ಕಣ್ಣಪ್ಪನ ಗೆಲುವಿಗಾಗಿ ವಿಶೇಷ ಹರಕೆ; ದೇಶದ ಎಲ್ಲ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಹೊರಟ ವಿಷ್ಣು ಮಂಚು
Kannapaa Movie: ದೇಶದ ವಿವಿಧ ಭಾಗಗಳಲ್ಲಿ ಇರುವ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಕಣ್ಣಪ್ಪ ಚಿತ್ರ ತಂಡ ಮುಂದಾಗಿದೆ. ಮೊದಲಾರ್ಥವಾಗಿ ಕೇದಾರನಾಥನ ಸನ್ನಿಧಾನಕ್ಕೆ ತೆರಳಿ ಶಿವನ ದರ್ಶನ ಪಡೆದಿದ್ದಾರೆ ವಿಷ್ಣು ಮಂಚು.

Kannappa Movie Update: ಟಾಲಿವುಡ್‌ನಲ್ಲಿ ಹೈ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಕಣ್ಣಪ್ಪ ಸಿನಿಮಾ ತಂಡ ಇದೀಗ ದೇವರ ಪಾದಕ್ಕೆ ಎರಗಿದೆ. ಅಂದರೆ, ಸಿನಿಮಾ ಬಿಡುಗಡೆಯ ಸನಿಹ ಬರುತ್ತಿದ್ದಂತೆ, ದೇವರ ಹರಕೆ ತೀರಿಸುವ ಪಣ ತೊಟ್ಟಿದ್ದಾರೆ ಚಿತ್ರದ ನಾಯಕ ನಟ ವಿಷ್ಣು ಮಂಚು. ಅಂದರೆ, ದೇಶದ ವಿವಿಧ ಭಾಗಗಳಲ್ಲಿ ಇರುವ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಮುಂದಾಗಿದ್ದಾರೆ. ಮೊದಲಾರ್ಥವಾಗಿ ಕೇದಾರನಾಥನ ಸನ್ನಿಧಾನಕ್ಕೆ ತೆರಳಿ ಶಿವನ ದರ್ಶನ ಪಡೆದು ಮರಳಿದ್ದಾರೆ.
ವಿಷ್ಣು ಮಂಚು ಮಾತ್ರವಲ್ಲದೆ, ತಂದೆ, ಹಿರಿಯ ನಟ ಮೋಹನ್ ಬಾಬು, ನಿರ್ಮಾಪಕ ಮುಖೇಶ್ ಕುಮಾರ್ ಮತ್ತು ನಟ ಅರ್ಪಿತ್ ರಂಕಾ ಮತ್ತು ಕಣ್ಣಪ್ಪ ಸಿನಿಮಾ ತಂಡ ಸಹ ಕೇದಾರನಾಥ, ಬದರಿನಾಥ್ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದೆ. ಈ ಮೂಲಕ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಇಲ್ಲಿಂದ ಆರಂಭಿಸಿದ್ದಾರೆ.
ಈ ಯಾತ್ರೆಯ ಬಗ್ಗೆ ಮಾತನಾಡಿರುವ ವಿಷ್ಣು ಮಂಚು, "ಕಣ್ಣಪ್ಪ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲ 12 ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಗುರಿ. ಅದರಂತೆ ಮೊದಲಿಗೆ ಕೇದಾರನಾಥನ ದರ್ಶನ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನುಳಿದ 10 ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಲಿದ್ದೇವೆ. ಅದೇ ರೀತಿ ಶೀಘ್ರದಲ್ಲಿಯೇ ಈ ನಮ್ಮ ಸಿನಿಮಾ ರಿಲೀಸ್ ಆಗಲಿದೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು ಶರತ್‌ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕಣ್ಣಪ್ಪ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ದಿ ಲಾರ್ಡ್ ಆಫ್ ದಿ ರಿಂಗ್ಸ್‌ನಂತಹ ಮಹಾಕಾವ್ಯ ಕಥೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ದೃಶ್ಯವೈಭವದ ಮೂಲಕವೇ ಎಲ್ಲರನ್ನು ಬೆರಗುಗೊಳಿಸುತ್ತದೆ. ಹೆಸರಾಂತ ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ ಅವರು ನ್ಯೂಜಿಲೆಂಡ್‌ನ ರಮಣೀಯ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
