ಪುಷ್ಪ ಸಿನಿಮಾ ಆಫರ್ ತಿರಸ್ಕರಿಸಿದ್ದರು ಈ ಮೂವರು ಸ್ಟಾರ್‌ಗಳು; ಅಲ್ಲು ಅರ್ಜುನ್-ರಶ್ಮಿಕಾ, ಫಹಾದ್ ಫಾಸಿಲ್ ಮೊದಲ ಆಯ್ಕೆ ಅಲ್ಲ
ನಿರ್ದೇಶಕ ಸುಕುಮಾರ್ ಮೊದಲ ಬಾರಿಗೆ ಪುಷ್ಪ ಚಿತ್ರಕ್ಕಾಗಿ ಮೂವರು ಸ್ಟಾರ್‌ಗಳನ್ನು ಸಂಪರ್ಕಿಸಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅವರಿಗಿಂತ ಮುಂಚೆ ಈ ಮೂವರು ನಟರಿಗೆ ಸುಕುಮಾರ್ ಆಫರ್ ನೀಡಿದ್ದರು.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಪುಷ್ಪ 2 ಚಿತ್ರ ಕೊನೆಗೂ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಅಭಿಮಾನಿಗಳು ಸುಕುಮಾರ್ ನಿರ್ದೇಶನದ ಚಿತ್ರಕ್ಕೆ ಜೈಕಾರ ಹಾಕಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರದ ಮೂಲಕ ಅಲ್ಲು ಅರ್ಜುನ್, ರಶ್ಮಿಕಾ ರಾತ್ರೋರಾತ್ರಿ ಪ್ಯಾನ್-ಇಂಡಿಯಾ ಸ್ಟಾರ್‌ಗಳಾಗಿ ಹೊರಹೊಮ್ಮಿದ್ದು ಹೊಸ ಸುದ್ದಿಯೇನಲ್ಲ. 2021ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಚಿತ್ರವು ಬಹುಭಾಷೆಗಳಲ್ಲಿ ಸೂಪರ್ ಹಿಟ್ ಆಯಿತು. ಈಗ ಆ ಚಿತ್ರದ ಮುಂದುವರಿದ ಭಾಗವಾಗಿ 'ಪುಷ್ಪ 2: ದಿ ರೂಲ್' ಇಂದು (ಡಿಸೆಂಬರ್ 5, ಗುರುವಾರ) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರ, ಸೂಪರ್ ಹಿಟ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಈ ಚಿತ್ರಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮೊದಲ ಆಯ್ಕೆಯ ನಟರಲ್ಲ ಎಂಬುದು ಬಹಿರಂಗವಾಗಿದೆ. ನಿರ್ದೇಶಕ ಸುಕುಮಾರ್ ಅವರು ಮೂರು ಸ್ಟಾರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಹೆಣೆದಿದ್ದಾರೆ. ಆದರೆ, ಈ ಮೂವರು ಕೂಡಾ ಚಿತ್ರವನ್ನು ತಿರಸ್ಕರಿಸಿದ ನಂತರವೇ ಅಲ್ಲು ಅರ್ಜುನ್, ರಶ್ಮಿಕಾ ಮತ್ತು ಪಹಾದ್ ಫಾಸಿಲ್ ಅವರಿಗೆ ಅವಕಾಶ ಸಿಕ್ಕಿದೆ.
ಪುಷ್ಪ ಚಿತ್ರವನ್ನ ರಿಜೆಕ್ಟ್ ಮಾಡಿದವರು ಯಾರು?
