನ

Pushpa 2 Review: ಪುಷ್ಪ ಇದು ಒನ್‌ ಮ್ಯಾನ್‌ ಶೋ! ಅತಿಯಾಯ್ತು ಬಿಲ್ಡಪ್‌, ರುಚಿಸದ ಕಥೆಗೆ ವೈಭವೀಕರಣದ ಲೇಪನ

Pushpa 2 The Rule Review: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ 2; ದಿ ರೂಲ್‌ ಸಿನಿಮಾ ಇಂದು (ಡಿ.5) ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಮಾಸ್‌ ಪ್ರೇಕ್ಷಕರ ಗಮನ ಸೆಳೆದ ಈ ಸಿನಿಮಾ ಹೇಗಿದೆ? ಇಲ್ಲಿದೆ ಈ ಚಿತ್ರ ವಿಮರ್ಶೆ.

ಪುಷ್ಪ 2 ದಿ ರೂಲ್‌ ವಿಮರ್ಶೆ
ಪುಷ್ಪ 2 ದಿ ರೂಲ್‌ ವಿಮರ್ಶೆ

Pushpa 2 The Rule Review: ಸಮಾಜಕ್ಕೆ ಕಂಟಕವಾದ ವ್ಯಕ್ತಿಯೊಬ್ಬನಿಂದ ಅದೇ ಸಮಾಜಕ್ಕೆ ಎಳ್ಳಷ್ಟು ಲಾಭವಿಲ್ಲ ಎಂದಾದರೆ, ಅವನು ಒಳ್ಳೆಯವನಾ? ಅವನನ್ನು ಹೀರೋ ಎಂದು ಬಿಂಬಿಸೋದ್ಯಾಕೆ? ಪುಷ್ಪ ಸಿನಿಮಾದ ಕಥೆಯೂ ಈ ಸ್ತರದ ಮೇಲೆ ಹಾದುಹೋಗುವಂಥದ್ದು. ಇಲ್ಲಿ ಕಾಣಿಸುವುದ್ಯಾವುದೂ ಲೀಗಲ್‌ ಇಲ್ಲ, ಎಲ್ಲವೂ ಇಲ್ಲೀಗಲ್! ರಾಜಕಾರಣಿಗಳು, ಪೊಲೀಸರ ಖರೀದಿಯಿಂದ ಹಿಡಿದು, ಅಧಿಕಾರದ ಹಪಹಪಿತನ, ಅರಣ್ಯ ಸಂಪತ್ತಿನ ನಾಶ, ಅನ್ಯಮಾರ್ಗದಲ್ಲಿ ಹಣಗಳಿಸುವಿಕೆ.. ಹೀಗೆ ಅಕ್ರಮಗಳ ಸುದೀರ್ಘ ಹೆದ್ದಾರಿಯೇ ಪುಷ್ಪ 2; ದಿ‌ ರೂಲ್ ಚಿತ್ರದ ಕಥಾವಸ್ತು. ನಾಯಕ ವರ್ಚಸ್ಸಿನ ಎಳೆ ಎನ್ನುವ ಬದಲು, ಆರೋಗಂಟ್‌ ವ್ಯಕ್ತಿತ್ವದ ಖಡಕ್‌ ಖಳನೊಬ್ಬನ ಸಾಮ್ರಾಜ್ಯ ವಿಸ್ತರಣೆಯ ಕಥೆಯಿದು ಎನ್ನಲೂಬಹುದು.

