ಸಿನಿ ಸ್ಮೃತಿ ಅಂಕಣ: ಈ ದಾಖಲೆಗಳನ್ನು ಮುರಿಯಲು ಅದೆಷ್ಟು ವರ್ಷ ಬೇಕೋ?; ಭಾರತೀಯ ಚಿತ್ರರಂಗದಲ್ಲಿ ‘ಪುಷ್ಪ 2’ ಚಿತ್ರದ ಐದು ಹೊಸ ರೆಕಾರ್ಡ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಸಿನಿ ಸ್ಮೃತಿ ಅಂಕಣ: ಈ ದಾಖಲೆಗಳನ್ನು ಮುರಿಯಲು ಅದೆಷ್ಟು ವರ್ಷ ಬೇಕೋ?; ಭಾರತೀಯ ಚಿತ್ರರಂಗದಲ್ಲಿ ‘ಪುಷ್ಪ 2’ ಚಿತ್ರದ ಐದು ಹೊಸ ರೆಕಾರ್ಡ್ಸ್‌

ಸಿನಿ ಸ್ಮೃತಿ ಅಂಕಣ: ಈ ದಾಖಲೆಗಳನ್ನು ಮುರಿಯಲು ಅದೆಷ್ಟು ವರ್ಷ ಬೇಕೋ?; ಭಾರತೀಯ ಚಿತ್ರರಂಗದಲ್ಲಿ ‘ಪುಷ್ಪ 2’ ಚಿತ್ರದ ಐದು ಹೊಸ ರೆಕಾರ್ಡ್ಸ್‌

‘ಪುಷ್ಪ 2’ ಚಿತ್ರವು ಬರೀ ತೆಲುಗು ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಹಲವು ಹಿಂದಿನ ದಾಖಲೆಗಳನ್ನು ಪುಡಿ ಮಾಡಿರುವುದಷ್ಟೇ ಅಲ್ಲ, ಹೊಸ ದಾಖಲೆಗಳನ್ನು ಹುಟ್ಟುಹಾಕಿದೆ. ಇಷ್ಟಕ್ಕೂ ಅಂಥದ್ದೇನು ಮಾಡಿದೆ ‘ಪುಷ್ಪ 2’. ಸುಕುಮಾರ್ ನಿರ್ದೇಶನದ ಈ ಚಿತ್ರ ಮಾಡಿದ ಐದು ಹೊಸ ದಾಖಲೆಗಳನ್ನು ಒಮ್ಮೆ ನೋಡಿಕೊಂಡು ಬರೋಣ ಇಂದಿನ ಸಿನಿ ಸ್ಮೃತಿ ಅಂಕಣದಲ್ಲಿ.

ಚೇತನ್‌ ನಾಡಿಗೇರ್ ಸಿನಿ ಸ್ಮೃತಿ ಅಂಕಣ
ಚೇತನ್‌ ನಾಡಿಗೇರ್ ಸಿನಿ ಸ್ಮೃತಿ ಅಂಕಣ

Allu Arjun Pushpa 2 Records: ‘ದಾಖಲೆಗಳಿರುವುದೇ ಮುರಿಯುವುದಕ್ಕೆ. ಮುಂದಿನ ಎರಡ್ಮೂರು ತಿಂಗಳು, ಈ ದಾಖಲೆಗಳನ್ನು ನೋಡಿ ಖುಷಿಪಡುತ್ತೇನೆ. ಮುಂದಿನ ಬೇಸಿಗೆಯ ಹೊತ್ತಿಗೆ, ಈ ದಾಖಲೆಗಳನ್ನು ಬೇರೊಂದು ಚಿತ್ರ ಮುರಿಯಬೇಕು ಎಂಬುದು ನನ್ನಾಸೆ …’ ಹಾಗಂತ ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದ ‘ಪುಷ್ಪ 2’ ಚಿತ್ರದ ಸಂತೋಷಕೂಟದಲ್ಲಿ ಹೇಳಿಕೊಂಡಿದ್ದರು ಅಲ್ಲು ಅರ್ಜುನ್‍.

