ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

Thandel Movie Review: ಟಾಲಿವುಡ್‌ ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ತಾಂಡೇಲ್ ಶುಕ್ರವಾರ (ಫೆ. 7) ಬಿಡುಗಡೆಯಾಗಿದೆ. ಪ್ರೇಮಕಥೆಯ ಜತೆಗೆ ಮೀನುಗಾರರ ಬದುಕು- ಬವಣೆಯ ನೈಜತೆಯನ್ನೂ ನಿರ್ದೇಶಕ ಚಂದು ಮೊಂಡೆಟಿ ಟಚ್‌ ಮಾಡಿದ್ದಾರೆ. ಹೀಗಿದೆ ತಾಂಡೇಲ್‌ ಸಿನಿಮಾ ವಿಮರ್ಶೆ.

ತಾಂಡೇಲ್‌ ಸಿನಿಮಾ ವಿಮರ್ಶೆ
ತಾಂಡೇಲ್‌ ಸಿನಿಮಾ ವಿಮರ್ಶೆ

Thandel Movie Review: ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ಸಿನಿಮಾದಲ್ಲಿದ್ದಾರೆ ಎಂದರೆ ಅಲ್ಲೊಂದು ಮಧುರ ಪ್ರೇಮಕಾವ್ಯ ಇರಲೇಬೇಕಲ್ಲವೇ? ತೆಲುಗಿನ ತಾಂಡೇಲ್‌ ಚಿತ್ರದಲ್ಲಿಯೂ ಆ ಎಳೆಯನ್ನೇ ನೋಡುಗನಿಗೆ ಮಗದಷ್ಟು ಹತ್ತಿರ ಎನಿಸುವ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದೂ ಮೊಂಡೆಟಿ. ನೈಜ ಘಟನೆಗಳ ಜತೆಗೆ ಸಮುದ್ರದಾಳದ ಕಥೆಯನ್ನು ಹೆಕ್ಕಿ ತಂದಿದ್ದಾರವರು. ಅವರ ಈ "ಕಡಲಿನ" ಪ್ರಯತ್ನ ಯಶಸ್ವಿಯಾಗಿ ದಡ ಸೇರಿದೆ. ಹಾಗಾದರೆ ಏನಿದು ತಾಂಡೇಲ್?‌ ಕಥೆ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

ಏನಿದು ತಾಂಡೇಲ್‌ ಕಥೆ?

ರಾಜ (ನಾಗ ಚೈತನ್ಯ) ಉತ್ತರಾಂಧ್ರದ ಮಚ್ಚಲೇಶಂ ಎಂಬ ತೀರ ಪ್ರದೇಶದಲ್ಲಿನ ಸಾಮಾನ್ಯ ಯುವಕ. ಆತನಿಗೆ ಸತ್ಯಳ (ಸಾಯಿ ಪಲ್ಲವಿ) ಮೇಲೆ ವಿಶಾಲ ಸಮುದ್ರದಷ್ಟೇ ಪ್ರೀತಿ. ಮೀನುಗಾರಿಕೆಯ ಈ ಹುಡುಗ ವರ್ಷದ 9 ತಿಂಗಳು ಸಮುದ್ರದಲ್ಲಿ ಕಾಲ ಕಳೆದರೆ, ಇನ್ನು ಮೂರು ತಿಂಗಳು ನೆಚ್ಚಿನ ಹುಡುಗಿ ಮತ್ತು ಮನೆಯವರೊಂದಿಗೆ ವಾಸ. ಹೀಗೆ ಸಾಗುವ ಕಥೆ, ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಾಗ, ಪಾಕಿಸ್ತಾನದ ಸಮುದ್ರದ ಗಡಿ ಪ್ರವೇಶವಾಗುತ್ತದೆ. ಪಾಕ್‌ ನೌಕಾಪಡೆಯಿಂದ ಬಂಧನಕ್ಕೂ ಒಳಗಾಗಿ ಕರಾಚಿಯ ಜೈಲು ಸೇರುತ್ತದೆ ಮೀನುಗಾರರ ಗುಂಪು. ಆ ಸೆರೆವಾಸದಿಂದ ರಾಜ, ಹೇಗೆ ತನ್ನನ್ನೂ ಸೇರಿ ಎಲ್ಲರನ್ನು ಹೇಗೆ ಆಚೆ ತರ್ತಾನೆ ಎಂಬುದೇ ತಾಂಡೇಲ್‌ ಸಿನಿಮಾದ ಒಂದೆಳೆ. ಅಂದಹಾಗೇ ತಾಂಡೇಲ್‌ ಎಂದರೆ ತನ್ನ ತಂಡವನ್ನು ರಕ್ಷಿಸುವ ನಾಯಕ ಎಂದರ್ಥ.