ಪುಷ್ಪ ದಿ ರೈಸ್‌ ಚಿತ್ರದ ಅಂತ್ಯಕ್ಕೆ ಐಪಿಎಸ್‌ ಅಧಿಕಾರಿ ಭನ್ವರ್‌ ಸಿಂಗ್‌ ಶೇಖಾವತ್‌ಗೆ ಸವಾಲೊಡ್ಡುವ ಮೂಲಕ ಮೊದಲ ಭಾಗ ಮುಕ್ತಾಯವಾಗುತ್ತದೆ. ಅದರ ಮುಂದುವರಿದ ಭಾಗವಾಗಿ, ಪ್ರಭಾವಿಯಾಗಿ ಬೆಳೆದಿರುತ್ತಾನೆ ಪುಷ್ಪ. ರಕ್ತಚಂದನ ಸ್ಮಗ್ಲಿಂಗ್‌ನ ಸಿಂಡಿಕೇಟ್‌ ಮೆಂಬರ್‌ ಆಗಿಯೂ ಅಧಿಕಾರ ತನ್ನ ತೆಕ್ಕೆಗೆ ಪಡೆದಿರುತ್ತಾನೆ. ಇತ್ತ ಅದೇ ಸಿಂಡಿಕೇಟ್‌ಅನ್ನು ತಮ್ಮ ಹಿಡಿತಕ್ಕೆ ಪಡೆಯುವ ಸಂಚೂ ನಡೆಯುತ್ತಿರುತ್ತದೆ. ಈ ಮೊದಲು ಬಲವಂತನಾಗಿದ್ದ ಪುಷ್ಪ ಹಣವಂತನೂ ಹೌದು. ಅದ್ಯಾವ ಮಟ್ಟಿಗೆ ಆತ ಶ್ರೀಮಂತ ಎಂದರೆ, ತನ್ನವರನ್ನು ಬಂಧಿಸಿದ ಪೊಲೀಸರಿಗೆ ಅವರ ಜೀವನ ಪರ್ಯಂತ ಸರ್ಕಾರ ನೀಡುವ ಸಂಬಳ ಸಹಿತ, ಪೆನ್ಷನ್‌ ಹಣವನ್ನು ಒಂದೇ ಟೈಮ್‌ಗೆ ಸೆಟಲ್‌ ಮಾಡುವಷ್ಟು ದುಡ್ಡು ಮಾಡಿರುತ್ತಾನೆ ಪುಷ್ಪ.

ಶ್ರೀವಲ್ಲಿಗೆ ಸಿಎಂ ಜತೆಗೆ ತನ್ನ ಪತಿ ಪುಷ್ಪರಾಜ್‌ ಸಹ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಬಯಕೆ. ಆದರೆ, ಫೋಟೋ ನೀಡಲು ಒಪ್ಪದ ಮುಖ್ಯಮಂತ್ರಿಯನ್ನೇ ಕೆಳಕ್ಕಿಳಿಸಿ, ತನಗೆ ಬೇಕಾದವರನ್ನೇ ತಂದು ಸಿಎಂ ಖುರ್ಚಿ ಮೇಲೆ ಕೂರಿಸುತ್ತಾನೆ ಪುಷ್ಪ. ಮತ್ತೊಂದು ಕಡೆ ತನ್ನ ತಂತ್ರ ಕುತಂತ್ರದಿಂದಲೇ ಮಾಲನ್ನು ಎಗ್ಗಿಲ್ಲದೆ ಸಾಗಿಸುವ ಚಾಣಾಕ್ಷನೂ ಈ ಪುಷ್ಪ. ಹೀಗೆ ಮೊದಲಾರ್ಧ ಮುಗಿದು, ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ, ರಕ್ತಚಂದನದ ಕಥೆ ಮಾಯವಾಗಿ, ಫ್ಯಾಮಿಲಿ ಕಥೆ ಮುನ್ನೆಲೆಗೆ ಬರುತ್ತದೆ. ತನಗೆ ಅಂತ ಒಂದು ಮನೆತನದ ಹೆಸರಿಲ್ಲ ಎಂಬ ಕಾರಣಕ್ಕೆ ಕುಗ್ಗಿದ್ದ ಪುಷ್ಪ, ಅದನ್ನೂ ಮರಳಿ ಪಡೆಯುತ್ತಾನೆ. ಅದು ಹೇಗೆ? ಸಿನಿಮಾದಲ್ಲಿಯೇ ನೋಡಬೇಕು.

