ಅಲ್ಲು ಅರ್ಜುನ್ ನೋಡಲು 1600 ಕಿಮೀ ಸೈಕಲ್ ತುಳಿದು ಬಂದ ಉತ್ತರ ಪ್ರದೇಶ ಅಭಿಮಾನಿ; ಪ್ರೀತಿಯಿಂದ ಸತ್ಕರಿಸಿದ ಸ್ಟೈಲಿಷ್ ಸ್ಟಾರ್
ತೆಲುಗು ನಟ ಅಲ್ಲು ಅರ್ಜುನ್ ನೋಡಲು ಅಭಿಮಾನಿಯೊಬ್ಬರು ದೂರದ ಉತ್ತರ ಪ್ರದೇಶದಿಂದ 1600 ಕಿಮೀ ಸೈಕಲ್ ತುಳಿದು ಹೈದರಾಬಾದ್‌ಗೆ ಬಂದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಯನ್ನು ಸ್ಟೈಲಿಷ್ ಸ್ಟಾರ್ ಪ್ರೀತಿಯಿಂದ ಮಾತನಾಡಿಸಿ ನೆನಪಿನ ಕಾಣಿಕೆಯನ್ನೂ ನೀಡಿದ್ದಾರೆ.

ತಾವು ಆರಾಧಿಸುವ ಸಿನಿಮಾ ಕಲಾವಿದರನ್ನು ಒಮ್ಮೆ ನೋಡಬೇಕು ಎಂಬ ಆಸೆ ಪ್ರತಿ ಅಭಿಮಾನಿಯಲ್ಲೂ ಇರುತ್ತದೆ. ಇದಕ್ಕಾಗಿ ಎಷ್ಟೋ ಅಭಿಮಾನಿಗಳು ದೂರದೂರದಿಂದ ತಮ್ಮ ಮೆಚ್ಚಿನ ನಟ/ನಟಿಯರನ್ನು ನೋಡಲು ಬರುತ್ತಾರೆ. ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ನೋಡಲು ಅಭಿಮಾನಿಯೊಬ್ಬರು ಸೈಕಲ್ ತುಳಿದುಕೊಂಡು 1600 ಕಿಮೀ ದೂರ ಕ್ರಮಿಸಿ ಹೈದಾರಾಬಾದ್‌ಗೆ ಬಂದಿದ್ದಾರೆ.
ಪುಷ್ಪ ಸಿನಿಮಾ ನಂತರ ಉತ್ತರ ಭಾರತದಲ್ಲಿ ಹೆಚ್ಚಿದ ಅಭಿಮಾನಿಗಳು
2021 ರಲ್ಲಿ ಬಿಡುಗಡೆಯಾದ ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ರಿಲೀಸ್ ನಂತರ ದೇಶದ ಮೂಲೆ ಮೂಲೆಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. ಹಿಂದಿಯಲ್ಲೂ ಕೂಡಾ ಸಾಕಷ್ಟು ಮಂದಿ ಅಭಿಮಾನಿಗಳನ್ನು ಅಲ್ಲು ಅರ್ಜುನ್ ಗಳಿಸಿದ್ದದರು. ಉತ್ತರದಲ್ಲೂ ಅವರಿಗೆ ಬಾಲಿವುಡ್ ಹೀರೋಗಳಿಗಿಂತ ಹೆಚ್ಚು ಕ್ರೇಜ್ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ಮ್ಯಾನರಿಸಂ, ಮಾಸ್ ಆಕ್ಷನ್, ಡ್ಯಾನ್ಸ್, ಸ್ಟೈಲ್ ಎಲ್ಲರಿಗೂ ಇಷ್ಟವಾಗಿದೆ. ಪುಷ್ಪ ಸಿನಿಮಾ ನಂತರ ಅಲ್ಲು ಅರ್ಜುನ್ ಫ್ಯಾನ್ ಆಗಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸ್ಟೈಲಿಷ್ ಸ್ಟಾರ್‌ನನ್ನು ನೋಡಲು 1,600 ಕಿಲೋ ಮೀಟರ್ ಸೈಕಲ್ ತುಳಿದು ಬಂದಿದ್ದಾರೆ.