ಅಲ್ಲು ಅರ್ಜುನ್‌ ಅವರ ಆಸೆ ಈಡೇರುವುದು ಕಷ್ಟ ಎಂದನಿಸುತ್ತದೆ. ಬೇಸಿಗೆಯ ಹೊತ್ತಿಗೆ ಯಾವೊಂದು ಸಿನಿಮಾ ಸಹ ‘ಪುಷ್ಪ 2’ ಮಾಡಿದ ದಾಖಲೆಗಳನ್ನು ಮುರಿಯುವುದಕ್ಕೆ ಸಾಧ್ಯವಿಲ್ಲ. ಅಂತಹ ಚಿತ್ರಗಳು ಸಹ ಸದ್ಯಕ್ಕೆ ಬಿಡುಗಡೆ ಯಾವುದೂ ಇಲ್ಲ. ಬಹುಶಃ ವರ್ಷದ ಕೊನೆಯಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ – ಅಧ್ಯಾಯ 1’ ಅಥವಾ ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರಗಳು, ‘ಪುಷ್ಪ 2’ ಮಾಡಿದ ದಾಖಲೆಗಳನ್ನು ಮುರಿಯಬಹುದು ಅಥವಾ ಹತ್ತಿರವಾದರೂ ಬರಬಹುದು ಎಂಬ ಮಾತು ಕೇಳಿಬರುತ್ತಿದೆ.

ಆ ಮಟ್ಟಿಗೆ ‘ಪುಷ್ಪ 2’ ಚಿತ್ರವು ಬರೀ ತೆಲುಗು ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಹಲವು ಹಿಂದಿನ ದಾಖಲೆಗಳನ್ನು ಪುಡಿ ಮಾಡಿರುವುದಷ್ಟೇ ಅಲ್ಲ, ಹೊಸ ದಾಖಲೆಗಳನ್ನು ಹುಟ್ಟುಹಾಕಿದೆ. ಇಷ್ಟಕ್ಕೂ ಅಂಥದ್ದೇನು ಮಾಡಿದೆ ‘ಪುಷ್ಪ 2’. ಸುಕುಮಾರ್ ನಿರ್ದೇಶನದ ಈ ಚಿತ್ರ ಮಾಡಿದ ಐದು ಹೊಸ ದಾಖಲೆಗಳನ್ನು ಒಮ್ಮೆ ನೋಡಿಕೊಂಡು ಬರೋಣ ಬನ್ನಿ …

ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ

ಪುಷ್ಪ 2’ ಚಿತ್ರವು ಡಿಸೆಂಬರ್ 05ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಚಿತ್ರವು ಜಾಗತಿಕವಾಗಿ 1,831 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು, ಭಾರತದಲ್ಲೇ ಈ ಚಿತ್ರವು 1,400 ಕೋಟಿ ರೂ. ಗಳಿಕೆ ಮಾಡಿದೆಯಂತೆ. ಈ ಮೂಲಕ ‘ಬಾಹುಬಲಿ 2’ ಚಿತ್ರವು ಮಾಡಿದ ದಾಖಲೆಯನ್ನು ಮುರಿದಿದೆ. 2017ರಲ್ಲಿ ಬಿಡುಗಡೆಯಾದ ‘ಬಾಹುಬಲಿ 2’ ಚಿತ್ರವು 1347 ಕೋಟಿ ರೂ. ಸಂಗ್ರಹಿಸಿತ್ತು. ಈಗ ಅದರ ದಾಖಲೆಯನ್ನು ‘ಪುಷ್ಪ 2’ ಮುರಿದಿದೆ. ಮೊದಲ ಸ್ಥಾನದಲ್ಲಿ ‘ಪುಷ್ಪ 2’ (1400 ಕೋಟಿ ರೂ.) ಇದ್ದರೆ, ಎರಡನೆಯ ಸ್ಥಾನದಲ್ಲಿ ‘ಬಾಹುಬಲಿ 2’ (1347 ಕೋಟಿ ರೂ.) ಇದೆ. ಮೂರನೇ ಸ್ಥಾನದಲ್ಲಿ ‘ಕೆಜಿಎಫ್‍ 2’ (987 ಕೋಟಿ ರೂ.), ನಾಲ್ಕನೇ ಸ್ಥಾನದಲ್ಲಿ ‘RRR’ (894 ಕೋಟಿ ರೂ.) ಮತ್ತು ಐದನೇ ಸ್ಥಾನದಲ್ಲಿ ‘ಜವಾನ್‍’ (754 ಕೋಟಿ ರೂ.) ಇದೆ. ವಿಶೇಷವೆಂದರೆ, ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಪಟ್ಟಿಯಲ್ಲಿ ಮೂರು ತೆಲುಗು ಸಿನಿಮಾಗಳಿದ್ದರೆ, ಒಂದು ಕನ್ನಡ ಮತ್ತು ಒಂದು ಹಿಂದಿ ಚಿತ್ರಗಳಿವೆ.

