ಪುಷ್ಪ 2 ರಿಲೀಸ್‌ಗೂ ಮುನ್ನ ಅಪ್ಪನಿಗೆ ಪತ್ರ ಬರೆದ ಮಗ ಅಯಾನ್; ಇದು ನನ್ನ ಅತಿ ದೊಡ್ಡ ಸಾಧನೆ ಎಂದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ನಟನೆಯ ಪುಷ್ಪ 2: ದಿ ರೂಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ನಟ ಅಲ್ಲು ಅರ್ಜುನ್, ತಾನು ಅತಿ ದೊಡ್ಡ ಸಾಧನೆ ಮಾಡಿದ್ದಾಗಿ ಹೇಳಿದ್ದಾರೆ.
ಪುಷ್ಪಾ 2: ದಿ ರೂಲ್ ಚಿತ್ರವು ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಂದು (ಡಿಸೆಂಬರ್ 5) ತೆರೆಗೆ ಅಪ್ಪಳಿಸಿದ ಚಿತ್ರವು ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆಗೆ ಚಿತ್ರ ಸಜ್ಜಾಗಿದ್ದು, ಸಿನಿಮಾ ಬಿಡುಗಡೆಗೆ ಮುಂಚಿತವಾಗಿ ನಾಯಕ ನಟ ಅಲ್ಲು ಅರ್ಜುನ್ ಹಂಚಿಕೊಂಡ ಈ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ತಮ್ಮ 10 ವರ್ಷದ ಮಗ ಅಯಾನ್ ಬರೆದ ವಿಶೇಷ ಕೈಬರಹದ ಪತ್ರವನ್ನು ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಈ ಕೈಬರಹದ ಟಿಪ್ಪಣಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ಪ್ರೀತಿಯ ನಾನಾ (ಅಪ್ಪ), ನಿಮ್ಮ ಬಗ್ಗೆ, ನಿಮ್ಮ ಯಶಸ್ಸಿನ ಬಗ್ಗೆ ಮತ್ತು ನಿಮ್ಮ ಕಠಿಣ ಪರಿಶ್ರಮ, ಉತ್ಸಾಹ ಮತ್ತು ಸಮರ್ಪಣಾ ಭಾವದ ಬಗ್ಗೆ ನನಗೆ ಎಷ್ಟು ಹೆಮ್ಮೆ ಇದೆ ಎಂಬುದನ್ನು ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ನಿಮ್ಮನ್ನು ನಂಬರ್ 1 ಸ್ಥಾನದಲ್ಲಿ ನೋಡಿದಾಗ, ನಾನು ಪ್ರತಿಬಾರಿಯೂ ವಿಶ್ವದಲ್ಲೇ ನಾನು ಅಗ್ರಸ್ಥಾನದಲ್ಲಿದ್ದೇನೆ ಎಂಬ ಭಾವ ಮೂಡುತ್ತದೆ. ವಿಶ್ವದ ಶ್ರೇಷ್ಠ ನಟರೊಬ್ಬರ ಚಲನಚಿತ್ರ ಬಿಡುಗಡೆಯಾಗಿರುವುದರಿಂದ ಇಂದು ವಿಶೇಷ ದಿನ. ಈ ದಿನದಂದು ನಿಮ್ಮ ಮಿಶ್ರ ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪುಷ್ಪಾ ಕೇವಲ ಚಲನಚಿತ್ರ ಮಾತ್ರವಲ್ಲ. ನಟನೆಯ ಬಗ್ಗೆ ನಿಮ್ಮ ಪ್ರೀತಿ ಮತ್ತು ಉತ್ಸಾಹದ ಪ್ರಯಾಣವನ್ನು ಪ್ರತಬಿಂಬಿಸುತ್ತದೆ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಶುಭ ಹಾರೈಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ,” ಪುಟ್ಟ ಬಾಲಕ ಅಪ್ಪನಿಗೆ ನೋಟ್ ಬರೆದಿದ್ದಾನೆ.
“ಫಲಿತಾಂಶ ಏನೇ ಇರಲಿ, ನೀವು ನನ್ನ ಪಾಲಿನ ಶಾಶ್ವತ ಹೀರೋ ಮತ್ತು ಆರಾಧ್ಯ ದೈವ. ನಿಮಗೆ ಈ ಬ್ರಹ್ಮಾಂಡದಾದ್ಯಂತ ಅನಂತ ಅಭಿಮಾನಿಳಿದ್ದರೂ, ನಾನು ಇಂದಿಗೂ, ಎಂದೆಂದಿಗೂ ನಂಬರ್ 1 ಉತ್ಕಟ ಅಭಿಮಾನಿ ಮತ್ತು ಹಿತೈಷಿಯಾಗಿ ಉಳಿಯುತ್ತೇನೆ," ಎಂದು ಮಗ ಅಪ್ಪನಿಗೆ ಹೇಳಿದ್ದಾನೆ.
ಈ ಪತ್ರವನ್ನು ಹಂಚಿಕೊಂಡಿರುವ ಅಲ್ಲು ಅರ್ಜುನ್, "ನನ್ನ ಮಗ ಅಯಾನ್‌ನ ಪ್ರೀತಿ ಹೃದಯಕ್ಕೆ ಮುಟ್ಟಿದೆ. ಇದುವರೆಗಿನ ನನ್ನ ದೊಡ್ಡ ಸಾಧನೆಗಳಲ್ಲಿ ಇದೂ ಒಂದು. ಇಂತಹ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ", ಎಂದು ಬರೆದಿದ್ದಾರೆ.
ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ
ಪುಷ್ಪ 2 ಚಿತ್ರಕ್ಕಾಗಿ ಚಿತ್ರತಂಡವು ಮೂರು ವರ್ಷಗಳಿಂದ ಕೆಲಸ ಮಾಡಿದೆ. ಕೊನೆಗೂ ಅಭಿಮಾನಿಗಳು ಕಾಯುತ್ತಿದ್ದ ಪುಷ್ಪ: ದಿ ರೈಸ್‌ನ ಎರಡನೇ ಭಾಗ, ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಮತ್ತೊಮ್ಮೆ ಅಲ್ಲು ಅರ್ಜುನ್ ಅವರ ಪತ್ನಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಫಹಾದ್ ಫಾಸಿಲ್, ಜಗಪತಿ ಬಾಬು, ಧನಂಜಯ, ರಾವ್ ರಮೇಶ್, ಸುನಿಲ್, ಮತ್ತು ಅನಸೂಯಾ ಭಾರದ್ವಾಜ್ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಬಿಡುಗಡೆಯಾದ ಮೊದಲ ದಿನವೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.