ಅಭಿಮಾನಿಯನ್ನು ಪ್ರೀತಿಯಿಂದ ಸತ್ಕರಿಸಿದ ಅಲ್ಲು ಅರ್ಜುನ್
ಉತ್ತರ ಪ್ರದೇಶದ ಅಲಿಗಢದಿಂದ ಹೈದರಾಬಾದ್‌ಗೆ ಸೈಕಲ್‌ನಲ್ಲಿ ಬಂದಿದ್ದ ಅಭಿಮಾನಿ ಅಕ್ಟೋಬರ್ 16 ರಂದು ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ತಮ್ಮ ಮೆಚ್ಚಿನ ನಟನನ್ನು ನೋಡಿ ಆತ ಭಾವುಕರಾಗಿದ್ದಾರೆ. ಅಲ್ಲು ಅರ್ಜುನ್, ತನಗಾಗಿ ದೂರದಿಂದ ಬಂದ ಅಭಿಮಾನಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಆತ ಸೈಕಲ್‌ನಲ್ಲಿ ಬಂದಿದ್ದು ಎಂದು ತಿಳಿದು ಅಲ್ಲು ಅರ್ಜುನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯನ್ನು ಎಚ್ಚರಿಕೆಯಿಂದ ವಾಪಸ್ ಕಳುಹಿಸುವಂತೆ ಅಲ್ಲು ಅರ್ಜುನ್ ತಮ್ಮ ಸಹಾಯಕರಿಗೆ ಹೇಳಿದ್ದಾರೆ. ರೈಲು ಅಥವಾ ವಿಮಾನದಲ್ಲೇ ನೀವು ಮನೆಗೆ ವಾಪಸ್ ಹೋಗಬೇಕು, ಸೈಕಲ್‌ನಲ್ಲಿ ಮಾತ್ರ ವಾಪಸ್ ಹೋಗಬೇಡಿ ಎಂದು ಅಲ್ಲು ಅರ್ಜುನ್, ಅಭಿಮಾನಿಗೆ ಪ್ರೀತಿಯಿಂದ ಎಚ್ಚರಿಕೆ ನೀಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಭಿಮಾನಿಗೆ ನೆನಪಿನ ಕಾಣಿಕೆಯಾಗಿ ಗಿಡ ನೀಡಿದ ಸ್ಟೈಲಿಷ್ ಸ್ಟಾರ್
ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಪುಷ್ಪ 2 ಚಿತ್ರದ ಪ್ರಚಾರ ಆರಂಭವಾಗುತ್ತದೆ. ಉತ್ತರ ಪ್ರದೇಶಕ್ಕೆ ಬಂದರೆ ಮತ್ತೆ ನನ್ನನ್ನು ಭೇಟಿ ಮಾಡಿ ಎಂದು ಎಂದು ಅಲ್ಲು ಅರ್ಜುನ್ , ಆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಮಾತು ಕೇಳಿ ಅಭಿಮಾನಿ, ಖಂಡಿತ ಬರುತ್ತೇನೆ ಸರ್, ಸಿನಿಮಾ ಪ್ರಮೋಷನ್ ಮಾಡಲು ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದು ಖುಷಿಯಿಂದ ಹೇಳುತ್ತಾರೆ. ಕೊನೆಗೆ ಅಲ್ಲು ಅರ್ಜುನ್, ತಮ್ಮ ನೆನಪಿಗಾಗಿ ಅಭಿಮಾನಿಗೆ ಒಂದು ಗಿಡ ಕೊಟ್ಟಿದ್ದಾರೆ, ಸ್ವಲ್ಪ ಹಣವನ್ನೂ ಕೊಟ್ಟು ಕಳಿಸಿದ್ದಾರೆ. ಕೊನೆಗೆ ಅಭಿಮಾನಿ ಪುಷ್ಪ ಚಿತ್ರದ ಜುಕೇಗಾ ನಹೀ (ತಗ್ಗೆದೇ ಲೇ) ಎಂದು ಡೈಲಾಗ್ ಹೇಳಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಯನ್ನು ಇಷ್ಟು ಚೆನ್ನಾಗಿ ಮಾತನಾಡಿಸಿದ್ದಕ್ಕೆ ನೆಟಿಜನ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ನಟರು ತೆರೆ ಹಿಂದೆ ಮಾತ್ರವಲ್ಲ, ತೆರೆ ಹಿಂದೆಯೂ ಹೀರೋ ಎನಿಸಿಕೊಳ್ಳಬೇಕು ಎಂದು ಹಾಡಿ ಹೊಗಳುತ್ತಿದ್ದಾರೆ. 'ಪುಷ್ಪ 2: ದಿ ರೂಲ್' ಸಿನಿಮಾ ಇದೇ ವರ್ಷ ಡಿಸೆಂಬರ್ 6 ರಂದು ತೆರೆ ಕಾಣುತ್ತಿದೆ.