ಅತೀ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್‍ ಚಿತ್ರ

ತೆಲುಗಿನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘ಪುಷ್ಪ 2’ ಇರುವುದು ಸಹಜ. ಆದರೆ, ಹಿಂದಿ ಭಾಷೆಯಲ್ಲೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಪುಷ್ಪಮೊದಲ ಸ್ಥಾನದಲ್ಲಿದೆ. ‘ಪುಷ್ಪ 2’ ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್‍ ಆಗಿ ಬಿಡುಡೆಯಾಗಿವೆ. ಈ ಪೈಕಿ ಹಿಂದಿ ಅವತರಣಿಕೆಯು 31 ದಿನಗಳಲ್ಲಿ 800ಕ್ಕೂ ಹೆಚ್ಚು ಗಳಿಕೆ ಮಾಡಿದೆ. ವಿಶೇಷವೆಂದರೆ, ಹಿಂದಿ ಚಿತ್ರಗಳೇ ಅಷ್ಟೊಂದು ಗಳಿಕೆ ಮಾಡಿದ್ದಿಲ್ಲ. ಈ ಹಿಂದೆ ಶ್ರದ್ಧಾ ಕಪೂರ್ ಅಭಿನಯದ ‘ಸ್ತ್ರೀ 2’ ಮತ್ತು ಶಾರೂಖ್‍ ಖಾನ್‍ ಅಭಿನಯದ ‘ಪಠಾಣ್‍’ ಚಿತ್ರಗಳು 600 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಪಟ್ಟಿಯಲ್ಲಿ ಮುಂದಿದ್ದವು. ಆದರೆ, ಈ ದಾಖಲೆಯನ್ನು ತೆಲುಗು ಚಿತ್ರದ ಹಿಂದಿ ಅವತರಣಿಕೆಯೊಂದು ಮುರಿದು, ಹಿಂದಿಯ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂಬ ಹೆಗ್ಗಳಿಕೆ ಪಾತ್ರ ಮಾಡಿರುವುದು ವಿಶೇಷ.

ಬಿಡುಗಡೆಗೂ ಮೊದಲೇ ಸಾವಿರ ಕೋಟಿ ಕ್ಲಬ್‍ ಸೇರಿದ ಚಿತ್ರ

ಒಂದು ಚಿತ್ರ ಬಿಡುಗಡೆಯಾದ ಮೇಲೆ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ಕ್ಲಬ್‍ ಸೇರುವುದು ಸಹಜ. ಆದರೆ, ‘ಪುಷ್ಪ 2’ ಚಿತ್ರವು ಬಿಡುಗಡೆಗೆ ಮುನ್ನವೇ ಇಂಥದ್ದೊಂದು ಸಾಧನೆ ಮಾಡಿತ್ತು. ಚಿತ್ರದ ವಿತರಣೆ, ಡಿಜಿಟಿಲ್‍, ಸ್ಯಾಟಲೈಟ್‍ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿದ ಮೊದಲ ಭಾರತೀಯ ಚಿತ್ರ ಎಂದು ಹೇಳಲಾಗಿತ್ತು. ಈ ಪೈಕಿ ವಿತರಣೆ ಹಕ್ಕುಗಳ ಮಾರಾಟದಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ. ಗಳಿಕೆ ಎಂಬ ಸುದ್ದಿ ಇತ್ತು. ಅವೆರಡೂ ಸೇರಿ ಚಿತ್ರ 1000 ಕೋಟಿ ರೂ. ಕ್ಲಬ್‍ಗೆ ಬಿಡುಗಡೆಗೂ ಮುನ್ನವೇ ಸೇರ್ಪಡೆಯಾಗಿತ್ತು. ಈ ಪೈಕಿ ಚಿತ್ರದ ಡಿಜಿಟಲ್‍ ಹಕ್ಕುಗಳನ್ನು ನೆಟಫ್ಲಿಕ್ಸ್ ದಾಖಲೆಯ 275 ಕೋಟಿ ರೂ.ಗಳಿಗೆ ಪಡೆದರೆ, ಸ್ಯಾಟಲೈಟ್‍ ಹಕ್ಕುಗಳು 85 ಕೋಟಿ ರೂ.ಗಳಿಗೆ ಮಾರಾಟವಾದ ಸುದ್ದಿ ಇತ್ತು. ಸಂಗೀತದ ಹಕ್ಕುಗಳು ದಾಖಲೆಯ 65 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗಿತ್ತು. ಇವೆಲ್ಲವೂ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯೇ. ಏಕೆಂದರೆ, ಇದಕ್ಕೂ ಮೊದಲು ಯಾವುದೇ ಭಾರತೀಯ ಚಿತ್ರದ ಹಕ್ಕುಗಳು ಇಷ್ಟೊಂದು ಹಣಕ್ಕೆ ಮಾರಾಟವಾದ ಉದಾಹರಣೆ ಇಲ್ಲ.

ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ

‘ಪುಷ್ಪ 2’ ಚಿತ್ರವು ಮೊದಲ ದಿನ ದಾಖಲೆಯ 294 ಕೋಟಿ ರೂ. ಗಳಿಕೆ ಮಾಡಿದ್ದು, ಭಾರತೀಯ ಚಿತ್ರರಂಗದಲ್ಲೇ ಯಾವೊಂದು ಚಿತ್ರವು ಮಾಡದ ಹೆಗ್ಗಳಿಕೆ ಮತ್ತು ದಾಖಲೆಯನ್ನು ‘ಪುಷ್ಪ 2’ ಮಾಡಿದೆ. ‘ಪುಷ್ಪ2’ ಚಿತ್ರದ ಭಾರತದ ಮೊದಲ ದಿನದ ಗಳಿಕೆ 175 ಕೋಟಿ ರೂ. ಎಂದು ಹೇಳಲಾಗಿದ್ದು, ಈ ಪೈಕಿ ತೆಲುಗು ಅವತರಣಿಕೆಯಿಂದ 95 ಕೋಟಿ ರೂ ಬಂದರೆ, ಹಿಂದಿಯಿಂದ 67 ಕೋಟಿ ರೂ, ತಮಿಳಿನಿಂದ ಏಳು ಕೋಟಿ, ಮಲಯಾಳಂನಿಂದ ಐದು ಮತ್ತು ಕನ್ನಡದಿಂದ ಒಂದು ಕೋಟಿ ರೂ. ಬಂದಿದೆ. ಇದಕ್ಕೂ ಮೊದಲು ಭಾರತೀಯ ಚಿತ್ರರಂಗದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ ಅದು, ರಾಜಮೌಳಿ ನಿರ್ದೇಶನದ ‘RRR’. ಈ ಚಿತ್ರ ಮೊದಲ ದಿನ ಭಾರತದಲ್ಲಿ 165 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ‘ಪುಷ್ಪ 2’ ಚಿತ್ರವು, ಭಾರತದಲ್ಲಿ 175 ಕೋಟಿ ರೂ. ಗಳಿಕೆ ಮಾಡಿದೆ. ಹೊರದೇಶಗಳಿಂದ 119 ಕೋಟಿ ರೂ. ಗಳಿಕೆಯಾಗಿದೆಯಂತೆ. ಇವೆರಡೂ ಸೇರಿದರೆ, 294 ಕೋಟಿ ರೂ.ನಷ್ಟಾಗುತ್ತದೆ.

ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟ

‘ಪುಷ್ಪ 2’ ಚಿತ್ರಕ್ಕೆ ಅರ್ಜುನ್‍ ಪಡೆದಿರುವ ಸಂಭಾವನೆ ದೇಶದಲ್ಲೇ ಮೊದಲಂತೆ. ಭಾರತೀಯ ಚಿತ್ರರಂಗದ ಯಾವ ಸ್ಟಾರ್ ‍ನಟ ಸಹ ಇಷ್ಟೊಂದು ಸಂಭಾವನೆಯನ್ನು ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್‍ ಈ ಚಿತ್ರಕ್ಕಾಗಿ 275 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಇದಕ್ಕೂ ಮುನ್ನ ಶಾರೂಖ್‍ ಖಾನ್‍, ‘ಪಠಾಣ್‍’ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆದರು ಎಂದು ಹೇಳಲಾಗಿದೆ. ಇನ್ನು, ತಮಿಳು ನಟ ವಿಜಯ್‍ ತಮ್ಮ ಮುಂದಿನ ಚಿತ್ರಕ್ಕೆ 275 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆದರಂತೆ. ಅಲ್ಲು ಅರ್ಜುನ್‍ ಅವರಿಬ್ಬರನ್ನೂ ಹಿಂದಿಕ್ಕಿ ‘ಪುಷ್ಪ 2 – ದಿ ರೂಲ್‍’ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಒಟ್ಟಾರೆ, ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಲ್ಲಿ ಚಿತ್ರವು ಹಲವು ದಾಖಲೆಗಳನ್ನು ಮುರಿದಿದೆ. ಮುಂದೆ ಇನ್ನೂ ಯಾವೆಲ್ಲಾ ದಾಖಲೆಗಳು ಪುಡಿಯಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಚೇತನ್ ನಾಡಿಗೇರ್ ಪರಿಚಯ

ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್‍ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್‍ ಅರವಿಂದ್‍ ಅವರ ‘ಖುಷಿಯಿಂದ ರಮೇಶ್‍’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್‍ ಶಾಟ್‍ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್‍ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿ ಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

Whats_app_banner