ಬಿಲ್ಡಪ್‌ಗಷ್ಟೇ ಸೀಮಿತವಾಯ್ತು ಪಾರ್ಟ್‌ 2

ಇಡೀ ಪುಷ್ಪ 2 ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದವರು ಅಲ್ಲು ಅರ್ಜುನ್.‌ ಅಲ್ಲು ಅರ್ಜುನ್‌ ಅವರ ಪ್ರಭಾವಳಿಯೇ ಇಡೀ ಸಿನಿಮಾದುದ್ದಕ್ಕೂ ಸಾಗಿದೆ. ಅದ್ಯಾವ ಮಟ್ಟಿಗೆ ಎಂದರೆ, ಮುಕ್ಕಾಲು ಗಂಟೆ ಕಥಾನಾಯಕನ ಇಂಟ್ರೋ ಇದೆ. ಬೇರೆ ಕಲಾವಿದರು ಸಿನಿಮಾದಲ್ಲಿ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅಲ್ಲು ಅರ್ಜುನ್‌ ಕಾಣಿಸುತ್ತಾರೆ. ಮೊದಲ ಭಾಗದ ಸಿನಿಮಾದಲ್ಲಿ ನಿರ್ದೇಶಕ ಸುಕುಮಾರ್, ಕಥೆಯನ್ನೇ ಹೀರೋವನ್ನಾಗಿಸಿದ್ದರು. ಆದರೆ, ಎರಡನೇ ಭಾಗದಲ್ಲಿ ಹೀರೋವನ್ನೇ ಕಥೆಯೆಂದುಕೊಂಡಿದ್ದಾರೆ. ಹಾಗಾಗಿ ಹಾರಾಟ, ಹೊಡೆದಾಟಗಳಷ್ಟೇ ಇಲ್ಲಿ ಮೇಳೈಸಿವೆ. ಪುಷ್ಪರಾಜನ ಅಬ್ಬರ, ಆಡಂಬರವೇ ಹೆಚ್ಚಾಗಿದೆ.

ಲಾಜಿಕ್‌ ಇಲ್ಲದ ಕಥೆಯಲ್ಲಿ ಬರೀ ಮ್ಯಾಜಿಕ್‌

ಇದೊಂದು ಆಕ್ಷನ್‌ ಜಾನರ್‌ನ ಸಿನಿಮಾ. ಇಲ್ಲಿ ಕಥೆಯಲ್ಲಿನ ಹುಳುಕುಗಳನ್ನು ಹುಡುಕುವ ಬದಲು, ಲಾಜಿಕ್ ಬದಿಗೆ ಸರಿಸಿ, ತೆರೆಮೇಲೆ ಕಾಣಿಸುವ ಮ್ಯಾಜಿಕ್‌ನ್ನಷ್ಟೇ ನೋಡಿ ಹೌದೌದು ಎನ್ನಬೇಕು. ಒಂದಷ್ಟು ದೃಶ್ಯಗಳಿಗೆ ತಾರ್ಕಿಕ ಅಂತ್ಯವಿಲ್ಲ. ಆರಂಭದಲ್ಲಿನ ಜಪಾನ್‌ ದೇಶದಲ್ಲಿನ ಹೊಡೆದಾಟಕ್ಕೂ ಕಥೆಗೂ ತಾಳೆಯಾಗದು. ಭನ್ವರ್‌ ಸಿಂಗ್‌ ಶೇಖಾವತ್‌ ಏನಾದ? ಅದಕ್ಕೂ ಉತ್ತರವಿಲ್ಲ. ಪುಷ್ಪರಾಜನ ವಿರೋಧಿ ಬಣ ದೊಡ್ಡದಾದರೂ, ಆ ಬಣ ಒಡ್ಡುವ ಸವಾಲುಗಳಲ್ಲಿ ರೋಚಕತೆಯಿಲ್ಲ. ಮತ್ತದೇ ಕಿಡ್ನಾಪು, ಮಹಿಳೆಯ ಟೀಸ್‌ ದೃಶ್ಯಗಳು ಇಲ್ಲಿವೂ ಅಡರಿಕೊಂಡಿವೆ. ಎಮೋಷನ್‌ ದೃಶ್ಯಗಳು ಇವೆಯಾದರೂ, ಅವುಗಳಿಗೆ ಕಾಡುವ ಗುಣವಿಲ್ಲ.