ತಾಂಡೇಲ್‌ ಒಂದೊಳ್ಳೆ ಪ್ರೇಮಕಥೆಯ ಸಿನಿಮಾ. ಜತೆಗೆ ದೇಶಭಕ್ತಿಯ ಮಿಶ್ರಣವನ್ನೂ ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಚಂದೂ. ಸರಳವಾಗಿ ಊಹಿಸಿಬಿಡಬಲ್ಲ, ಪರಿಚಿತ ಕಥೆಯಾದರೂ, ನೋಡುಗನನ್ನು ಸೀಟಿನ ತುದಿಗೆ ತಂದು ಕೂರಿಸುವಂತೆ ಮಾಡುವ ನಿರ್ದೇಶಕರ ನಿರೂಪಣೆ ಶೈಲಿ ಈ ಚಿತ್ರದ ಪ್ಲಸ್‌ ಪಾಯಿಂಟ್. ಆರಂಭದ ಮುಕ್ಕಾಲು ಗಂಟೆ ಕಥೆ ಕೊಂಚ ಪ್ರೀತಿ ಪ್ರೇಮ ಎಂಬ ಹಳಿಯ ಮೇಲೆ ನಿಧಾನವಾಗಿ ಸಾಗಿದರೂ, ಇಂಟರ್‌ವಲ್‌ ವೇಳೆಗೆ ರೋಚಕ ಟ್ವಿಸ್ಟ್‌ ಮೂಲಕ ಕಥೆ ಮಗ್ಗಲು ಬದಲಿಸುತ್ತದೆ. ಕಥಾನಾಯಕ ಪಾಕ್‌ ಸೇನೆಯ ವಶವಾಗುತ್ತಿದ್ದಂತೆ, ಅಸಲಿ ಕಥೆ ಅಲ್ಲಿಂದ ಆರಂಭವಾಗುತ್ತದೆ.

ವಾಸ್ತವ ಅಂಶಗಳನ್ನು ಮುಟ್ಟಿದ ನಿರ್ದೇಶಕರು..

ತಾಂಡೇಲ್‌ ಒಂದು ಅಪ್ಪಟ ಪ್ರೇಮಕಥೆಯೆಂದು ಬಿಂಬಿಸಿರುವುದರಿಂದ, ಬೇಡ ಎನಿಸಿದರೂ ಪ್ರೀತಿ ಪ್ರೇಮದ ನೆರಳು ಸಿನಿಮಾದುದ್ದಕ್ಕೂ ಕಾಣುತ್ತದೆ ಮತ್ತು ಕಾಡುತ್ತದೆ. ಗಾಢ ಪ್ರೇಮದಲ್ಲಿ ಈ ಜೋಡಿಯನ್ನು ಮಿಂದೇಳಿಸಿದ್ದಾರೆ ನಿರ್ದೇಶಕರು. ದೇಶಭಕ್ತಿಯ ಎಳೆಗೆ ಮೀನುಗಾರರ ನಿಜ ಬದುಕು -ಬವಣೆಗೂ ಇಲ್ಲಿ ನಿರ್ದೇಶಕರು ಸಾಣೆ ಹಿಡಿದಿದ್ದಾರೆ. ಭಾರತ ಮತ್ತು ಪಾಕ್‌ ನಡುವಿನ ದ್ವೇಷವೂ, 370ರ ವಿಧಿಯ ಹಿನ್ನೆಲೆಯ ಬಗ್ಗೆಯೂ, ಕಾಶ್ಮೀರ ಸಮಸ್ಯೆಯೂ ತಾಂಡೇಲ್‌ ಕಥೆಯಲ್ಲಿ ತಳುಕು ಹಾಕಿಕೊಂಡಿದೆ. ವಾಸ್ತವಕ್ಕೆ ಹತ್ತಿರ ಎನಿಸುವ ಅಂಶಗಳನ್ನು ನಿರ್ದೇಶಕರು ಮುಟ್ಟುವ ಪ್ರಯತ್ನ ಮಾಡಿದ್ದಾರೆ.

