ತುಂಬ ಮುಜುಗರ ಆಗ್ತಿತ್ತು, ಆ ಕಾರಣಕ್ಕೆ ಎಲ್ಲರನ್ನ ಹೊರಗೆ ಕಳಿಸಿದ್ದೆ; ಆಪ್ತ ದೃಶ್ಯಗಳ ಶೂಟಿಂಗ್ ಬಗ್ಗೆ ನಟಿ ಅಂಜಲಿ ಪ್ರತಿಕ್ರಿಯೆ
ತೆಲುಗಿನ ಬಹಿಷ್ಕರಣ ವೆಬ್ ಸಿರೀಸ್‌ನಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾರೆ ನಟಿ ಅಂಜಲಿ. ಆಪ್ತ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆ ಶೂಟಿಂಗ್ ಅನುಭವವನ್ನು ಸ್ವತಃ ನಟಿ ಅಂಜಲಿ ಹೇಳಿಕೊಂಡಿದ್ದಾರೆ.
Actress Anjali talks about intimate scenes: ಟಾಲಿವುಡ್ ನಟಿ ಅಂಜಲಿ, ಕನ್ನಡಿಗರಿಗೂ ಗೊತ್ತಿರುವ ಮುಖ. ಪವರ್‌ಸ್ಟಾರ್, ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್‌ಕುಮಾರ್ ಜತೆಗೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿ ಪರಿಚಿತರಾಗಿದ್ದರು. ಇತ್ತ ಸಾಲು ಸಾಲು ತೆಲುಗು ಸಿನಿಮಾ ಆಫರ್‌ಗಳನ್ನು ಗಿಟ್ಟಿಸಿಕೊಂಡು ನಟನೆಯಲ್ಲಿ ಬಿಜಿಯಾಗಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ ಅತಿಥಿ ಪಾತ್ರಗಳಲ್ಲಿಯೂ ಮಿಂಚಿ, ಪ್ರೇಕ್ಷಕರ ಮನಸೂರೆಗೊಳಿಸುತ್ತಿದ್ದಾರೆ ಈ ಚೆಲುವೆ.
ನಟಿ ಅಂಜಲಿ ಈ ವರೆಗೂ ತಮ್ಮ ವೃತ್ತಿಜೀವನದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೀತಾಂಜಲಿ ಚಿತ್ರದ ಮೂಲಕ ಹಾಫ್ ಸೆಂಚುರಿ ಬಾರಿಸಿದ್ದಾರೆ. ಇತ್ತೀಚೆಗಷ್ಟೇ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾ ಮೂಲಕ ಬೋಲ್ಡ್ ಪಾತ್ರದಲ್ಲಿ ನಟಿಸಿ ಎಲ್ಲರ ಕಣ್ಣು ಕುಕ್ಕಿದರು. ಈ ಸಿನಿಮಾದಲ್ಲಿ ಅಂಜಲಿಯ ಬೋಲ್ಡ್ ಅಭಿನಯಕ್ಕೆ ಪೂರ್ಣಾಂಕ ಸಂದಾಯವಾಗಿತ್ತು. ಇತ್ತೀಚೆಗಷ್ಟೇ ಇದೇ ನಟಿ ಬಹಿಷ್ಕರಣ ವೆಬ್ ಸಿರೀಸ್ ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದ್ದಾರೆ. ಆಪ್ತ ದೃಶ್ಯಗಳ ಮೂಲಕವೇ ಮೈಮಾಟ ಪ್ರದರ್ಶಿಸಿದ್ದರು ಈ ನಟಿ.
ಮುಖೇಶ್ ಪ್ರಜಾಪತಿ ನಿರ್ದೇಶನದ ಈ ವೆಬ್‌ಸಿರೀಸ್, ನೋಡುಗರ ಗಮನ ಸೆಳೆದಿತ್ತು. ಪ್ರಶಾಂತಿ ಮಲ್ಲಿಶೆಟ್ಟಿ ಈ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದರು. ಇದೇ ವೆಬ್‌ಸಿರೀಸ್‌ನಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ಅಂಜಲಿ, ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವಾಗಿನ ಮನಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
ಆಪ್ತ ದೃಶ್ಯಗಳ ಬಗ್ಗೆ ಅಂಜಲಿ ಏನಂದ್ರು..
