Daaku Maharaaj: ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲು ಹೊರಟ ತೆಲುಗಿನ ‘ಡಾಕು ಮಹಾರಾಜ್’ ಸಿನಿಮಾ
ನಂದಮೂರಿ ಬಾಲಕೃಷ್ಣ ಟಾಲಿವುಡ್‌ನ ಬೇಡಿಕೆಯ ನಟ. ವಯಸ್ಸು 60 ಪ್ಲಸ್ ಆದರೂ, ಇಂದಿಗೂ ಅವರ ಕ್ರೇಜ್‌ಗೇನೂ ಕಡಿಮೆ ಇಲ್ಲ. ಮಾಸ್ ಆಕ್ಷನ್ ಸಿನಿಮಾಗಳಲ್ಲಿ ಅಬ್ಬರಿಸುವ ಬಾಲಣ್ಣ, ಈಗ ಡಾಕು ಮಹಾರಾಜ್ ಆಗಿದ್ದಾರೆ. ಇನ್ನೇನು ಇದೇ ಜ. 12ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.
Daaku Maharaaj: ನಂದಮೂರಿ ಬಾಲಕೃಷ್ಣ ಅಭಿನಯದ ‘ಡಾಕು ಮಹಾರಾಜ್’, ಒಂದು ಹೊಸ ದಾಖಲೆಯನ್ನು ಬರೆಯುವುದಕ್ಕೆ ಹೊರಟಿದ್ದಾನೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದಾನೆ. ಸಾಮಾನ್ಯವಾಗಿ ಚಿತ್ರಗಳು ಶುಕ್ರವಾರ ಬಿಡುಗಡೆಯಾಗುತ್ತವೆ. ಕೆಲವು ಚಿತ್ರಗಳು ಗುರುವಾರ ಆಗುತ್ತವೆ. ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬುಧವಾರ ರಿಲೀಸ್ ಆಗಿದ್ದೂ ಇದೆ. ಆದರೆ, ಇವೆಲ್ಲವನ್ನೂ ಮೀರಿಸಿ ‘ಡಾಕು ಮಹಾರಾಜ್’ ಚಿತ್ರವು ಮೊದಲ ಬಾರಿಗೆ ಭಾನುವಾರ ಬಿಡುಗಡೆ ಆಗುತ್ತಿದೆ.
ಭಾನುವಾರ ಬಿಡುಗಡೆ ಆಗುತ್ತಿದೆ ಈ ಸಿನಿಮಾ
ಹೌದು, ಜನವರಿ 12ರಂದು ಟಾಲಿವುಡ್‌ನ ‘ಡಾಕು ಮಹಾರಾಜ್’ ಚಿತ್ರವು ಸಂಕ್ರಾಂತಿ ಸ್ಪೆಷಲ್ ಆಗಿ ಭಾನುವಾರ ಬಿಡುಗಡೆಯಾಗುತ್ತಿದೆ. ಜನವರಿ 10ರಂದು ರಾಮ್ ಚರಣ್ ತೇಜ ಅಭಿನಯದ ‘ಗೇಮ್ ಚೇಂಜರ್’ ಚಿತ್ರವು ಬಿಡುಗಡೆಯಾಗುತ್ತಿದ್ದು, ಅದಾಗಿ ಎರಡು ದಿನಗಳಿಗೆ ‘ಡಾಕು ಮಹಾರಾಜ್’ ಚಿತ್ರವು ತೆರೆಗೆ ಬರಲಿದೆ. ಇನ್ನು, ವೆಂಕಟೇಶ್ ಅಭಿನದ ‘ಸಂಕ್ರಾಂತಿ ವಸ್ತುನ್ನಾಮ್’ ಚಿತ್ರವು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14ರಂದು ಮಂಗಳವಾರ ಬಿಡುಗಡೆಯಾಗಲಿದೆ. ಅಲ್ಲಿಗೆ ತೆಲುಗಿನ ಮೂರು ಚಿತ್ರಗಳು ಆರು ದಿನಗಳ ಅಂತರದಲ್ಲಿ ಸಂಕ್ರಾಂತಿ ಸ್ಪೆಷಲ್ ಆಗಿ ಬಿಡುಗಡೆಯಾಗುತ್ತಿವೆ.