ತಾಂತ್ರಿಕವಾಗಿ ಹೇಗಿದ್ದಾನೆ ಪುಷ್ಪ

ಬಹು ದೊಡ್ಡ ಕ್ಯಾನ್ವಾಸ್‌ನಲ್ಲಿ ಪುಷ್ಪ 2 ದಿ ರೂಲ್‌ ಸಿನಿಮಾ ಸೃಷ್ಟಿಯಾಗಿದೆ. ಮೇಕಿಂಗ್‌ ವಿಚಾರದಲ್ಲಿ ಕೈ ಬಿಚ್ಚಿ ಖರ್ಚು ಮಾಡಿದ್ದಾರೆ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯವರು. ಹಿನ್ನೆಲೆಯ ಸಂಗೀತ ಕೆಲವು ಕಡೆ ಕಿರಿಕಿರಿ ಅನಿಸುವುದುಂಟು. ಛಾಯಾಗ್ರಹಣದ ವಿಚಾರದಲ್ಲಿ ಪೂರ್ಣಾಂಕ ಸಲ್ಲಲೇಬೇಕು. ಫೈಟ್‌ ಸೀನ್‌ಗಳನ್ನು ಕಟ್ಟಿಕೊಟ್ಟ ಸಾಹಸ ನಿರ್ದೇಶಕರ ಶ್ರಮ ಇಲ್ಲಿ ದೊಡ್ಡದು. ಕಲಾ ನಿರ್ದೇಶಕರದ್ದೂ ಇಲ್ಲಿ ಸರಿ ಸಮ ಕೆಲಸ. ಗಂಗಮ್ಮ ಜಾತ್ರೆಯ ಸೆಟ್‌ ಅದಕ್ಕೆ ಸಾಕ್ಷಿ. ಇದರ ಜತೆಗೆ ಇನ್ನೂ ಹಲವು ಸೆಟ್‌ಗಳು ಸಿನಿಮಾದ ನೈಜತೆಯನ್ನು ಬೆಳಗಿವೆ.

ಅಲ್ಲು ಅರ್ಜುನ್- ರಶ್ಮಿಕಾ‌ ನಟನೆ

ಪುಷ್ಪ ಅನ್ನೋ ಗತ್ತಿನ ವ್ಯಕ್ತಿತ್ವದ ಪಾತ್ರವನ್ನು ಮೈ ಮೇಲೆ ಆವಾಹಿಸಿಕೊಂಡಿದ್ದಾರೆ ಅಲ್ಲು ಅರ್ಜುನ್‌ ಎದುರಾಗಿದ್ದಾರೆ. ದೇವಿ ವೇಷದಲ್ಲಿ ಎದುರಾದಾಗ, ಅರೇ ಕ್ಷಣ ಪ್ರೇಕ್ಷಕ ದಿಟ್ಟಿಸುತ್ತಾನೆ. ಆಕ್ಷನ್‌ ಸೀನ್‌ಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಬರೀ ಫೈಟ್‌ ಮಾತ್ರವಲ್ಲದೆ, ಡಾನ್ಸ್‌ನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಫ್ಯಾನ್ಸ್‌ಗೆ ಮೂರು ವರ್ಷಗಳ ಬಳಿಕ ಕ್ರೇಜಿ ಟ್ರೀಟ್‌ ಕೊಟ್ಟಿದ್ದಾರೆ ಅಲ್ಲು ಅರ್ಜುನ್. ಅದೇ ರೀತಿ ಮೊದಲ ಭಾಗಕ್ಕೆ ಹೋಲಿಕೆ ಮಾಡಿದರೆ, ಎರಡನೇ ಭಾಗದ ಬಹುಪಾಲು ಸ್ಕ್ರೀನ್‌ ಸ್ಪೇಸ್‌ ಗಿಟ್ಟಿಸಿಕೊಂಡ ಖುಷಿಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ. ನಟನೆ ಮೂಲಕ ಗಮನ ಸೆಳೆಯುವ ಶ್ರೀವಲ್ಲಿ, ಅಂಗಿಕ ಅಭಿನಯದ ಮೂಲಕವೇ ತನ್ನ "ಪೀಲಿಂಗ್ಸ್‌" ಹೊರಹಾಕಿದ್ದಾರೆ.