"ಇಲ್ಲಿಯವರೆಗೆ ನಾನು ನಟನೆಗೆ ಆದ್ಯತೆ ಇರುವ ಪಾತ್ರಗಳನ್ನು ಆರಿಸಿಕೊಂಡು ಸಿನಿಮಾ ಮಾಡಿದ್ದೇನೆ. ಡ್ಯೂಪ್ ಇಲ್ಲದೇ ನಾನೇ ಫೈಟ್ ಸಹ ಮಾಡಿದ್ದೇನೆ. ಗಂಟೆಗಟ್ಟಲೆ ವಾಶ್‌ರೂಮ್‌ಗೆ ಹೋಗದೆ, ಶೂಟಿಂಗ್‌ನಲ್ಲಿ ಭಾಗವಹಿಸಿದ್ದೂ ಇದೆ. ನನ್ನ ವೃತ್ತಿಜೀವನದ ಆರಂಭದಿಂದಲೂ ನನಗೆ ಉತ್ತಮ ಪಾತ್ರಗಳು ಸಿಕ್ಕಿವೆ. ಪ್ರತಿ ಸಿನಿಮಾಗೂ ಹೋಂ ವರ್ಕ್ ಮಾಡುತ್ತೇನೆ. ಕೆಲವು ಸಿನಿಮಾಗಳಿಗಾಗಿ ಮಾರ್ಷಲ್ ಆರ್ಟ್ಸ್ ಕಲಿತಿದ್ದೇನೆ"
ಎಲ್ಲರನ್ನೂ ಹೊರಗೆ ಕಳಿಸಿದ್ದೆ..
"ನವರಸ’ ಸಿರೀಸ್ ಮಾಡುವಾಗ ಆ್ಯಕ್ಷನ್ ಸೀನ್‌ಗಳನ್ನು ಕೂಡ ಡ್ಯೂಪ್ ಮಾಡಿದ್ದೆ. ಅದೇ ರೀತಿ 'ಬಹಿಷ್ಕರಣ' ವೆಬ್‌ಸಿರೀಸ್ ನನ್ನ ಪಾಲಿಗೆ ಹೊಸದು. ಇದರಲ್ಲಿನ ಇಂಟಿಮೇಟ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ತುಂಬ ಮುಜುಗರವಾಗ್ತಿತ್ತು. ಶೂಟಿಂಗ್ ಮಾಡುವಾಗ ಎಲ್ಲರನ್ನೂ ಹೊರಗೆ ಕಳುಹಿಸಿದ್ದೆ. ಆ ದೃಶ್ಯಗಳ ಶೂಟಿಂಗ್ ವೇಳೆ ಗೊಂದಲವಾಯಿತು. ಈವರೆಗೆ ಇಂತಹ ದೃಶ್ಯಗಳಲ್ಲಿ ನಾನು ಕಾಣಿಸಿಕೊಂಡಿಲ್ಲ" ಎಂದರು.
ಮದುವೆ ನನ್ನ ವೈಯಕ್ತಿಕ ವಿಚಾರ..
'ಗ್ಯಾಂಗ್ಸ್ ಆಫ್ ಗೋದಾವರಿ' ಬಗ್ಗೆಯೂ ಮಾತನಾಡಿದ ಅಂಜಲಿ, ಅಂದೊಂದು ಒಳ್ಳೆಯ ಸಿನಿಮಾ. ನನ್ನ ಪಾತ್ರಕ್ಕೆ ನಾನು ಎಷ್ಟು ನ್ಯಾಯ ಸಲ್ಲಿಸಬಲ್ಲೆ ಎಂಬುದು ನನ್ನ ಕೈಯಲ್ಲಿದೆ. ಚಿತ್ರದ ಫಲಿತಾಂಶದ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ. ನನ್ನ ಪಾತ್ರಕ್ಕೆ ನಿರೀಕ್ಷೆಗಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ಸಾಮಾಜಿಕ ಮಾಧ್ಯಮದಲ್ಲಿ ನೆಗೆಟಿವಿಟಿಯ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರಾದರೂ ನನ್ನ ಬಗ್ಗೆ ತಪ್ಪು ಬರೆದರೆ, ಆ ಕ್ಷಣಕ್ಕೆ ಬೇಸರವಾಗುತ್ತದೆ. ಆದರೆ ಅದನ್ನು ಅಲ್ಲಿಯೇ ಮರೆತುಬಿಡುತ್ತೇನೆ. ನನ್ನ ಮದುವೆಯ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹಬ್ಬಿದ್ದವು. ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ನಾನೇ ಘೋಷಣೆ ಮಾಡುತ್ತೇನೆ" ಎಂದಿದ್ದಾರೆ ಅಂಜಲಿ.