ಕಳೆದ ವರ್ಷ ಬಾಲಕೃಷ್ಣ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆ ಆಗಿರಲಿಲ್ಲ. ಅದಕ್ಕೂ ಮೊದಲು 2023ರಲ್ಲಿ ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಮತ್ತು ‘ಭಗವಂತ್ ಕೇಸರಿ’ ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷದ ಆರಂಭದಲ್ಲೇ ಬಾಲಯ್ಯ ಅಭಿನಯದ ‘ಡಾಕು ಮಹಾರಾಜ್’ ಚಿತ್ರ ಬಿಡುಗಡೆ ಆಗುತ್ತಿದ್ದು, ವರ್ಷದ ಕೊನೆಯಲ್ಲಿ ಅವರ ಅಭಿನಯದ ‘ಅಖಂಡ 2.0’ ಚಿತ್ರವು ಬಿಡುಗಡೆಯಾಗುತ್ತಿದೆ.
‘ಡಾಕು ಮಹಾರಾಜ’ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ತೆಲುಗು ಚಿತ್ರ ಇದಾಗಿದೆ. ಚಿತ್ರದಲ್ಲಿ ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಊರ್ವಶಿ ರೌಟೇಲಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಬಾಬ್ಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ.
ಟ್ರೋಲ್ ಆಗಿದ್ದ ‘ದಬಿಡಿ ದಿಬಿಡಿ’ ಹಾಡು
ಇತ್ತೀಚೆಗೆ ಈ ಚಿತ್ರದ ‘ದಬಿಡಿ ದಿಬಿಡಿ’ ಎಂಬ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಶೇಖರ್ ಮಾಸ್ಟರ್ ನೃತ್ಯ ಸಂಯೋಜನೆಯ ಈ ಹಾಡು ಸಾಕಷ್ಟು ಅಶ್ಲೀಲವಾಗಿರುವುದರ ಜೊತೆಗೆ, ಬಾಲಕೃಷ್ಣ ತಮ್ಮ, ಮಗಳು, ಮೊಮ್ಮಗಳ ವಯಸ್ಸಿನ ಹುಡುಗಿಯ ಜೊತೆಗೆ ಹೆಜ್ಜೆ ಹಾಕಿದಂತಿದೆ ಎಂದು ಕೆಟ್ಟದಾಗಿದೆ ಹಲವರು ಟ್ರೋಲ್ ಮಾಡಿದ್ದಾರೆ.
30 ಕೋಟಿ ಸಂಭಾವನೆ
ಈ ಚಿತ್ರಕ್ಕಾಗಿ ಬಾಲಕೃಷ್ಣ 30 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಕೃಷ್ಣ ತಮ್ಮ ಹಿಂದಿನ ಚಿತ್ರಗಳಿಗೆ 20 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಆ ಚಿತ್ರಗಳ ಯಶಸ್ಸಿನಿಂದ ಬಾಲಕೃಷ್ಣ ತಮ್ಮ ಸಂಭಾವನೆ ಏರಿಸಿದ್ದು, ಇದೇ ಮೊದಲ ಬಾರಿ 30 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅಭಿಮಾನಿಗಳಿಗೆ, ಅಷ್ಟು ದುಡ್ಡು ಕೊಟ್ಟರೂ ಮೋಸವಿಲ್ಲವೆಂದು ನಿರ್ಮಾಪಕರು ನಂಬಿ ಅವರಿಗೆ ಈ ಸಂಭಾವನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಜೆಟ್ 100 ಕೋಟಿ ರೂ. ಆಗಿದ್ದು, ಈ ಪೈಕಿ ಶೇ. 30ರಷ್ಟು ಬಜೆಟ್ ನಂದಮೂರಿ ಬಾಲಕೃಷ್ಣ ಅವರ ಕಾಲ್‍ಶೀಟ್‍ಗಾಗಿದೆ ಎಂಬುದು ವಿಶೇಷ.
(ಬರಹ: ಚೇತನ್ ನಾಡಿಗೇರ್)