ಪುಷ್ಪ 3 ದಿ ರ್ಯಾಂಪೇಜ್‌ಗೆ ವೇದಿಕೆ ರೆಡಿ

ಕೇಂದ್ರ ಸಚಿವನಾಗಿ ಜಗಪತಿ ಬಾಬು ಅವರಿಗೆ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಇಲ್ಲ. ಫಹಾದ್‌ ಫಾಸಿಲ್‌ ಎಂದಿನಂತೆ ಕಾಮಿಡಿ ಪೊಲೀಸ್‌ ಅಧಿಕಾರಿಯಂತೆ ಕಂಡಿದ್ದಾರೆ, ರಾವ್‌ ರಮೇಶ್‌ಗೂ ಹೆಚ್ಚಿನ ಸ್ಪೇಸ್‌ ಸಿಕ್ಕಿದೆ. ಕಿಸ್ಸಿಕ್‌ ಎಂದು ಮಿಂಚಿ ಮರೆಯಾಗಿದ್ದಾರೆ ಶ್ರೀಲೀಲಾ. ಕೇಂದ್ರ ಸಚಿವನ ಮಗನಾದರೂ, ಹುಡುಗಿ ವೇಷದಲ್ಲಿ ಹುಡುಗಿಯರನ್ನು ಟೀಸ್‌ ಮಾಡುವವನಾಗಿ ಕನ್ನಡದ ನಟ ತಾರಕ್‌ ಪೊನ್ನಪ್ಪ ನಟಿಸಿದ್ದಾರೆ. ಕೊನೆಗೆ ಸಿನಿಮಾ ಮುಗೀತು ಎನ್ನುವಷ್ಟರಲ್ಲಿಯೇ ಜಾಲಿರೆಡ್ಡಿಯಾಗಿ ಧನಂಜಯ ಕೆಲ ಸೆಕೆಂಡ್‌ಗಳ ಕಾಲ ಕಾಣಿಸುತ್ತಾರೆ. ಪುಷ್ಪಗೆ ದುಷ್ಮನ್‌ಗಳ ಸಂಖ್ಯೆಯೂ ಹೆಚ್ಚಾಗಿದ್ದಾರೆ. ಅಲ್ಲಿಗೆ ಮೂರನೇ ಭಾಗದಲ್ಲಿ ಇನ್ನೊಂದು ಬ್ಯಾಂಗ್‌ ಜತೆಗೆ ಆಗಮಿಸುವ ಮುನ್ಸೂಚನೆ ನೀಡಿದ್ದಾರೆ ನಿರ್ದೇಶಕ ಸುಕುಮಾರ್.

ಪುಷ್ಪ2; ದಿ ರೂಲ್ ಸಿನಿಮಾ ವಿವರ

ಜಾನರ್: ಆಕ್ಷನ್‌ ಡ್ರಾಮಾ

ಚಿತ್ರಕಥೆ, ನಿರ್ದೇಶನ: ಸುಕುಮಾರ್‌

ನಿರ್ಮಾಣ: ಮೈತ್ರಿ ಮೂವಿ ಮೇಕರ್ಸ್‌

ಸಂಗೀತ: ದೇವಿ ಶ್ರೀ ಪ್ರಸಾದ್

ಸಿನಿಮಾಟೋಗ್ರಾಫಿ: Miroslaw Kuba Brozek

ತಾರಾಗಣ: ‌ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ರಾವ್‌ ರಮೇಶ್‌, ಜಗಪತಿ ಬಾಬು, ಧನಂಜಯ್‌, ಸುನೀಲ್, ತಾರಕ್‌ ಪೊನ್ನಪ್ಪ, ಅನಸೂಯಾ ಭಾರದ್ವಾಜ್

ರೇಟಿಂಗ್:‌ 3\5

ವಿಮರ್ಶೆ: ಮಂಜು ಕೊಟಗುಣಸಿ

Whats_app_banner