ಪುಷ್ಪರಾಜ್ ಪಾತ್ರಕ್ಕಾಗಿ ಸುಕುಮಾರ್ ಅವರು ಆರಂಭದಲ್ಲಿ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಸಂಪರ್ಕಿಸಿದ್ದರು. ಆದರೆ, ಮಹೇಶ್ ಬಾಬು ಅವರು ಗ್ರೇ ಶೇಡ್ ಇರುವ ಪಾತ್ರವನ್ನು ನಿರ್ವಹಿಸಲು ಮೊದಲಿನಿಂದಲೂ ಹಿಂಜರಿಯುತ್ತಿದ್ದರು. ಹೀಗಾಗಿ ಅವರು ಚಿತ್ರವನ್ನು ತಿರಸ್ಕರಿಸಿದರು. ನಂತರ ಸುಕುಮಾರ್ ಅವರು ಅಲ್ಲು ಅರ್ಜುನ್ ಅವರಿಗೆ ಕಥೆಯನ್ನು ವಿವರಿಸಿದರು. ಹೀಗಾಗಿ ಅವರೇ ಅಂತಿಮವಾದರು. ಪುಷ್ಪ 1ರಲ್ಲಿ ಅಲ್ಲು ಅರ್ಜುನ್ ಅವರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು.
ಈ ಚಿತ್ರದ ಶ್ರೀವಲ್ಲಿ ಪಾತ್ರಕ್ಕಾಗಿ, ಸುಕುಮಾರ್ ಅವರು ಮೊದಲು ಸಮಂತಾ ಅವರಿಗೆ ಆಫರ್ ನೀಡಿದ್ದರು. ಆದರೆ, ಸುಕುಮಾರ್ ನಿರ್ದೇಶನದ ರಂಗಸ್ಥಲಂ ಚಿತ್ರದಲ್ಲಿ ಈಗಾಗಲೇ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದ ಸಮಂತಾ, ಶ್ರೀವಲ್ಲಿ ಪಾತ್ರವನ್ನು ತಿರಸ್ಕರಿಸಿದ್ದರು. ಹೀಗಾಗಿ ರಶ್ಮಿಕಾಗೆ ಈ ಅವಕಾಶ ಸಿಕ್ಕಿದೆ. ಈ ಚಿತ್ರದ ಮೂಲಕ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದು ಗೊತ್ತೇ ಇದೆ. ಪುಷ್ಪ ಜನಪ್ರಿಯತೆಯು ಅವರು ಬಾಲಿವುಡ್‌ನಲ್ಲೂ ಸಾಲು ಸಾಲು ಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದೆ.
ಆಗಲ್ಲ ಎಂದಿದ್ದ ವಿಜಯ್ ಸೇತುಪತಿ
ಖಳನಾಯಕನ ಪಾತ್ರಕ್ಕಾಗಿ ಫಹಾದ್ ಫಾಸಿಲ್ ಅವರಿಗಿಂತ ಮೊದಲು ತಮಿಳು ನಟ ವಿಜಯ್ ಸೇತುಪತಿ ಅವರನ್ನು ಸುಕುಮಾರ್ ಸಂಪರ್ಕಿಸಿದ್ದರು. ಆದರೆ, ವಿಜಯ್ ಸೇತುಪತಿ ಅವರು ತಮ್ಮ ಶೂಟಿಂಗ್ ಸೇರಿದಂತೆ ಇತರ ಕೆಲಸಗಳಿಂದ ಬಿಡುವಿಲ್ಲದ ಕಾರಣದಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಹೀಗಾಗಿ ಫಹಾದ್ ಫಾಸಿಲ್ ಅವರಿಗೆ ಅವಕಾಶ ಸಿಕ್ಕಿತು. ಫಹಾದ್ ಅವರು ಪುಷ್ಪ ಡೈಲಾಗ್ ಮೂಲಕ ದಕ್ಷಿಣದಲ್ಲಿ ಪ್ರಸಿದ್ಧರಾದರು.
ಪುಷ್ಪ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇಂದು ಪುಷ್ಪ 2 ಕೂಡಾ ಬಿಡುಗಡೆಯಾಗಿದೆ. ಬಿಡುಗಡೆಗೆ ಮುಂಚಿತವಾಗಿ ಮುಂಗಡ ಬುಕಿಂಗ್ ಮೂಲಕವೇ 100 ಕೋಟಿ ರೂ. ಗಳಿಸಿರುವ ಚಿತ್ರ ಭರ್ಜರಿ ಗಳಿಸುವ ನಿರೀಕ್ಷೆ ಇದೆ.