ತಾಂತ್ರಿಕವಾಗಿ ಬಲಿಷ್ಠವಾಗಿದೆ ತಾಂಡೇಲ್‌

ಮೇಕಿಂಗ್‌ ಮೂಲಕ ಹೆಚ್ಚು ಆಪ್ತ ಎನಿಸುವ ತಾಂಡೇಲ್‌ ಸಿನಿಮಾ, ಪ್ರೇಕ್ಷಕನನ್ನು ಎಲ್ಲಿಯೂ ಬೋರ್‌ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿನ ಜೈಲು ಸನ್ನಿವೇಶಗಳು ಸಿನಿಮೀಯ ಎನಿಸುತ್ತವೆ. ಒಂದಷ್ಟು ಬೇಡ ಎನಿಸುವ ದೃಶ್ಯಗಳು ಕಂಡರೂ, ಅವುಗಳಿಂದ ಚಿತ್ರದ ಓಟಕ್ಕೇನೂ ಅಡೆತಡೆಯಾಗಿಲ್ಲ. ಚಿತ್ರದ ಅಂದ ಹೆಚ್ಚಿಸಿದ್ದು ಛಾಯಾಗ್ರಹಣ. ಶಮ್‌ದತ್‌ ಸೈನುದ್ದೀನ್‌ ಕ್ಯಾಮರಾ ಕೋನಗಳಲ್ಲಿ ಒಳ್ಳೆಯ ದೃಶ್ಯಗಳೇ ಕ್ಲಿಕ್‌ ಆಗಿವೆ. ಆ ದೃಶ್ಯಗಳಿಗೆ ಮೊನಚು ಸಂಕಲನ ಸಾಥ್‌ ನೀಡಿದೆ. ಇವರಿಬ್ಬರ ಕೆಲಸಕ್ಕೆ ಭರ್ತಿ ಪೂರ್ಣಾಂಕ ನೀಡಿದ್ದು ಹಾಡುಗಳು ಮತ್ತು ಹಿನ್ನೆಲೆ ಸಂಗೀತ. ಮ್ಯೂಸಿಕ್‌ ಕಂಪೋಸರ್‌ ದೇವಿಶ್ರೀ ಪ್ರಸಾದ್‌ ಈ ಸಿನಿಮಾದ ಮತ್ತೊಬ್ಬ ಹೀರೋ ಎಂಬಂತೆ ಕಂಡಿದ್ದಾರೆ.

ಕಲಾವಿದರ ನಟನೆ ಹೇಗಿದೆ?

ನಾಗಚೈತನ್ಯ ಮತ್ತು ಸಾಯಿಪಲ್ಲವಿ ಇಬ್ಬರೂ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ. ಸಿಕ್ಕ ಪಾತ್ರಕ್ಕೆ ಸಾಯಿ ಜೀವ ತುಂಬಿದರೆ, ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಮೂಲಕ ಪ್ರಾಬಲ್ಯ ಸಾಧಿಸಿರುವುದು ಮಾತ್ರ ನಾಗ ಚೈತನ್ಯ. ಇನ್ನುಳಿದಂತೆ ತಮಿಳು ನಟ ಕರುಣಾಕರನ್‌, ನಟಿ ದಿವ್ಯಾ ಪಿಳ್ಳೈ, ಪಾಕಿಸ್ತಾನಿ ಜೈಲರ್‌ ಪಾತ್ರದಲ್ಲಿ ಕನ್ನಡಿಗ ಪ್ರಕಾಶ್‌ ಬೆಳವಾಡಿ ಗಮನಾರ್ಹ ನಟನೆಯನ್ನು ಒಪ್ಪಿಸಿದ್ದಾರೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಕೈ ಬಿಚ್ಚಿ ಖರ್ಚು ಮಾಡಿದೆ ಗೀತಾ ಆರ್ಟ್ಸ್ ಸಂಸ್ಥೆ. ಒಟ್ಟಾರೆ ನಿರ್ದೇಶಕ ಚಂದೂ ಮೊಂಡೆಟಿ ತಮ್ಮ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಪ್ರೇಕ್ಷಕನೆಡೆಗೆ ದಾಟಿಸಿದ್ದಾರೆ. 

ಚಿತ್ರ: ತಾಂಡೇಲ್‌

ನಿರ್ದೇಶನ: ಚಂದೂ ಮೊಂಡೆಟಿ

ನಿರ್ಮಾಣ: ಗೀತಾ ಆರ್ಟ್ಸ್

ಛಾಯಾಗ್ರಹಣ: ಶಮ್‌ದತ್‌ ಸೈನುದ್ದೀನ್‌

ಸಂಗೀತ: ದೇವಿಶ್ರೀ ಪ್ರಸಾದ್‌ (DSP)

ತಾರಾಗಣ: ನಾಗ ಚೈತನ್ಯ, ಸಾಯಿ ಪಲ್ಲವಿ, ಪ್ರಕಾಶ್ ಬೆಳವಾಡಿ, ದಿವ್ಯಾ ಪಿಳ್ಳೈ, ರಾವ್ ರಮೇಶ್, ಕರುಣಾಕರನ್ ಮುಂತಾದವರು

ಎಚ್‌ಟಿ ಕನ್ನಡ ರೇಟಿಂಗ್‌: 3\5

ವಿಮರ್ಶೆ: ಮಂಜು ಕೊಟಗುಣಸಿ

Whats_app_banner